Karnataka Bandh Live Updates: ಕಾವೇರಿ ನೀರು ಬಿಡುಗಡೆ ಖಂಡಿಸಿ ಕರ್ನಾಟಕ ಬಂದ್, ಸಿಎಂ ಭೇಟಿಯಾದ ಕನ್ನಡಪರ ನಾಯಕರು

ಕರ್ನಾಟಕ ಬಂದ್ ಲೈವ್: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಬೆಂಗಳೂರಿನಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, ಸಾರ್ವಜನಿಕ ಸಾರಿಗೆ ಸಂಚಾರದಲ್ಲಿ ವ್ಯತ್ಯಾಸವಿಲ್ಲ. ಶಾಂತಿಯುತ ಪ್ರತಿಭಟನೆಗೆ ಪೊಲೀಸರು ಮನವಿ ಮಾಡಿದ್ದು, ಬಲವಂತದ ಅಂಗಡಿ ಮುಚ್ಚಿಸುವಿಕೆಗೆ ನಿಷೇಧವಿದೆ. ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನವೂ ಇಂದು ಆರಂಭ.

Karnataka Bandh Live Updates: ಕಾವೇರಿ ನೀರು ಬಿಡುಗಡೆ ಖಂಡಿಸಿ ಕರ್ನಾಟಕ ಬಂದ್, ಸಿಎಂ ಭೇಟಿಯಾದ ಕನ್ನಡಪರ ನಾಯಕರು
ಕರ್ನಾಟಕ ಬಂದ್
Image Credit source: Tv9 kannada
Edited By:

Updated on: Aug 13, 2026 | 8:10 PM

ಬೆಂಗಳೂರು, ಆ.13: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ಆದೇಶವನ್ನು ಖಂಡಿಸಿ ಹಾಗೂ ನೀರು ಹರಿಸುವುದನ್ನು ತಡೆಯುವಂತೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನಗರದಾದ್ಯಂತ ಹೆಚ್ಚುವರಿ ಪೊಲೀಸ್ ಬಲವನ್ನು ನಿಯೋಜಿಸಲಾಗಿದೆ. ಬಂದ್ ಕರೆ ನೀಡಲಾಗಿದ್ದರೂ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಸಾರ್ವಜನಿಕ ಸಾರಿಗೆ ಸಂಚಾರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಪೊಲೀಸರು ಮನವಿ ಮಾಡಿದ್ದು, ಬಲವಂತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸುವುದು ಅಥವಾ ವಾಹನ ಸಂಚಾರಕ್ಕೆ ಅಡ್ಡಿಪಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇಂದಿನಿಂದ ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನವೂ ಆರಂಭ. ಇನ್ನು ಇದರ ಜತೆಗೆ ಸುಪ್ರೀಂ ಕೋರ್ಟ್​​ನಲ್ಲಿ ತಮಿಳುನಾಡು ಸಲ್ಲಿಸಿರುವ ಕಾವೇರಿ ಅರ್ಜಿ ವಿಚಾರಣೆ ನಡೆಯಲಿದೆ.

🔴LIVE | TV9 KANNADA NEWS | ಟಿವಿ9 ಕನ್ನಡ ನ್ಯೂಸ್ ಲೈವ್ | TV9 KANNADA NEWS LIVE

LIVE NEWS & UPDATES

The liveblog has ended.
  • 13 Aug 2026 08:09 PM (IST)

    ಬೆಂಗಳೂರು ಹೊಸ ಪಾರ್ಕಿಂಗ್ ಪಾಲಿಸಿ

    ಬೆಂಗಳೂರು ನಗರದಲ್ಲಿ ಪಾರ್ಕಿಂಗ್ ಪಾಲಿಸಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಪ್ರತಿಕ್ರಿಯಿಸಿದ್ದು, ಪಾರ್ಕಿಂಗ್ ಪಾಲಿಸಿ ಬಗ್ಗೆ ಡ್ರಾಫ್ಟ್ ಬಿಡುಗಡೆ ಮಾಡಲಾಗಿದೆ. A, B, C ಕೆಟಗರಿ ಆಧಾರದ ಮೇಲೆ ಪಾಲಿಸಿ ಸಿದ್ಧಪಡಿಸಲಾಗುತ್ತಿದೆ. ಯಾವ ಜಾಗದಲ್ಲಿ ಪಾರ್ಕಿಂಗ್ ಅಂತಾ ಇನ್ನೂ ಅಂತಿಮ ಮಾಡಿಲ್ಲ. ಬಾಡಿಗೆದಾರರಿಗೆ ಮನೆ ಮಾಲೀಕರು ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಈ ತೀರ್ಮಾನ ಮಾಡಲಾಗಿದ್ದು, ಈ ಬಗ್ಗೆ ಸಾರ್ವಜನಿಕರು ಈ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದು ಎಂದಿದ್ದಾರೆ.

  • 13 Aug 2026 08:07 PM (IST)

    ಕರ್ನಾಟಕ ಬಂದ್ ಚೆನ್ನಾಗಿ ಶಬ್ದ ಮಾಡಿದೆ ಎಂದ ವಾಟಾಳ್

    ಕಾವೇರಿ ನೀರಿನ ವಿಚಾರವಾಗಿ ಇಂದು (ಆಗಸ್ಟ್ 13) ಕರ್ನಾಟಕ ಬಂದ್​​​​​ ವಿಚಾರವಾಗಿ ವಾಟಾಳ್ ನಾಗರಾಜ್ ಮಾಹಿತಿ ಹಂಚಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್, ಕರ್ನಾಟಕ ಬಂದ್ ರಾಜ್ಯಾದ್ಯಂತ ಚೆನ್ನಾಗಿ ಶಬ್ದ ಮಾಡಿದೆ. ನಾನು ನಾಡಿನ ಜನತೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹೆಚ್ಚು ಕಡಿಮೆ ಒಂದಲ್ಲ ಒಂದು ರೀತಿ ಪ್ರತಿಭಟನೆ ಆಗಿದೆ. ರಾಜ್ಯ & ದೇಶದ ಗಮನ ಸೆಳೆಯುವ ಚಿಂತನೆಯಾಗಿದೆ.ನನ್ನ ಸ್ಟೇಷನ್​​ನಲ್ಲಿ ಕೂರಿಸಿದ್ರು. ಆದ್ರೆ, ನಾವು ಬಂದ್ ಹಿಂಪಡೆದಿಲ್ಲ ಅದರ ಪ್ರಶ್ನೆಯೂ ಇಲ್ಲ. ಕಾವೇರಿ ನೀರಿನ ಸಮಸ್ಯೆಯು ಇವತ್ತಿಗೆ ಮುಗಿಯಲ್ಲ. ಮಂಡ್ಯ, ಬೆಳಗಾವಿ ಸೇರಿ ಹಲವೆಡೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮಿಳುನಾಡಿಗೆ ನೀರು ಬಿಟ್ರೆ ಮತ್ತೆ ಬಂದ್ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.

  • 13 Aug 2026 08:03 PM (IST)

    ಕರ್ನಾಟಕ ಅಪಾರ್ಟ್‌ಮೆಂಟ್‌ ವಿಧೇಯಕಕ್ಕೆ ಕ್ಯಾಬಿನೆಟ್‌ ಒಪ್ಪಿಗೆ

    ಕರ್ನಾಟಕ ಅಪಾರ್ಟ್‌ಮೆಂಟ್‌ ವಿಧೇಯಕಕ್ಕೆ ಕ್ಯಾಬಿನೆಟ್‌ನಲ್ಲಿ ಅನುಮೋದನೆ ದೊರೆತಿದೆ. ಇಂದು (ಆಗಸ್ಟ್ 13) ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಕರ್ನಾಟಕ ಅಪಾರ್ಟ್‌ಮೆಂಟ್‌(ಓನರ್‌ಶಿಪ್ ಌಂಡ್‌ ಮ್ಯಾನೇಜ್ಮೆಂಟ್) ವಿಧೇಯಕ ಮಂಡನೆಗೆ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಇದೇ ವಿಧಾನಮಂಡಲ ಮುಂಗಾರು ಅಧಿವೇಶನದಲ್ಲೇ ವಿಧೇಯಕ ಮಂಡನೆಯಾಗುವ ಸಾಧ್ಯತೆಗಳಿವೆ.

  • 13 Aug 2026 03:29 PM (IST)

    ವಿಧಾನಸಭೆ ಕಲಾಪ ನಾಳೆ ಬೆಳಗ್ಗೆ 10 ಗಂಟೆಗೆ ಮುಂದೂಡಿಕೆ

    ಇಂದಿನಿಂದ ಮಳೆಗಾಲದ ಅಧಿವೇಶ ಆರಂಭವಾಗಿದ್ದು, ಇಂದು (ಆಗಸ್ಟ್ 13) ಮೊದಲ ದಿನ ಮೃತ ಗಣ್ಯರಿಗೆ ಸಂತಾಪ ಸೂಚಿಸಲಾಯ್ತು. ಬಳಿಕ ಹಂಗಾಮಿ ಸ್ಪೀಕರ್ ಟಿಬಿ ಜಯಚಂದ್ರ ಅವರು ಕಲಾಪವನ್ನು ನಾಳೆ (ಆಗಸ್ಟ್ 14) ಬೆಳಗ್ಗೆ 11 ಗಂಟೆ ಮುಂದೂಡಿದರು.

  • 13 Aug 2026 01:54 PM (IST)

    ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಹರಿಸುವುದು ಕಷ್ಟ: ಸಚಿವ ಚಲುವರಾಯಸ್ವಾಮಿ

    ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ಹಾಗೂ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ನೂತನ ಜಲಸಂಪನ್ಮೂಲ/ನೀರಾವರಿ ಸಚಿವ ಚಲುವರಾಯಸ್ವಾಮಿ ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

  • 13 Aug 2026 12:45 PM (IST)

    ಮೈಸೂರಿನ ಹೊಸಮಠದ ಶ್ರೀ ಚಿದಾನಂದ ಮಹಾಸ್ವಾಮೀಜಿ ಲಿಂಗೈಕ್ಯ

    ಮೈಸೂರು: ಮೈಸೂರಿನ ಶಂಕರಮಠ ರಸ್ತೆಯಲ್ಲಿರುವ ಪ್ರಸಿದ್ಧ ಹೊಸಮಠದ ಶ್ರೀ ಶ್ರೀ ಚಿದಾನಂದ ಮಹಾ ಸ್ವಾಮೀಜಿ (85) ಅವರು ಇಂದು ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ.

  • 13 Aug 2026 12:28 PM (IST)

    ವಿಧಾನಸಭೆಯಲ್ಲಿ ಮಾಜಿ ಸಚಿವ ಡಿ. ಸುಧಾಕರ್ ನೆನೆದು ಸಿಎಂ ಡಿ.ಕೆ. ಶಿವಕುಮಾರ್ ಭಾವುಕ

    ವಿಧಾನಮಂಡಲದ ಮಳೆಗಾಲದ ಅಧಿವೇಶನದ ಮೊದಲ ದಿನದ ವಿಧಾನಸಭೆ ಕಲಾಪದಲ್ಲಿ ಇತ್ತೀಚೆಗೆ ಅಗಲಿದ ಮಾಜಿ ಸಚಿವ, ಶಾಸಕ ಡಿ. ಸುಧಾಕರ್ ಅವರಿಗೆ ಸಂತಾಪ ಸೂಚಿಸಲಾಯಿತು. ಸಂತಾಪ ಸೂಚನಾ ಪ್ರಸ್ತಾವನೆಯ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಆತ್ಮೀಯ ಗೆಳೆಯ ಸುಧಾಕರ್ ಅವರೊಂದಿಗಿನ ಒಡನಾಟ ಹಾಗೂ ನೆನಪುಗಳನ್ನು ಹಂಚಿಕೊಂಡು ಭಾವುಕರಾದರು.

  • 13 Aug 2026 12:26 PM (IST)

    52 ದಿನಗಳ ಜೈಲುವಾಸದ ಬಳಿಕ ಜೆಡಿಎಸ್ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಬಿಡುಗಡೆ

    ಬಗರ್ ಹುಕುಂ ಜಮೀನು ಮಂಜೂರಾತಿಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪದ ಮೇರೆಗೆ ಬಂಧನಕ್ಕೊಳಗಾಗಿದ್ದ ಬೇಲೂರು ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರು ಸುಮಾರು 52 ದಿನಗಳ ಜೈಲುವಾಸದ ಬಳಿಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

  • 13 Aug 2026 11:36 AM (IST)

    ಬೆಂಗಳೂರಿನಲ್ಲಿ ಮಾಂಸದ ಅಂಗಡಿಗಳಿಗೆ ಜಿಬಿಎ ಮೂಗುದಾರ

    ರಾಜಧಾನಿ ಬೆಂಗಳೂರಿನಲ್ಲಿ ಮಾಂಸದ ಅಂಗಡಿಗಳ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಮುಕ್ತಿ ನೀಡಲು ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ನಗರದಲ್ಲಿರುವ ಮಾಂಸದ ಅಂಗಡಿಗಳು ನಿಯಮ ಬಾಹಿರವಾಗಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವುದನ್ನು ತಡೆಯಲು ಜಿಬಿಎ ಹೊಸ ನಿಯಮಾವಳಿಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ.

  • 13 Aug 2026 11:35 AM (IST)

    ವಿಧಾನಪರಿಷತ್ ಸಭಾನಾಯಕರಾಗಿ ಡಾ. ಯತೀಂದ್ರ ಸಿದ್ದರಾಮಯ್ಯ ಅಧಿಕೃತ ಘೋಷಣೆ

    ಕರ್ನಾಟಕ ವಿಧಾನಪರಿಷತ್ತಿನ ನೂತನ ಸಭಾನಾಯಕರಾಗಿ (Leader of the House) ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಅಧಿಕೃತವಾಗಿ ಘೋಷಿಸಲಾಗಿದೆ.

  • 13 Aug 2026 10:52 AM (IST)

    ಸಿಎಂ ಭೇಟಿಯಾದ ಕನ್ನಡಪರ ನಾಯಕರು ಹಾಗೂ ರೈತ ಮುಖಂಡರು

    ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವ ವಿವಾದ ತೀವ್ರಗೊಂಡಿರುವ ಬೆನ್ನಲ್ಲೇ, ಕನ್ನಡಪರ ಸಂಘಟನೆಗಳು ಕರೆ ನೀಡಿರುವ ‘ಕರ್ನಾಟಕ ಬಂದ್’ ಹಿನ್ನೆಲೆಯಲ್ಲಿ ಪ್ರಮುಖ ಹೋರಾಟಗಾರರ ತಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದೆ.

  • 13 Aug 2026 10:11 AM (IST)

    ಕಾವೇರಿ ಹೋರಾಟ: ಮೆಜೆಸ್ಟಿಕ್‌ನತ್ತ ಹೊರಟಿದ್ದ ವಾಟಾಳ್ ನಾಗರಾಜ್ ಪೊಲೀಸ್ ವಶಕ್ಕೆ

    ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ‘ಕರ್ನಾಟಕ ಬಂದ್‌’ ಬೆಂಬಲಿಸಿ ಪ್ರತಿಭಟನೆಗೆ ಧುಮುಕಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    Karnataka Bandh: ಮೆಜೆಸ್ಟಿಕ್​​ನತ್ತ ತೆರಳಲು ಮನೆಯಿಂದ ಹೊರ ಬರುತ್ತಲೇ ವಾಟಾಳ್ ಪೊಲೀಸರ ವಶಕ್ಕೆ| #TV9D

  • 13 Aug 2026 09:25 AM (IST)

    ಸಿಎಂ ಭೇಟಿಯಾಗಲಿದ್ದಾರೆ ಕನ್ನಡಪರ ನಾಯಕರು: ಕಾವೇರಿ ನೀರು ಬಿಡದಂತೆ, ಮೇಕೆದಾಟು ಅನುಷ್ಠಾನಕ್ಕೆ ಆಗ್ರಹ

    ಕಾವೇರಿ ಜಲ ವಿವಾದ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಪ್ರಮುಖ ಕನ್ನಡಪರ ಹಾಗೂ ರೈತ ಸಂಘಟನೆಗಳ ನಾಯಕರು ಇಂದು (ಆಗಸ್ಟ್ 13) ಬೆಳಿಗ್ಗೆ 10 ಗಂಟೆಗೆ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಲಿದ್ದಾರೆ.

  • 13 Aug 2026 09:23 AM (IST)

    ವಿಧಾನ ಪರಿಷತ್ ಸಭಾಪತಿ ಚುನಾವಣೆ: ಕಾಂಗ್ರೆಸ್‌ಗೆ ಸವಾಲೊಡ್ಡಲು ಎನ್‌ಡಿಎ ಕಸರತ್ತು, ಇಂದು ಮೈತ್ರಿ ಸಭೆ

    ನಾಳೆ ನಡೆಯಲಿರುವ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್ ಜೊತೆಗೆ ಎನ್‌ಡಿಎ (ಬಿಜೆಪಿ-ಜೆಡಿಎಸ್) ಮೈತ್ರಿಕೂಟ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಗಂಭೀರ ಚಿಂತನೆ ನಡೆಸಿದೆ. ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಮೈತ್ರಿ ನಾಯಕರು ಇಂದು ಮಹತ್ವದ ಸಭೆ ನಡೆಸಲಿದ್ದಾರೆ.

  • 13 Aug 2026 08:56 AM (IST)

    ನಾಳೆ ವಿಧಾನಪರಿಷತ್ ಸಭಾಪತಿ ಚುನಾವಣೆ: ಇಂದು ಕಾಂಗ್ರೆಸ್‌ನಿಂದ ಸಲೀಂ ಅಹ್ಮದ್ ನಾಮಪತ್ರ ಸಲ್ಲಿಕೆ

    ಕರ್ನಾಟಕ ವಿಧಾನಪರಿಷತ್ತಿನ ನೂತನ ಸಭಾಪತಿ (Council Chairman) ಆಯ್ಕೆಗೆ ವೇದಿಕೆ ಸಿದ್ಧಗೊಂಡಿದ್ದು, ನಾಳೆ (ಆಗಸ್ಟ್ 14) ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಲೀಂ ಅಹ್ಮದ್ ಅವರು ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ.

  • 13 Aug 2026 08:25 AM (IST)

    ಬಂದ್ ನಡುವೆಯೂ ರಾಜಧಾನಿಯಲ್ಲಿ ಶಾಲೆ-ಕಾಲೇಜುಗಳು ಎಂದಿನಂತೆ ಆರಂಭ

    ಕಾವೇರಿ ನೀರು ಬಿಡುಗಡೆ ಖಂಡಿಸಿ ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಲಾಗಿದ್ದರೂ, ರಾಜಧಾನಿ ಬೆಂಗಳೂರಿನಲ್ಲಿ ಶಾಲಾ-ಕಾಲೇಜುಗಳು ಎಂದಿನಂತೆ ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ. ವಿದ್ಯಾರ್ಥಿಗಳು ಬೆಳಿಗ್ಗೆಯಿಂದಲೇ ನಿಯಮಿತವಾಗಿ ಶಾಲೆಗಳತ್ತ ಬರುತ್ತಿರುವುದು ಕಂಡುಬಂದಿದೆ.

  • 13 Aug 2026 08:06 AM (IST)

    ಸುಪ್ರೀಂ ಕೋರ್ಟ್‌ನಲ್ಲಿ ಇಂದು ಕಾವೇರಿ ಅರ್ಜಿ ವಿಚಾರಣೆ ಇಲ್ಲ: ಸೋಮವಾರಕ್ಕೆ ಮುಂದೂಡಿಕೆ

    ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು (ಆಗಸ್ಟ್ 13) ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವುದಿಲ್ಲ. ಪ್ರಕರಣದ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ (ಆಗಸ್ಟ್ 17) ಮುಂದೂಡುವ ಸಾಧ್ಯತೆಯಿದೆ.

  • 13 Aug 2026 08:05 AM (IST)

    ಕಾವೇರಿ ಕಿಚ್ಚು: ಖಾಲಿ ಕೊಡ ಹಿಡಿದು ಕರುನಾಡು ಸೇನೆ ಹಾಗೂ ಕರವೇ ಪ್ರತಿಭಟನೆ

    ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶಿಸಿರುವುದನ್ನು ಖಂಡಿಸಿ ಇಂದು ಕರೆಯಲಾಗಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ, ರಾಮನಗರದಲ್ಲಿ ಪ್ರತಿಭಟನೆಯ ಕಾವು ತೀವ್ರಗೊಂಡಿದೆ. ರಾಮನಗರ ನಗರದ ಪ್ರಮುಖ ಜಂಕ್ಷನ್ ಆದ ಐಜೂರು ವೃತ್ತದಲ್ಲಿ ಕರುನಾಡು ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಕುಡಿಯುವ ನೀರಿಗೆ ಅಭಾವ ಎದುರಾಗುತ್ತಿರುವಾಗ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಕಾರ್ಯಕರ್ತರು ಕೈಯಲ್ಲಿ ಖಾಲಿ ಕೊಡಗಳನ್ನು ಹಿಡಿದು ಸರ್ಕಾರದ ಗಮನ ಸೆಳೆದರು.

  • 13 Aug 2026 07:58 AM (IST)

    ಬಂದ್ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮ: ವಾಟಾಳ್ ಆಪ್ತ ಗಿರೀಶ್ ಗೌಡ ಪೊಲೀಸ್ ವಶಕ್ಕೆ

    ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ‘ಕರ್ನಾಟಕ ಬಂದ್’ ಹಿನ್ನೆಲೆಯಲ್ಲಿ, ವಾಟಾಳ್ ನಾಗರಾಜ್ ಅವರ ಆಪ್ತ ಹಾಗೂ ಕನ್ನಡ ಚಳವಳಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • 13 Aug 2026 07:57 AM (IST)

    ಕೆಎಸ್‌ಆರ್‌ಟಿಸಿ, ಬಿಎಂಆರ್‌ಟಿಸಿ ಬಸ್ ಸಂಚಾರ ಯಥಾಸ್ಥಿತಿ

    ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ಆದೇಶವನ್ನು ಖಂಡಿಸಿ ಹಾಗೂ ನೀರು ಹರಿಸುವುದನ್ನು ತಡೆಯುವಂತೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಬಂದ್ ಕರೆ ನೀಡಲಾಗಿದ್ದರೂ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಸಾರ್ವಜನಿಕ ಸಾರಿಗೆ ಸಂಚಾರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ

Published On - 7:56 am, Thu, 13 August 26

Loading...
Unable to load recommendations.
Follow Us