ದೋಸ್ತಿಯಲ್ಲಿ ಮಹತ್ವದ ಬೆಳವಣಿಗೆ: ಅತ್ತ ನಿಖಿಲ್ ಆ್ಯಕ್ಟೀವ್ ಆಗುತ್ತಿದ್ದಂತೆಯೇ ಇತ್ತ ಬಿಜೆಪಿ ನಾಯಕರಿಂದ ದೆಹಲಿ ಚಲೋ

| Updated By: ರಮೇಶ್ ಬಿ. ಜವಳಗೇರಾ

Updated on: Aug 26, 2024 | 9:59 PM

ಕರ್ನಾಟಕದ ಮೂರು ವಿಧಾನಸಭಾ ಚುನಾವಣೆಗಳ ಪೈಕಿ ಚನ್ನಪಟ್ಟಣ ಉಪ ಚುನಾವಣಾ ಅಖಾಡ ಈಗಿನಿಂದಲೇ ಹೈವೋಲ್ಟೇಜ್ ನಲ್ಲಿದೆ.. ಮೈತ್ರಿ ಟಿಕೆಟ್ ತನಗೆ ಸಿಗಬೇಕು ಅಂತ ಕಾಯುತ್ತಿರುವ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ನಾಳೆ ದೆಹಲಿಗೆ ಹಾರಲಿದ್ದು, ಇನ್ನಿಂಗ್ಸ್ ನ ಕೊನೆಯ ಪವರ್ ಪ್ಲೇ ಮಾಡಲಿದ್ದಾರೆ.

ದೋಸ್ತಿಯಲ್ಲಿ ಮಹತ್ವದ ಬೆಳವಣಿಗೆ: ಅತ್ತ ನಿಖಿಲ್ ಆ್ಯಕ್ಟೀವ್ ಆಗುತ್ತಿದ್ದಂತೆಯೇ ಇತ್ತ ಬಿಜೆಪಿ ನಾಯಕರಿಂದ ದೆಹಲಿ ಚಲೋ
ಬಿಜೆಪಿ-ಜೆಡಿಎಸ್
Follow us on

ಬೆಂಗಳೂರು, (ಆಗಸ್ಟ್ 26): ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭೆಯ ಉಪಚುನಾವಣಾ ಕಣ ಸದ್ಯ ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ.‌ ಕ್ಷೇತ್ರ ಗೆಲ್ಲಲೇಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಚನ್ನಪಟ್ಟಣ ಸುತ್ತಲೂ ಗಿರಿಕಿ ಹೊಡೆಯುತ್ತಿದ್ದು, ಹಲವು ಜನಸಂಪರ್ಕ ಸಭೆ ಮಾಡುವ ಮೂಲಕ ಬಡವರಿಗೆ ನಿವೇಶನ ಹಂಚುವ ವಾಗ್ದಾನ ಮಾಡಿ ಇಡೀ ಕ್ಷೇತ್ರದಲ್ಲಿ ಸಂಚಲನ‌ ಉಂಟು ಮಾಡಿದ್ದಾರೆ. ಇತ್ತ ಇಷ್ಟು ದಿನಗಳ ಕಾಲ ಸುಮ್ಮನೆ ಕೂತಿದ್ದ ಜೆಡಿಎಸ್ ನಾಯಕರೂ ಕೂಡ ಈಗ ಇದ್ದಕ್ಕಿದ್ದಂತೆ ಆ್ಯಕ್ಟೀವ್ ಆಗಿದ್ದಾರೆ. ಖದ್ದು ನಿಖಿಲ್ ಕುಮಾರಸ್ವಾಮಿ ಕ್ಷೇತ್ರದಲ್ಲಿ ಓಡಾಟ ಶುರು ಮಾಡಿಕೊಂಡಿದ್ದಾರೆ. ಇವೆಲ್ಲವನ್ನ ಗಮನಿಸಿ ತಾಳೆ ನೋಡುತ್ತಿದ್ದ ಪರಿಷತ್ ಸದಸ್ಯ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಹೀಗೆ ಕೈ ಕಟ್ಟಿ ಕೂತಿದ್ರೆ ನಾನು ಹೀಗೇಯೇ ಕೂರಬೇಕಾಗುತ್ತೆ ಎಂದು ಡಿಸೈಡ್ ಆಗಿ ಮತ್ತೊಮ್ಮೆ ದೆಹಲಿ ಕಡೆ ಮುಖ ಮಾಡಿದ್ದು, ನಾಳೆ ದೆಹಲಿಗೆ ಹಾರಿ ನಾಡಿದ್ದು ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆ ಮಾಡಲಿದ್ದಾರೆ.

ಇಷ್ಟು ದಿನಗಳ‌ ಕಾಲ ಮೈತ್ರಿ ನಾಯಕರ‌ ನಡುವೆ ಭಿನ್ನಾಭಿಪ್ರಾಯ ಇದ್ದರೂ ಒಂದು ಸರಿಯಾದ ಟೈಮಲ್ಲಿ ಸರಿಯಾದ ನಿರ್ಧಾರ ಆಗುತ್ತೆ ಎಂದು ಯೋಗೇಶ್ವರ್ ನಂಬಿದ್ದರು. ಆದ್ರೆ, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ವಾಗ್ಬಾಣಗಳು ಸೀದಾ ತಮ್ಮ ಎದೆ ಕಡೆ ಬರೋದನ್ನು ಕಂಡಿರುವ ಸಿಪಿ ಯೋಗೇಶ್ವರ್ ಹೀಗಾದ್ರೆ ನನ್ನ ಕಥೆ ಅಷ್ಟೇ ಎಂದು ಯೋಚಿಸಿದಂತಿದೆ. ಜೆಡಿಎಸ್ ತಂತ್ರಗಾರಿಕೆಯ ಹೊಡೆತದಿಂದ ತಪ್ಪಿಸಿಕೊಳ್ಳಲು ಕವಚ ಕುಂಡಲಗಳನ್ನು ಗಟ್ಟಿ‌ ಮಾಡಿಕೊಂಡು ಮತ್ತೆ ದೆಹಲಿಗೆ ಹಾರಲಿದ್ದಾರೆ.‌ ಕಳೆದ ಕೆಲ‌ ದಿನಗಳ ಹಿಂದೆ ಸಿಪಿವೈ ಬೆಂಬಲಿಸಿ ಹಮ್ಮಿಕೊಳ್ಳಲಾಗಿದ್ದ ಬಂಡಾಯ ಸಮವೇಶವನ್ನು ತಾವೇ ಖುದ್ದಾಗಿ ಬೇಡ ಎಂದಿದ್ದ ಸಿಪಿವೈ, ಈಗ ಒಂದೋ ಟಿಕೆಟ್ ಕೊಡಿ, ಇಲ್ಲ ನನ್ನ ಬುಟ್ಬುಡಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದಕ್ಕೆ ರಾಜ್ಯದ ಕೆಲ ಬಿಜೆಪಿ ನಾಯಕರು ಸಪೋರ್ಟ್ ಮಾಡುತ್ತಿದ್ದಾರೆ. ಹೈಕಮಾಂಡ್ ಬಳಿ‌ ಹೋಗಿ ಯೋಗೇಶ್ವರ್‌ಗೆ ಟಿಕೆಟ್ ಕೇಳ್ತೇವೆ ಅಂತ ವಿಪಕ್ಷ ನಾಯಕ ಆರ್.ಆಶೋಕ್ ಹೇಳಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಹೈಕಮಾಂಡ್​​ ಜೊತೆ ಚರ್ಚಿಸಲು ರಾಜ್ಯ ಬಿಜೆಪಿ ನಾಯಕರು ಆಗಸ್ಟ್ 28ರಂದು ನವದೆಹಲಿಗೆ ತೆರಳಲಿದ್ದಾರೆ. ವಿಪಕ್ಷ ನಾಯಕ ಆರ್. ಅಶೋಕ್, ಉಪನಾಯಕ ಅರವಿಂದ ಬೆಲ್ಲದ್, ಶಾಸಕ ಅಶ್ವತ್ಥ್​​ ನಾರಾಯಣ, ಸಿ.ಟಿ.ರವಿ ದೆಹಲಿಗೆ ಪ್ರಯಾಣ ಬೆಳಸಲಿದ್ದು, ಸಿ.ಪಿ.ಯೋಗೇಶ್ವರ್​ಗೆ ಟಿಕೆಟ್ ನೀಡುವಂತೆ ವರಿಷ್ಠರಿಗೆ ಮನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಈಗಾಗಲೇ ದೆಹಲಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಇದರ ಮಧ್ಯ ಇದೀಗ ಇನ್ನುಳಿದ ನಾಯಕರು ದೆಹಲಿಗೆ ಹಾರುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ಯೋಗೇಶ್ವರ್​​ಗೆ ಟೀಕೆಟ್​ ನೀಡುವಂತೆ ರಾಜ್ಯ ನಾಯಕರು ದೆಹಲಿಗೆ ತೆರಳುತ್ತಿರುವ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ, ಚನ್ನಪಟ್ಟಣ ಅಭ್ಯರ್ಥಿ ಹೈಕಮಾಂಡ್ ತೀರ್ಮಾನ ಮಾಡಲಿದೆ. ಜೆಡಿಎಸ್‌ ಪಕ್ಷದಲ್ಲೂ ಸಮರ್ಥವಾದ ಕಾರ್ಯಕರ್ತರಿದ್ದಾರೆ ಎಂದು ದಾಳ ಉರುಳಿಸಿದ್ದಾರೆ.

ಇತ್ತ ಕಾಂಗ್ರೆಸ್​ಗೆ ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ಹೀಗಾಗಿ ಎಐಸಿಸಿ, KPCC ಸೂಚನೆ ಮೇರೆಗೆ ಸಹ ಉಸ್ತುವಾರಿಗಳು ಅಖಾಡಕ್ಕಿಳಿದಿದ್ದಾರೆ. ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.