
ಕರ್ನಾಟಕದಲ್ಲಿ ಮತ್ತೆ ಪಕ್ಷಾಂತರ ಪರ್ವ ಶುರುವಾಗುವ ಮುನ್ಸೂಚನೆ ದೊರೆಯುತ್ತಿದೆ. 2019 ರಲ್ಲಿ ರಾಜ್ಯ ರಾಜಕೀಯದಲ್ಲಿ ದೊಡ್ಡ ಹೈಡ್ರಾಮಾ ನಡೆದಿತ್ತು. ಆಪರೇಷನ್ ಕಮಲದ ಮೂಲಕ ಕಾಂಗ್ರೆಸ ಮತ್ತು ಜೆಡಿಎಸ್ ನ 17 ಶಾಸಕರು ಬಿಜೆಪಿ ಸೇರುವ ಮೂಲಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾಗಿದ್ದರು. ಇದೀಗ ರಾಜ್ಯ ರಾಜಕಾರಣದಲ್ಲಿ ಶೀಘ್ರದಲ್ಲೇ ಮತ್ತೊಂದು ಸುತ್ತಿನ ರಾಜಕೀಯ ಡ್ರಾಮಾ ಶುರುವಾಗಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಸೇರಿದ ಬಾಂಬೆ ಬಾಯ್ಸ್ ಕಾಂಗ್ರೆಸ್‌ಗೆ ಫರ್ ವಾಪಸಿ ಮಾಡುವ ಸಾಧ್ಯತೆ ದಟ್ಟವಾಗಿವೆ. ಇನ್ನು ಕೆಆರ್ಎಸ್ ಜಲಾಶಯದಿಂದ ಕಾವೇರಿ ನೀರನ್ನು ತಮಿಳುನಾಡಿಗೆ ರಾಜ್ಯ ಸರ್ಕಾರ ಬಿಟ್ಟಿದ್ದು, ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸರ್ವಪಕ್ಷ ಸಭೆ ಕರೆದಿದ್ದಾರೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ.
ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಚರ್ಚೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಶಾಸಕ ಮುನಿರತ್ನ, ಬೈರತಿ ಬಸವರಾಜ ಫೋನ್ ಮಾಡಿದ್ದರು. ನಾವು ಎಂತಹದೇ ಸಮಯದಲ್ಲಿ ಪಕ್ಷ ಬಿಡುವುದಿಲ್ಲ ಎಂದು ತಿಳಿಸಲು ಹೇಳಿದ್ದಾರೆ. ಯಾರೂ ಪಕ್ಷ ಬಿಟ್ಟು ಹೋಗಲ್ಲ. ಬೈರತಿ ಬಸವರಾಜ, ಕೆ. ಗೋಪಾಲಯ್ಯ, ನಾನು ಪಕ್ಷ ಬಿಟ್ಟು ಹೋಗಲ್ಲ ಎಂದು ಸ್ಪಷ್ಟಪಡಿಸಿದರು. ಎಸ್ಟಿ ಸೋಮಶೇಖರ್ ಹೆಸರು ಹೇಳಿಲ್ಲ ಎಂದಾಗ ಸೋಮಶೇಖರ್ ಸಹ ಎಂದು ಹೇಳಿದರು.
ಬೆಂಗಳೂರು: ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಶಾಸಕರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಚರ್ಚೆ ವಿಚಾರವಾಗಿ ಮಾತನಾಡಿದ ಶಾಸಕ ಕೆ.ಗೋಪಾಲಯ್ಯ, ಇವತ್ತು ನನಗೆ ಒಂದು ಸಾವಿರಕ್ಕೂ ಹೆಚ್ಚು ಕಾಲ್ ಬಂದಿವೆ. ನನ್ನ ತೇಜೋವಧೆ ಮಾಡಬೇಡಿ ಎಂದರು. ಇನ್ನೂ ಐದು ವರ್ಷ ಬಿಜೆಪಿಯಲ್ಲೇ ಇರುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲುವಿಗೆ ಶ್ರಮಿಸುತ್ತೇವೆ ಎಂದರು.
ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಚರ್ಚೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಶಾಸಕ ಮುನಿರತ್ನ, ಬೈರತಿ ಬಸವರಾಜ ಫೋನ್ ಮಾಡಿದ್ದರು. ನಾವು ಎಂತಹದೇ ಸಮಯದಲ್ಲಿ ಪಕ್ಷ ಬಿಡುವುದಿಲ್ಲ ಎಂದು ತಿಳಿಸಲು ಹೇಳಿದ್ದಾರೆ. ಯಾರೂ ಪಕ್ಷ ಬಿಟ್ಟು ಹೋಗಲ್ಲ. ಬೈರತಿ ಬಸವರಾಜ, ಕೆ. ಗೋಪಾಲಯ್ಯ, ನಾನು ಪಕ್ಷ ಬಿಟ್ಟು ಹೋಗಲ್ಲ ಎಂದು ಸ್ಪಷ್ಟಪಡಿಸಿದರು. ಎಸ್ಟಿ ಸೋಮಶೇಖರ್ ಹೆಸರು ಹೇಳಿಲ್ಲ ಎಂದಾಗ ಸೋಮಶೇಖರ್ ಸಹ ಎಂದು ಹೇಳಿದರು.
ಸಿದ್ದರಾಮಯ್ಯ ರಾಜಕೀಯ ಗುರು ಎನ್ನುವ ಎಸ್.ಟಿ ಸೋಮಶೇಖರ್ ಹೇಳಿಕೆಗೆ ವಿಶೇಷ ಅರ್ಥ ಬೇಡ. ಈ ಹಿಂದೆ ಕೆಲವರು ಬೊಮ್ಮಾಯಿಯವರನ್ನು ನಮ್ಮ ಗುರು ಎಂದಿದ್ದಾರೆ. ಯಡಿಯೂರಪ್ಪನವರನ್ನು ನಮ್ಮ ಗುರು ಎನ್ನುತ್ತಾರೆ. ಹೀಗಾಗಿ ರಾಜಕೀಯವೇ ಬೇರೆ, ಗುರುವೇ ಬೇರೆ ಎಂದು ಮಾಜಿ ಸಚಿವ ಆರ್.ಅಶೋಕ ಹೇಳಿದರು. ಅಪ್ಪ ಮಗ, ಅಣ್ಣ ತಮ್ಮ ಬೇರೆ ಬೇರೆ ಪಕ್ಷದಲ್ಲಿ ಇರುವ ಕಾಲ ಇದು. ಇಂದೂ ಕೂಡ ಬೆಳಗ್ಗೆಯಿಂದ ಎರಡು ಬಾರಿ ಸೋಮಶೇಖರ್ ನನಗೆ ಕರೆ ಮಾಡಿದ್ದಾರೆ ನಾನು ಮಾತನಾಡಿದ್ದೇನೆ. ಇಂದಿನ ಸಭೆಗೆ ಬರುವುದಿಲ್ಲ ಎಂದು ಮೊದಲೇ ಮಾಹಿತಿ ತಿಳಿಸಿ ಅನುಮತಿ ಪಡೆದುಕೊಂಡೇ ಗೈರಾಗಿದ್ದಾರೆ. ಬೈರತಿ ಬಸವರಾಜ್ ಊರಲ್ಲಿಲ್ಲ ಹಾಗಾಗಿ ಅವರು ಬಂದಿಲ್ಲ. ಬೈರತಿ ಬರುತ್ತಿದ್ದಂತೆ ಅವರಿಬ್ಬರನ್ನೂ ನಾನು ಮಾಧ್ಯಮಗಳ ಮುಂದೆ ನಿಲ್ಲಿಸಿ ಸ್ಪಷ್ಟೀಕರಣ ಕೊಡಿಸುತ್ತೇನೆ ಎಂದರು. ಈಗ ಘರ್ ವಾಪಸಿ ಎನ್ನುತ್ತಿರುವ ಕಾಂಗ್ರೆಸ್ ಅವರಿಗೆ ಮಾನ ಮರ್ಯಾದೆ ಇದ್ದರೆ 15 ಜನ ಪಕ್ಷ ಬಿಟ್ಟಾಗ ಮಣ್ಣು ತಿನ್ನುತ್ತಿದ್ದರೆ? ಅಂದು ಏಕೆ ತಡೆಯಲಿಲ್ಲ, ಈಗ ವಾಪಸ್ ಎಂದು ಹೇಳುತ್ತಿದ್ದಾರೆ. ಆಗ ನೀವೇ ಕಳಿಸಿ ಕೊಟ್ಟಿದ್ದೀರಾ? ಮೊದಲು 15 ಜನ ಯಾಕೆ ಪಕ್ಷ ಬಿಟ್ಟಿದ್ದರು ಎಂದು ಆತ್ಮವಲೋಕನ ಮಾಡಿ ನಂತರ ಬೇರೆ ಪಕ್ಷದ ಸುದ್ದಿಗೆ ಬನ್ನಿ ಎಂದರು.
ಬೆಳಗಾವಿ: ವೀರಶೈವ ಮಹಾಸಭೆ ನಿಮ್ಮನ್ನು ಹೈಜಾಕ್ ಮಾಡಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ವಿನಯ್ ಕುಲಕರ್ಣಿ, ನನ್ನನ್ನು ಯಾರೂ ಹೈಜಾಕ್ ಮಾಡಿಲ್ಲ. ಎಲ್ಲರ ಜೊತೆಗೂಡಿ ಹೋರಾಟ ಮಾಡಿಕೊಂಡು ಹೋಗುತ್ತೇವೆ. ನಮ್ಮಲ್ಲಿನ ತಪ್ಪುಗಳನ್ನು ತಿದ್ದಿಕೊಂಡು ವ್ಯವಸ್ಥೆಯಲ್ಲಿ ಒಂದಾಗಿ ಇರೋಣ. ಈ ಹಿಂದೆ ನಾವು ಸಮಾಜ ಒಡೆಯುವ ಕೆಲಸ ಮಾಡಿಲ್ಲ. ಸಮಾಜ ಒಡೆಯಬೇಕು ಅಂತಾ ನಾವು ಹೋರಾಟ ಮಾಡಿಲ್ಲ. ಬಸವಣ್ಣವರ ತತ್ವದ ಮೇಲೆ ಪ್ರತ್ಯೇಕ ಲಿಂಗಾಯತ ಧರ್ಮ ಕೇಳಿದ್ದೇವು. ಬಸವಣ್ಣವರು ಕಟ್ಟಿದ ಲಿಂಗಾಯತ ಧರ್ಮಕ್ಕೆ ನಾವು ಮಾನ್ಯತೆ ಕೇಳಿದ್ದೇವು. ಆದರೆ ಆ ಹೋರಾಟ ಕೆಲವರಿಗೆ ಅರ್ಥವಾಗಲಿಲ್ಲ. ಆ ಸಂದರ್ಭದಲ್ಲಿ ದಿಕ್ಕು ತಪ್ಪಿಸುವ ಕೆಲಸವಾಯಿತು. ಅದರಲ್ಲಿ ಹಲವಾರು ರಾಜಕೀಯ ವ್ಯವಸ್ಥೆ ಕೂಡ ಬೆರೆಯಿತು ಎಂದರು. ಲಿಂಗಾಯತ ಧರ್ಮದ ಎಲ್ಲ ಒಳಪಂಗಡಳಿಗೆ ಕೇಂದ್ರದ ಒಬಿಸಿ ಮೀಸಲಾತಿ ಕೇಳುತ್ತಿದ್ದೇವೆ ಎಂದರು.
ತಮ್ಮ ನಿವಾಸದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಇಂದಿನ ಸಭೆಯಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗಿದೆ. 23ನೇ ತಾರೀಕು ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಐದಾರು ಸಾವಿರ ಜನರು ಸೇರಿ ಪ್ರತಿಭಟನೆ ಮಾಡುತ್ತೇವೆ. ಈ ಸರ್ಕಾರ ಪಾಪರ್ ಆಗಿದೆ. ಎಲ್ಲಾ ಕೆಲಸ ಕಾರ್ಯಗಳೂ ಸ್ಥಗಿತವಾಗಿವೆ ಎಂದರು. ಬಿಜೆಪಿ ಶಾಸಕರು ಪಕ್ಷ ತ್ಯಜಿಸುವ ವಿಚಾರವಾಗಿ ಮಾತನಾಡಿದ ಯಾರೂ ಪಕ್ಷ ಬಿಟ್ಟು ಹೋಗಲ್ಲ. ಒಬ್ಬಿಬ್ಬರು ಈ ಬಗ್ಗೆ ಯೋಚಿಸುತ್ತಿದ್ದಾರೆ. ಅದರ ಬಗ್ಗೆ ಮಾತಾಡುತ್ತೇವೆ ಎಂದರು.
ಚೆನ್ನೈನಲ್ಲಿರುವ ಅಮೆರಿಕದ ನೂತನ ಕಾನ್ಸುಲೇಟ್ ಜನರಲ್ ಕ್ರಿಸ್ಟೋಫರ್ ಡಬ್ಲ್ಯೂ ಹಾಡ್ಜಸ್ ಅವರು ಇಂದು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ರಾಜಕೀಯ ಮತ್ತು ಆರ್ಥಿಕ ವಿಭಾಗದ ಮುಖ್ಯಸ್ಥ ವಿರ್ಸಾ ಪರ್ಕಿನ್ಸ್, ರಾಜಕೀಯ ಮತ್ತು ಆರ್ಥಿಕ ಅಧಿಕಾರಿ ಜೇಸನ್ ಇವಾನ್ಸ್, ರಾಜಕೀಯ ಮತ್ತು ಆರ್ಥಿಕ ತಜ್ಞ ವಿಕ್ರಮ್ ಜೋಶಿ ಮತ್ತು ಇತರರು ಉಪಸ್ಥಿತರಿದ್ದರು.
Newly appointed Consulate General of United States in Chennai Mr. Christopher W Hodges met Chief Minister of Karnataka Shri @siddaramaiah today.
Chief of the Political and Economic Section Mr. Virsa Perkins, Political and Economic Officer Jason Evans, Political and Economic… pic.twitter.com/QKJZyzGuQL
— CM of Karnataka (@CMofKarnataka) August 18, 2023
ಡಾಲರ್ಸ್ ಕಾಲೋನಿಯ ಬಿಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ಬೆಂಗಳೂರಿನ ಬಿಜೆಪಿ ಸಂಸದರು ಮತ್ತು ಶಾಸಕರ ಸಭೆ ನಡೆಯುತ್ತಿದೆ. ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್.ಜಿ.ವಿ., ಶಾಸಕರಾದ ಎಸ್.ಆರ್.ವಿಶ್ವನಾಥ್, ಉದಯ ಗರುಡಾಚಾರ್, ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಎಸ್.ರಘು, ಎಸ್.ಮುನಿರಾಜು, ಎಂಎಲ್ಸಿ ರವಿಕುಮಾರ್, ಸಂಸದರಾದ ಡಿವಿಎಸ್, ಪಿ.ಸಿ.ಮೋಹನ್ ಭಾಗಿಯಾಗಿದ್ದಾರೆ. ಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕರಾದ ಆರ್. ಅಶೋಕ್, ಮುನಿರತ್ನ, ಕೆ. ಗೋಪಾಲಯ್ಯ, ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಭಾಗಿಯಾಗಿದ್ದಾರೆ.
ಕೊಪ್ಪಳ ಡಿಸಿ ಹುದ್ದೆಯಿಂದ ವರ್ಗಾವಣೆಯಾಗಿದ್ದ ಸುಂದರೇಶ್ ಬಾಬು ಅವರನ್ನು ಕೆಎಸ್ಆರ್ಟಿಸಿ ನಿರ್ದೇಶಕರಾಗಿ ನೇಮಿಸಲಾಗಿದೆ. ಕೊಪ್ಪಳ ಡಿಸಿಯಾಗಿದ್ದ ಇವರನ್ನು ಸ್ಥಳ ನಿಯೋಜಿಸದೆ ವರ್ಗಾವಣೆ ಮಾಡಲಾಗಿತ್ತು. ಇನ್ನು, ಆರ್ಡಿಪಿಆರ್ ಸೋಷಿಯಲ್ ಆಡಿಟ್ ನಿರ್ದೇಶಕರಾಗಿದ್ದ ಐಎಎಸ್ ಅಧಿಕಾರಿ ನಳಿನಿ ಅತುಲ್ ಅವರನ್ನು ಕೊಪ್ಪಳದ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ಕೆಎಟಿ ಅಧ್ಯಕ್ಷರಾಗಿ ಐಎಎಸ್ ಅಧಿಕಾರಿ ವಿ.ಮಂಜುಳಾ ವರ್ಗಾವಣೆ ಮಾಡಲಾಗಿದ್ದು, ಮೈಸೂರಿನ ಎಟಿಐ ಡಿಜಿ ಹುದ್ದೆ ಹೆಚ್ಚುವರಿ ಹೊಣೆಗಾರಿಕೆಯಾಗಿ ನೀಡಲಾಗಿದೆ. ಕೆಯುಐಡಿಎಫ್ಸಿ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಐಎಎಸ್ ಅಧಿಕಾರಿ ದೀಪಾ ಚೋಳನ್ ಅವರಿಗೆ ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತರ ಹುದ್ದೆಯ ಹೆಚ್ಚವರಿ ಹೊಣೆಗಾರಿಕೆ ನೀಡಲಾಗಿದೆ.
ವಲಸಿಗ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಮರು ಸೇರ್ಪಡೆ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ, ಕಾಂಗ್ರೆಸ್ ಅಧಿಕಾರ ಬಂದಾಗಿನಿಂದ ರಾಜ್ಯಕ್ಕೆ ದುರ್ದೆಸೆ ಶುರುವಾಗಿದೆ ಎಂದರು. ಬಿಜೆಪಿ ಅಧಿಕಾರ ಇದ್ದಾಗ ಕೆ.ಆರ್.ಎಸ್ ಭರ್ತಿಯಾಗದ ಸ್ಥಿತಿ ಇರಲಿಲ್ಲ. ಈಗ ರೈತರಿಗೆ ನೀರಿಲ್ಲ, ಜಲಾಶಯ ಖಾಲಿಯಾಗಿದೆ. ಪವರ್ ಕಟ್, ಲೋಡ್ ಶೆಡಿಂಗ್ ಶುರುವಾಗಿದೆ. ಶೂನ್ಯ ಬಿಲ್ ಅಂತರೆ, ಕರೆಂಟೇ ಇಲ್ಲದ ಮೇಲೆ ಶೂನ್ಯ ಬಿಲ್ ಬರುತ್ತೆ. ಇಂತಹ ದುರ್ದೆಸೆ ಇರುವ ಸಂದರ್ಭದಲ್ಲಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರಾ ಎಂದು ಪ್ರಶ್ನಿಸಿದರು. ಒಂದು ವೇಳೆ ಹೋಗುವವರನ್ನು ರಾಜಕೀಯ ಜಾಣ್ಮೆ ಇರುವವರು, ಬುದ್ದಿವಂತರು ಎಂದು ಹೇಳಲ್ಲ. ಹೋಗುವವರಿಗೆ ದೂರಾಲೋಚನೆ ಇದೆ ಎಂದು ಹೇಳಲಾಗಲ್ಲ ಎಂದರು. ಸರ್ಕಾರ ಬಂದಾಗಿನಿಂದ ಕಾಂಗ್ರೆಸ್ ಹಿರಿಯ ಶಾಸಕರಿಗೆ ಸಮಾಧಾನ ಇಲ್ಲ. ಇಲ್ಲಿಂದ ಹೋದವರಿಗೆ ಏನ್ ಸಮಾಧನಾನ ಸಿಗುತ್ತದೆ ಎಂದು ಪ್ರಶ್ನಿಸಿದರು.
ಜೆಡಿಎಸ್ನಿಂದ 10-12 ಶಾಸಕರಲ್ಲ, ಒಬ್ಬರೂ ಬಿಟ್ಟು ಹೋಗಲ್ಲ ಎಂದು ಬೆಂಗಳೂರಿನಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಪಕ್ಷ ಸಂಘಟನೆ ಬಗ್ಗೆ ಎಲ್ಲಾ ನಾಯಕರು ಗಮನ ಕೊಡಬೇಕು ಎಂದರು. ಜೆಡಿಎಸ್ ವಿವಿಧ ಪದಾಧಿಕಾರಿಗಳು ಹೊಸದಾಗಿ ನೇಮಕ ಮಾಡಿ ಪಕ್ಷಕ್ಕೆ ಹೊಸ ಸ್ಪರ್ಶ ನೀಡಲು ಕೆಲಸ ಮಾಡುತ್ತೇವೆ ಎಂದರು. ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ರಾಯರೆಡ್ಡಿ ಹೇಳಿದ್ದಾರೆ. ಹೀಗಾಗಿ ಆಪರೇಷನ್ ಹಸ್ತದ ಬಗ್ಗೆ ಕಾಂಗ್ರೆಸ್ನವರು ಮಾತನಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸಚಿವರ ಕಾರ್ಯವೈಖರಿ ಬಗ್ಗೆ ಮತ್ತೊಮ್ಮೆ ಅಸಮಾಧಾನ ಹಿನ್ನೆಲೆ ಕೆಪಿಸಿಸಿ ಎರಡು ಮತ್ತು ಮೂರನೇ ಹಂತದ ನಾಯಕರು ಪ್ರತ್ಯೇಕ ಸಭೆ ನಡೆಸಿದರು. ಬೆಂಗಳೂರಿನ ಬ್ಯಾಡ್ಮಿಂಟನ್ ಕ್ಲಬ್ನಲ್ಲಿ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಮುಖಂಡರು ಒತ್ತಾಯ ಮಾಡಿದರು. ಇನ್ನೂ ಕೆಲವರು, ಸಚಿವರ ವಿರುದ್ಧನೂ ಬೇಸರ ವ್ಯಕ್ತಪಡಿಸಿದರು. ಚುನಾವಣೆ ಸಂದರ್ಭದಲ್ಲಿ ದುಡಿದ ಕಾರ್ಯಕರ್ತರ ಏನು ಮಾಡಬೇಕು? ಎಲ್ಲಾ ಅಧಿಕಾರವನ್ನು ಶಾಸಕರು, ಸಚಿವರು ಅನುಭವಿಸಿದರೆ ಹೇಗೆ? ಸುಮ್ಮನೆ ಇದ್ದರೆ ಆಗಲ್ಲ ಎಂದು ಕೆಲವು ಮುಖಂಡರ ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಜೂನ್, ಆಗಸ್ಟ್ ತಿಂಗಳಲ್ಲಿ ಮಳೆ ಕೊರತೆಯಾಗಿದೆ ಎಂದು ಮೈಸೂರಿನಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಶೇಕಡಾ 60ರಷ್ಟು ಬರ ಇದ್ದರೆ ಮಾತ್ರ ಕೇಂದ್ರ ಅನುದಾನ ನೀಡುತ್ತೆ. ಇಲ್ಲವಾದರೆ ಕೇಂದ್ರ ಸರ್ಕಾರದಿಂದ ಅನುದಾನ ಬರುವುದಿಲ್ಲ. ಬರಗಾಲದ ನಿಯಮ ಬದಲಾವಣೆಗೆ ಕೋರಿ ಸಿಎಂ ಪತ್ರ ಬರೆದಿದ್ದಾರೆ. ಬರಕ್ಕೆ ನಿಗದಿಯಾಗಿರುವ ಮಾನದಂಡ ಶೇ.30ಕ್ಕೆ ಇಳಿಸುವಂತೆ ಪತ್ರ ಬರೆದಿದ್ದಾರೆ. ಸಿಎಂ ಬರೆದಿರುವ ಪತ್ರಕ್ಕೆ ಕೇಂದ್ರ ಸರ್ಕಾರದಿಂದ ಉತ್ತರ ಬಂದಿಲ್ಲ. ಕೇಂದ್ರದಿಂದ ಉತ್ತರ ಬಂದ ನಂತರ ಚರ್ಚಿಸಿ ನಿರ್ಧರಿಸುತ್ತೇವೆ ಎಂದರು.
ಕಾಂಗ್ರೆಸ್ ನಾಯಕರಿಂದ ನನಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ರಾಯಚೂರಿನಲ್ಲಿ ಮಾಜಿ ಸಂಸದ ಬಿ.ವಿ.ನಾಯಕ್ ಹೇಳಿದ್ದಾರೆ. ರಾಜಕೀಯದಲ್ಲಿ ಚುನಾವಣೆ ಬಂದಾಗ ಧ್ರುವೀಕರಣ ಸಾಮಾನ್ಯ. ಊಹಾಪೋಹಗಳು ಬರುತ್ತವೆ, ಎಲ್ಲದಕ್ಕೂ ಉತ್ತರ ಕೊಡಲ್ಲ. ಡಿ.ಕೆ.ಸುರೇಶ್ ನನ್ನ ಸ್ನೇಹಿತ, ಆಗಾಗ ಭೇಟಿಯಾಗುತ್ತಿರುತ್ತೇವೆ. ವೈರಲ್ ಆದ ಡಿ.ಕೆ.ಸುರೇಶ್ ಜೊತೆಗಿನ ಫೋಟೋ ಹಳೆಯದು. ಪಕ್ಷಕ್ಕೆ ನಾಯಕರು ಬರುವುದರಿಂದ ಸೋಲು ಗೆಲುವು ಆಗುವುದಿಲ್ಲ. ಕಾಂಗ್ರೆಸ್ ಪಕ್ಷದಿಂದ ನನಗೆ ಅನ್ಯಾಯವಾಗಿಲ್ಲ. ಕಾಂಗ್ರೆಸ್ನ ಕೆಲವು ವ್ಯಕ್ತಿಗಳಿಂದ ನೋವಾಗಿ ಪಕ್ಷ ತೊರೆದಿದ್ದೆ. ನಾವು ಪದೇಪದೆ ಪಕ್ಷ ಬದಲಿಸಿದರೆ ವ್ಯಕ್ತಿತ್ವ ಉಳಿಯುವುದಿಲ್ಲ ಎಂದರು.
ರಾಜ್ಯದಲ್ಲಿರುವುದು ಕಮಿಷನ್, ಎಟಿಎಂ ಸರ್ಕಾರ ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಆರೋಪಿಸಿದ್ದಾರೆ. ಡಿಸಿಎಂ ಗುತ್ತಿಗೆದಾರರನ್ನು ಹೆದರಿಸಿ ವ್ಯವಹಾರ ಮಾಡುತ್ತಿದ್ದಾರೆ. ಇದು ನಾಡಿನ ಸಂಸ್ಕೃತಿ, ಶಿಕ್ಷಣ, ನೆಲ ಜಲ ವಿರೋಧಿ ಸರ್ಕಾರ ಎಂದರು. ವಲಸಿಗ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಈ ವಿಷಯದ ಬಗ್ಗೆ ನಾವೇನೂ ಚರ್ಚೆ ಮಾಡಲ್ಲ ಎಂದರು.
ಅನ್ನಭಾಗ್ಯ ಯೋಜನೆಯ ಹೆಚ್ಚುವರಿ 5 ಕೆಜಿ ಅಕ್ಕಿಯ ಹಣ ಆ.25 ಅಥವಾ 26ರೊಳಗೆ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ ಎಂದು ವಿಧಾನಸೌಧದಲ್ಲಿ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ಕಳೆದ ತಿಂಗಳು ಡಿಬಿಟಿ ವಿಚಾರವಾಗಿ ಹಣ ಹಾಕುವುದು ತಡವಾಯಿತು ಎಂದರು. ಆಹಾರ ಇಲಾಖೆಯಲ್ಲಿ 2,181 ಖಾಲಿ ಹುದ್ದೆ ಭರ್ತಿಗೆ ನಿರ್ಧಾರ ಮಾಡಲಾಗಿದೆ ಎಂದರು.
ಬೆಂಗಳೂರು: ಎಪಿಎಲ್, ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅನುಮತಿ ಇಲ್ಲ ಎಂದು ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ. ಹೌದು ಎಪಿಎಲ್, ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆಗೆ ನಾವೇ ಪೋರ್ಟಲ್ ಓಪನ್ ಮಾಡಿಲ್ಲ. ಏನು ಕಾರಣ ಅಂತ ಸದ್ಯದರಲ್ಲೇ ಹೇಳುತ್ತೇವೆ ಎಂದು ಹೇಳಿದರು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿನಲ್ಲಿದ್ದ ಕೋಟ್ಯಾಂತರ ಮೌಲ್ಯದ ಪಡಿತರ ಅಕ್ಕಿ ನಾಪತ್ತೆಯಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನ ಮಕ್ಕಳಿಂದ ಸ್ವಾತಂತ್ರ್ಯ ವೀರ್ ಸಾವರ್ಕರ್ಗೆ ಜೈ ಘೋಷಣೆ ಹಾಕಿಸಿದ್ದಕ್ಕೆ ಶಿಕ್ಷಕಿ ಕ್ಷಮೆ ಕೇಳುವಂತೆ ಕೆಲ ಪೋಷಕರು ಗಲಾಟೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಶಿಕ್ಷಕಿ ಪೋಷಕರ ಮತ್ತು ಶಿಕ್ಷಕರ ಸಭೆ ನಡೆಸಿ ಕ್ಷಮೆಯಾಚಿಸಿದ್ದಾರೆ.
ದಾವಣಗೆರೆ: ಮತ್ತೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಹೋರಾಟ ಆರಂಭಿಸಲಾಗುವುದು. ಶ್ರಾವಣ ಮಾಸದಲ್ಲಿಇಷ್ಟಲಿಂಗ ಪೂಜೆಯ ಮೂಲಕ ಹೋರಾಟ ಆರಂಭಿಸಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವ ಸಂಬಂಧಿಸಿದಂತೆ ಮೇಕೆದಾಟು ಪಾದಯಾತ್ರೆಯಲ್ಲಿ ಏನು ಮಾಡಿದರು ಇವರು. ಚಿಕನ್ ಮಟನ್ ತಿಂದುಕೊಂಡು ಇವರು ಸಭೆ ಮಾಡಿದ್ದಾರೆ. ಇವರ ಸ್ನೇಹಿತ ಅಲ್ವಾ ಸ್ಟಾಲಿನ್ ಅವರ ಜೊತೆ ಮಾತಾಡಲಿ. ನಮ್ಮಲ್ಲಿ ಇನ್ನೂ ಮೊದಲ ಬೆಳೆ ಕೂಡ ಬೆಳೆಯಲಾಗಿಲ್ಲ. ಅಲ್ಲಿ ನಾಲ್ಕು ಲಕ್ಷ ಎಕರೆಗೆ ಸೌಲಭ್ಯ ಪಡೆದುಕೊಂಡಿದ್ದಾರೆ. ಈಗ ನಮ್ಮ ರೈತರಿಗೆ ಸಮಸ್ಯೆ ಆಗಿದೆ. ರೆಡ್ ಕಾರ್ಪೆಟ್ ಹಾಕಿ ಸ್ಟಾಲಿನ್ ಸ್ವಾಗತ ಮಾಡಿದ್ದಾರೆ. ನನಗೂ ಒಮ್ಮೆ ಪೆನ್ ಕೊಡಿ ಅಂತಿದ್ದಾರೆ. ಪೆನ್ ಯಾಕೆ ಇಂತಹ ಕೆಲಸ ಮಾಡಲಿಕ್ಕಾ.? ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ವಲಸಿಗ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆ ವಿಚಾರವಾಗಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರ ಜತೆ ಮಾತಾಡಿದ್ದೇನೆ. ಆ ರೀತಿ ಯಾವ ಬೆಳವಣಿಗೆ ಆಗಿಲ್ಲ. ಸೋಮಶೇಖರ್, ಹೆಬ್ಬಾರ್ ಬಿಜೆಪಿ ಬಿಟ್ಟು ಹೋಗಲ್ಲ ಎಂದಿದ್ದಾರೆ. ನಾಳೆ ಏನಾಗುತ್ತೆ ಅಂತ ನಾನು ಭವಿಷ್ಯ ಹೇಳುವುದಕ್ಕೆ ಆಗಲ್ಲ. ನನಗಿರುವ ಮಾಹಿತಿ ಪ್ರಕಾರ ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಮುನೇನಕೊಪ್ಪ ಕೂಡ ಪಕ್ಷ ತೊರೆಯಲ್ಲ ಎಂದು ಹೇಳಿದ್ದಾರೆ. ನಾನು ಧಾರವಾಡ ಕ್ಷೇತ್ರದಿಂದಲೇ ಸ್ಪರ್ಧಿಸುವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಬೆಂಗಳೂರು: ಎನ್ಇಪಿ ರದ್ದು ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಮಾಜಿ ಸಚಿವ ಬಿ.ಸಿ.ನಾಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಹುತೇಕ ರಾಜಕಾರಣಿಗಳು, ಅಧಿಕಾರಿಗಳು ಶಾಲೆ ನಡೆಸುತ್ತಿದ್ದಾರೆ. ಹಾಗಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಿಸಬೇಕು ಅಂತ ಷಡ್ಯಂತ್ರ. ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಸ್.ಎಸ್.ಮಲ್ಲಿಕಾರ್ಜುನ, ಎಂ.ಬಿ.ಪಾಟೀಲ್ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ದೊಡ್ಡ ಹುನ್ನಾರ ಮಾಡಿದೆ. ಸಿದ್ದರಾಮಯ್ಯ ಎನ್ಇಪಿ ತೆಗೆದುಹಾಕುವ ಮೊದಲು ಜನರ ಮುಂದಿಡಲಿ
ಅದರಲ್ಲಿ ಏನೆಲ್ಲ ಲೋಪದೋಷಗಳಿವೆ ಎಂದು ಬಹಿರಂಗಪಡಿಸಬೇಕು. ಖಾಸಗಿ ಸಂಸ್ಥೆಗಳ ಒತ್ತಡಕ್ಕೆ ಮಣಿದು ಈ ರೀತಿ ನಡೆದುಕೊಳ್ಳಬಾರದು ಎಂದು ಹೇಳಿದರು.
ಬೆಳಗಾವಿ: ಬಿಜೆಪಿ ಬಿಟ್ಟು ಯಾರು ಹೋಗುವುದಿಲ್ಲ. ಪಕ್ಷ ಬಿಟ್ಟು ಹೋಗುತ್ತೇವೆ ಎಂದು ಯಾರೂ ನಿಖರವಾಗಿ ಹೇಳಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಮೂರು ತಿಂಗಳಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ರಾತ್ರಿ ಕಂಡ ಬಾವಿಗೆ ಹಗಲಿನಲ್ಲಿ ಯಾರೂ ಬೀಳುವುದಿಲ್ಲ. ಈ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಕಾರಜೋಳ ವಾಗ್ದಾಳಿ ಮಾಡಿದರು.
ಬೆಂಗಳೂರು: ಮುಜರಾಯಿ ಇಲಾಖೆ ದೇವಸ್ಥಾನಗಳ ಹಣ ತಡೆ ಹಿಡಿದಿರುವ ಆದೇಶವನ್ನು ಹಿಂಪಡೆಯುವಂತೆ ಆಯುಕ್ತರಿಗೆ ಸಚಿವ ರಾಮಲಿಂಗರೆಡ್ಡಿ ಸೂಚನೆ ನೀಡಿದ್ದಾರೆ. ಗೊಂದಲದಿಂದ ಆಯುಕ್ತರು ಹಣ ತಡೆ ಹಿಡಿದು ಆದೇಶ ಹೊರಡಿಸಿದ್ದಾರೆ. ಕೇವಲ ದೇವಸ್ಥಾನ ಗಳ ಜೀರ್ಣೋದ್ಧಾರ, ಕಾಮಗಾರಿಗಳ ವಿವರ ಪಡೆಯುವಂತೆ ಸಚಿವರು ಸೂಚಿಸಿದ್ದರು. ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಆಯುಕ್ತರು ಆದೇಶ ವಾಪಸ್ ಪಡೆದಿದ್ದಾರೆ.
ಬೆಂಗಳೂರು: 15ರಿಂದ 20 ಹಾಲಿ, ಮಾಜಿ ಶಾಸಕರು ಕಾಂಗ್ರೆಸ್ ಪಕ್ಷ ಸೇರಲು ಸಿದ್ಧರಿದ್ದಾರೆ. ಈ ಕುರಿತು ಮಾತುಕತೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಸೇರುವವರ ಹೆಸರನ್ನು ಈಗ ಹೇಳಲು ಸಾಧ್ಯವಿಲ್ಲ. ಕೆಲವು ದಿನಗಳಲ್ಲಿ ಎಲ್ಲವೂ ಅಂತಿಮವಾಗಲಿದೆ. ಬಿಜೆಪಿ, ಜೆಡಿಎಸ್ ಮುಖಂಡರು ನಮ್ಮ ಪಕ್ಷಕ್ಕೆ ಬರುವುದು ಖಚಿತ ಎಂದು ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ಹೇಳಿದರು.
ಬೆಂಗಳೂರು: ನಗರದ ಕೆಂಬ್ರಿಡ್ಜ್ ಲೇಔಟ್‌ನಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿಯನ್ನು ರೈಲ್ವೇ, ಸಂವಹನ, ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು (ಆ.18) ಬೆಳಿಗ್ಗೆ ಉದ್ಘಾಟಿಸಿದರು.
#WATCH | Bengaluru, Karnataka: Union Minister Ashwini Vaishnaw inaugurates India’s first 3D-printed post office building. pic.twitter.com/gK1rFdu2qG
— ANI (@ANI) August 18, 2023
ಬೆಂಗಳೂರು: ದಯಾಮರಣ ಕೋರಿ ರಾಜ್ಯಪಾಲರಿಗೆ ಗುತ್ತಿಗೆದಾರರ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಇಂದು ಕೂಡ ಗುತ್ತಿಗೆದಾರರನ್ನು ವಿಚಾರಣೆ ನಡೆಸಲಿದ್ದಾರೆ. ನಿನ್ನೆ (ಆ.17) ಪೊಲೀಸರು ಕೂಡ 25ಕ್ಕೂ ಹೆಚ್ಚು ಗುತ್ತಿಗೆದಾರರ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಗುತ್ತಿಗೆದಾರರು ಕಮಿಷನ್ ಆರೋಪ ತಳ್ಳಿಹಾಕಿದ್ದಾರೆ. ಗುತ್ತಿಗೆದಾರರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆದಿರುವ ಪೊಲೀಸರು
ಬೆಂಗಳೂರು: ಸರ್ಕಾರ ಅನುದಾನ ತಡೆಹಿಡಿದಿರುವುದನ್ನು ಖಂಡಿಸುತ್ತೇನೆ. ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆ ಮಾಡಿದ್ದೇವು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಎರಡನೇ ಕಂತು ಬಿಡುಗಡೆ ಆಗಿರಲಿಲ್ಲ. ರಾಜ್ಯದ ದೇವಾಲಯಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ. ಗ್ಯಾರಂಟಿ ಯೋಜನೆ ಜಾರಿ ಮಾಡಿದರೂ ಅನುದಾನ ನಿಲ್ಲಿಸಬೇಡಿ ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಆಗ್ರಹಿಸಿದರು.
ಬೆಂಗಳೂರು: ಸರ್ಕಾರ ದೇವಸ್ಥಾನಗಳ ಜೀರ್ಣೋದ್ಧಾರ ವಿರುದ್ಧವಿದೆ ಅಂತ ಗೊತ್ತಾಗುತ್ತೆ. ಈ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿ ಸಾಕಷ್ಟು ಅನುದಾನ ನೀಡಿದೆ. ಹಿಂದೂ ದೇವಾಲಯಗಳ ವಿರೋಧಿ ನಡೆಯನ್ನು ಖಂಡಿಸುತ್ತೇವೆ ಎಂದು ಬಿಜೆಪಿ ಎಂಎಲ್ಸಿ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ದೇವಸ್ಥಾನಗಳ ಜೀರ್ಣೋದ್ದಾರ ಅನುದಾನಕ್ಕೆ ಸರ್ಕಾರದ ತಡೆ ಹಿಡಿಯುವಂತೆ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ. ಮೂರು ವಿಷಯ ಪ್ರಸ್ತಾಪಿಸಿ ದೇವಸ್ಥಾನ ಜೀರ್ಣೋದ್ಧಾರ ಅನುದಾನ ಬಿಡುಗಡೆಯನ್ನು ಸರ್ಕಾರ ತಡೆ ಹಿಡಿದಿದೆ. ದೇವಸ್ಥಾನ ಜೀರ್ಣೋದ್ದಾರ ಕಾಮಗಾರಿ ಇನ್ನೂ ಪ್ರಾರಂಭ ಆಗದಿದ್ದರೆ ಹಣ ಬಿಡುಗಡೆ ಮಾಡದಂತೆ ಸೂಚನೆ ನೀಡಲಾಗಿದೆ. ಶೇ.50 ರಷ್ಟು ಹಣ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರೇ ತಕ್ಷಣ ತಡೆ ಹಿಡಿದು ಅನುದಾನ ಬಿಡುಗಡೆ ಮಾಡದಂತೆ ಸೂಚಿಸಲಾಗಿದೆ.
ಬೆಂಗಳೂರು: ರಾಜ್ಯದಿಂದ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ ವಿಚಾರವಾಗಿ ಸರ್ವಪಕ್ಷ ಸಭೆ ಕರೆಯುವಂತೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ಮಾಡಿರುವ ವಿಚಾರವಾಗಿ ಹೆಚ್ ಡಿ ಕುಮಾರಸ್ವಾಮಿ ಕೇಳಿರೋದಲ್ಲಿ ಯಾವುದೇ ತಪ್ಪಿಲ್ಲ. ಕೇವಲ ಕಾವೇರಿ ವಿಚಾರ ಮಾತ್ರವಲ್ಲ, ಮಹದಾಯಿ, ಕೃಷ್ಣಾ ಸೇರಿದಂತೆ
ಪ್ರಮುಖ ವಿಚಾರ ಬಗ್ಗೆ ಸರ್ವಪಕ್ಷಗಳ ಜತೆ ಚರ್ಚಿಸುವುದರಲ್ಲಿ ತಪ್ಪಿಲ್ಲ. ಸರ್ವಪಕ್ಷಗಳ ಸಭೆ ನಡೆಸುವ ಬಗ್ಗೆ ನಾವೂ ಆಲೋಚನೆ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Published On - 8:33 am, Fri, 18 August 23