AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರುಣ್ ಸಿಂಗ್ ನೇತೃತ್ವದಲ್ಲಿ ಇಂದು ಆರೋಪ ಪ್ರತ್ಯಾರೋಪಗಳ ಚರ್ಚೆ; ಏನಾಗಲಿದೆ ಸಿಎಂ ಯಡಿಯೂರಪ್ಪ ಭವಿಷ್ಯ?

BS Yediyurappa: ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಏರ್ಪೋರ್ಟ್ನಿಂದ ಕುಮಾರಕೃಪಾ ಗೆಸ್ಟ್ಹೌಸ್ಗೆ ಬಂದಿಳಿಯಲಿದ್ದಾರೆ. ಬಳಿಕ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಜೆ 5 ಗಂಟೆಗೆ ಸಭೆ ನಡೆಸಲಿದ್ದಾರೆ.

ಅರುಣ್ ಸಿಂಗ್ ನೇತೃತ್ವದಲ್ಲಿ ಇಂದು ಆರೋಪ ಪ್ರತ್ಯಾರೋಪಗಳ ಚರ್ಚೆ; ಏನಾಗಲಿದೆ ಸಿಎಂ ಯಡಿಯೂರಪ್ಪ ಭವಿಷ್ಯ?
ಯಡಿಯೂರಪ್ಪ
TV9 Web
| Updated By: ಆಯೇಷಾ ಬಾನು|

Updated on:Jun 16, 2021 | 9:55 AM

Share

ರಾಜ್ಯ ಬಿಜೆಪಿಯಲ್ಲಿ ನಡೀತಿರೋ ನಾಯಕತ್ವ ಬದಲಾವಣೆಯ ಮುಸುಕಿನ ಗುದ್ದಾಟ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ತೊಡೆ ತಟ್ಟಿ ನಿಂತಿರೋ ಎರಡು ಗುಂಪುಗಳು, ಆರೋಪ ಪ್ರತ್ಯಾರೋಪಗಳ ಆಯುಧಗಳನ್ನು ಸಜ್ಜುಗೊಳಿಸಿ ನಿಂತಿವೆ. ಈಗಾಗಲೇ ಹೇಳಿಕೆಗಳ ಮೂಲಕ ಏಟಿಗೆ ಎದಿರೇಟು ಕೊಡ್ತಿರೋ ಸಿಎಂ ಪರ ಹಾಗೂ ವಿರೋಧಿ ಗುಂಪುಗಳು ಉಸ್ತುವಾರಿ ಎದುರು ಬಲಪ್ರದರ್ಶನಕ್ಕೆ ಭಾರಿ ರಣತಂತ್ರ ಹೆಣೆದಿದೆ. ಮುಂದಿನ ಚುನಾವಣೆಗೂ ಮುನ್ನ ಸಿಎಂ ಬದಲಾಗಬೇಕು ಅಂತಾ ವಿರೋಧಿ ಟೀಂ ಒತ್ತಾಯಿಸಿದ್ರೆ, ಭವಿಷ್ಯದಲ್ಲಿ ಯಾವತ್ತೂ ಸಿಎಂ ಬದಲಾವಣೆ ಕೂಗು ಎದ್ದೇಳಲೇಬಾರದು ಅಂತಾ ಸಿಎಂ ಪರ ಗುಂಪು ಪ್ಲ್ಯಾನ್ ಮಾಡಿದೆ.

ಮಧ್ಯಾಹ್ನ 3.30ಕ್ಕೆ ಬೆಂಗಳೂರಿಗೆ ಅರುಣ್ ಸಿಂಗ್ ಆಗಮನ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಏರ್ಪೋರ್ಟ್ನಿಂದ ಕುಮಾರಕೃಪಾ ಗೆಸ್ಟ್ಹೌಸ್ಗೆ ಬಂದಿಳಿಯಲಿದ್ದಾರೆ. ಬಳಿಕ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಜೆ 5 ಗಂಟೆಗೆ ಸಭೆ ನಡೆಸಲಿದ್ದಾರೆ. ಇಂದಿನ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಭಾಗಿಯಾಗೋ ಸಾಧ್ಯತೆ ಇದೆ. ಇನ್ನು ವಿಶೇಷ ಅಂದ್ರೆ ಇಂದಿನ ಸಭೆಗೆ ಶಾಸಕರಿಗೆ, ಸಂಸದರಿಗೆ ನೋ ಎಂಟ್ರಿ ಅಂತಾ ಹೇಳಲಾಗಿದ್ದು, ಸಚಿವರೊಂದಿಗೆ ಮಾತ್ರ ಸಭೆ ನಡೆಯಲಿದೆ. ಹೀಗಾಗಿ ನಾಳೆಯಿಂದ ಪರ-ವಿರೋಧ ಗುಂಪಿನ ಅಸಲಿ ಆಟ ಶುರುವಾಗಲಿದೆ. ನಾಳೆ ಶಾಸಕರ ಭೇಟಿಗೆ ಅರುಣ್ ಸಿಂಗ್ ಸಮಯ ಮೀಸಲಿಟ್ಟಿದ್ದು, ನಾಳೆ ಬೆಳಗ್ಗೆ 7ರಿಂದ ರಾತ್ರಿ 11 ರವರೆಗೆ ಸಮಯ ನಿಗದಿ ಮಾಡಲಾಗಿದೆ. ಈ ವೇಳೆ ಶಾಸಕರು ಹಾಗೂ ಸಂಸದರ ತಮಗಿರೋ ನೋವು, ಅಸಮಾಧಾನ ತೋಡಿಕೊಳ್ಳಲು ಅವಕಾಶ ಕೊಡಲಾಗಿದೆ. ಕೆ.ಕೆ. ಗೆಸ್ಟ್ಹೌಸ್ನಲ್ಲಿ ಶಾಸಕರೊಂದಿಗೆ ಅರುಣ್ ಸಿಂಗ್ ಸಭೆ ನಡೆಸಲಿದ್ದಾರೆ. ಇನ್ನು ನಾಡಿದ್ದು ಶುಕ್ರವಾರ ಕೋರ್ ಕಮಿಟಿ ಸದಸ್ಯರೊಂದಿಗೆ ಸಭೆ ನಡೆಸೋ ಅರುಣ್ ಸಿಂಗ್ ಅವತ್ತೇ ಸಂಜೆ ದೆಹಲಿಗೆ ತೆರಳಲಿದ್ದಾರೆ.

ಪ್ರಧಾನಿ ಮೋದಿ ನಿವಾಸದಲ್ಲಿ ಸದಾನಂದಗೌಡ ಸುದೀರ್ಘ ಮಾತುಕತೆ ಇನ್ನು ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ಕೇಂದ್ರ ರಾಸಾಯನಿಕ & ರಸಗೊಬ್ಬರ ಸಚಿವ ಸದಾನಂದಗೌಡ ಭೇಟಿಯಾಗಿದ್ದಾರೆ. ಪ್ರಧಾನಿ ಮೋದಿ ನಿವಾಸದಲ್ಲಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಮೋದಿಯವರು ಇಲಾಖೆ, ರಾಜ್ಯದ ಸದ್ಯದ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಅವರಿಗೆ ಗೌರವ ಸೂಚಿಸುವುದು ನಮ್ಮ ಕರ್ತವ್ಯ ಅರುಣ್ ಸಿಂಗ್ ನಮ್ಮ ನಾಯಕ, ಇಂದು ಬರುತ್ತಿದ್ದಾರೆ. ಅವರಿಗೆ ಗೌರವ ಸೂಚಿಸುವುದು ನಮ್ಮ ಕರ್ತವ್ಯ ಎಂದು ಬೆಂಗಳೂರಿನಲ್ಲಿ ಸಚಿವ ಭೈರತಿ ಬಸವರಾಜ್ ಹೇಳಿದ್ರು. ಪಕ್ಷದ ಕಾರ್ಯಕರ್ತನಾಗಿ ಸ್ವಾಗತಿಸಲು ಹೋಗುತ್ತಿದ್ದೇನೆ. ಇಂದಿನ ಸಭೆಯಲ್ಲೂ ನಾನು ಭಾಗಿಯಾಗುತ್ತೇನೆ. ನಳಿನ್ ಕುಮಾರ್, ಸಿಎಂ ಬಿಎಸ್‌ವೈ ಸಹ ಭಾಗಿಯಾಗ್ತಾರೆ. ರಾಜ್ಯದಲ್ಲಿ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸುತ್ತೇವೆ. ಸರ್ಕಾರ ಹೇಗೆ ಕೆಲಸ ಮಾಡಬೇಕೆಂದು ಚರ್ಚೆ ನಡೆಯುತ್ತೆ.

ಮುಖ್ಯಮಂತ್ರಿಗಳ ಬದಲಾವಣೆಯ ಪ್ರಶ್ನೆಯೇ ಇಲ್ಲ. ಊಹಾಪೋಹಗಳಿಗೆ ನಾನು ಉತ್ತರ ಕೊಡುವುದಿಲ್ಲ. ಸಿಎಂ ಬಿಎಸ್‌ವೈ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಅರುಣ್ ಸಿಂಗ್ ಬರುತ್ತಾರೆ ಕೆಲವು ಸಲಹೆಗಳನ್ನ ನೀಡ್ತಾರೆ. ಅವರ ಸಲಹೆಗಳನ್ನು ನಾವು ಸ್ವೀಕರಿಸುತ್ತೇವೆ. ಸಿಎಂ ಬದಲಾವಣೆಯ ಯಾವುದೇ ಬೆಳವಣಿಗೆಗಳು ಇಲ್ಲ. ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯುತ್ತಾರೆ. ನನ್ನ ಬೆಂಬಲ ಯಡಿಯೂರಪ್ಪನವರಿಗೆ ಯಾವಾಗಲೂ ಇದೆ ಎಂದು ಹೇಳಿದ್ದಾರೆ.

ಸಿಎಂ ವಿರುದ್ಧವೇ ಸಚಿವ ಈಶ್ವರಪ್ಪ ಆಕ್ರೋಶ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧವೇ ಸಚಿವ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದರು. ತಮ್ಮ ಇಲಾಖೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಈ ಬಗ್ಗೆ ಈ ಹಿಂದೆ ರಾಜ್ಯಪಾಲರಿಗೆ, ಹೈಕಮಾಂಡ್‌ಗೆ ಪತ್ರ ಬರೆದಿದ್ದರು.

ತಮ್ಮ ಇಲಾಖೆಗೆ ಬಿಡುಗಡೆಯಾದ 1,200 ಕೋಟಿ ರೂ.ಅನುದಾನ ಕುರಿತು ಹಸ್ತಕ್ಷೇಪ ಮಾಡುತ್ತಿದ್ದು ಕೂಡಲೇ ಮಧ್ಯಪ್ರವೇಶ ಮಾಡಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ಪತ್ರದಲ್ಲಿ ತಿಳಿಸಿದ್ದರು. ಹೀಗಾಗಿ ಇಂದು ನಡೆಯುವ ಸಭೆಯಲ್ಲಿ ಈ ಬಗ್ಗೆ ಈಶ್ವರಪ್ಪ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.

ಪರೋಕ್ಷವಾಗಿ ಸಿಎಂ ಪುತ್ರರ ವಿರುದ್ದ ಯೋಗೇಶ್ವರ್ ಆರೋಪ ನನ್ನ ಇಲಾಖೆಯಲ್ಲಿ ಮೂಗು ತೂರಿಸಿತ್ತಿದ್ದಾರೆ ಎಂದು ಈ ಹಿಂದೆ ವಿಜಯೇಂದ್ರ ವಿರುದ್ದ ಪರೋಕ್ಷವಾಗಿ ಸಿ.ಪಿ ಯೋಗೇಶ್ವರ್ ಆರೋಪ ಮಾಡಿದ್ದರು. ನನ್ನ ಅಧಿಕಾರದಲ್ಲಿ ನನ್ನ ಮಗ ಮೂಗು ತೂರಿಸಿದ್ರೆ ಸರಿ ಇರಲ್ಲ. ಆದ್ರೆ ಇದೇ ರೀತಿ ರಾಜ್ಯದಲ್ಲಿ ನಡಿಯುತ್ತಿದೆ ಎಂದು ಪರೋಕ್ಷವಾಗಿ ಬಿ.ವೈ. ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಆಕ್ಷೇಪವೆತ್ತಿದ್ದರು. ನಾನೊಬ್ಬ ಸಚಿವ. ಇವತ್ತು ನನ್ನ ಸಚಿವಗಿರಿಯನ್ನು ನನ್ ಮಗ ಚಲಾಯಿಸಿದ್ರೆ ನಾನು ಒಪ್ಪಲ್ಲ. ನನ್ನ ಅಧಿಕಾರದಲ್ಲಿ ಬೇರೆಯವರು ಮೂಗು ತೂರಿಸೋದು ಇಷ್ಟವಿಲ್ಲ. ಇದನ್ನು ನಾನು ಸೂಕ್ಷ್ಮವಾಗಿ ಹೇಳಿದೀನಿ, ಅರ್ಥ ಮಾಡ್ಕೊಳ್ಳಿ ಎಂದಿದ್ದರು ಈ ವಿಷಯ ಕೂಡ ಇಂದು ಚರ್ಚೆಯಾಗುವ ಸಾಧ್ಯತೆ ಇದೆ.

ಕೈಯಲ್ಲಿ ಗಂಗೆಯನ್ನು ಹಿಡಿದು ಪ್ರಮಾಣ ಮಾಡಿ ಹೇಳುತ್ತೇನೆ ಸಿಎಂ ಬಿಎಸ್‌ವೈ ಪರ 65 ಶಾಸಕರ ಸಹಿ ಸಂಗ್ರಹಿಸಿದ್ದು ಸತ್ಯ. ಕೈಯಲ್ಲಿ ಗಂಗೆಯನ್ನು ಹಿಡಿದು ಪ್ರಮಾಣ ಮಾಡಿ ಹೇಳುತ್ತೇನೆ ಎಂದು ಟಿವಿ9ಗೆ ಬಿಜೆಪಿ ಶಾಸಕ M.P.ರೇಣುಕಾಚಾರ್ಯ ಹೇಳಿದ್ದಾರೆ. ಕೆಲವರು ಸೂಟು ಹೊಲಿಸಿ ಸಿಎಂ ಸ್ಥಾನದ ಕನಸು ಕಾಣ್ತಿದ್ದಾರೆ. ಧಾರವಾಡ, ವಿಜಯಪುರ ಶಾಸಕರು ಇಂಥ ಕನಸು ಕಾಣ್ತಿದ್ದಾರೆ. ಅವರು ತಮ್ಮ ಕ್ಷೇತ್ರದ ಜಾತ್ರೆಯಲ್ಲಿ ಸೂಟನ್ನು ಹಾಕಿಕೊಳ್ಳಲಿ ಎಂದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಬಗಟ್ಟ ಸಿಸಿಸಿಯಲ್ಲಿ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದ್ದಾರೆ.

ಅರುಣ್ ಸಿಂಗ್ ಭೇಟಿಗೆ ಈಗಾಗಲೇ ಸಮಯ ನೀಡಿದ್ದಾರೆ. ಎಲ್ಲ ಶಾಸಕರು ಒಟ್ಟಾಗಿ ಅವರಿಗೆ ಮನವರಿಕೆ ಮಾಡುತ್ತೇವೆ. ಸಿಎಂ ಬಿಎಸ್‌ವೈ ನಾಯಕತ್ವ ಬದಲಾವಣೆ ಸಾಧ್ಯವೇ ಇಲ್ಲ. ಯಾರೋ ಇಬ್ಬರು, ಮೂವರು ದೆಹಲಿಗೆ ಹೋಗಿ ವರಿಷ್ಠರ ಮನೆ ಗೇಟ್ ಮುಟ್ಟಿ ಬಂದರೆ ಬದಲಾವಣೆ ಆಗಲ್ಲ. ಈ ಹಿಂದೆ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದರು‌. ಈಗ ಅವರೂ ಬಿಎಸ್‌ವೈ ನಮ್ಮ ನಾಯಕ ಎಂದಿದ್ದಾರೆ ಎಂದು ಶಾಸಕ M.P.ರೇಣುಕಾಚಾರ್ಯ ತಿಳಿಸಿದ್ದಾರೆ.

ಇದನ್ನೂ ಓದಿ: ಜಿಯೋ ಫೈಬರ್‌ನಿಂದ ಮಾನ್ಸೂನ್​ ಸುಗ್ಗಿ! ಹೊಸ ಪೋಸ್ಟ್‌ ಪೇಯ್ಡ್ ಪ್ಲಾನ್‌, ಇಂಟರ್‌ನೆಟ್‌ ಬಾಕ್ಸ್‌ ಜೊತೆಗೆ ಇನ್‌ಸ್ಟಲೇಷನ್‌ ಉಚಿತ!

Published On - 9:46 am, Wed, 16 June 21