ಬೆಂಗಳೂರು: ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಅಸಮಾಧಾನಗೊಂಡಿರುವ ಕೆಲವು ಬಿಜೆಪಿ ನಾಯಕರು ಬಹಿರಂಗವಾಗಿಯೇ ಈ ಬಗ್ಗೆ ಹೇಳಿಕೆ ನೀಡುತ್ತಿರುವುದು ಬಿಜೆಪಿ ಹಿರಿಯ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಬಣಗಳಾಗಿ ಒಡೆದುಹೋಗಿರುವ ಕರ್ನಾಟಕದ ಬಿಜೆಪಿಯನ್ನು ಮತ್ತೆ ಒಗ್ಗೂಡಿಸುವ ಪ್ರಯತ್ನವನ್ನು ಬಿಜೆಪಿ ಹೈಕಮಾಂಡ್ ಮಾಡಲು ಮುಂದಾಗಿದೆ. ಪಕ್ಷದಲ್ಲಿ ಒಗ್ಗಟ್ಟಿಲ್ಲದ ಕಾರಣದಿಂದಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಧ್ವನಿಯೆತ್ತುವ ಪ್ರಬಲ ವಿಪಕ್ಷವಾಗಿ ಕಾರ್ಯ ನಿರ್ವಹಿಸುವಲ್ಲಿ ವಿಫಲರಾಗುತ್ತಿರುವುದನ್ನು ಅರಿತುಕೊಂಡಿರುವ ಬಿಜೆಪಿ ಹೈಕಮಾಂಡ್ ಕರ್ನಾಟಕದ ಬಿಜೆಪಿಯೊಳಗಿನ ಭಿನ್ನಮತದ ಶಮನಕ್ಕೆ ಮುಂದಾಗಿದ್ದಾರೆ. ಇಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಜೊತೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಮಾತುಕತೆ ನಡೆಸಿದ್ದಾರೆ.
ಬಿಜೆಪಿ ಶಾಸಕರ ಜೊತೆ ರಾಧಾಮೋಹನ್ದಾಸ್ ಒನ್ಟುಒನ್ ಚರ್ಚೆ ನಡೆಸಿದ್ದು, ಬೆಂಗಳೂರಿನ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾತುಕತೆ ನಡೆಸಿದ್ದಾರೆ. ತಟಸ್ಥ ನಿಲುವು ಹೊಂದಿರುವ ಕೆಲವು ಬಿಜೆಪಿ ಶಾಸಕರು ರಾಧಾಮೋಹನ್ ದಾಸ್ ಅವರನ್ನು ಭೇಟಿ ಮಾಡಿದ್ದಾರೆ. ಪಕ್ಷದ ಈಗಿನ ಸ್ಥಿತಿ ಬಗ್ಗೆ ನೋಡಲು ಅಗುತ್ತಿಲ್ಲ, ದಯವಿಟ್ಟು ಇದನ್ನು ಮೊದಲು ಸರಿಪಡಿಸಿ ಎಂದ ಶಾಸಕರು ಮನವಿ ಮಾಡಿದ್ದಾರೆ. ಸದ್ಯ ಬಿ.ವೈ. ವಿಜಯೇಂದ್ರ ಪ್ರೊಬೆಷನರಿ ಪಿರಿಯಡ್ನಲ್ಲಿದ್ದಾರೆ. ಅವರಿಗೂ ಸಲ್ಪ ಅವಕಾಶ ಕೊಡಬೇಕೆಂಬುದು ಬಹುತೇಕರ ಅಭಿಪ್ರಾಯ. ಪಕ್ಷಕ್ಕೆ ಶಕ್ತಿ ಇದ್ದರೆ ಈಗಿನ ಪರಿಸ್ಥಿತಿಯನ್ನು ಸರಿಪಡಿಸಿ ಎಂದು ರಾಧಾ ಮೋಹನ್ದಾಸ್ಗೆ ಬಿಜೆಪಿ ಶಾಸಕರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣಾಧಿಕಾರಿಗಳ ನೇಮಕ; ಶಿವರಾಜ್ ಸಿಂಗ್ ಚೌಹಾಣ್ ಹೆಗಲಿಗೆ ಕರ್ನಾಟಕದ ಹೊಣೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರವನ್ನು ವಿಜಯೇಂದ್ರ ಬಣದ ಕೆಲವು ಬಿಜೆಪಿ ಶಾಸಕರು ಪ್ರಸ್ತಾಪಿಸುತ್ತಿದ್ದಂತೆ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಕೋಪಗೊಂಡಿದ್ದಾರೆ. ಶಾಸಕ ಯತ್ನಾಳ್ ಮಾಡುತ್ತಿರುವುದು ತಪ್ಪು ಎಂಬುದು ನಿಜ. ಅದನ್ನು ನೋಡಿಕೊಳ್ಳಲು ಪಕ್ಷ ಇದೆ, ನೀವು ಮಾಡುತ್ತಿರುವುದೇನು? ಚುನಾವಣೆಯಲ್ಲಿ ರೇಣುಕಾಚಾರ್ಯ, ಪ್ರೀತಂ ಗೌಡ ಮಾಡಿದ್ದೇನು? ಎಂದು ಪ್ರಶ್ನಿಸಿದ್ದಾರೆ.
ಇದೀಗ ಎಲ್ಲವೂ ಕೂಡ ಹೈಕಮಾಂಡ್ ಗಮನದಲ್ಲಿದೆ. ಎಲ್ಲವೂ ಸರಿ ಹೋಗುತ್ತದೆ. ಗುಂಪುಗಾರಿಕೆಯನ್ನು ಮೊದಲು ಬಿಡಿ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ವಿಜಯೇಂದ್ರ ಹೇಳಿಕೆಗಳಿಗೆ ಬಸವಣ್ಣನ ವಚನಗಳ ರೂಪದಲ್ಲಿ ಪ್ರತಿಕ್ರಿಯೆ ನೀಡಿದ ಬಸನಗೌಡ ಯತ್ನಾಳ್
ರಾಜ್ಯ ಬಿಜೆಪಿ ಉಸ್ತುವಾರಿಯಾಗಿರುವ ರಾಧಾಮೋಹನ್ ದಾಸ್ ನೇತೃತ್ವದಲ್ಲಿ ನಡೆದಿರುವ ಸಭೆಯ ಬಳಿಕ ಕರ್ನಾಟಕದಲ್ಲಿ ಬಿಜೆಒಇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕೇ ಬೇಡವೇ ಎಂಬುದರ ಕುರಿತು ಕೂಡ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ. ವಿಜಯೇಂದ್ರ ಪರವಾಗಿರುವ ಬಣ ಸಹಮತದ ಮೂಲಕ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸುತ್ತಿದೆ. ಯತ್ನಾಳ್ ಬಣ ಚುನಾವಣೆ ಮಾಡಿ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿದೆ. ಹೀಗಾಗಿ, ಈ ಸಭೆ ಬಹಳ ಕುತೂಹಲ ಮೂಡಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ