ಮೃತ IAS ಅಧಿಕಾರಿ ಮಹಾಂತೇಶ್ ಬೀಳಗಿ ಪುತ್ರಿಗೆ ಅನುಕಂಪದ ನೌಕರಿ ನೀಡಲು ಸಂಪುಟ ಒಪ್ಪಿಗೆ, ಯಾವ ಹುದ್ದೆ?
ಕರ್ನಾಟಕ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಇಡೀ ರಾಜ್ಯವೇ ಮಮ್ಮಲ ಮರುಗಿದೆ. ಅಲ್ಲದೇ ಅವರ ಕುಟುಂಬಕ್ಕೆ ಒಂದು ಅನುಕಂಪದ ಆಧಾರದ ಮೇಲೆ ಸರ್ಕಾರಿ ಹುದ್ದೆ ನೀಡಬೇಕೆಂಬ ಕೂಗು ಕೇಳಿಬಂದಿತ್ತು. ಆ ಕೂಗಿಗೆ ರಾಜ್ಯ ಸರ್ಕಾರ ಕಿವಿಯಾಗಿದ್ದು, ಮಹಾಂತೇಶ್ ಬೀಳಗಿ ಪುತ್ರಿಗೆ ಅನುಕಂಪದ ಹುದ್ದೆ ನೀಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಹಾಗಾದ್ರೆ, ಯಾವ ಹುದ್ದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಜನವರಿ 02): ರಸ್ತೆ ಅಪಘಾತದಲ್ಲಿ (Road Accident)ಮೃತಪಟ್ಟಿದ್ದ ಕರ್ನಾಟಕ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (mahantesh bilagi) ಅವರ ಪುತ್ರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಲು ಸಚಿವ ಸಂಪುಟ (Karnataka Cabinet) ಒಪ್ಪಿಗೆ ಸೂಚಿಸಿದೆ. ಇಂದು (ಜನವರಿ 02) ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಮಹಾಂತೇಶ್ ಬೀಳಗಿ ಅವರ ಕುಟುಂಬಕ್ಕೆ ಅನುಕಂಪದ ಹುದ್ದೆ ನೀಡವ ಬಗ್ಗೆ ಚರ್ಚೆಯಾಗಿದ್ದು, ಅಂತಿಮವಾಗಿ ಮಹಾಂತೇಶ್ ಬೀಳಗಿ ಅವರ ಪುತ್ರಿ ಚೈತನ್ಯ ಅವರಿಗೆ ಅನುಕಂಪದ ಆಧಾರದ ಮೇಲೆ ಗ್ರೂಪ್ ಸಿ ಹುದ್ದೆ ನೀಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಪ್ರೀತಿಯ ಮಾತು, ಪ್ರಮಾಣಿಕ ಕೆಲಸಗಳಿಂದ ಕರ್ನಾಟಕ ತುಂಬ ಗುರುತಿಸಿಕೊಂಡಿದ್ದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ. ವಿದ್ಯಾರ್ಥಿಗಳು ಸಿಕ್ಕರೆ ಉತ್ಸಾಹ ತುಂಬಿಬರುವ ಮಾತುಗಳನ್ನು ಆಡದೆ ಮುಂದಕ್ಕೆ ಹೋಗ್ತಿರಲಿಲ್ಲ. ಜ್ಞಾನ ಬೆಳೆಸಿಕೊಳ್ಳಿ, ಬದುಕು ಬೆಳಗಿಸಿ ಅಂತ ಸ್ಟೂಡೆಂಟ್ಸ್ ಸಲಹೆ ಕೊಡೋದನ್ನು ಮರೀತಿರಲಿಲ್ಲ. ಸ್ವತಃ ಬಡತನದ ಬೇಗೆಯಲ್ಲಿ ಬೆಂದು, ಅಪಾರ ಅನುಭವಗಳನ್ನು ಬೆಳೆಸಿಕೊಂಡು ಉನ್ನತ ಸ್ಥಾನಕ್ಕೆ ಏರಿದ್ದ ಅಪರೂಪದ ವ್ಯಕ್ತಿ ಮಹಾಂತೇಶ್. ಈ ಜನಸ್ನೇಹಿ ಅಧಿಕಾರಿ ಇತ್ತೀಚೆಗೆ ಕಲಬುರಗಿ ಸಮೀಪ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಮೂವರು ಸಹೋದರರು ದುರಂತ ಸಾವು: IAS ಅಧಿಕಾರಿ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ರೂ ಉಳಿಯಲಿಲ್ಲ ಜೀವಗಳು
2025ರ ನವೆಂಬರ್ 25ರಂದು ಜೇವರ್ಗಿ ಸಮೀಪ ಮಹಾಂತೇಶ್ ಬೀಳಗಿ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ನಿಯಂತ್ರ ತಪ್ಪಿ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿತ್ತು. ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಲೆ ಈ ದುರ್ಘಟನೆ ಸಂಭವಿಸಿತ್ತು. ಈ ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಮಹಾಂತೇಶ್ ಬೀಳಗಿ ಅವರು ಚಿಕಿತ್ಸೆ ಫಲಕಾರಿಯಾಗದೇ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಮಹಾಂತೇಶ್ ಬೀಳಗಿ ಸಂಬಂಧಿ ಬಸವರಾಜ್ ಕಮರಟಗಿ ಎಂಬವರು ದೂರು ದಾಖಲಿಸಿದ್ದು, ಈ ದೂರಿನ ಅನ್ವಯ ಜೇವರ್ಗಿ ಠಾಣೆಯ ಪೊಲೀಸರು ಚಾಲಕ ಆರೋಕಿಯಾ ಆಂಥೋನಿ ರಾಜ ವಿರುದ್ದ 281 , 125(A)125(B)106 ಬಿಎನ್‌ಎಸ್ ಅಡಿ ಎಫ್ಐಆರ್ ದಾಖಲಾಗಿದೆ. ಚಾಲಕನ ಅತಿವೇಗ ಅಜಾರೋಗತೆಕತೆಯಿಂದ ಅಪಘಾತ ಸಂಭವಿಸಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ. ರಸ್ತೆ ಬದಿಯ ಬ್ರಿಡ್ಜ್ ಗೆ ಕಾರು ಡಿಕ್ಕಿಯಾಗಿ ನಾಲ್ಕೈದು ಬಾರಿ ಕಾರ್ ಪಲ್ಟಿಯಾಗಿದೆ. ಕಾರ್ ಪಲ್ಟಿಯಾದ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ರೆ, ಆಸ್ಪತ್ರೆಯಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸಾವನ್ನಪ್ಪಿದ್ದರು. ಕಾರ್ ಚಾಲಕ ಆಂಥೋನಿ ರಾಜ್ ಸಹ ಗಂಭೀರ ಗಾಯಗಳಾಗಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




