
ಬೆಂಗಳೂರು, ಆಗಸ್ಟ್ 03: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಕಾಂಗ್ರೆಸ್ (congress) ಶಾಸಕರನ್ನು ಸಮಾಧಾನಪಡಿಸಲು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ (bk hariprasad) ಮುಂದಾಗಿದ್ದಾರೆ. ‘ಶಾಸಕರ ನೋವು ಮತ್ತು ಭಾವನೆಗಳನ್ನು ಪಕ್ಷವು ಎಂದಿಗೂ ನಿರ್ಲಕ್ಷಿಸುವುದಿಲ್ಲ. ಯಾರೂ ಭಾವೋದ್ವೇಗಕ್ಕೆ ಒಳಗಾಗಿ ರಾಜೀನಾಮೆಯಂತಹ ನಿರ್ಧಾರಗಳನ್ನು ಕೈಗೊಳ್ಳಬಾರದು’ ಎಂದು ಮನವಿ ಮಾಡಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಬಿ.ಕೆ.ಹರಿಪ್ರಸಾದ್, ‘ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ದೊರೆಯದ ಹಿನ್ನಲೆಯಲ್ಲಿ ನಮ್ಮ ಶಾಸಕರು ನೋವು ಮತ್ತು ಅಸಮಾಧಾನ ವ್ಯಕ್ತಪಡಿಸಿರುವುದು ನನ್ನ ಗಮನಕ್ಕೆ ಬಂದಿದೆ. ಪಕ್ಷಕ್ಕಾಗಿ ದುಡಿದ ಪ್ರತಿಯೊಬ್ಬ ಶಾಸಕರಿಗೂ ಸರ್ಕಾರದಲ್ಲಿ ಜವಾಬ್ದಾರಿ ವಹಿಸಬೇಕೆಂಬ ಅಪೇಕ್ಷೆ ಇರುವುದು ಸಹಜ. ಅವರ ಭಾವನೆಗಳನ್ನು ಪಕ್ಷ ನಿರ್ಲಕ್ಷಿಸುವುದಿಲ್ಲ, ಪ್ರತಿಯೊಬ್ಬರ ಸೇವೆ, ಅನುಭವ ಮತ್ತು ಕೊಡುಗೆಯನ್ನು ಗೌರವದಿಂದಲೇ ಪರಿಗಣಿಸುತ್ತದೆ’ ಎಂದರು.
ಸಚಿವ ಸಂಪುಟ ವಿಸ್ತರಣೆಯಲ್ಲಿ
ಸಚಿವ ಸ್ಥಾನ ದೊರೆಯದ ಹಿನ್ನಲೆಯಲ್ಲಿ ನಮ್ಮ ಶಾಸಕರು ನೋವು ಮತ್ತು ಅಸಮಾಧಾನ ವ್ಯಕ್ತಪಡಿಸಿರುವುದು ನನ್ನ ಗಮನಕ್ಕೆ ಬಂದಿದೆ.ಪಕ್ಷಕ್ಕಾಗಿ ದುಡಿದ ಪ್ರತಿಯೊಬ್ಬ ಶಾಸಕರಿಗೂ ಸರ್ಕಾರದಲ್ಲಿ ಜವಾಬ್ದಾರಿ ವಹಿಸಬೇಕೆಂಬ ಅಪೇಕ್ಷೆ ಇರುವುದು ಸಹಜ. ಅವರ ಭಾವನೆಗಳನ್ನು ಪಕ್ಷ ನಿರ್ಲಕ್ಷಿಸುವುದಿಲ್ಲ; ಪ್ರತಿಯೊಬ್ಬರ ಸೇವೆ,…
— Hariprasad.B.K. (@HariprasadBK2) August 3, 2026
‘ಸಚಿವ ಸಂಪುಟದ ಸ್ಥಾನಗಳು ಸೀಮಿತವಾಗಿರುತ್ತವೆ. ಪ್ರಾದೇಶಿಕ ಸಮತೋಲನ, ಸಾಮಾಜಿಕ ನ್ಯಾಯ, ವಿವಿಧ ಸಮುದಾಯಗಳ ಪ್ರಾತಿನಿಧ್ಯ, ಅನುಭವ, ಹೊಸ ನಾಯಕತ್ವ ಹಾಗೂ ಆಡಳಿತದ ಅಗತ್ಯಗಳನ್ನು ಸಮಗ್ರವಾಗಿ ಪರಿಶೀಲಿಸಿದ ನಂತರ ಪಕ್ಷದ ರಾಷ್ಟ್ರೀಯ ನಾಯಕತ್ವ ಮತ್ತು ರಾಜ್ಯದ ನಾಯಕತ್ವ ಒಟ್ಟಾಗಿ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.
‘ಸಚಿವ ಸ್ಥಾನ ಸಿಗದಿರುವುದು ಯಾರೊಬ್ಬರ ರಾಜಕೀಯ ಸೇವೆಯ ನಿರಾಕರಣೆಯೂ ಅಲ್ಲ, ಅವರ ಸಾಮರ್ಥ್ಯದ ಮೇಲಿನ ಅನುಮಾನವೂ ಅಲ್ಲ. ಅಧಿಕಾರವೇ ಪಕ್ಷಸೇವೆಯ ಏಕೈಕ ಮಾನದಂಡವಲ್ಲ. ಸರ್ಕಾರದೊಳಗೆ, ಪಕ್ಷದ ಸಂಘಟನೆಯಲ್ಲಿ ಹಾಗೂ ವಿವಿಧ ಜವಾಬ್ದಾರಿಗಳ ಮೂಲಕ ಜನಸೇವೆ ಮಾಡಲು ಅನೇಕ ಅವಕಾಶಗಳಿವೆ. ಮುಂದಿನ ದಿನಗಳಲ್ಲಿ ಪಕ್ಷದ ಪ್ರತಿಯೊಬ್ಬ ಅರ್ಹ ನಾಯಕರಿಗೂ ಅವರ ಅನುಭವ ಮತ್ತು ಸಾಮರ್ಥ್ಯಕ್ಕೆ ತಕ್ಕ ಗೌರವ ದೊರೆಯಲಿದೆ’ ಎಂದಿದ್ದಾರೆ.
‘ಭಾವೋದ್ವೇಗದಲ್ಲಿ ರಾಜೀನಾಮೆಯಂತಹ ತೀರ್ಮಾನಗಳನ್ನು ಕೈಗೊಳ್ಳಬಾರದು. ವೈಯಕ್ತಿಕವಾಗಿ ಮಾತನಾಡಿ, ನಿಮ್ಮ ನೋವು ಮತ್ತು ಅಭಿಪ್ರಾಯಗಳನ್ನು ಪಕ್ಷದ ರಾಷ್ಟ್ರೀಯ ನಾಯಕತ್ವದ ಗಮನಕ್ಕೆ ತರಲಾಗುವುದು. ಮಾತುಕತೆ ಮತ್ತು ಪರಸ್ಪರ ವಿಶ್ವಾಸದ ಮೂಲಕ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಿಕೊಳ್ಳುವ ವಿಶಾಲ ಮನಸ್ಸು ಕಾಂಗ್ರೆಸ್ ಪಕ್ಷಕ್ಕಿದೆ’ ಎಂದು ಹೇಳಿದ್ದಾರೆ.
‘ಸಚಿವರಾಗಿ ಆಯ್ಕೆಯಾಗಿರುವವರು ಪಕ್ಷದ ನಿಷ್ಠಾವಂತರು, ಸಮರ್ಥರು ಹಾಗೂ ಜನರ ವಿಶ್ವಾಸಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವವರು. ಅವರ ಆಯ್ಕೆಯನ್ನು ಎಲ್ಲರೂ ಗೌರವಿಸಿ, ಆಡಳಿತದಲ್ಲಿ ಯಶಸ್ವಿಯಾಗಲು ಸಹಕಾರ ನೀಡಬೇಕು. ನಮ್ಮ ಮುಂದೆ ರಾಜ್ಯದ ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ಮತ್ತು ಜನಪರ ಆಡಳಿತವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ದೊಡ್ಡ ಜವಾಬ್ದಾರಿಯಿದೆ’ ಎಂದಿದ್ದಾರೆ.
‘ವೈಯಕ್ತಿಕ ಆಕಾಂಕ್ಷೆಗಳಿಗಿಂತ ಪಕ್ಷದ ಹಿತ, ಸರ್ಕಾರದ ಸ್ಥಿರತೆ ಮತ್ತು ಕರ್ನಾಟಕದ ಜನರ ನಿರೀಕ್ಷೆಗಳು ಮುಖ್ಯವಾಗಬೇಕು. ಎಲ್ಲ ಶಾಸಕರು ಹಾಗೂ ನೂತನ ಸಚಿವರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ, ಕಾಂಗ್ರೆಸ್ ಪಕ್ಷದ ಮೇಲಿರುವ ಜನರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು’ ಎಂದು ಬಿ.ಕೆ.ಹರಿಪ್ರಸಾದ್ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.