ಭೋವಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪ: ಅಧ್ಯಕ್ಷ ರವಿಕುಮಾರ್ ಕೊನೆಗೂ ರಾಜೀನಾಮೆ
Bhovi Corporation; ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಮತ್ತೆ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ನಿಗಮದಿಂದ ಅಕ್ರಮ ಹಣಕಾಸು ವರ್ಗಾವಣೆ ಮಾಡಿದ ಆರೋಪ ಕಳೆದ ವರ್ಷ ಕೇಳಿಬಂದಿತ್ತು. ಇದೀಗ ನಿಗಮದ ಅಧ್ಯಕ್ಷರ ವಿರುದ್ಧ 60% ಕಮಿಷನ್ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮ್ಯಯನವರ ಸೂಚನೆ ಮೇರೆಗೆ ನಿಗಮದ ಅಧ್ಯಕ್ಷ ರಾಜೀನಾಮೆ ನೀಡಿದ್ದು,, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಬೆಂಗಳೂರು, (ಸೆಪ್ಟೆಂಬರ್ 05): ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ (Bhovi Development Corporation) ಅಧ್ಯಕ್ಷ ಎಸ್.ರವಿಕುಮಾರ್ (Ravi Kumar) ರಾಜೀನಾಮೆ ಸಲ್ಲಿಸಿದ್ದಾರೆ. ರವಿಕುಮಾರ್ ಅವರು ಇಂದು (ಸೆಪ್ಟೆಂಬರ್ 05) ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಭೋವಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವೆಂಕಟೇಶ್ ಅವರು ಸುದ್ದಿಗೋಷ್ಠಿ ನಡೆಸಿ ಭ್ರಷ್ಟಾಚಾರದ ಬಗ್ಗೆ ಗಂಭೀರ ಆರೋಪ ಮಾಡಿದರು. ಅಲ್ಲದೇ ವಿಪಕ್ಷ ಬಿಜೆಪಿ ನಾಯಕರು ಸಹ ಈ ಬಗ್ಗೆ ಧ್ವನಿ ಎತ್ತಿದ್ದರು. ಈ ಪ್ರಕರಣ ರಾಜಕೀಯವಾಗಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸಿಎಂ, ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರವಿಕುಮಾರ್ ರಾಜೀನಾಮೆ ನೀಡಿದ್ದಾರೆ.
ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಸಂಬಂಧ ಕಳೆದ ವರ್ಷ (2024) ಆಗಸ್ಟ್ನಲ್ಲಿ ಬೆಂಗಳೂರಿನಲ್ಲಿರುವ ನಿಗಮದ ಕಚೇರಿ ಮೇಲೆ ಸಿಐಡಿ (CID) ದಾಳಿ ನಡೆಸಿತ್ತು. 2021-22ನೇ ಸಾಲಿನಲ್ಲಿ ಉದ್ಯಮಿಗಳಿಗೆ ಸಾಲ ನೀಡುವಾಗ ಅಕ್ರಮ ನಡೆದಿದ್ದು, ಲಕ್ಷಾಂತರ ರೂ. ಸಾಲಕೊಡಿಸುವ ಆಮಿಷವೊಡ್ಡಿ ಸಾರ್ವಜನಿಕ ದಾಖಲೆ ದುರ್ಬಳಕೆ ಜೊತೆಗೆ 10 ಕೋಟಿ ರೂಪಾಯಿಗೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದ ಆಧಾರದಲ್ಲಿ ಸಿಐಡಿ ದಾಳಿ ನಡೆದಿತ್ತು. ಆ ವಿಚಾರದಲ್ಲಿ ತನಿಖೆಯೂ ನಡೆಯುತ್ತಿದೆ. ಇದರ ನಡುವೆ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ಮೇಲೆಯೇ ಕಮಿಷನ್ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ಮತ್ತೆ ಸದ್ದು ಮಾಡುತ್ತಿದೆ ಭೋವಿ ಅಭಿವೃದ್ಧಿ ನಿಗಮ ಅವ್ಯವಹಾರ: ಏನಿದು ಪ್ರಕರಣ? ಈವರೆಗೆ ಏನೇನಾಯ್ತು? ಇಲ್ಲಿದೆ ವಿವರ
ಯೋಜನೆಗಳಡಿ ಸವಲತ್ತು ಒದಗಿಸಿಕೊಡಲು ರವಿಕುಮಾರ್ ಶೇಕಡ 60 ರಷ್ಟು ಲಂಚ ಕೇಳುತ್ತಿದ್ದಾರೆ ಎಂದು ಭಾರತೀಯ ಭೋವಿ ಸಮಾಜ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ವೆಂಕಟೇಶ್ ಮೌರ್ಯ ಗಂಭೀರ ಆರೋಗ್ಯ ಮಾಡಿದ್ದರು. 2021-22 ರಲ್ಲಿ ನಿಗಮದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಮಧ್ಯವರ್ತಿಗಳೊಂದಿಗೆ ಶಾಮೀಲಾಗಿ 85 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಿದ್ದರು ಎಂದು ಆರೋಪಿಸಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ ಪ್ರತಿಪಕ್ಷ ಬಿಜೆಪಿ, ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದರು. ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕೂಡ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಇದೀಗ ರಾಜೀನಾಮೆ ಬೆನ್ನಲ್ಲೇ ವಿಪಕ್ಷಗಳಿಗೆ ಮತ್ತಷ್ಟು ಬೂಸ್ಟ್ ಕೊಟ್ಟಂತಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:48 pm, Fri, 5 September 25




