ನೀರಿನ ದರ ಪರಿಷ್ಕರಣೆ: ಅಪಾರ್ಟ್‌ಮೆಂಟ್, ಪಿಜಿಗಳಿಗೆ ರಿಲೀಫ್ ನೀಡಿದ ಜಲ ಮಂಡಳಿ
Bengaluru water tariff: ಬೆಂಗಳೂರಿನ ಪೇಯಿಂಗ್ ಗೆಸ್ಟ್ಗಳು ಮತ್ತು ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಶುಭ ಸುದ್ದಿ ನೀಡಿದೆ. ಪಿಜಿಗಳು ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ಸರಬರಾಜು ಮಾಡುವ ನೀರಿನ ದರ ಲೆಕ್ಕಹಾಕುವ ವಿಧಾನದಲ್ಲಿ ತುಸು ಪರಿವರ್ತನೆ ಮಾಡಿದೆ. ಇದರಿಂದ ಪಿಜಿಗಳು ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ನೀರಿನ ದರ ತುಸು ಕಡಿಮೆಯಾಗಲಿದೆ.

ಬೆಂಗಳೂರು, ಸೆಪ್ಟೆಂಬರ್ 5: ಸುಮಾರು ಒಂದು ದಶಕದ ನಂತರ ಕಳೆದ ಏಪ್ರಿಲ್‌ನಲ್ಲಿ ನೀರಿನ ದರ (Water Price) ಹೆಚ್ಚಳ ಮಾಡಿದ್ದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಇದೀಗ ಅಪಾರ್ಟ್‌ಮೆಂಟ್‌ಗಳಿಗೆ ಮತ್ತು ಪೇಯಿಂಗ್ ಗೆಸ್ಟ್ (PG) ವಸತಿಗಳಿಗೆ ದರ ಕಡಿಮೆಯಾಗುವಂತೆ ಮಾಡಿನಿಯಮದಲ್ಲಿ ತುಸು ಪರಿಷ್ಕರಣೆ ಮಾಡಿದೆ. ಅದರಂತೆ, ಅಪಾರ್ಟ್‌ಮೆಂಟ್‌ಗಳು ಮತ್ತು ಪಿಜಿಗಳಿಗೆ ಇನ್ನು ಮುಂದೆ ಅವುಗಳು ಒಟ್ಟಾಗಿ ಬಳಸುವ ನೀರಿನ ಪ್ರಮಾಣ ಆಧರಿಸಿ ದರ ವಿಧಿಸಲಾಗುವುದಿಲ್ಲ. ಬದಲಿಗೆ ಎಷ್ಟು ಮನೆಗಳಿವೆಯೋ ಅವುಗಳ ಆಧಾರದಲ್ಲಿ ದರ ನಿಗದಿಪಡಿಸಲಾಗುತ್ತದೆ ಎಂದು ವರದಿಯಾಗಿದೆ.
ಈ ಹಿಂದೆ, ಹೆಚ್ಚು ನೀರು ಬಳಸುವ ಅಪಾರ್ಟ್‌ಮೆಂಟ್ ಕಟ್ಟಡಗಳನ್ನು ಸ್ವಯಂಚಾಲಿತವಾಗಿ ಹೆಚ್ಚಿನ ಸ್ಲ್ಯಾಬ್‌ಗಳಿಗೆ ಸೇರಿಸಲಾಗುತ್ತಿತ್ತು. ಇದು ಬಿಲ್‌ಗಳ ಹೆಚ್ಚಳಕ್ಕೆ ಕಾರಣವಾಗಿತ್ತು. ಈ ವ್ಯವಸ್ಥೆಯು ಅನಿಯಂತ್ರಿತವಾಗಿದೆ. ನೀರನ್ನು ಹಂಚಿಕೊಳ್ಳುವ ಮನೆಗಳ ಸಂಖ್ಯೆಯನ್ನು ಪರಿಗಣಿಸುವಲ್ಲಿ ವಿಫಲವಾಗಿದೆ ಎಂದು ನಿವಾಸಿಗಳು ವಾದಿಸಿದ್ದರು.
ಇದಿಗ ದರ ಪರಿಷ್ಕರಣೆಯೊಂದಿಗೆ ಹೆಚ್ಚಿನ ಅಪಾರ್ಟ್‌ಮೆಂಟ್ಗಳು ಕಡಿಮೆ ಬಿಲ್ ಪಡೆಯುವ ನಿರೀಕ್ಷೆಯಿದೆ. ಆದಾಗ್ಯೂ, 200 ಕ್ಕಿಂತ ಕಡಿಮೆ ಮನೆಗಳನ್ನು ಹೊಂದಿರುವ ಸಣ್ಣ ಅಪಾರ್ಟ್‌ಮೆಂಟ್ಗಳು ಹೊಸ ಸ್ಲ್ಯಾಬ್ನಿಂದಾಗಿ ಹೆಚ್ಚಿನ ಶುಲ್ಕಗಳನ್ನು ಎದುರಿಸಬೇಕಾಗಬಹುದು ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಪರಿಷ್ಕೃತ ದರದ ಅಡಿಯಲ್ಲಿ, ಅಪಾರ್ಟ್‌ಮೆಂಟ್‌ನಲ್ಲಿರುವ ಪ್ರತಿ ಮನೆಗೆ ದಿನಕ್ಕೆ 200 ಲೀಟರ್‌ಗಳನ್ನು ನೀಡಲಾಗುವುದು. ಪ್ರತಿ ಕಿಲೋಲೀಟರ್‌ಗೆ 32 ರೂ. ದರದಲ್ಲಿ ಶುಲ್ಕ ವಿಧಿಸಲಾಗುತ್ತದೆ. ಈ ಮಿತಿಯನ್ನು ದಾಟಿದ ಬಳಕೆಗೆ ಪ್ರತಿ ಕಿಲೋಲೀಟರ್‌ಗೆ 55 ರೂ. ಬಿಲ್ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.
ಪಿಜಿಗಳ ದುಬಾರಿ ನೈರ್ಮಲ್ಯ ಶುಲ್ಕದಲ್ಲಿ ಕಡಿತ
ಏಪ್ರಿಲ್‌ನಲ್ಲಿ ಮಾಡಿದ್ದ ನೀರಿನ ದರ ಪರಿಷ್ಕರಣೆಯ ಸಮಯದಲ್ಲಿ ಪಿಜಿ ವಸತಿ ಸೌಕರ್ಯಗಳ ಮೇಲೆ ವಿಧಿಸಲಾಗುತ್ತಿದ್ದ ದುಬಾರಿ ನೈರ್ಮಲ್ಯ ಶುಲ್ಕಗಳನ್ನು ಜಲಮಂಡಳಿ ಹಿಂತೆಗೆದುಕೊಂಡಿದೆ. ನೈರ್ಮಲ್ಯ ಶುಲ್ಕ ವಿಧಿಸಿದ್ದರಿಂದ, ಹಿಂದಿನ ದರಗಳಿಗಿಂತ ಐದು ರಿಂದ ಏಳು ಪಟ್ಟು ಹಠಾತ್ ದರ ಹೆಚ್ಚಳವಾಗಿದೆ ಎಂದು ಮಾಲೀಕರು ದೂರಿದ್ದರು. ಮನವಿಗಳಿಗೆ ಸ್ಪಂದಿಸಿದ ಜಲಮಂಡಳಿ ಈಗ ನೈರ್ಮಲ್ಯ ಶುಲ್ಕವನ್ನು ಶೇ 50 ಕ್ಕಿಂತಲೂ ಹೆಚ್ಚು ಕಡಿತಗೊಳಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿನ ದರ ಏರಿಕೆ, ಜನರಿಗೆ ಮತ್ತೊಂದು ಹೊರೆ
ಉದಾಹರಣೆಗೆ, ಏಪ್ರಿಲ್ ಪರಿಷ್ಕರಣೆಯ ನಂತರ 20 ಕ್ಕಿಂತ ಹೆಚ್ಚು ಕೊಠಡಿಗಳನ್ನು ಹೊಂದಿರುವ ಪಿಜಿಗಳಿಗೆ 7,500 ರೂ. ನೈರ್ಮಲ್ಯ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಈಗ 3,000 ರೂ. ಪಾವತಿಸಿದರೆ ಸಾಕಾಗಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:42 pm, Fri, 5 September 25




