ಸಿದ್ದಯ್ಯನಪುರ: ಊರೇ ಖಾಲಿ ಮಾಡಬೇಕಾದ ಭೀತಿಯಲ್ಲಿ ಗ್ರಾಮಸ್ಥರು, ಆಸ್ತಿ ಖಾತೆ ಮಾಡುವಂತೆ ಪ್ರಮೋದಾದೇವಿ ಪತ್ರದ ಬೆನ್ನಲ್ಲೇ ಆತಂಕ
ಚಾಮರಾಜನಗರ ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ 4000ಕ್ಕೂ ಹೆಚ್ಚು ಜನರು ರಾಜಮಾತೆ ಪ್ರಮೋದಾದೇವಿ ಅವರ ಪತ್ರದಿಂದ ಆತಂಕಕ್ಕೀಡಾಗಿದ್ದಾರೆ. ಜಯಚಾಮರಾಜೇಂದ್ರ ಒಡೆಯರ್ ಅವರು ದಾನ ಮಾಡಿದ ಭೂಮಿಯಲ್ಲಿ ವಾಸಿಸುತ್ತಿರುವ ಗ್ರಾಮಸ್ಥರು, ಸರ್ಕಾರದಿಂದ ಸಾಗುವಳಿ ಚೀಟಿ ಪಡೆದಿದ್ದಾರೆ. ಆದರೆ ರಾಜಮಾತೆಯವರು ಭೂಮಿಯನ್ನು ವಾಪಸ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ, ತಮ್ಮ ಗ್ರಾಮವನ್ನು ಉಳಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಚಾಮರಾಜನಗರ, ಏಪ್ರಿಲ್ 11: ಮೈಸೂರು ಮಹಾರಾಜರಿಗೆ ಸೇರಿರುವ ಆಸ್ತಿ ಖಾತೆ ಮಾಡಿಕೊಡುವಂತೆ ರಾಜಮಾತೆ ಪ್ರಮೋದಾದೇವಿ (Rajmatha Pramoda Devi) ಯವರು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಪತ್ರ ಬರೆದಿದ್ದಾರೆ. ಇದರಿಂದ, ಚಾಮರಾಜನಗರ (Chmarajanagar) ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಜನರು ಆತಂಕಗೊಂಡಿದ್ದು, ಊರು ಖಾಲಿ ಮಾಡುವ ಭಯದಲ್ಲಿದ್ದಾರೆ.
ಈ ಬಗ್ಗೆ ಸಿದ್ದಯ್ಯನಪುರ ಗ್ರಾಮದ ಜನರು ಟಿವಿ9 ಪ್ರತಿನಿಧಿ ಜೊತೆ ಮಾತನಾಡಿ, ಸಿದ್ದಯ್ಯನಪುರ ಗ್ರಾಮದ ಮೂಲ ಹೆಸರು ಜಯಚಾಮರಾಜೇಂದ್ರ ಪುರ ಆಗಿದ್ದು, 4000ಕ್ಕೂ ಹೆಚ್ಚು ಜನಸಂಖ್ಯೆ ಇದೆ. ನಮಗೆ ಜಯಚಾಮರಾಜೇಂದ್ರ ಒಡೆಯರ್ (Jayachamarajendra Wadiyar) ಅವರು 1035 ಎಕರೆ ಭೂಮಿ ದಾನ ನೀಡಿದ್ದಾರೆ. 1982 ರಲ್ಲಿ ಸಚಿವರಾಗಿದ್ದ ಬಿ ರಾಚಯ್ಯ ಅವರ ಕಾಲದಲ್ಲಿ ಸರ್ಕಾರ ಸಾಗುವಳಿ ಚೀಟಿ ನೀಡಿದೆ ಎಂದು ಹೇಳಿದರು.
ಮಹಾರಾಜರ ಫೋಟೋ ಗ್ರಾಮ ಚಾವಡಿಯಲ್ಲಿ ಇಟ್ಟಿದ್ದೇವೆ. ಪ್ರತಿ ವರ್ಷ ಮಹಾರಾಜರ ಭಾವಚಿತ್ರ ಮೆರವಣಿಗೆ ಮಾಡಿ ಅವರ ಜನ್ಮದಿನ ಆಚರಿಸಿಕೊಂಡು ಬರುತ್ತಿದ್ದೇವೆ. ಮಹಾರಾಜರ ಹೆಸರು ಹೇಳಿಕೊಂಡು ಬದುಕುತ್ತಿದ್ದೇವೆ. ರಾಜಮಾತೆ ಪ್ರಮೋದಾದೇವಿ ಅವರಿಗೆ ಖಾತೆ ಮಾಡಿಕೊಟ್ಟರೆ ಇಡೀ ಗ್ರಾಮದವರು ಮೈಸೂರು ಅರಮನೆಗೆ ಹೋಗುತ್ತೇವೆ ಅವರೇ ನಮಗೆ ಅನ್ನ, ಬಟ್ಟೆ ಕೊಟ್ಟು ಸಾಕಲಿ. ಪ್ರಮೋದಾದೇವಿ ಅವರಿಗೆ ಖಾತೆ ಮಾಡಿ ಕೊಟ್ಟರೆ ಇಡೀ ಊರಿಗೆ ಊರೆ ಖಾಲಿ ಮಾಡಬೇಕಾಗುತ್ತೆ. ಮಕ್ಕಳು ಮರಿ ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು ಎಂದು ಸಿದ್ದಯ್ಯನಪುರ ಗ್ರಾಮಸ್ಥರು ಅಳಲು ತೋಡಿಕೊಂಡರು.
ಇದನ್ನೂ ಓದಿ: ಚಾಮರಾಜನಗರದ 4500 ಎಕರೆ ಭೂಮಿ ನಮ್ಮ ಸ್ವತ್ತು: ಪ್ರಮೋದಾದೇವಿ ಪತ್ರಕ್ಕೆ ಡಿಸಿ ಹೇಳಿದ್ದಿಷ್ಟು
ಬಳಿಕ, ಗ್ರಾಮಸ್ಥರು ಜಿಲ್ಲಾಧಿಕಾರಿ ಶಿಲ್ಪಾನಾಗ್ರನ್ನು ಭೇಟಿಯಾಗಿ, ಯಾವುದೇ ಕಾರಣಕ್ಕೂ ರಾಜಮಾತೆ ಪ್ರಮೋದದೇವಿಯವರ ಹೆಸರಿಗೆ ನಮ್ಮ ಗ್ರಾಮವನ್ನು ನೋಂದಣಿ ಮಾಡಿಕೊಡಬೇಡಿ. ಸಾಕಷ್ಟು ವರ್ಷಗಳಿಂದ ನಾವು ಸಿದ್ದಯ್ಯನಪುರ ಗ್ರಾಮದಲ್ಲಿ ವಾಸವಿದ್ದೇವೆ. ಈಗ, ಅವರು ಏಕಾಏಕಿಯಾಗಿ ಜಾಗ ವಾಪಸ್ಸು ಕೇಳಿದರೆ ಮಕ್ಕಳು- ಮರಿಯನ್ನು ಕಟ್ಟಿಕೊಂಡು ನಾವು ಎಲ್ಲಿಗೆ ಹೋಗುವುದು? ಜಯಚಾಮರಾಜೇಂದ್ರ ಒಡೆಯರ್ರವರು ಆಗ ನಮಗೆ ದಾನವಾಗಿ ನೀಡಿದ ಜಾಗವಿದು. ದಯಮಾಡಿ ನಮ್ಮ ಗ್ರಾಮವನ್ನು ಉಳಿಸಿಕೊಡಿ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿಕೊಂಡರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:32 pm, Fri, 11 April 25