ಬಜೆಟ್ ಅಧಿವೇಶನಕ್ಕೂ ಮುನ್ನ ಸಂಪುಟ ಪುನರ್​ರಚನೆ, ನಾಗೇಂದ್ರ ಮರು ಸೇರ್ಪಡೆಗೆ ಸಿದ್ದರಾಮಯ್ಯ ಒಲವು

| Updated By: Ganapathi Sharma

Updated on: Jan 17, 2025 | 8:49 AM

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆ ಚರ್ಚೆ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆ ಇದೆ. ಸಚಿವರ ಬಹಿರಂಗ ಹೇಳಿಕೆಗಳು ಮತ್ತು ಅಧಿಕಾರ ಹಂಚಿಕೆ ವಿವಾದಗಳಿಂದಾಗಿ ಸಿಎಂ ಸಿದ್ದರಾಮಯ್ಯ ಸಂಪುಟ ಪುನರ್ ರಚನೆ ಬಗ್ಗೆ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ಡಿಸಿಎಂ ಡಿಕೆ ಶಿವಕುಮಾರ್ ಮಾರ್ಚ್ ವರೆಗೆ ಸಂಪುಟ ಪುನಾರಚನೆಗೆ ಆಸಕ್ತಿ ತೋರಿಲ್ಲ ಎಂದೂ ಮೂಲಗಳು ತಿಳಿಸಿವೆ.

ಬಜೆಟ್ ಅಧಿವೇಶನಕ್ಕೂ ಮುನ್ನ ಸಂಪುಟ ಪುನರ್​ರಚನೆ, ನಾಗೇಂದ್ರ ಮರು ಸೇರ್ಪಡೆಗೆ ಸಿದ್ದರಾಮಯ್ಯ ಒಲವು
ಬಜೆಟ್ ಅಧಿವೇಶನಕ್ಕೂ ಮುನ್ನ ಸಂಪುಟ ಪುನರ್​ರಚನೆಗೆ ಸಿದ್ದರಾಮಯ್ಯ ಒಲವು
Follow us on

ಬೆಂಗಳೂರು, ಜನವರಿ 17: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆ, ಕೆಪಿಸಿಸಿ ನಾಯಕತ್ವ ಬದಲಾವಣೆ ಸಂಬಂಧ ಆಗಾಗ ಹೇಳಿಕೆಗಳು, ಪ್ರತಿ ಹೇಳಿಕೆಗಳು ಮುನ್ನೆಲೆಗೆ ಬರುತ್ತಲೇ ಇವೆ. ಕಾಂಗ್ರೆಸ್ ನಾಯಕರು ಒಂದೊಂದೇ ದಾಳವನ್ನು ಉರುಳಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ, ಬಹಿರಂಗ ಹೇಳಿಕೆ ನೀಡುತ್ತಿರುವ ಸಚಿವರ ಬದಲಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ತೋರಿದ್ದಾರೆ ಎನ್ನಲಾಗಿದೆ.

ಮುಂಬರುವ ಬಜೆಟ್ ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ಪುನರ್ ರಚನೆ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡಿರುವ ನಾಗೇಂದ್ರರನ್ನು ಸಂಪುಟಕ್ಕೆ ಪುನರ್ ಸೇರ್ಪಡೆಗೊಳಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಒಲವು ಹೊಂದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದರೊಂದಿಗೆ, ಬಹಿರಂಗ ಹೇಳಿಕೆ ನೀಡುತ್ತಿರುವ ಸಚಿವರಿಗೂ ಬದಲಾವಣೆ ತೂಗುಗತ್ತಿ ಕಾದಿದೆಯಾ ಎಂಬ ಅನುಮಾನ ಮೂಡಿದೆ.

ಅನಗತ್ಯ ಹೇಳಿಕೆಗಳಿಂದ ಗೊಂದಲ ಸೃಷ್ಟಿಸುವವರಿಗೆ ಕಾದಿದೆ ಸಂಕಷ್ಟ

ಕೆಲವು ಮಂದಿ ಸಚಿವರ ಖಾತೆ ಬದಲಾವಣೆಗೂ ಕಾಂಗ್ರೆಸ್​​ನಲ್ಲಿ ಗಂಭೀರ ಚಿಂತನೆ ನಡೆದಿದೆ. ಅನಗತ್ಯ ಹೇಳಿಕೆ ಕೊಟ್ಟು ಗೊಂದಲ ಸೃಷ್ಟಿಸುತ್ತಿರುವ ಸಚಿವರನ್ನು ಸಂಪುಟದಿಂದ ಕೈ ಬಿಡಲು ಹೈಕಮಾಂಡ್​ಗೆ ಒತ್ತಡ ಹೇರಲು ರಾಜ್ಯದ ಉನ್ನತ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ. ಕೆಪಿಸಿಸಿಯಿಂದ ಕಿರಿಕ್ ಸಚಿವರ ವಿರುದ್ಧ ಹೈಕಮಾಂಡ್​​ಗೆ ಅಸಮಾಧಾನ ದಾಖಲಿಸಲಾಗಿದೆ ಎಂದೂ ಕೆಲವು ಮೂಲಗಳು ತಿಳಿಸಿವೆ.

ಮಾರ್ಚ್​ ವರೆಗೆ ಸಂಪುಟ ಪುನರ್​ ರಚನೆ ಬಗ್ಗೆ ಡಿಕೆ ಶಿವಕುಮಾರ್​ಗಿಲ್ಲ ಒಲವು

ಆದರೆ, ಡಿಸಿಎಂ ಡಿಕೆ ಶಿವಕುಮಾರ್​ ಮುಂದಿನ ಮಾರ್ಚ್ ವರೆಗೂ ಸಂಪುಟ ಪುನರ್ ರಚನೆಗೆ ಬಗ್ಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ. ಹೆಚ್ಚುವರಿ ಡಿಸಿಎಂ‌ ಕೂಗು, ಖಾತೆ ವಿಚಾರಗಳು ಅನಗತ್ಯ ಮುನ್ನಲೆಗೆ ಬರುವ ಆತಂಕದಿಂದ ಪುನರ್ ರಚನೆಗೆ ಬಗ್ಗೆ ಅವರು ಒಲವು ತೋರುತ್ತಿಲ್ಲ.

ಇದನ್ನೂ ಓದಿ: ಅಹಿಂದ ನಾಯಕರು ಪ್ರಶ್ನೆ ಮಾಡುತ್ತಿರುವುದು ನನ್ನನ್ನಲ್ಲ ಖರ್ಗೆಯನ್ನೇ: ಹೊಸ ದಾಳ ಉರುಳಿಸಿದ ಡಿಕೆ ಶಿವಕುಮಾರ್

ಆದರೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರ ಕೆಲವು ನಾಯಕರು ಸಂಪುಟ ಪುನರ್ ರಚನೆ ಅಸ್ತ್ರದ ಮೂಲಕ ಕೆಲ ಸಚಿವರ ಆಟಾಟೋಪಕ್ಕೆ ಬ್ರೇಕ್ ಹಾಕಲು ಹೈಕಮಾಂಡ್​ಗೆ ಒತ್ತಡ ಹೇರುತ್ತಿದ್ದಾರೆ. ಸಂಪುಟ ಪುನರ್ ರಚನೆ ಕಸರತ್ತಿನ ಮೂಲಕ ಅಧಿಕಾರ ಹಂಚಿಕೆ ಕಿತ್ತಾಟಕ್ಕೆ ತಾತ್ಕಾಲಿಕ ಬ್ರೇಕ್ ಹಾಕುವ ಯೋಚನೆ ಅವರದ್ದಾಗಿದೆ.

ಸಿಎಂ ಅತ್ಯಾಪ್ತರಿಗೆ ಕೊಕ್?

ಸಂಪುಟ ಪುನರ್ ರಚನೆ ವೇಳೆ ಸಿಎಂ ಸಿದ್ದರಾಮಯ್ಯ ಅವರ ಇಬ್ಬರು ಅಥವಾ ಮೂವರು ಅತ್ಯಾಪ್ತರಿಗೂ ಕೋಕ್ ನೀಡುವ ಸಾಧ್ಯತೆ ಇದೆ. ಈ ಮೂಲಕ ಸಿಎಂ, ಡಿಸಿಎಂ ಸ್ಥಾನ ಅಲುಗಾಡದಂತೆ ಹೈಕಮಾಂಡ್ ತಂತ್ರ ಹೆಣೆಯುತ್ತಿದೆ. ಈಗಾಗಲೇ ಸಚಿವರ ಕಾರ್ಯವೈಖರಿ ಬಗ್ಗೆ ಹೈಕಮಾಂಡ್ ರಿಪೋರ್ಟ್ ಪಡೆದಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಿಂದಲೂ ಪ್ರತ್ಯೇಕ ರಿಪೋರ್ಟ್ ತರಿಸಿಕೊಂಡಿದೆ. ಸಿಎಂ, ಡಿಸಿಎಂ ರಿಂದಲೂ ಪ್ರತ್ಯೇಕ ರಿಪೋರ್ಟ್ ಸಲ್ಲಿಕೆಯಾಗಿದೆ. ಅವುಗಳ ಎಲ್ಲದರ ಆಧಾರದಲ್ಲಿ ಸೂಕ್ತ ತಂತ್ರ ಹೆಣೆಯುತ್ತಿದೆ ಎಂದು ಮೂಲಗಳು ಹೇಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ