ವಿಧಾನಸಭೆ ಅಧಿವೇಶನಕ್ಕೆ ಇನ್ನೆರಡೇ ದಿನ ಬಾಕಿ: ಇಂದಾದರೂ ಹೊರಬೀಳುತ್ತಾ ಖಾತೆ ಹಂಚಿಕೆ ಪಟ್ಟಿ?

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮುಗಿದರೂ ಖಾತೆ ಹಂಚಿಕೆ ಇನ್ನೂ ಕಗ್ಗಂಟಾಗಿದೆ. ಅಧಿವೇಶನ ಆರಂಭಕ್ಕೆ ಎರಡು ದಿನ ಬಾಕಿ ಇರುವುದರಿಂದ ಇಂದಾದರೂ ಪಟ್ಟಿ ಹೊರಬೀಳುತ್ತಾ ಎಂಬ ಕುತೂಹಲ ಮೂಡಿದೆ. ಸಂಪುಟ ಸಭೆಯನ್ನೂ ಗುರುವಾರಕ್ಕೆ ಮುಂದೂಡಲಾಗಿದೆ. ಹೀಗಾಗಿ ಅದಕ್ಕೂ ಮುನ್ನ ಖಾತೆ ಹಂಚಿಕೆಯಾಗಬಹುದು ಎಂಬ ನಿರೀಕ್ಷೆ ಮೂಡಿದೆ.

ವಿಧಾನಸಭೆ ಅಧಿವೇಶನಕ್ಕೆ ಇನ್ನೆರಡೇ ದಿನ ಬಾಕಿ: ಇಂದಾದರೂ ಹೊರಬೀಳುತ್ತಾ ಖಾತೆ ಹಂಚಿಕೆ ಪಟ್ಟಿ?
ಸಚಿವರ ಪ್ರಮಾಣವಚನ ಸಂದರ್ಭದ ಚಿತ್ರ (ಸಾಂದರ್ಭಿಕ ಚಿತ್ರ)
Image Credit source: tv9
Edited By:

Updated on: Aug 11, 2026 | 8:12 AM

ಮುಖ್ಯಾಂಶಗಳು

  • ಅಧಿವೇಶನದೊಳಗೆ ಖಾತೆ ಹಂಚಿಕೆ ಪೂರ್ಣಗೊಳ್ಳುವ ಸುಳಿವು
  • ಗುರುವಾರಕ್ಕೆ ಸಂಪುಟ ಸಭೆ ಮುಂದೂಡಿಕೆ
  • ಕೆಲ ಸಚಿವರ ಖಾತೆ ಬದಲಾವಣೆ ಚರ್ಚೆ

ಬೆಂಗಳೂರು, ಆಗಸ್ಟ್ 11: ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಮುಗಿದಿದ್ದರೂ ಸಚಿವರಿಗೆ ಖಾತೆ ಹಂಚಿಕೆ ಮಾತ್ರ ಇನ್ನೂ ಅಂತಿಮವಾಗಿಲ್ಲ. ವಿಧಾನಮಂಡಲ ಅಧಿವೇಶನ ಆರಂಭಕ್ಕೆ ಇನ್ನೆರಡು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ, ಅಧಿವೇಶನದೊಳಗೆ ಖಾತೆ ಹಂಚಿಕೆ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೀಡಿರುವ ಸುಳಿವು ಕುತೂಹಲ ಮೂಡಿಸಿದೆ. ಹೀಗಾಗಿ ಇಂದಾದರೂ ಖಾತೆ ಹಂಚಿಕೆ ಪಟ್ಟಿ ಹೊರಬೀಳುತ್ತಾ ಎಂಬ ಚರ್ಚೆ ಜೋರಾಗಿದೆ.

ಇತ್ತೀಚೆಗೆ ದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ಡಿ.ಕೆ. ಶಿವಕುಮಾರ್ ನಡೆಸಿದ ಸರಣಿ ಮಾತುಕತೆ ಬಳಿಕ ಖಾತೆ ಹಂಚಿಕೆ ಪಟ್ಟಿ ಬಹುತೇಕ ಅಂತಿಮಗೊಂಡಿದೆ ಎನ್ನಲಾಗುತ್ತಿದೆ. ಆದರೆ ಕೇವಲ ಖಾತೆಗಳನ್ನು ಹಂಚಿಕೆ ಮಾಡಲಾಗುತ್ತದೆಯೇ ಅಥವಾ ಕೆಲವು ಸಚಿವರ ಖಾತೆಗಳನ್ನು ಅದಲುಬದಲು ಮಾಡಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇದರ ನಡುವೆ ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರ ಅಸಮಾಧಾನವೂ ಮುಂದುವರಿದಿದೆ. ಹೀಗಾಗಿ ಕೆಲ ಸಚಿವರ ಬದಲಾವಣೆ, ಹೊಸಬರಿಗೆ ಅವಕಾಶ ಹಾಗೂ ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ಸೇರಿದಂತೆ ಹಲವು ವಿಚಾರಗಳು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿವೆ ಎನ್ನಲಾಗುತ್ತಿದೆ.

ಸಂಪುಟ ಸಭೆ ಗುರುವಾರಕ್ಕೆ ಮುಂದೂಡಿಕೆ

ಶುಕ್ರವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ನಾಳೆ (ಆಗಸ್ಟ್ 12) ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಖಾತೆ ಹಂಚಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬಳಿಕವೇ ಪೂರ್ಣ ಪ್ರಮಾಣದ ಸಂಪುಟ ಸಭೆ ನಡೆಸಲು ಸರ್ಕಾರ ಮುಂದಾಗಿದೆ ಎಂಬ ಚರ್ಚೆ ಇದರಿಂದ ಮತ್ತಷ್ಟು ಬಲವಾಗಿದೆ.

ಅಧಿವೇಶನದೊಳಗೆ ಸಚಿವರಿಗೆ ಖಾತೆ ಹಂಚಿಕೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಮುಂದಿನ 24-48 ಗಂಟೆಗಳಲ್ಲಿ ಸರ್ಕಾರದೊಳಗಿನ ಖಾತೆ ಹಂಚಿಕೆ ಕಸರತ್ತು ಅಂತಿಮ ಹಂತ ತಲುಪುವ ಸಾಧ್ಯತೆಯಿದೆ.

ಮುನಿಯಪ್ಪ, ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಚರ್ಚೆ

ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಹಂಚಿಕೆಯಾಗಿರುವ ಖಾತೆಗಳ ಬಗ್ಗೆ ಅಸಮಾಧಾನವಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಹೀಗಾಗಿ ಈ ಇಬ್ಬರು ಸಚಿವರ ಖಾತೆಗಳು ಅದಲುಬದಲಾಗುವ ಸಾಧ್ಯತೆಯ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ.

ಇದರ ಜತೆಗೆ ಕೆ.ಎಚ್. ಮುನಿಯಪ್ಪ ಅವರ ಬದಲಿಗೆ ಅವರ ಪುತ್ರಿ ರೂಪಾ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಯ ಕುರಿತೂ ಚರ್ಚೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ನಿರ್ಧಾರ ಹೊರಬಿದ್ದಿಲ್ಲ.

ಖಾತೆ ಹಂಚಿಕೆ ವಿಳಂಬಕ್ಕೆ ವಿಪಕ್ಷಗಳ ಟೀಕೆ

ಖಾತೆ ಹಂಚಿಕೆ ವಿಳಂಬವಾಗುತ್ತಿರುವುದನ್ನು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಟೀಕಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೈಕಮಾಂಡ್ ಮೇಲೆ ಅವಲಂಬಿತರಾಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಇದೇ ವಿಚಾರವಾಗಿ ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ಕೂಡ ಡಿ.ಕೆ. ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಒಂದು ಖಾತೆ ಹಂಚಿಕೆ ಮಾಡುವ ಅಧಿಕಾರವೂ ಇಲ್ಲದಿದ್ದರೆ ಮುಖ್ಯಮಂತ್ರಿ ಹುದ್ದೆ ಯಾರಿಗೆ ಬೇಕು ಎಂದು ಅವರು ಟೀಕಿಸಿದ್ದಾರೆ.

ಸಚಿವರಿಗೆ ಸ್ವಾಗತ, ಸಚಿವ ಸ್ಥಾನ ವಂಚಿತರಿಗೆ ಪ್ರತಿಭಟನೆ

ಹೊಸದಾಗಿ ಸಚಿವರಾದವರನ್ನು ಅವರ ಬೆಂಬಲಿಗರು ಅದ್ಧೂರಿಯಾಗಿ ಸ್ವಾಗತಿಸುತ್ತಿರುವ ಬೆನ್ನಲ್ಲೇ, ಸಚಿವ ಸ್ಥಾನ ಸಿಗದ ಶಾಸಕರ ಬೆಂಬಲಿಗರ ಅಸಮಾಧಾನವೂ ಮುಂದುವರಿದಿದೆ. ಅರಸೀಕೆರೆಯಲ್ಲಿ ಸಚಿವ ಶಿವಲಿಂಗೇಗೌಡ ಅವರಿಗೆ ಅಭಿಮಾನಿಗಳು ಭವ್ಯ ಸ್ವಾಗತ ನೀಡಿದರೆ, ಮೈಸೂರಿನಲ್ಲಿ ತನ್ವೀರ್ ಸೇಠ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ಖಾತೆ ಹಂಚಿಕೆ ಕಗ್ಗಂಟು: ದೆಹಲಿಯಲ್ಲಿ ತಡರಾತ್ರಿ ಖರ್ಗೆ ಭೇಟಿಯಾದ ಡಿಕೆಶಿ, ಇಂದು ಸಂಜೆಯೇ ಪಟ್ಟಿ ಫೈನಲ್ ಸಾಧ್ಯತೆ

ಹೀಗಾಗಿ ಸಂಪುಟ ವಿಸ್ತರಣೆ ಮುಗಿದರೂ ಖಾತೆ ಹಂಚಿಕೆ ಮಾತ್ರ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಸವಾಲಾಗಿ ಪರಿಣಮಿಸಿದೆ. ಅಧಿವೇಶನ ಆರಂಭಕ್ಕೂ ಮುನ್ನ ಈ ಕಗ್ಗಂಟು ಬಗೆಹರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us