AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು, ಬಾಗಲಕೋಟೆ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ, ಪಾಸ್‌ಪೋರ್ಟ್ ಕಚೇರಿಗೂ ಬಂತು ಇ-ಮೇಲ್

ಮೈಸೂರು, ಬಾಗಲಕೋಟೆ ಜಿಲ್ಲಾ ನ್ಯಾಯಾಲಯಗಳು ಹಾಗೂ ಬೆಂಗಳೂರಿನ ಪಾಸ್‌ಪೋರ್ಟ್ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದು ಆತಂಕ ಸೃಷ್ಟಿಸಿವೆ. ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ತಂಡಗಳು ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದ್ದು, ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ.ಕಳೆದ ತಿಂಗಳು ಕೋಲಾರ, ಗದಗದಲ್ಲೂ ಇಂತಹ ಹುಸಿ ಬೆದರಿಕೆಗಳು ಬಂದಿದ್ದವು.

ಮೈಸೂರು, ಬಾಗಲಕೋಟೆ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ, ಪಾಸ್‌ಪೋರ್ಟ್ ಕಚೇರಿಗೂ ಬಂತು ಇ-ಮೇಲ್
ಮೈಸೂರು, ಬಾಗಲಕೋಟೆ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ
ಭಾವನಾ ಹೆಗಡೆ
|

Updated on:Jan 06, 2026 | 2:21 PM

Share

ಮೈಸೂರು/ ಬಾಗಲಕೋಟೆ, ಜನವರಿ 06: ಕಳೆದ ತಿಂಗಳಲ್ಲಿ ಕೋಲಾರ, ಗದಗ ಸೇರಿದಂತೆ ರಾಜ್ಯದ ಹಲವು ಕಡೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಆತಂಕ ಸೃಷ್ಟಿಸಿತ್ತು. ಇದೀಗ ಮತ್ತೊಮ್ಮೆ ಇಂತದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರಿನ ಹಳೆ ಕೋರ್ಟ್ ಹಾಗೂ ಬಾಗಲಕೋಟೆ ಜಿಲ್ಲಾ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಯ ಸಂದೇಶ ಬಂದಿದ್ದು, ತಪಾಸಣೆ ನಡೆಸಲಾಗಿದೆ.

ಆತ್ಮಾಹುತಿ ದಾಳಿ ಮಾಡುವುದಾಗಿ ಬೆದರಿಕೆ

ಮೈಸೂರಿನಲ್ಲಿ ಮಧ್ಯಾಹ್ನ 1.55ಕ್ಕೆ ಮೂರು ಆರ್‌ಡಿಎಕ್ಸ್ ಬಾಂಬ್ ಇಟ್ಟಿರುವುದಾಗಿ, ಆತ್ಮಹತ್ಯಾ ದಾಳಿ ಮಾಡುವುದಾಗಿ ಬೆದರಿಕೆ ಇತ್ತು. ಸಂದೇಶದಲ್ಲಿ ನ್ಯಾಯಾಧೀಶರನ್ನು ಸ್ಥಳಾಂತರಿಸುವಂತೆ ಎಚ್ಚರಿಸಲಾಗಿತ್ತು. ಮಾಹಿತಿ ಸ್ವೀಕರಿಸಿರುವ ನ್ಯಾಯಾಧೀಶರು, ಕಕ್ಷಿದಾರರು, ವಕೀಲರು ತಕ್ಷಣ ಕೋರ್ಟ್ ಆವರಣದಿಂದ ಹೊರಬಂದಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ತಂಡ ತಕ್ಷಣ ಹೋಗಿ ಪರಿಶೀಲನೆ ನಡೆಸಿದೆ.

ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ಬಾಗಲಕೋಟೆ ಜಿಲ್ಲಾ ನ್ಯಾಯಾಲಯಕ್ಕೂ ಮಧ್ಯಾಹ್ನ ಇ-ಮೇಲ್ ಮೂಲಕ ಬೆದರಿಕೆಯ ಸಂದೇಶ ಬಂದಿದೆ. ನಿಮ್ಮ ಜಿಲ್ಲಾ ನ್ಯಾಯಾಲಯದ ಕ್ರಿಟಿಕಲ್ ಸ್ಥಳಗಳಲ್ಲಿ ಬಾಂಬ್ ಇಟ್ಟಿದ್ದೇವೆ, ಮಧ್ಯಾಹ್ನದ ಊಟದ ಅವಧಿಯಲ್ಲಿ ಸ್ಫೋಟ ಮಾಡುತ್ತೇವೆ ಎಂಬ ಎಚ್ಚರಿಕೆ ನೀಡಲಾಗಿತ್ತು. ಈ ವಿಷಯ ತಿಳಿದ ನ್ಯಾಯವಾದಿಗಳು, ಕಕ್ಷಿದಾರರು, ನೌಕರರು ಮತ್ತು ಸಾರ್ವಜನಿಕರು ಭಯಭೀತರಾಗಿ ಹೊರಬಂದಿದ್ದಾರೆ. ಪೊಲೀಸ್‌, ಜಿಲ್ಲಾಡಳಿತ ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಕ್ಕೆ ತೆರಳಿ ಕಟ್ಟಡ ಹಾಗೂ ಆವರಣದ ಸಂಪೂರ್ಣ ತಪಾಸಣೆ ನಡೆಸುತ್ತಿದೆ.

ಇದನ್ನೂ ಓದಿ ಗದಗ, ಮಂಗಳೂರು ಆಯ್ತು ಈಗ ಭಟ್ಕಳದ ತಹಶೀಲ್ದಾರ್ ಕಚೇರಿಗೂ ಬಾಂಬ್ ಬೆದರಿಕೆ!

ಪಾಸ್‌ಪೋರ್ಟ್ ಕಚೇರಿಗೂ ಬಾಂಬ್ ಥ್ರೆಟ್

ಬೆಂಗಳೂರಿನ ಲಾಲ್‌ಬಾಗ್ ರಸ್ತೆಯಲ್ಲಿರುವ ಪಾಸ್‌ಪೋರ್ಟ್ ಕಚೇರಿಗೂ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿರುವುದು ಬೆಳಕಿಗೆ ಬಂದಿದೆ. ಕಿಡಿಗೇಡಿಗಳು ಬಾಂಬ್ ಇಟ್ಟಿರುವುದಾಗಿ ಬೆದರಿಕೆವೊಡ್ಡಿದ್ದು, ಮಾಹಿತಿ ತಿಳಿದ ವಿಲ್ಸನ್ ಗಾರ್ಡನ್ ಹಾಗೂ ಎಸ್.ಆರ್.ನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸಿಬ್ಬಂದಿಯಿಂದ ಪಾಸ್‌ಪೋರ್ಟ್ ಕಚೇರಿ ಆವರಣದಲ್ಲಿ ತಪಾಸಣೆ ನಡೆಲಾಗಿದೆ.

ಧಾರವಾಡ ಹೈಕೋರ್ಟ್, ಗದಗ ನ್ಯಾಯಾಲಯಕ್ಕೂ ಬಾಂಬ್ ಬೆದರಿಕೆ

ಧಾರವಾಡ ತಾಲೂಕಿನ ಬೇಲೂರು ಬಳಿಯ ಹೈಕೋರ್ಟ್‌ಗೆ ಇ-ಮೇಲ್ ಮೂಲಕ ಆರ್‌ಡಿಎಕ್ಸ್ ಬಾಂಬ್ ಹಾಕುವುದಾಗಿ ಬೆದರಿಕೆ ಬಂದಿದೆ. ಕೋರ್ಟ್‌ನ ಅಡಿಷನಲ್ ರೆಜಿಸ್ಟ್ರಾರ್ ಜನರಲ್‌ಗೆ ಬಂದ ಮೇಲ್‌ನಿಂದ ಆತಂಕ ಸೃಷ್ಟಿಯಾಗಿದ್ದು, ಗರಗ್ ಠಾಣಾ ವ್ಯಾಪ್ತಿಯ ಪೊಲೀಸರು ಎಲ್ಲರನ್ನು ಹೊರಹಾಕಿದ್ದಾರೆ. ಎಸ್ಪಿ ಗುಂಜನ್ ಆರ್ಯ ನೇತೃತ್ವದಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಯುತ್ತಿದೆ. ತಮಿಳುನಾಡು ಮೂಲದಿಂದ ಮೇಲ್ ಬಂದಿರುವ ಶಂಕೆ ವ್ಯಕ್ತವಾಗಿದೆ.

ಇದೇ ವೇಳೆ ಗದಗ ಜಿಲ್ಲಾ ನ್ಯಾಯಾಲಯಕ್ಕೂ ಔಟ್‌ಲುಕ್ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಗದಗ ಎಸ್ಪಿ ರೋಹನ್ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ, ಶ್ವಾನದಳ ಹಾಗೂ ಬಾಂಬ್ ಪತ್ತೆದಳದಿಂದ ಇಂಚಿಂಚು ಶೋಧ ಕಾರ್ಯ ನಡೆಸಲಾಗುತ್ತಿದೆ. ಬೆದರಿಕೆ ಹಿನ್ನೆಲೆಯಲ್ಲಿ ನ್ಯಾಯಾಲಯದ ಕಾರ್ಯ ಸ್ಥಗಿತಗೊಂಡಿದ್ದು, ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:00 pm, Tue, 6 January 26