ಮೇ 25ರ ಬಳಿಕ ರಾಜ್ಯ ಬಿಜೆಪಿಯಲ್ಲಿ ಮಹಾ ಬದಲಾವಣೆ? ವಿಜಯೇಂದ್ರ ಪಟ್ಟ ಭದ್ರ; ಕೋರ್ ಕಮಿಟಿ ಪುನಾರಚನೆ ಸಾಧ್ಯತೆ!

ಮೇ 25ರ ಬಳಿಕ ಕರ್ನಾಟಕ ಬಿಜೆಪಿಯಲ್ಲಿ ಭಾರಿ ಬದಲಾವಣೆಯ ಮುನ್ಸೂಚನೆ ಸಿಕ್ಕಿದ್ದು, ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಬಿವೈ ವಿಜಯೇಂದ್ರ ಅವರೇ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಇದರೊಂದಿಗೆ ಬಿಜೆಪಿ ಕೋರ್ ಕಮಿಟಿ ಪುನಾರಚನೆಯಾಗಲಿದ್ದು, ಹಲವು ಹಿರಿಯ ನಾಯಕರು ಸಮಿತಿ ಸೇರಲು ಈಗಾಗಲೇ ಪೈಪೋಟಿ ನಡೆಸುತ್ತಿದ್ದಾರೆ.

ಮೇ 25ರ ಬಳಿಕ ರಾಜ್ಯ ಬಿಜೆಪಿಯಲ್ಲಿ ಮಹಾ ಬದಲಾವಣೆ? ವಿಜಯೇಂದ್ರ ಪಟ್ಟ ಭದ್ರ; ಕೋರ್ ಕಮಿಟಿ ಪುನಾರಚನೆ ಸಾಧ್ಯತೆ!
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪಟ್ಟ ಭದ್ರ?
Image Credit source: tv9
Edited By:

Updated on: May 20, 2026 | 6:50 AM

ಬೆಂಗಳೂರು, ಮೇ 20: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಪ್ರತಿಪಕ್ಷ ಬಿಜೆಪಿಯ (BJP) ಆಂತರಿಕ ವಿದ್ಯಮಾನಗಳಿಗೆ ಸಂಬಂಧಿಸಿದಂತೆ, ಮೇ 25 ರ ನಂತರ ಮಹತ್ವದ ಬೆಳವಣಿಗೆಗಳಾಗುವ ಸಾಧ್ಯತೆ ಇದೆ. ಪಕ್ಷದ ರಾಷ್ಟ್ರೀಯ ನಾಯಕರು ಸಾಲು ಸಾಲಾಗಿ ರಾಜ್ಯಕ್ಕೆ ಭೇಟಿ ನೀಡುತ್ತಿರುವುದರಿಂದ, ಬಹುದಿನಗಳಿಂದ ಚರ್ಚೆಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಗೊಂದಲಗಳಿಗೆ ಶೀಘ್ರದಲ್ಲೇ ತೆರೆಬೀಳುವ ನಿರೀಕ್ಷೆ ಇದೆ. ಹೈಕಮಾಂಡ್ ಮೂಲಗಳ ಪ್ರಕಾರ ಪ್ರಸ್ತುತ ರಾಜ್ಯಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ (BY Vijayendra) ಅವರನ್ನೇ ಈ ಸ್ಥಾನದಲ್ಲಿ ಮುಂದುವರಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಮುಖ್ಯಾಂಶಗಳು

  • ಬೆಂಗಳೂರಿಗೆ ರಾಷ್ಟ್ರೀಯ ನಾಯಕರ ದಂಡು.
  • ಮೇ 23 ರಂದು ಪಕ್ಷದ ರಾಷ್ಟ್ರೀಯ ನಾಯಕ ನಿತಿನ್ ನಬಿನ್ ಬೆಂಗಳೂರಿಗೆ.
  • ಮೇ 24 ರಂದು ಕೋರ್ ಕಮಿಟಿ ಸೇರಿದಂತೆ ಪ್ರಮುಖ ಸಭೆಗಳ ಆಯೋಜನೆ. ಮೇ 25 ರಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಬೆಂಗಳೂರಿಗೆ ಭೇಟಿ.

ವಿಜಯೇಂದ್ರಗೆ ಬಲ ತುಂಬಿದ ಅಮಿತ್ ಶಾ ಹೇಳಿಕೆ

ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಬಿಎಸ್ ಯಡಿಯೂರಪ್ಪ ಅವರ 50 ವರ್ಷಗಳ ಸಾರ್ವಜನಿಕ ಜೀವನದ ‘ಅಭಿಮಾನೋತ್ಸವ’ ಕಾರ್ಯಕ್ರಮದಲ್ಲಿ ಇಡೀ ರಾಜ್ಯದ ಮಠಾಧಿಪತಿಗಳು ಒಂದೇ ವೇದಿಕೆಗೆ ಬರಲು ಬಿಎಸ್​ವೈ ಅವರೇ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದರು. ಇದು ಪರೋಕ್ಷವಾಗಿ ವಿಜಯೇಂದ್ರ ಅವರಿಗೆ ನೈತಿಕವಾಗಿ ದೊಡ್ಡ ಶಕ್ತಿ ತುಂಬಿದೆ ಎನ್ನಲಾಗಿದೆ.

ಕೋರ್ ಕಮಿಟಿ ಪುನಾರಚನೆ ಭೀತಿ

ರಾಜ್ಯ ಬಿಜೆಪಿಯ ನಿರ್ಣಾಯಕ ಸಮಿತಿಯಾದ ಕೋರ್ ಕಮಿಟಿ ಶೀಘ್ರದಲ್ಲೇ ಪುನಾರಚನೆಗೊಳ್ಳಲಿದ್ದು, ಹಾಲಿ ಇರುವ ಇಬ್ಬರು ಪ್ರಮುಖ ಸದಸ್ಯರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮನ್ನಣೆ ನೀಡುವ ಸಾಧ್ಯತೆ ಇದೆ.

ಸಂಘ ಪರಿವಾರದ ಸಾಫ್ಟ್ ಕಾರ್ನರ್ – ಕೋರ್ ಕಮಿಟಿ ರೇಸ್

ಚಿತ್ರದುರ್ಗದ ಸಮಾವೇಶವು ಕೇವಲ ಬಿಎಸ್​ವೈ ಅಭಿಮಾನೋತ್ಸವ ಎಂದು ವಿಜಯೇಂದ್ರ ಸ್ಪಷ್ಟಪಡಿಸುತ್ತಿದ್ದರೂ, ಇದು ಪರೋಕ್ಷವಾಗಿ ಯಡಿಯೂರಪ್ಪ ಅವರ ಭಾರಿ ಶಕ್ತಿ ಪ್ರದರ್ಶನ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಈ ಅಭೂತಪೂರ್ವ ಯಶಸ್ಸಿನ ಬಳಿಕ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಹೈಕಮಾಂಡ್ ಜೊತೆಗೆ ಸಂಘ ಪರಿವಾರದಲ್ಲೂ (RSS) ಸಾಫ್ಟ್ ಕಾರ್ನರ್ ಮೂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಅದ್ಧೂರಿ ಬಿಎಸ್​ವೈ ಅಭಿಮಾನೋತ್ಸವ: ಯಡಿಯೂರಪ್ಪರ 50 ವರ್ಷಗಳ ರಾಜಕೀಯ ಪಯಣ ಕೊಂಡಾಡಿದ ಅಮಿತ್​ ಶಾ

ಮತ್ತೊಂದೆಡೆ, ಪುನಾರಚನೆಗೊಳ್ಳಲಿರುವ ಕೋರ್ ಕಮಿಟಿ ಸೇರಲು ಬಿಜೆಪಿಯ ಹಿರಿಯ ನಾಯಕರು ಭಾರಿ ಕಸರತ್ತು ನಡೆಸುತ್ತಿದ್ದಾರೆ. ಸಂಸದ ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ವಿ. ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರು ಸಮಿತಿಯ ಸದಸ್ಯರಾಗಲು ತೀವ್ರ ಉತ್ಸುಕತೆ ಹೊಂದಿದ್ದಾರೆ. ಇದರೊಂದಿಗೆ ಶಾಸಕ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್ ಅವರ ಹೆಸರೂ ಸಹ ಮುಂಚೂಣಿಯಲ್ಲಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಎರಡು ವರ್ಷ ಬಾಕಿ ಇರುವ ಹಿನ್ನೆಲೆಯಲ್ಲಿ, ರಾಜ್ಯ ಬಿಜೆಪಿಯಲ್ಲಿ ಹೈಕಮಾಂಡ್ ತೆಗೆದುಕೊಳ್ಳಲಿರುವ ಈ ನಿರ್ಧಾರಗಳು ತೀವ್ರ ಕುತೂಹಲ ಕೆರಳಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
Loading...
Unable to load recommendations.
Follow Us