‘ಕೆಪಿಎಸ್ಸಿ ಮುಚ್ಚುವುದಾದರೆ ವಿಧಾನಸೌಧವನ್ನೂ ಮುಚ್ಚಬೇಕು’: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
ಕೆಪಿಎಸ್‌ಸಿ ಮುಚ್ಚುವ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಕೆಪಿಎಸ್‌ಸಿ ಮುಚ್ಚುವುದಾದರೆ ವಿಧಾನಸೌಧವನ್ನೂ ಮುಚ್ಚಬೇಕು ಎಂದು ತಿರುಗೇಟು ನೀಡಿದ್ದಾರೆ. ಹೊಲಕ್ಕೆ ಕಳೆ ಬಿದ್ದರೆ ಅದನ್ನು ಕಿತ್ತೆಸೆಯಬೇಕು, ಹೊಲಕ್ಕೇ ವಿಷವುಣಿಸುವ ಕೆಲಸ ಆಗಬಾರದು ಎಂದು ಹೆಚ್ಡಿಕೆ ತಿಳಿಸಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 23: ಶಾಸನಬದ್ಧವಾಗಿ KPSC ಮುಚ್ಚುವ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೀಡಿದ್ದ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಹೇಳಿಕೆ ಕೇವಲ ಹತಾಶೆಯಷ್ಟೇ ಅಲ್ಲ, ಬುದ್ಧಿಗೇಡಿತನ, ಹೊಣೆಗೇಡಿತನ, ಅಜ್ಞಾನದ ಪರಮಾವಧಿಯಾಗಿದೆ. ಸಿಎಂ ವರಸೆ ಹೇಗಿದೆ ಅಂದರೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ, ನೆಗಡಿ ಆದರೆ ಮೂಗಿಗೆ ಕತ್ತರಿ ಹಾಕಿದಂತಾಗಿದೆ ಎಂದು ಹೆಚ್ಡಿಕೆ ಕಿಡಿ ಕಾರಿದ್ದಾರೆ.
‘ಹೊಲಕ್ಕೆ ಕಳೆ ಬಿದ್ದರೆ ಅದನ್ನು ಕಿತ್ತೆಸೆಯಬೇಕು, ಹೊಲಕ್ಕೇ ವಿಷವುಣಿಸಬಾರದು’
ಕರ್ನಾಟಕ ಲೋಕಸೇವಾ ಆಯೋಗ (KPSC) ವನ್ನು ಶಾಸನಬದ್ಧವಾಗಿ ಮುಚ್ಚುತ್ತೇವೆ ಎನ್ನುವ ಮುಖ್ಯಮಂತ್ರಿ ಹೇಳಿಕೆ ಕೇವಲ ಹತಾಶೆಯಿಂದಷ್ಟೇ ಕೂಡಿಲ್ಲ, ಅದು ಬುದ್ಧಿಗೇಡಿತನ, ಹೊಣೆಗೇಡಿತನ ಮತ್ತು ಅಜ್ಞಾನದ ಪರಮಾವಧಿ. ಇವರ ವರಸೆ ಹೇಗಿದೆ ಎಂದರೆ ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ!’; ‘ನೆಗಡಿ ಬಂದರೆ ಮೂಗಿಗೇ ಕತ್ತರಿ ಹಾಕಿದಂತೆ!!’…
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) September 23, 2026
ಸಿಎಂ ಡಿ.ಕೆ.ಶಿವಕುಮಾರ್ಗೆ ಶಾಸನದ ಮಹತ್ವವೇ ಗೊತ್ತಿಲ್ಲದಂತಿದೆ. ಕೆಪಿಎಸ್ಸಿ ಸಂಸ್ಥೆ ಚೆನ್ನಾಗಿಯೇ ಇದೆ, ಕೆಟ್ಟ ಜನ ಬಂದು ಕೂತಿದ್ದಾರಷ್ಟೇ. ಬೇಲಿಯೇ ಹೊಲ ಮೇಯುತ್ತಿದೆ. ಅಲ್ಲಿಗೆ ಖದೀಮರನ್ನು ನೇಮಕ ಮಾಡಿದ್ದು ಯಾರು? ವಸೂಲಿಗೆ ಅಂಗಡಿ ತೆರೆಯಲು ಅವಕಾಶ ಕೊಟ್ಟಿದ್ದು ಯಾರು? ವಿಧಾನಸೌಧದ 3ನೇ ಮಹಡಿಯಲ್ಲಿ ಕೂತವರೇ ಎಸಗಿದ ಪಾಪವಲ್ಲವೇ ಇದು? ಆ ಲೆಕ್ಕಕ್ಕೆ ಬಂದರೆ ವಿಧಾನಸೌಧವನ್ನೇ ಮುಚ್ಚಬೇಕು. ನಿಮ್ಮ ಸಾರಥ್ಯದಲ್ಲಿ ಅದೂ ನಡೆದುಹೋಗಲಿ. ಬೇಜವಾಬ್ದಾರಿಯಿಂದ ಚಪಲಕ್ಕೆ ನಾಲಿಗೆ ಜಾರುವ ಮೊದಲು ಕೆಪಿಎಸ್ಸಿ ಎಂದರೆ ಏನು? ಅದರ ಸಂರಚನೆ, ಸ್ವರೂಪ ಹೇಗಿರುತ್ತದೆ? ಸಾಂವಿಧಾನಿಕವಾಗಿ ಅದಕ್ಕಿರುವ ರಕ್ಷಣೆ ಏನು? ಆ ಸಂಸ್ಥೆ ನಡೆದುಬಂದ ಹಾದಿ, ಹೆಗ್ಗಳಿಕೆ ಬಗ್ಗೆ ತಿಳಿದುಕೊಳ್ಳಿ. ಹೊಲಕ್ಕೆ ಕಳೆ ಬಿದ್ದರೆ ಅದನ್ನು ಕಿತ್ತೆಸೆಯಬೇಕು, ಹೊಲಕ್ಕೇ ವಿಷವುಣಿಸುವ ಕೆಲಸ ಆಗಬಾರದು ಎಂದು ಹೆಚ್ಡಿಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಕೆಪಿಎಸ್ಸಿಯನ್ನೆ ಮುಚ್ಚಿದರೆ ಹೇಗೆಂದು ಚಿಂತನೆ ಮಾಡುತ್ತಿದ್ದೇವೆ: ಸಿಎಂ ಡಿಕೆ ಶಿವಕುಮಾರ್ ಅಚ್ಚರಿಯ ಮಾತು
ಕೆಪಿಸಿಎಸ್ಸಿ ಅಕ್ರಮಗಳ ವಿಚಾರವಾಗಿ ಮಾತನಾಡಿದ್ದ ಸಿಎಂ ಡಿಕೆ ಶಿವಕುಮಾರ್ ಅವರು, ಕೆಪಿಎಸ್‌ಸಿ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ, ಆಯೋಗವನ್ನೇ ಮುಚ್ಚುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ. ಭ್ರಷ್ಟಾಚಾರದಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಅಕ್ರಮದಲ್ಲಿ ಶಾಮೀಲಾದ ಹಲವರನ್ನು ಈಗಾಗಲೇ ಗುರುತಿಸಲಾಗಿದೆ ಎಂದು ತಿಳಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:06 pm, Wed, 23 September 26




