AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಬಿಎಂಪಿ ಕಚೇರಿ ಕಟ್ಟಡ ಏರಿ ಮಹಿಳೆಯಿಂದ ಆತ್ಮಹತ್ಯೆ ಯತ್ನ, ಸಿಎಂ ಭೇಟಿ ಮಾಡಿಸಲು ಪಟ್ಟು: ಹೈಡ್ರಾಮಾ

ಮಹಿಳೆಯೊಬ್ಬರು ಬಿಬಿಎಂಪಿ ಕೌನ್ಸಿಲ್ ಕಟ್ಟಡದ ಮೇಲೆ ಹತ್ತಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೈಡ್ರಾಮ ನಡೆಸಿದ್ದಾರೆ. ಧನಸಹಾಯಕ್ಕಾಗಿ ಹಲವು ತಿಂಗಳಿಂದ ಬಿಬಿಎಂಪಿ ಕಚೇರಿಗೆ ಹೋಗಿಬಂದರೂ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿ ಪಾಲಿಕೆ ಕಚೇರಿಯ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ಆಕೆಯನ್ನು ರಕ್ಷಿಸಿರುವ ಪೊಲೀಸರು, ಬುದ್ಧಿ ಹೇಳಿ ಮನೆಗೆ ಕಳುಹಿಸಿದ್ದಾರೆ.

ಬಿಬಿಎಂಪಿ ಕಚೇರಿ ಕಟ್ಟಡ ಏರಿ ಮಹಿಳೆಯಿಂದ ಆತ್ಮಹತ್ಯೆ ಯತ್ನ, ಸಿಎಂ ಭೇಟಿ ಮಾಡಿಸಲು ಪಟ್ಟು: ಹೈಡ್ರಾಮಾ
ಬಿಬಿಎಂಪಿ
Ganapathi Sharma
|

Updated on: Mar 07, 2025 | 8:19 AM

Share

ಬೆಂಗಳೂರು, ಮಾರ್ಚ್ 7: ಬೆಂಗಳೂರಿನ ಬಿಬಿಎಂಪಿ (BBMP) ಕೌನ್ಸಿಲ್ ಕಟ್ಟಡದ ಮೇಲೆ ಹತ್ತಿ ಮಹಿಳೆಯೊಬ್ಬರು (Woman) ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ವಿದ್ಯಮಾನ ಗುರುವಾರ ನಡೆದಿದೆ. ವಿಜಯನಗರ ನಿವಾಸಿಯಾಗಿರುವ ಉಮಾ (Uma) ಎಂಬವರೇ ಕೃತ್ಯಕ್ಕೆ ಮುಂದಾದವರು. ಉಮಾ ಕಳೆದ ಹಲವು ತಿಂಗಳಿಂದ ಸಹಾಯಕ್ಕಾಗಿ ಪಾಲಿಕೆಯ ಆರೋಗ್ಯ ವಿಭಾಗದ (Heath Department) ಕಚೇರಿಗೆ ಹತ್ತಾರು ಬಾರಿ ಹೋಗಿ ಬಂದಿದ್ದಾರೆ. ಪಾಲಿಕೆಯ ಆರೋಗ್ಯಾಧಿಕಾರಿ ನಿರ್ಮಲಾ ಬುಗ್ಗಿ ಬಳಿ ತಮ್ಮ ನೋವು ತೋಡಿಕೊಂಡಿದ್ದಾರೆ. ಬದುಕಲು ದಾರಿ ಇಲ್ಲ, ಪಾಲಿಕೆ ಕಡೆಯಿಂದ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರಂತೆ. ಆದರೆ ಪಾಲಿಕೆ ಅಧಿಕಾರಿಗಳು ಉಡಾಫೆಯಿಂದ ವರ್ತಿಸಿದ್ದಾರೆ ಎಂದು ಆರೋಪಿಸಿ, ಆತ್ಮಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿದ್ದು, ಅದಕ್ಕಾಗಿ ನೇರ ಬಿಬಿಎಂಪಿ ಕಚೇರಿ ಕಟ್ಟಡವನ್ನೇ ಏರಿದ್ದರು. ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಉಮಾ ಬಿಬಿಎಂಪಿ ಕಟ್ಟಡ ಏರಿ ಆತ್ಮಹತ್ಯೆಗೆ ಮುಂದಾಗಿದ್ದಾರೆ.

ನಡೆದಿದ್ದೇನು? ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದೇಕೆ?

2024ರ ಅಕ್ಟೋಬರ್​ನಲ್ಲಿ ತಲೆ ನೋವು ಎಂದು ಉಮಾ ದಾಸರಹಳ್ಳಿಯ ಬಿಬಿಎಂಪಿ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ಪೇನ್ ಕಿಲ್ಲರ್ ಕೊಟ್ಟು ಕಳುಹಿಸಿದ್ದಾರೆ. ಆ ಬಳಿಕ ಕ್ರಮೇಣವಾಗಿ ತಲೆನೋವು ಜಾಸ್ತಿ ಆಗಿದೆ. ನಂತರ ಕೆಸಿ ಜನರಲ್ ಆಸ್ಪತ್ರೆಗೆ ಭೇಟಿ ಕೊಟ್ಟಾಗ ತಲೆಯೊಳಗೆ ಗಡ್ಡೆ ಆಗಿದೆ ಆಪರೇಷನ್ ಮಾಡಬೇಕು ಎಂದಿದ್ದಾರೆ. ತಕ್ಷಣವೇ ಆಪರೇಷನ್ ಮಾಡಿಸಿದ್ದಾರೆ. ಇದಾದ ಬಳಿಕ ಎಂದಿನಂತೆ ಕೆಲಸಕ್ಕೆ ಹೋಗಲು ಉಮಾರಿಗೆ ಸಾಧ್ಯವಾಗಿಲ್ಲ. ಗಂಡ ಇಲ್ಲ, ಒಬ್ಬ ಮಗ ಇದ್ದಾನೆ. ಹೇಗೆ ಬದುಕು ನಿರ್ವಹಣೆ ಮಾಡುವುದು ಎಂಬುದು ಉಮಾ ಚಿಂತೆ. ಹೀಗಾಗಿ ಪಾಲಿಕೆ ನಿಧಿಯಿಂದ ಸಹಾಯ ಕೇಳಲು ಹೋಗಿದ್ದಾರೆ. ಆದರೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ಆತ್ಮಹತ್ಯೆಗೆ ಪ್ರಯತ್ನಿಸಿದೆ ಎಂದು ಉಮಾ ಹೇಳಿಕೊಂಡಿದ್ದಾರೆ.

Police Rescued Woman

ಮಹಿಳೆಯನ್ನು ರಕ್ಷಿಸಿದ ಪೊಲೀಸರು

ಆತ್ಮಹತ್ಯೆ ಮಾಡಿಕೊಳ್ಳಲು ಕಟ್ಟಡ ಏರಿದ್ದ ಉಮಾ, ಸಿಎಂ ಭೇಟಿ ಮಾಡಿಸಿ ಎಂದು ಪಟ್ಟು ಹಿಡಿದಿದ್ದರು. ಬಳಿಕ ಹಲಸೂರು ಗೇಟ್ ಪೊಲೀಸರು ಸ್ಥಳಕ್ಕೆ ಬಂದು ಮಹಿಳೆಯನ್ನು ಕಟ್ಟಡದಿಂದ ರಕ್ಷಿಸಿ ಮನೆಗೆ ಕಳುಹಿಸಿದ್ದಾರೆ.

ಇದನ್ನೂ ಓದಿ
Image
ಟೀಕಿಸುವ ಭರದಲ್ಲಿ ಸಿಎಂ ವಿರುದ್ಧ ನಾಲಿಗೆ ಹರಿಬಿಟ್ಟ ಛಲವಾದಿ ನಾರಾಯಣಸ್ವಾಮಿ!
Image
ಮನೆ ಕೆಲಸ ಮಾಡುತ್ತಿದ್ದಾಕೆ ಜೊತೆ ಸರ್ಕಾರಿ ವೈದ್ಯ ಅಸಭ್ಯ ವರ್ತನೆ
Image
ಮಕ್ಕಳಲ್ಲಿ ಅತಿಯಾದ ಬೊಜ್ಜು ನಾನಾ ಸಮಸ್ಯೆಗೆ ಕಾರಣ: ಎಚ್ಚರಿಸಿದ ವರದಿ!
Image
ಸದನದಲ್ಲಿ ಹೊಸ ರೇಷನ್​ ಕಾರ್ಡ್ ಬಗ್ಗೆ ಪ್ರಸ್ತಾಪ: ಸಚಿವ ಹೇಳಿದ್ದಿಷ್ಟು

ಇದನ್ನೂ ಓದಿ: ಕೆಎಸ್ಆರ್​ಟಿಸಿ, ಬಿಎಂಟಿಸಿ ನೌಕರರ ಮುಷ್ಕರ ಬಹುತೇಕ ಫಿಕ್ಸ್: ಸರ್ಕಾರಕ್ಕೆ ಮಾರ್ಚ್ 22ರ ಗಡುವು

ಮಹಿಳೆಯ ಆರೋಪಕ್ಕೆ ಸ್ವಷ್ಟನೆ ನೀಡಿರುವ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ನಿರ್ಮಾಲಾ ಬುಗ್ಗಿ, ಈ ಪ್ರಕರಣಕ್ಕೂ ಬಿಬಿಎಂಪಿಗೂ ಯಾವುದೇ ಸಂಬಂಧವಿರುವುದಿಲ್ಲ‌. ಮೇಲ್ನೋಟಕ್ಕೆ ಆ ಮಹಿಳೆಯು ಮಾನಸಿಕ ಖಿನ್ನತೆಗೆ ಒಳಗಾಗಿರುವುದು ಕಂಡು ಬಂದಿದೆ. ಚಿಕಿತ್ಸೆಯ ಬಳಿಕ ಸರ್ಕಾರಿ ಕಚೇರಿ, ಜನಪ್ರತಿನಿಧಿಗಳ ಬಳಿ ತೆರಳಿ ಪರಿಹಾರಕ್ಕೆ ಒತ್ತಾಯಿಸಿರುತ್ತಾರೆ. ಜೀವನಾಂಶ ನೀಡುವವರೆಗೂ ತೆರಳುವುದಿಲ್ಲ ಎಂದು ಹಣ ನೀಡಲು ಅಧಿಕಾರಿಗಳಲ್ಲಿ ಒತ್ತಾಯಿಸಿರುತ್ತಾರೆ. ಮಹಿಳೆ ಉಮಾ ಮಹೇಶ್ವರಿಗೆ ಚಿಕಿತ್ಸೆ ನೀಡಿರುವ ವಿಚಾರವಾಗಿ ತನಿಖಾ ತಂಡ ಈಗಾಗಲೇ ವಿಚಾರಣೆ ನಡೆಸಿದ್ದು,ಯಾವುದೇ ಲೋಪವಾಗಿರುವುದಿಲ್ಲ ಎಂದು ವರದಿ ಬಂದಿದೆ. ಆದರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ಮತ್ತೊಂದು ಸುತ್ತಿನ ತನಿಖೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು‌ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಸದ್ಯ ಮಹಿಳೆಯ ಆತ್ಮಹತ್ಯೆ ಯತ್ನ ಪ್ರಕರಣ ಸುಖ್ಯಾಂತ ಕಂಡಿದ್ದು, ಮಹಿಳೆ ಮನೆಗೆ ತೆರಳಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟಿ, ‘ಟಿವಿ9’

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ