ಚಾಮರಾಜನಗರದ 4500 ಎಕರೆ ಭೂಮಿ ನಮ್ಮ ಸ್ವತ್ತು: ಪ್ರಮೋದಾದೇವಿ ಪತ್ರಕ್ಕೆ ಡಿಸಿ ಹೇಳಿದ್ದಿಷ್ಟು
ಪ್ರಮೋದಾದೇವಿ ಒಡೆಯರ್ ಅವರು ಚಾಮರಾಜನಗರದ ೪೫೦೦ ಎಕರೆ ಭೂಮಿ ಮೈಸೂರು ಮಹಾರಾಜರ ಖಾಸಗಿ ಆಸ್ತಿ ಎಂದು ಹೇಳಿ ಅದನ್ನು ತಮ್ಮ ಹೆಸರಿಗೆ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಆದರೆ, ಅವರು ಯಾವುದೇ ಅಧಿಕೃತ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ತಹಶೀಲ್ದಾರ್ ವರದಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಚಾಮರಾಜನಗರ, ಏಪ್ರಿಲ್ 07: ಮಹಾರಾಜರಿಗೆ ಸೇರಿರುವ ಖಾಸಗಿ ಆಸ್ತಿ ತಮ್ಮ ಹೆಸರಿಗೆ ಮಾಡಿಕೊಡುವಂತೆ ರಾಜಮಾತೆ ಪ್ರಮೋದಾದೇವಿ ಒಡೆಯರ್ (Pramodadevi Wodeyar) ಅವರು ಬರೆದ ಪತ್ರಕ್ಕೆ ಚಾಮರಾಜನಗರ (Chamrajnagar) ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯಿಸಿದ್ದು, ಪ್ರಮೋದಾದೇವಿ ಒಡೆಯರ್ ಅವರು ಯಾವುದೇ ಅಧಿಕೃತ ದಾಖಲೆ ಸಲ್ಲಿಸಿಲ್ಲ. ಪರಿಶೀಲಿಸಿ ವರದಿ ನೀಡುವಂತೆ ಚಾಮರಾಜನಗರ ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಚಾಮರಾಜನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 4500 ಎಕರೆಗೂ ಹೆಚ್ಚು ಭೂಮಿ ಮೈಸೂರು ಮಹಾರಾಜರ ಸ್ವತ್ತು ಎಂದು ಪ್ರಮೋದಾದೇವಿ ಒಡೆಯರ್ ಪತ್ರ ಬರೆದಿದ್ದಾರೆ. ಈ ಭೂಮಿಯಲ್ಲಿ ದುರಸ್ತಿ, ಕಂದಾಯ ಗ್ರಾಮವಾಗಿ ಪರಿವರ್ತನೆ ಹಾಗೂ ಇನ್ನಿತರೆ ವಹಿವಾಟು ಮಾಡದಂತೆ ರಾಜಮಾತೆ ಪ್ರಮೋದಾದೇವಿ ತರಕಾರು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಸಿದ್ದಯ್ಯನಪುರ ಅರಣ್ಯ ಗ್ರಾಮವಾಗಿದೆ, ಇದರಿಂದ ಅನೇಕ ತೊಂದರೆಗಳಾಗಿವೆ. ಹೀಗಾಗಿ ಕಂದಾಯ ಗ್ರಾಮವಾಗಿ ಪರಿವರ್ತಿಸಲಾಗುತ್ತಿದೆ. ಇಲ್ಲಿರುವ ಭೂಮಿ ತಮ್ಮದೆಂದು ಯಾವುದೇ ಅಧಿಕೃತ ದಾಖಲೆ ಅಥವಾ ನ್ಯಾಯಾಲಯದ ಆದೇಶವನ್ನು ರಾಜಮಾತೆ ಪ್ರಮೋದಾದೇವಿಯವರು ಸಲ್ಲಿಸಿಲ್ಲ. ಚಾಮರಾಜನಗರ ತಹಶೀಲ್ದಾರ್ ವರದಿ ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪ್ರಮೋದಾದೇವಿ ಅಧಿಕೃತ ದಾಖಲೆ ಸಲ್ಲಿಸಿದಲ್ಲಿ ಪರಿಶೀಲಿಸಲಾಗುವುದು. ರಾಜ್ಯ ಸರ್ಕಾರದ ನಿರ್ದೇಶನ ಪಡೆದು ಮುಂದಿನ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ರಾಜಮಾತೆ ಪ್ರಮೋದಾದೇವಿ ಬರೆದ ಪತ್ರದಲ್ಲಿ ಏನಿದೆ?
“ಚಾಮರಾಜನಗರ ತಾಲೂಕಿನ ವಿವಿಧೆಡೆ 4,500 ಎಕರೆಗೂ ಹೆಚ್ಚು ಭೂಮಿ ಮೈಸೂರು ಮಹಾರಾಜರ ಖಾಸಗಿ ಸ್ವತ್ತಾಗಿದೆ. ಚಾಮರಾಜನಗರ ತಾಲೂಕಿನ ಅಟ್ಟುಗುಳಿಪುರ, ಉಮ್ಮತ್ತೂರು ಬೂದಿತಿಟ್ಟು, ಹರದನಹಳ್ಳಿ, ಚಾಮರಾಜನಗರ, ಕನ್ನಿಕೆರೆ ಬಸವಾಪುರ, ಕರಡಿಹಳ್ಳ್ಳ ಸರ್ವೆ ನಂಬರ್ ಗಳಲ್ಲಿರುವ 4,500 ಎಕರೆಗೂ ಹೆಚ್ಚು ಭೂಮಿ 1950ರ ಒಪ್ಪಂದದ ಪ್ರಕಾರ ಇದು ಮೈಸೂರು ಮಹಾರಾಜರ ಖಾಸಗಿ ಸ್ವತ್ತಾಗಿದೆ. ಖಾತೆ ಆಗುವ ತನಕ ದುರಸ್ತಿ, ಬೇರೆಯವರಿಗೆ ಖಾತೆ ಹಾಗೂ ಯಾವುದೇ ರೀತಿಯ ವಹಿವಾಟು ನಡೆಸಬಾರದು. ಈ ಭೂಮಿಯನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಪ್ರಮೋದಾದೇವಿಯವರು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:37 pm, Mon, 7 April 25