
Karnataka Budget 2025 LIVE Updates: 2025-26ನೇ ಸಾಲಿನ ಕರ್ನಾಟಕ ಬಜೆಟ್ ಇಂದು ಮಂಡನೆಯಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆ 16ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಬಜೆಟ್ ಗಾತ್ರ 4,09,549 ಕೋಟಿ ರೂಪಾಯಿ ಇದೆ. ಕರ್ನಾಟಕ ರಾಜ್ಯದ ಜನರು ಮತ್ತು ಶಾಸಕರು ವಿಶೇಷ ಅನುದಾನದ ನಿರೀಕ್ಷೆಯಲ್ಲಿದ್ದಾರೆ. ಗ್ಯಾರಂಟಿಗೆ ಹಣಕಾಸು ಪರಿಸ್ಥಿತಿ ಸರಿದೂಗಿಸಲು ವಿಶೇಷ ಆದ್ಯತೆ ನೀಡುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಸಂಪುಟ ಸಭೆ ಸಭೆಯಲ್ಲಿ ಬಜೆಟ್ಗೆ ಅನುಮೋದನೆ ಪಡೆದಿದ್ದಾರೆ. ಬಳಿಕ, ಸಿಎಂ ಸಿದ್ದರಾಮಯ್ಯ ಬೆಳಗ್ಗೆ 10.15ಕ್ಕೆ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಕಾಲುನೋವಿನಿಂದ ಬಳಲುತ್ತಿರುವ ಸಿದ್ದರಾಮಯ್ಯ ಅವರು ಕುಳಿತೇ ಬಜೆಟ್ ಮಂಡಿಸುತ್ತಿದ್ದಾರೆ. ಈಬಾರಿಯ ಮುಂಗಡ ಪತ್ರ ಮಂಡನೆಯಲ್ಲಿ ರಾಜ್ಯದ ಅಭಿವೃದ್ಧಿಗೆ ಒತ್ತು ನೀಡುತ್ತಾರಾ ಕಾದುನೋಡಬೇಕಿದೆ. ಐದು ಗ್ಯಾರೆಂಟಿ ಯೋಜನೆಗಳಿಗೆ ಈ ಹಿಂದೆಯೇ ಸುಮಾರು 52 ಸಾವಿರ ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಈ ಬಜೆಟ್ನಲ್ಲಿ ಹೊಸ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಗಳಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ತಮ್ಮ ದಾಖಲೆ 16ನೇ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದರು. ಬರೊಬ್ಬರಿ 3 ಗಂಟೆ 30 ನಿಮಿಷ ಮುಂಗಡ ಪತ್ರ ಓದಿದರು. ಈ ಬಾರಿಯ ಬಜೆಟ್ನಲ್ಲಿ ಗ್ಯಾರೆಂಟಿಗೆ 51 ಸಾವಿರ ಕೋಟಿ ರೂ. ಮೀಸಲು ಇಡಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸರ್ಕಾರದಿಂದ ಹಲವು ನೆರವು ನೀಡಲಾಗುವುದು. ಬಾದಾಮಿಯಲ್ಲಿ ಚಾಲುಕ್ಯ ಉತ್ಸವದಲ್ಲಿ ನೃತ್ಯೋತ್ಸವ ಕಾರ್ಯಕ್ರಮ ಆಯೋಜನೆಗೆ 2 ಕೋಟಿ ರೂ. ಅನುದಾನ ನೀಡಲಾಗುವುದು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೊಳುವಾರು ಮೊಹಮ್ಮದ್ ಕುಂಞಿ ಅವರ ‘ಸ್ವಾತಂತ್ರ್ಯದ ಓಟ’ ಕಾದಂಬರಿ ನಾಟಕಕ್ಕೆ ರೂಪಾಂತರಿಸಿ, ಪ್ರದರ್ಶಿಸಲು 1 ಕೋಟಿ ರೂ. ಮೀಸಲು ಇಡಲಾಗುವುದು ಕನ್ನಡ ಭಾರತಿ ಪುಸ್ತಕ ಮಾಲಿಕೆಯಡಿ ವಿವಿಧ ಕ್ಷೇತ್ರಗಳ ಸಾಧಕರನ್ನು ಪರಿಚಯಿಸುವ ಪುಸ್ತಕ ಪ್ರಕಟಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪತ್ರಕರ್ತರ ಮಾಸಾಶನ 15 ಸಾವಿರ ರೂ.ಗೆ ಹಾಗೂ ಕುಟುಂಬ ಮಾಸಾಶನ 7,500 ರೂ.ಗೆ ಹೆಚ್ಚಳ ಮಾಡಲಾಗಿದೆ. ಕನ್ನಡ ಚಲನಚಿತ್ರಗಳ ಪ್ರೋತ್ಸಾಹಕ್ಕಾಗಿ ಒಟಿಟಿ ವೇದಿಕೆ ಸೃಜಿಸಲು ಕ್ರಮ ಕೈಗೊಳ್ಳಲಾಗುವುದು. ಮಾನ್ಯತೆ ಹೊಂದಿರುವ ಪತ್ರಕರ್ತರು ಹಾಗೂ ಅವಲಂಬಿತ ಕುಟುಂಬ ಸದಸ್ಯರಿಗೆ 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆ ಅನುಷ್ಠಾನ ಮಾಡಲಾಗುವುದು. ಮುಂದಿನ 3 ವರ್ಷಗಳ ಅವಧಿಯಲ್ಲಿ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆ ಮಾಡಲಾಗುವುದು. ಎಲ್ಲಾ ವಿಧದ ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರೂ.ಗೆ ಮಿತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
‘ಕೃಷಿ ಅರಣ್ಯ ಮತ್ತು ಕಾರ್ಬನ್ ಕ್ರೆಡಿಟ್’ ನೀತಿ ಜಾರಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಇಂಗಾಲದ ಸಂಗ್ರಹಣಾ ಸಾಮರ್ಥ್ಯ ಹೆಚ್ಚಾರುವ ಸಸ್ಯ ಪ್ರಭೇದ ಬೆಳೆಸಲು ನೀತಿ ರೂಪಿಸಲಾಗುವುದು. ಅರಣ್ಯ ಪ್ರದೇಶದಲ್ಲಿ 28,494 ಹೆಕ್ಟೇರ್‌ನಲ್ಲಿ 213 ಲಕ್ಷ ಸಸಿಗಳನ್ನು ನೆಡಲಾಗುವುದು. ಅರಣ್ಯೇತರ ಪ್ರದೇಶದಲ್ಲಿ 3.50 ಲಕ್ಷ ಸಸಿಗಳನ್ನು ಬೆಳೆಸಿ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ. ಕಾಡಾನೆ ಹಾಗೂ ಚಿರತೆ ಹಾವಳಿ ನಿಯಂತ್ರಿಸಲು ಕಾರ್ಯಪಡೆ ರಚನೆ ಮಾಡಲಾಗುವುದು. ಕಾರ್ಯಪಡೆಗಳ ಕಾರ್ಯನಿರ್ವಹಣೆಗೆ 17 ಕೋಟಿ ರೂ. ಅನುದಾನ ನೀಡಲಾಗುವುದು. ವನ್ಯ ಪ್ರಾಣಿಗಳ ದಾಳಿಯಿಂದ ಪ್ರಾಣಹಾನಿಯಾದ್ರೆ 20 ಲಕ್ಷ ರೂ. ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಪ್ರಾಜೆಕ್ಟ್ ಮೆಜೆಸ್ಟಿಕ್ ಯೋಜನೆ ನಿಲ್ದಾಣ ಉನ್ನತೀಕರಣಯಡಿ ಖಾಸಗಿ ಸಹಭಾಗಿತ್ವದಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣ ಉನ್ನತೀಕರಣ ಮಾಡಲಾಗುವುದು. ಬೆಂಗಳೂರು ಸೇಫ್ ಸಿಟಿ ಯೋಜನೆಯಡಿ ಖಾಸಗಿ ಸಹಭಾಗಿತ್ವದಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಸಂಕೀರ್ಣದೊಂದಿಗೆ ಸಾರಿಗೆ ಹಬ್ ನಿರ್ಮಿಸಲು ಉದ್ದೇಶ ಹೊಂದಲಾಗಿದೆ. ಈ ಸಾಲಿನಲ್ಲಿ 42 ಸ್ವಯಂಚಾಲಿತ ಪರೀಕ್ಷಾ ಪಥಗಳ ನಿರ್ಮಾಣ ಪೂರ್ಣ. 2025-26ನೇ ಸಾಲಿನಲ್ಲಿ 3 ಕಡೆಗಳಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಸ್ವಯಂಚಾಲಿತ ಪರೀಕ್ಷಾ ಪಥಗಳ ನಿರ್ಮಾಣ ಮಾಡಲಾಗಿದೆ. ಐದು ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿನ ದಾಖಲೆಗಳ ಡಿಜಿಟಲೀಕರಣಕ್ಕಾಗಿ ಒಟ್ಟು 25 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಹೇಳಿದರು.
ವಿಶೇಷ ಬಂಡವಾಳ ಯೋಜನೆಯಡಿ ಒಟ್ಟಾರೆ 199 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳ ಸವದತ್ತಿಯ ರೇಣುಕಾ ಯಲ್ಲಮ್ಮ ಕ್ಷೇತ್ರ ಹಾಗೂ ಬೆಂಗಳೂರಿನಲ್ಲಿರುವ ದೇವಿಕಾರಾಣಿ ರೋರಿಚ್ ಎಸ್ಟೇಟ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳಾಗುವುದು ಎಂದರು.
ಫೆಬ್ರವರಿ ತಿಂಗಳ ವೃತ್ತಿ ತೆರಿಗೆ 200 ರೂ.ನಿಂದ 300 ರೂ.ಗೆ ಹೆಚ್ಚಳ ಮಾಡಲಾಗುವುದು. 2025-26ರಲ್ಲಿ 1,20,000 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 2025-26ನೇ ಸಾಲಿಗೆ 9,000 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ.
ಇ-ಜಮಾಬಂದಿ ತಂತ್ರಾಂಶ ಅಭಿವೃದ್ಧಿಪಡಿಸಿ ಪ್ರಸ್ತುತ ಸಾಲಿನಿಂದ ಜಾರಿ ಮಾಡಲಾಗುವುದು. ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ಖಾತೆ ಮಾಡಲು ಇ-ಪೌತಿ ಆಂದೋಲನ ಆರಂಭಿಸಲಾಗುವುದು. ಹೊಸದಾಗಿ ರಚನೆಯಾದ ತಾಲ್ಲೂಕುಗಳ ಪೈಕಿ 21 ತಾಲ್ಲೂಕುಗಳಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಂತ್ರಿ ಸಿದ್ದರಾಮಯ್ಯ ಹೇಳಿದರು.
ವಿದೇಶಿ ಬಂಡಾವಳ ಹೂಡಿಕೆಯಲ್ಲಿ ದೇಶದಲ್ಲಿಯೇ ಕರ್ನಾಟಕ 3ನೇ ಸ್ಥಾನದಲ್ಲಿದೆ. ರಫ್ತಿನಲ್ಲಿ ದೇಶದಲ್ಲಿ ಕರ್ನಾಟಕ ರಾಜ್ಯ ನಂ. 1 ಸ್ಥಾನದಲ್ಲಿದೆ. ಕರ್ನಾಟಕ ಶೇಕಡಾ 11.17ರಷ್ಟು ಬೆಳವಣಿಗೆ ಸಾಧಿಸಿದೆ. 4.4 ಬಿಲಿಯನ್ US ಡಾಲರ್ ವಿದೇಶಿ ಹೂಡಿಕೆ ಆಕರ್ಷಿಸಿದೆ. 88,853 ಕೋಟಿ ಮಿಲಿಯನ್ US ಡಾಲರ್ ರಫ್ತು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಿಸಿದ್ದಾರೆ.
ಚಿಂತಾಮಣಿ ತಾಲೂಕಿನಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜು ಸ್ಥಾಪನೆ ಮಾಡಲಾಗುವುದು. ಕಲ್ಯಾಣ ಕರ್ನಾಟಕದ 23 ಸಾವಿರ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ರೂಪಿಸಲಾಗಿದೆ. 10 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಗಿದೆ. ರಾಜ್ಯದ 16 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವೃತ್ತಿಪರ ವಿಷಯ ತಜ್ಞರನ್ನು ಪ್ರೊಫೆಸರ್ ಆಫ್ ಪ್ರಾಕ್ಟಿಸ್ರನ್ನಾಗಿ ನೇಮಕ ಮಾಡಲಾಗಿದೆ. 30 ಕೋಟಿ ರೂ. ವೆಚ್ಚದಲ್ಲಿ ಯುಯುಸಿಎಂಎಸ್ ತಂತ್ರಾಂಶ ಉನ್ನತೀಕರಣ ಮಾಡಲಾಗುವುದು ಎಂದರು.
ರೇಷ್ಮೆ ಕ್ಷೇತ್ರಕ್ಕೆ ಹಲವು ಯೋಜನೆಗಳನ್ನು ನೀಡಿಲು ಸರ್ಕಾರ ನಿರ್ಧರಿಸಿದೆ. ರೇಷ್ಮೆ ಅಭಿವೃದ್ಧಿ ಯೋಜನೆಗೆ 55 ಕೋಟಿ ರೂ. ಅನುದಾನ ನೀಡಲಾಗುವುದು. ಮಧ್ಯಮವರ್ಗದ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ, 120 ಕೊನೆಗಳ ಸ್ವಯಂಚಾಲಿತ ರೀಲಿಂಗ್ ಘಟಕಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಾಗುವುದು. ರಾಮನಗರ, ಶಿಡ್ಲಘಟ್ಟ ಹೈಟೆಕ್ ರೇಷ್ಮೆಗೂಡಿನ ಮಾರುಕಟ್ಟೆಯ ಎರಡನೇ ಹಂತದ ಕಾಮಗಾರಿ ಅನುಷ್ಠಾನಕ್ಕೆ 250 ಕೋಟಿ ರೂ. ಮೀಸಲು ಇಡಲಾಗುವುದು. ಮೈಸೂರಿನಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಜಲಸಾರಿಗೆ ಕ್ಷೇತ್ರದಲ್ಲಿ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೂಸ್, ವಾಟರ್ ಮೆಟ್ರೋ ಮತ್ತು ಕೋಸ್ಟಲ್ ಬರ್ತ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಉತ್ತರ ಕನ್ನಡ ಜಿಲ್ಲೆ ಮಂಕಿ ಗ್ರಾಮದಲ್ಲಿ ಬಂದರು ನಿರ್ಮಾಣ ಮಾಡಲಾಗುವುದು. ಮಂಗಳೂರಿನಲ್ಲಿ ಜಲಸಾರಿಗೆ ಸಂಗ್ರಹಾಲಯ ಅನುಭವನ ಕೇಂದ್ರ ತೆರೆಯಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರು ಏರ್ಪೋರ್ಟ್ ರನ್ವೇ ವಿಸ್ತರಣೆಗೆ ನಿರ್ಧರಿಸಲಾಗಿದೆ. ಭೂಸ್ವಾಧೀನಕ್ಕಾಗಿ 319 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ವಿಜಯಪುರದಲ್ಲಿ 348 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಲಾಗುತ್ತದೆ. ರಾಯಚೂರು ಏರ್ಪೋರ್ಟ್ ಕಾಮಗಾರಿಗೆ 53 ಕೋಟಿ ರೂ. ಅನುದಾನ ನೀಡಲಾಗುವುದು ಎಂದರು
ಪ್ರವರ್ಗ 1, 2ಎ, 2ಬಿ (ಮುಸ್ಲಿಂ) ಸಮುದಾಯದವರಿಗೆ 2 ಕೋಟಿ ರೂ.ವರೆಗೆ ಕಾಮಗಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದ್ದಾರೆ. ಕೈಗಾರಿಕ ಪ್ರದೇಶ ಭೂಮಿ ಹಂಚಿಕೆಯಲ್ಲೂ ಪ್ರವರ್ಗ ೧ ೨ಎ ಜತೆ ೨ಬಿ (ಮುಸ್ಲಿಂ) ಗೆ ಶೇಕಡಾ ೨೦ ರಷ್ಟು ಮೀಸಲಾತಿ ಘೋಷಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ 5,267 ಶಿಕ್ಷಕರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ತರ್ಕಬದ್ಧಗೊಳಿಸಿ 5000 ಹುದ್ದೆಗಳನ್ನ ಭರ್ತಿ ಮಾಡಲಾಗುವುದು ಎಂದು ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮದಡಿ 5 ಸಾವಿರ ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ.
ಬಜೆಟ್ ಮಂಡನೆ ವೇಳೆ ಒಳ ಮೀಸಲಾತಿ ಸದ್ದು ಮಾಡಿತು. ಒಳ ಮೀಸಲಾತಿ ಜಾರಿ ಮಾಡಿ ಎಂದು ಸದನದ ಗ್ಯಾಲರಿಯಲ್ಲಿದ್ದ ವಿಪಕ್ಷಗಳು ಘೋಷಣೆ ಕೂಗಿದವು. ಘೋಷಣೆ ಕೂಗಿದವರನ್ನ ಮಾರ್ಷಲ್ಸ್ ವಶಕ್ಕೆ ಪಡೆದರು.
ಧಾರ್ಮಿಕ ದತ್ತಿ ಇಲಾಖೆ ಅರ್ಚಕರಿಗೆ ತಸ್ತೀಕ್ ಮೊತ್ತದ ಏರಿಕೆ ಮಾಡಲಾಗಿದೆ. 60 ಸಾವಿರ ರೂ.ನಿಂದ 72 ಸಾವಿರಕ್ಕೆ ತಸ್ತೀಕ್ ಮೊತ್ತ ಏರಿಸಲಾಗುವುದು. ಕರ್ನಾಟಕ ದೇವಾಲಯ ವಸತಿ ಕೋಶ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ದೇವಾಲಯಗಳ ಛತ್ರಗಳಲ್ಲಿ ರೂಮ್ ಬುಕಿಂಗ್ಗೆ ವ್ಯವಸ್ಥೆ ಕಲ್ಪಿಸಲಾಗುವುದು. ರಾಜ್ಯದಲ್ಲಿ ಒತ್ತುವರಿಯಾಗಿರುವ ದೇಗುಲಗಳ ಆಸ್ತಿ ರಕ್ಷಿಸಲು, ಭೂವರಾಹ ಯೋಜನೆಯಡಿ ಸ್ಥಿರಾಸ್ತಿ ದಾಖಲೀಕರಣಗೊಳಿಸಲು ಕ್ರಮವಹಿಸಲಾಗುವುದು. ಪ್ರವಾಸೋದ್ಯೋಮ ತಾಣವಾಗಿ ಚಂದ್ರಗುತ್ತಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಸರ್ಕಾರ ನಿರ್ಧರಿಸಿದೆ. ಕ್ವಿಂಟಾಲ್ಗೆ 7,550 ರೂ. ಜೊತೆಗೆ ರಾಜ್ಯ ಸರ್ಕಾರದಿಂದ 450 ರೂ. ಪ್ರೋತ್ಸಾಹಧನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದರಿಂದ ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಕೋಲಾರ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ.
ನಕ್ಸಲ್ ಪೀಡಿತ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ನಕ್ಸಲ್ ಪ್ಯಾಕೇಜ್ ಘೋಷಣೆ ಮಾಡಿದ್ದು, 10 ಕೋಟಿ ರೂ. ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದ್ದಾರೆ.
ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ 36,500 ಕೋಟಿ ರೂ. ಆದಾಯದ ಟಾರ್ಗೆಟ್ ನೀಡಿದೆ. ಈ ಮೂಲಕ ರಾಜ್ಯದಲ್ಲಿ ಮದ್ಯದ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ. ರಾಜ್ಯ ಸರ್ಕಾರ ಅಬಕಾರಿ ಸ್ಲ್ಯಾಬ್ ಪರಿಷ್ಕರಣೆಗೆ ನಿರ್ಧರಿಸಿದೆ.
ವಕ್ಫ್ ಆಸ್ತಿಗಳ ದುರಸ್ತಿ ಮತ್ತು ನವೀಕರಣಕ್ಕಾಗಿ ಮತ್ತು ಮುಸ್ಲಿಂ ಸ್ಮಶಾನಗಳ ರಕ್ಷಣೆಗಾಗಿ ಮೂಲಸೌಕರ್ಯಕ್ಕಾಗಿ 150 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಿನಿಮಾ ಕ್ಷೇತ್ರವನ್ನ ಸಿನಿಮಾ ಉದ್ಯಮ ಎಂದು ಪರಿಗಣಿಸಿ ಕೈಗಾರಿಕಾ ನೀತಿಯಡಿ ತರಲು ನಿರ್ಧಾರ ಮಾಡಲಾಗಿದೆ. ಕನ್ನಡ ಸಿನಿಮಾಗಳಿಗೆ OTT ವೇದಿಕೆ ಸೃಷ್ಟಿಸಲು ನಿರ್ಧರಿಸಲಾಗಿದೆ. ಎಲ್ಲ ಚಿತ್ರಮಂದಿರಗಳಲ್ಲೂ ಸಿನಿಮಾ ಟಿಕೆಟ್ ದರ 200 ರೂ.ಗೆ ನಿಗದಿ ಪಡಿಸಲಾಗುವುದು. ಈ ಮೂಲಕ ಸರ್ಕಾರ ಮಲ್ಟಿಫ್ಲೆಕ್ಸ್ಗಳಲ್ಲಿ ಏಕರೂಪದ ದರನಿಗದಿಗೊಳಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಯನ್ನು 6 ದಿನಕ್ಕೆ ವಿಸ್ತರಿಸಲಾಗುವುದು. ವಾರದಲ್ಲಿ 6 ದಿನ ಮೊಟ್ಟೆ, ಬಾಳೆಹಣ್ಣು ನೀಡಲು 1,500 ಕೋಟಿ ರೂ. ಮೀಸಲಿಡಲಾಗಿದ್ದು, ಅಜೀಂ ಪ್ರೇಮ್ಜಿ ಸಹಯೋಗದಲ್ಲಿ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಎಸ್ಸಿ, ಎಸ್ಟಿ ಸಮುದಾಯಕ್ಕೆ 2 ಕೋಟಿ ರೂಪಾಯಿಯವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲಾಗುವುದು. ಎಸ್ಸಿಪಿ ಟಿಎಸ್ಪಿ ಯೋಜನೆಗೆ 42018 ಕೋಟಿ ರೂ. ಮೀಸಲು ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಿಸಿದ್ದಾರೆ.
ರಾಜ್ಯಪಾಲರ ವಂದನಾ ನಿರ್ಣಯ ಚರ್ಚೆಯಲ್ಲಿ ಸರ್ಕಾರ ಬಿಸಿಯೂಟ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ ನೀಡುವುದಾಗಿ ಭರವಸೆ ನೀಡಿತ್ತು. ಅದರಂತೆ, ಬಜೆಟ್ನಲ್ಲಿ ಬಿಸಿಯೂಟ ಕಾರ್ಯಕರ್ತೆಯರಿಗೆ ಸಿಎಂ ಸಿದ್ದರಾಮಯ್ಯ ಸಿಹಿ ಸುದ್ದಿ ನೀಡಿದ್ದಾರೆ. ಬಿಸಿಯೂಟ ಕಾರ್ಯಕರ್ತೆಯರ ಗೌರವಧನ 1 ಸಾವಿರ ಹೆಚ್ಚಳ ಮಾಡಿದ್ದಾರೆ. ಸರ್ಕಾರಿ-ಪ್ರೌಢ ಶಾಲೆ ಅತಿಥಿ ಶಿಕ್ಷಕರ ಗೌರವಧನವನ್ನು 2 ಸಾವಿರ ರೂ. ಹೆಚ್ಚಳ ಮಾಡಿದ್ದಾರೆ.
ರಾಜ್ಯ ಬಜೆಟ್: 2025-26ನೇ ಸಾಲಿನ ಬಜೆಟ್ ಗಾತ್ರ 4,09,549 ಕೋಟಿ ರೂಪಾಯಿ ಇದೆ. ಕಳೆದ ಬಾರಿಯ ಬಜೆಟ್ ಗಾತ್ರ 3,71,383 ಕೋಟಿ ರೂ. ಇತ್ತು. ಈ ಬಾರಿಯ ಬಜೆಟ್ ಗಾತ್ರ 4,09,549 ಕೋಟಿ ರೂಪಾಯಿದ್ದು, ಕಳೆದ ಬಜೆಟ್ಗಿಂತ ಈ ಬಾರಿ 38,166 ಕೋಟಿ ಹೆಚ್ಚಳವಾಗಿದೆ.
ರಾಜ್ಯ ಬಜೆಟ್: ಸಿಎಂ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ನಮ್ಮ ಸಂಕಲ್ಪಗಳನ್ನು ಜನರ ಮುಂದಿಡುವ ದೊಡ್ಡ ಹೊಣೆಗಾರಿಕೆ ಮುಂದೆ ನಿಂತಿದ್ದೇನೆ. ನಾಳೆಗಳ ಬಗ್ಗೆ ಭರವಸೆ ಮೂಡಿಸುವ, ನಮ್ಮ ವಾಗ್ದಾನಗಳಲ್ಲಿ ಬಜೆಟ್ ಮಂಡಿಸುತ್ತಿದ್ದೇನೆ. ಬುದ್ಧ, ಬಸವ, ನಾರಾಯಣಗುರು ಅವರ ಆಶಯಗಳಿವೆ. ಕುವೆಂಪು ಅವರ ಕವನ ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಳಿತುಕೊಂಡು ಬಜೆಟ್ ಮಂಡಿಸುತ್ತಿದ್ದಾರೆ.
ಬಜೆಟ್ ಮಂಡನೆಗೂ ಮುನ್ನ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ವಿಪಕ್ಷಗಳ ಸದಸ್ಯರು ಧರಣಿ ನಡೆಸಿದರು. ಅನುದಾನ, ದಲಿತರ ಹಣ ದುರ್ಬಳಕೆ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಬೋಗಸ್ ಬಜೆಟ್ ಮಂಡಿಸುವ ಮುನ್ನವೇ ತುಷ್ಟೀಕರಣವನ್ನು ಆರಂಭಿಸಿದ ಭಂಡ ಹಾಗೂ ಭ್ರಷ್ಟರು ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಬೋಗಸ್ ಬಜೆಟ್ ಮಂಡಿಸುವ ಮುನ್ನವೇ ತುಷ್ಟೀಕರಣವನ್ನು ಆರಂಭಿಸಿದ ಭಂಡ ಹಾಗೂ ಭ್ರಷ್ಟರು!!#CongressFailsKarnataka #Appeasement #MuslimReservation pic.twitter.com/QCzWSq7hEY
— BJP Karnataka (@BJP4Karnataka) March 7, 2025
“ನನ್ನ ರಾಜಕೀಯ ಜೀವನದ 16ನೇ ಬಜೆಟ್ ಮಂಡನೆಗೆ ಈ ದಿನ ಸಿದ್ಧನಾಗಿದ್ದೇನೆ. ಹದಿನಾರು ಬಾರಿ ಈ ರಾಜ್ಯದ ಬಜೆಟ್ ಮಂಡನೆ ಮಾಡಲು ಅವಕಾಶ ನೀಡಿರುವ ಕರ್ನಾಟಕದ ಸಮಸ್ತ ಜನತೆಗೆ ನಾನು ಕೃತಜ್ಞ.
ಬುದ್ಧ, ಬಸವ, ಗಾಂಧಿ, ಅಂಬೇಡ್ಕರರ ಆಶಯಗಳಲ್ಲಿ ನಂಬಿಕೆಯನ್ನಿಟ್ಟು, ಅದರಂತೆ ನಡೆಯುತ್ತಿರುವ ನಾವು ಈ ಬಜೆಟ್ ಮೂಲಕ ಸಮಸಮಾಜದ ಕನಸನ್ನು ನನಸಾಗಿಸುವತ್ತ ಮತ್ತಷ್ಟು ದೃಢಹೆಜ್ಜೆಯನ್ನಿಡುವ ಪ್ರಯತ್ನ ಮಾಡಿದ್ದೇವೆ. ಮುಂದಿನ ಒಂದು ವರ್ಷಗಳ ಕಾಲದ ರಾಜ್ಯದ ಸಮಗ್ರ ಅಭಿವೃದ್ಧಿಗೆ ಈ ಬಜೆಟ್ ದಾರಿದೀಪವಾಗಲಿದೆ ಎಂಬುದು ನಿಸ್ಸಂಶಯ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ನನ್ನ ರಾಜಕೀಯ ಜೀವನದ 16ನೇ ಬಜೆಟ್ ಮಂಡನೆಗೆ ಈ ದಿನ ಸಿದ್ಧನಾಗಿದ್ದೇನೆ. ಹದಿನಾರು ಬಾರಿ ಈ ರಾಜ್ಯದ ಬಜೆಟ್ ಮಂಡನೆ ಮಾಡಲು ಅವಕಾಶ ನೀಡಿರುವ ಕರ್ನಾಟಕದ ಸಮಸ್ತ ಜನತೆಗೆ ನಾನು ಕೃತಜ್ಞ.
ಬುದ್ಧ, ಬಸವ, ಗಾಂಧಿ, ಅಂಬೇಡ್ಕರರ ಆಶಯಗಳಲ್ಲಿ ನಂಬಿಕೆಯನ್ನಿಟ್ಟು, ಅದರಂತೆ ನಡೆಯುತ್ತಿರುವ ನಾವು ಈ ಬಜೆಟ್ ಮೂಲಕ ಸಮಸಮಾಜದ ಕನಸನ್ನು ನನಸಾಗಿಸುವತ್ತ… pic.twitter.com/nVPwJaenWD
— Siddaramaiah (@siddaramaiah) March 7, 2025
2025-26ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಬೆಂಗಳೂರಿನ ಜನರಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಬೆಂಗಳೂರಿನ ಟ್ರಾಫಿಕ್ ಪರಿಹಾರಕ್ಕೆ ಹೊಸ ಯೋಜನೆ ಘೋಷನೆ ಮಾಡುತ್ತಾರಾ ಎಂಬ ನಿರೀಕ್ಷೆ ಇದೆ. ಟನೆಲ್ ರಸ್ತೆಗೆ ಮತ್ತಷ್ಟು ಅನುದಾನ, ಇಂದಿರಾ ಕ್ಯಾಂಟಿನ್ಗಳಿಗೆ ಮತ್ತಷ್ಟು ಬದಲಾವಣೆ, ಕಾಯಕಲ್ಪ, ನಗರೋತ್ಥಾನ ಯೋಜನೆಗಳಿಗೆ ಸರ್ಕಾರದ ಹೆಚ್ಚಿನ ಅನುದಾನ, ಹೊಸದಾಗಿ ಸೇರ್ಪಡೆಯಾಗಿರುವ ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆ, ಹೀಗೆ ಹಲವಾರು ನಿರೀಕ್ಷೆಗಳು ಜನರಲ್ಲಿವೆ.
Siddaramaiah
ಸಿಎಂ ಸಿದ್ದರಾಮಯ್ಯ ಕೆಲವೇ ಹೊತ್ತಿನಲ್ಲಿ ಆಯವ್ಯಯ ಮಂಡಿಸಲಿದ್ದಾರೆ. ದಾಖಲೆ 16ನೇ ಬಾರಿಗೆ ಬಜೆಟ್ ಮಂಡಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋಲಾರದ ಅಭಿಮಾನಿ ಪ್ರಸನ್ನಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಕಾವೇರಿ ನಿವಾಸ ಬಳಿ ಅಭಿಮಾನಿ ಪ್ರಸನ್ನಕುಮಾರ್ ಶುಭಾಶಯ ಕೋರಿ ಪೋಸ್ಟರ್ ಪ್ರದರ್ಶಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗ್ಗೆ 10.15ಕ್ಕೆ 2025-26ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಎರಡನೇ ಅವಧಿಯ ಮೂರನೇ ಬಜೆಟ್ ಇದಾಗಿದೆ. ಈ ಬಜೆಟ್ ಮೇಲೆ ಹಲವು ನಿರೀಕ್ಷೆಗಳಿದ್ದು, ಮೇಕೆದಾಟು ಯೋಜನೆಗಿರುವ ಅಡೆತಡೆ ನಿವಾರಣೆಗೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಶೀಘ್ರ ಕಾಮಗಾರಿ ಆರಂಭಿಸಲು ಅಗತ್ಯ ಆರ್ಥಿಕ ನೆರವು ನೀಡುವ ಸಾಧ್ಯತೆ. ಕೃಷ್ಣ ಕಳಸಾ ಬಂಡೂರಿ ಯೋಜನೆಗೆ ವಿಶೇಷ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಜಲ ಸಂಪನ್ಮೂಲ ನಿಯಂತ್ರಣ ಪ್ರಾಧಿಕಾರ ರಚನೆ, ಜಲಸಂಪನ್ಮೂಲ ವಿಶ್ವವಿದ್ಯಾಲಯ ಸ್ಥಾಪನೆಯಾಗುವ ಸಾಧ್ಯತೆ ಇದೆ. ಅಣೆಕಟ್ಟುಗಳ ಗೇಟ್‌ಗಳ ಆಧುನೀಕರಣ ಮತ್ತು ನವೀಕರಣ, ಗಂಗಾರತಿ ಮಾದರಿಯಲ್ಲಿ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಮತ್ತು ನೀರು ಬಳಕೆದಾರ ಸಹಕಾರ ಸಂಘದ ಒಕ್ಕೂಟ ರಚನೆ ಸಾಧ್ಯತೆ ಇದೆ.
Published On - 8:57 am, Fri, 7 March 25