
ಬೆಂಗಳೂರು, ಏಪ್ರಿಲ್ 11: ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಧಾರಿತ ಜಾತಿ ಗಣತಿ (Caste Census) ವರದಿ ಅನುಷ್ಠಾನ ಸಂಬಂಧ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Karnataka Cabinet Meeting) ಮಹತ್ವದ ಚರ್ಚೆಯಾಗಿದೆ. ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯ ಜಾರಿಯ ಸಾಧ್ಯಾಸಾಧ್ಯತೆ ಬಗ್ಗೆ ಚರ್ಚಿಸಲಾಗಿದ್ದು, ಅಂತಿಮವಾಗಿ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದೆಂದು ನಿರ್ಧರಿಸಲಾಯಿತು.
ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ಲಕೋಟೆ ಓಪನ್ ಮಾಡಲಾಯಿತು. ಸಚಿವರ ಕೈಗೆ ಜಾತಿ ಗಣತಿ ದತ್ತಾಂಶ ನೀಡಿದ ಬಳಿಕ ಆ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು. ಸಂಪುಟ ಸಹೋದ್ಯೋಗಿಗಳ ಅಭಿಪ್ರಾಯ ಆಲಿಸಿದ ಸಿದ್ದರಾಮಯ್ಯ, ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರ್ಧಾರಕ್ಕೆ ಬಂದರು.
ಜನ ಗಣತಿ ಸಮೀಕ್ಷಾ ವರದಿಯನ್ನು 2024ರ ಫೆಬ್ರವರಿಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇದಾದ ನಂತರ ಜಾತಿ ಗಣತಿ ವರದಿ ಸೋರಿಕೆಯಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು.
ಏಪ್ರಿಲ್ 17ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಜಾತಿ ಗಣತಿ ವಿಚಾರವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದೆ.
ಪೆಟ್ಟಿಗೆ 1
ಪೆಟ್ಟಿಗೆ 2
ಇದನ್ನೂ ಓದಿ: ಕೇವಲ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ ಅಲ್ಲ, ರಾಜ್ಯದ ಏಳು ಕೋಟಿ ಕನ್ನಡಿಗರ ಸಮೀಕ್ಷೆ: ಸಿದ್ದರಾಮಯ್ಯ
ಈ ಮಧ್ಯೆ, ಜಾತಿ ಗಣತಿ ವಿಚಾರವಾಗಿ ಶುಕ್ರವಾರ ಕೂಡ ವಿಪಕ್ಷಗಳ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಕುರ್ಚಿ ಕಳೆದುಕೊಳ್ಳುವ ಭೀತಿ ಎದುರಾದಾಗಲೆಲ್ಲ ಸಿದ್ದರಾಮಯ್ಯಗೆ ಜಾತಿ ಗಣತಿ ವರದಿ ನೆನಪಾಗುತ್ತದೆ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.
Published On - 2:03 pm, Fri, 11 April 25