ಫೇಕ್ ನ್ಯೂಸ್, ದ್ವೇಷ ಹರಡುವ ಕಂಟೆಂಟ್ ತಡೆಗೆ ಬರಲಿದೆ ಎಐ ಸಾಫ್ಟ್​ವೇರ್: 67 ಕೋಟಿ ರೂ. ಯೋಜನೆಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್

ಕರ್ನಾಟಕ ಸರ್ಕಾರವು ನಕಲಿ ಸುದ್ದಿ ಮತ್ತು ಸಮಾಜ ವಿರೋಧಿ ಡಿಜಿಟಲ್ ಕಂಟೆಂಟ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. 67.26 ಕೋಟಿ ರೂ. ವೆಚ್ಚದಲ್ಲಿ ‘ಸೋಶಿಯಲ್ ಮೀಡಿಯಾ ಅನಾಲಿಟಿಕ್ಸ್ ಸೊಲ್ಯೂಷನ್ಸ್’ ಎಂಬ AI ಆಧಾರಿತ ಸಾಫ್ಟ್‌ವೇರ್ ಅಭಿವೃದ್ಧಿಗೆ ಸಂಪುಟ ಅನುಮೋದನೆ ನೀಡಿದೆ. ಈ ತಂತ್ರಜ್ಞಾನವು ಫೇಕ್​ ನ್ಯೂಸ್, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಅಂಶಗಳನ್ನು ಗುರುತಿಸಿ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಲಿದೆ.

ಫೇಕ್ ನ್ಯೂಸ್, ದ್ವೇಷ ಹರಡುವ ಕಂಟೆಂಟ್ ತಡೆಗೆ ಬರಲಿದೆ ಎಐ ಸಾಫ್ಟ್​ವೇರ್: 67 ಕೋಟಿ ರೂ. ಯೋಜನೆಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್
ಸಾಂದರ್ಭಿಕ ಚಿತ್ರ
Image Credit source: TV9 Network

Updated on: Feb 06, 2026 | 7:42 AM

ಬೆಂಗಳೂರು, ಫೆಬ್ರವರಿ 6: ನಕಲಿ ಸುದ್ದಿ ಮತ್ತು ಸಮಾಜ ವಿರೋಧಿ ಅಂಶಗಳುಳ್ಳ ಡಿಜಿಟಲ್ ಕಂಟೆಂಟ್​ಗಳನ್ನು ತಡೆಗಟ್ಟಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿ ಬಳಕೆ ಮಾಡುವ ಬಗ್ಗೆ ಕರ್ನಾಟಕ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ಸುಮಾರು 67.26 ಕೋಟಿ ರೂ. ವೆಚ್ಚದಲ್ಲಿ ‘ಸೋಶಿಯಲ್ ಮೀಡಿಯಾ ಅನಾಲಿಟಿಕ್ಸ್ ಸೊಲ್ಯೂಷನ್ಸ್ (Social media analytics solutions)’ ಎಂಬ ಸಾಫ್ಟ್​ವೇರ್ ಅಭಿವೃದ್ಧಿಪಡಿಸಿ ಯೋಜನೆ ಜಾರಿಗೊಳಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್​​​ಕೆ ಪಾಟೀಲ್, ಸಾಂಪ್ರದಾಯಿಕ ವಿಧಾನಗಳ ಮೂಲಕ ನಕಲಿ ಸುದ್ದಿಗಳನ್ನು ತಡೆಯಲು ಆಗುತ್ತಿಲ್ಲ. ಹೀಗಾಗಿ, ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನವನ್ನು ಬಳಸುವ ಅಗತ್ಯ ಎದುರಾಗಿದೆ ಎಂದು ತಿಳಿಸಿದರು.

ಫೇಕ್​ ನ್ಯೂಸ್ ತಡೆಗೆ ಎಐ ಆಧಾರಿತ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತೆ?

‘ಸೋಶಿಯಲ್ ಮೀಡಿಯಾ ಅನಾಲಿಟಿಕ್ಸ್ ಸೊಲ್ಯೂಷನ್ಸ್’ ಸಾಫ್ಟ್‌ವೇರ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಡಿಜಿಟಲ್ ಕಂಟೆಂಟ್​​ಗಳನ್ನು ವಿಶ್ಲೇಷಿಸಲಿದೆ. ಭಯೋತ್ಪಾದನೆ, ದ್ವೇಷ ಭಾಷಣ, ಕೋಮು ಹಿಂಸಾಚಾರಕ್ಕೆ ಪ್ರಚೋದನೆ, ಮಕ್ಕಳ ಅಪಹರಣ ಸೇರಿದಂತೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟುಮಾಡುವ ಸಮಾಜ ವಿರೋಧಿ ಚಟುವಟಿಕೆಗಳನ್ನು ಗುರುತಿಸಲಿದೆ. ಅಲ್ಲದೆ, ನಕಲಿ ಸುದ್ದಿಗಳ ಮೂಲವನ್ನು ಪತ್ತೆಹಚ್ಚುವ ಸಾಮರ್ಥ್ಯವೂ ಈ ತಂತ್ರಜ್ಞಾನಕ್ಕಿರಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಸಂಬಂಧಿಸಿದ ಅಧಿಕಾರಿಗೆ ಬರುತ್ತೆ ನೋಟಿಫಿಕೇಶನ್

ಗೃಹ ಇಲಾಖೆಯ ಅಧೀನದಲ್ಲಿ ಈ ಯೋಜನೆಯನ್ನು ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಜಾರಿಗೆ ತರಲಾಗುತ್ತದೆ. ಫೇಸ್‌ಬುಕ್, ಯೂಟ್ಯೂಬ್, ಎಕ್ಸ್ (ಟ್ವಿಟರ್), ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದ್ವೇಷ ಮತ್ತು ತಪ್ಪು ಮಾಹಿತಿಯನ್ನು ಹರಡುವ ಪೋಸ್ಟ್‌ಗಳನ್ನು ಪತ್ತೆಹಚ್ಚುವ ಎಐ ಆಧಾರಿತ ತಂತ್ರಜ್ಞಾನ, ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡುತ್ತದೆ.

ಮತ್ತೊಂದೆಡೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಕಾಯ್ದೆ–2026ಕ್ಕೆ ಪ್ರಸ್ತಾಪಿಸಿದ ಬದಲಾವಣೆಗಳಿಗೂ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಂತೆ, ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ ಮತಪತ್ರ (ಬ್ಯಾಲೆಟ್ ಪೇಪರ್) ಬಳಕೆ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಜಿಬಿಎ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಯನ್ನು ಜಾರಿಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಅದನ್ನು ಗ್ರಾಮ ಪಂಚಾಯತ್ ಮಟ್ಟಕ್ಕೂ ವಿಸ್ತರಿಸಲಾಗುತ್ತದೆ ಎಂದು ಪಾಟೀಲ್ ತಿಳಿಸಿದರು.

ಇದನ್ನೂ ಓದಿ: ಬ್ಯಾಲೆಟ್ ಪೇಪರ್​​ನಲ್ಲೇ ಗ್ರಾಮ ಪಂಚಾಯ್ತಿ ಎಲೆಕ್ಷನ್: ಸಚಿವ ಸಂಪುಟ ಮಹತ್ವದ ನಿರ್ಧಾರ

ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (SIR) ಕುರಿತ ಚರ್ಚೆಯನ್ನು ಮುಂದೂಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us