ತಾಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮೂಹುರ್ತ ಫಿಕ್ಸ್: ಗರಿಗೆದರಿದ ಹಳ್ಳಿ ರಾಜಕೀಯ
ಕಳೆದ ನಾಲ್ಕೈದು ವರ್ಷಗಳಿಂದ ನನೆಗುದಿಗೆ ಬಿದ್ದಿ ಚುನಾವಣೆ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಅಂತೂ ಕಾಲ ಕೂಡಿಬಂದಂತಿದೆ. ಹೌದು..ಕರ್ನಾಟಕದಲ್ಲಿ ಗ್ರಾಮ ಪಂಚಾಯ್ತಿ, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ, ವಿವಿಧ ಪುರಸಭೆ ಹಾಗೂ ನಗರಸಭೆ ಸೇರಿದಂತೆ 6500ಕ್ಕೂ ಹೆಚ್ಚು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲು ಸಿಎಂ ಸಿದ್ದರಾಮಯ್ಯನವರು ಸಚಿವರಿಗೆ ಸೂಚನೆ ನೀಡಿದ್ದಾರೆ. ಇನ್ನು ಲೋಕಲ್ ಲೀಡರ್ಸ್ ಕುತೂಹಲದಿಂದ ಕಾಯುತ್ತಿರುವ ಸ್ಥಳೀಯ ಸಂಸ್ಥೆಗಳು ಯಾವಾಗ ನಡೆಯಲಿದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಡಿಸೆಂಬರ್ 15): ಕಳೆದ ನಾಲ್ಕು ವರ್ಷಗಳಿಂದ ಬಾಕಿ ಇರುವ ತಾಲೂಕು , ಜಿಲ್ಲಾ ಪಂಚಾಯಿತಿ ಚುನಾವಣೆ (ZP And TP Elections) ನಡೆಸಲು ಸರ್ಕಾರ ಕೊನೆಗೆ ಆಸಕ್ತಿ ತೋರಿದೆ. ನನೆಗುದಿಗೆ ಬಿದ್ದಿದ್ದ ಕರ್ನಾಟಕದ (Karnataka) ಎಲ್ಲಾ ಗ್ರಾಮ ಪಂಚಾಯ್ತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ, ವಿವಿಧ ಪುರಸಭೆ ಹಾಗೂ ನಗರಸಭೆ ಸೇರಿದಂತೆ 6500ಕ್ಕೂ ಹೆಚ್ಚು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು 2026ರ ಏಪ್ರಿಲ್‌ನಲ್ಲಿ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದೆ. ಇದರ ಬೆನ್ನಲ್ಲೇ ಹಳ್ಳಿಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನ
ಕಳೆದ ನಾಲ್ಕೈದು ವರ್ಷಗಳಿಂದ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆದಿರಲಿಲ್ಲ. ಜತೆಗೆ ನಗರ ಸ್ಥಳೀಯ ಸಂಸ್ಥೆಗಳ ಅವಧಿ ಮುಗಿದಿದ್ದು, ಗ್ರಾಮ ಪಂಚಾಯ್ತಿಗಳ ಅವಧಿಯೂ ಮುಗಿಯುತ್ತಿದೆ. ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಚುನಾವಣೆ ವಿಳಂಬದ ಪ್ರಕರಣ ನ್ಯಾಯಾಲಯದಲ್ಲಿದ್ದು, ತ್ವರಿತಗತಿಯಲ್ಲಿ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವೂ ತಿಳಿಸಿದೆ.
ಇದನ್ನೂ ಓದಿ: ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕೊನೆಗೂ ಕೂಡಿಬಂತು ಕಾಲ: ಯಾವಾಗ ಎಲೆಕ್ಷನ್?
ಈ ಸಂಬಂಧ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದಿದ್ದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದು, ಗ್ರಾಮ ಪಂಚಾಯ್ತಿ, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ, ವಿವಿಧ ಪುರಸಭೆ ಹಾಗೂ ನಗರಸಭೆ ಸೇರಿದಂತೆ 6500ಕ್ಕೂ ಹೆಚ್ಚು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು 2026ರ ಏಪ್ರಿಲ್‌ನಲ್ಲಿ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ 30 ತಿಂಗಳ ಅವಧಿಯಲ್ಲಿ ಇದುವರೆಗೂ ಒಂದೂ ಸ್ಥಳೀಯ ಸಂಸ್ಥೆ ಚುನಾವಣೆ ಕೂಡ ನಡೆದಿಲ್ಲ. ಹೀಗಾಗಿ ಅನಗತ್ಯ ವಿಳಂಬ ಮಾಡದೆ ಅಗತ್ಯ ಸ್ಥಳೀಯ ಸಂಸ್ಥೆಗಳಿಗೆ ವ್ಯಾಪ್ತಿ ಪುನರ್ ವಿಂಗಡಣೆ ಮಾಡಿಕೊಂಡು ಅಂತಿಮ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು. ಬಳಿಕ ಚುನಾವಣಾ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ತೀರ್ಮಾನಿಸಲಾಗಿದೆ.
2016ರಲ್ಲಿ ನಡೆದಿದ್ದವು ಪಂಚಾಯ್ತಿ ಎಲೆಕ್ಷನ್
ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ 2016ರ ಏಪ್ರಿಲ್‌ನಲ್ಲಿ ಚುನಾವಣೆ ನಡೆದಿತ್ತು. ಅಂದು ಆಯ್ಕೆಯಾಗಿದ್ದ ಸದಸ್ಯರ ಅಧಿಕಾರವಧಿ 2021ರ ಏಪ್ರಿಲ್ 27ರಂದು ಅಂತ್ಯವಾಗಿತ್ತು. ಅವಧಿ ಪೂರ್ಣಗೊಂಡು ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ ನಾನಾ ಕಾರಣದಿಂದ ಚುನಾವಣೆ ನಡೆಸದೇ ಐದು ವರ್ಷ ವಿಳಂಬವಾಗಿದ್ದು, 2026ರ ಬೇಸಿಗೆ ಅವಧಿಯ ಮುಗಿಯುವ ಮೊದಲು ಚುನಾವಣೆ ನಡೆಸಲು ಅನುಕೂಲವಾಗುಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯ ಸಹಕಾರ ನೀಡಲು ತೀರ್ಮಾನಿಸಲಾಗಿದೆ.
ಈಗಾಗಲೇ ನಾಯಕರಿಗೆ ಕರೆ ನೀಡಿರುವ ಡಿಕೆಶಿ
ಪಾಲಿಕೆ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಿ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಈಗಾಗಲೇ ಪಕ್ಷದ ನಾಯಕರಿಗೆ ಕರೆ ಕೊಟ್ಟಿದ್ದಾರೆ.ಬೆಂಗಳೂರಿನಲ್ಲಿ ಜಿಬಿಎ ಮೂಲಕ 369 ವಾರ್ಡ್‌ಗಳನ್ನು ಮಾಡಲಾಗಿದ್ದು, ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಜೊತೆಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯಲಿದೆ. ಪಾಲಿಕೆ ಚುನಾವಣೆಯ ವಾರ್ಡ್ ಮೀಸಲಾತಿ ಪಟ್ಟಿ ಇಂದು ಬಿಡುಗಡೆಯಾಗಲಿದೆ. ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವವರಿಗೆ ಅರ್ಜಿ ಕರೆಯಲಾಗುವುದು. ಈಗ ಹೊಸ ಮತದಾರರ ಪಟ್ಟಿ ರಚನೆಯಾಗಲಿದೆ. ಕೂಡಲೇ ಮನೆ ಮನೆಗೆ ಹೋಗಿ ಖಾತಾ ಯೋಜನೆ, ಆಸ್ತಿ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಿಳಿಸಿ ಪ್ರಚಾರ ಮಾಡಬೇಕು ಎಂದು ಕರೆ ನೀಡಿದನ್ನು ಇಲ್ಲಿ ಸ್ಮರಿಸಬಹುದು.
ಹಳ್ಳಿಗಳಲ್ಲಿ ಗೆರಿಗೆದರಿದ ರಾಜಕೀಯ
ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಎಲೆಕ್ಷನ್ ಯಾವಾಗ ಬರುತ್ತವೋ ಎಂದು ಹಳ್ಳಿಗಳಲ್ಲಿ ಚಾತಕ ಪಕ್ಷಗಳಂತೆ ಕಾಯುತ್ತಿದ್ದು ಲೋಕಲ್ ಲೀಡರ್ಸ್ ಎದ್ದು ಕುಳಿತ್ತಿದ್ದಾರೆ. ಇದರಿಂದ ಲೋಕಲ್ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಎರಡ್ಮೂರು ವರ್ಷಗಳ ಹಿಂದೆಯೇ ತಮಗೆ ಈ ಕ್ಷೇತ್ರದ ಟಿಕೆಟ್ ಬೇಕೆಂದು ನಾಯಕರುಗಳ ಮುಂದೆ ಹೇಳಿಕೊಂಡು ಬಂದಿದ್ದಾರೆ. ಇದೀಗ ಸರ್ಕಾರ, ಚುನಾವಣೆ ನಡೆಸಲು ಮುಂದಾಗುತ್ತಿದ್ದಂತೆಯೇ ಮುಖಂಡರು, ಈಗಾಗಲೇ ಆಯ್ಕೆ ಮಾಡಿಕೊಂಡಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಟಿಕೆಟ್ಗಾಗಿ ತಮ್ಮ ನಾಯಕರುಗಳಿಗೆ ದುಂಬಾಲು ಬಿದ್ದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಗಿ ಇಲ್ಲಿ ಕ್ಲಿಕ್ ಮಾಡಿ
Published On - 5:41 pm, Mon, 15 December 25




