ಸಿಎಂ ಮನೇಲಿ ಡಿಸಿಎಂ ಜೊತೆ ಬ್ರೇಕ್‌ಫಾಸ್ಟ್ ಮೀಟಿಂಗ್ ಆಯ್ತು: ಇಂದು ಡಿಕೆಶಿ ನಿವಾಸದಲ್ಲಿ ಸಿದ್ದರಾಮಯ್ಯಗೆ ನಾಟಿಕೋಳಿ ಆಹಾರ!
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ವಿಚಾರ ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಂತಃಕಲಹ ಸೃಷ್ಟಿಸಿದ್ದು, ಇತ್ತೀಚಿನ ಬ್ರೇಕ್‌ಫಾಸ್ಟ್ ಸಭೆಗಳು ಒಗ್ಗಟ್ಟು ಪ್ರದರ್ಶಿಸುವ ಯತ್ನ ಎನ್ನಲಾಗಿದೆ. ಇಂದು ಡಿಕೆ ಶಿವಕುಮಾರ್ ನಿವಾಸದಲ್ಲಿ ಸಿದ್ದರಾಮಯ್ಯಗೆ ಬ್ರೇಕ್‌ಫಾಸ್ಟ್ ಆಯೋಜಿಸಲಾಗಿದೆ. ಈ ಮಧ್ಯೆ ವಿಪಕ್ಷಗಳು ಈ ಸಭೆಗಳನ್ನು ರಷ್ಯಾ-ಉಕ್ರೇನ್ ಕದನ ವಿರಾಮಕ್ಕೆ ಹೋಲಿಸಿ ಟೀಕಿಸಿವೆ.

ಬೆಂಗಳೂರು, ಡಿಸೆಂಬರ್ 2: ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕರ್ನಾಟಕ ಕಾಂಗ್ರೆಸ್ನ ಜೋಡೆತ್ತುಗಳು ಎಂದೇ ಫೇಮಸ್. ಆದರೆ ಅಧಿಕಾರ ಹಂಚಿಕೆ ವಿಚಾರ ಇಬ್ಬರ ನಡುವಿನ ಅಂತಃಕಹಲದ ಬೇಗುದಿಯನ್ನು ಹಾದಿರಂಪ ಬೀದಿ ರಂಪ ಮಾಡಿದೆ. ಇನ್ನೂ ಕೂಡಾ ಕೈ ಮನೆಯ ಕುದಿ ಒಳಗೊಳಗೆ ಕೊತ ಕೊತ ಕುದಿಯುತ್ತಿದೆ. ಹೀಗಿರುವಾಗಲೇ ಶನಿವಾರ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಸೂಚನೆ ಮೇರೆಗೆ ಡಿಸಿಎಂ ಡಿಕೆ ಶಿವಕುಮಾರ್ಗೆ ತಮ್ಮ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ ಆಯೋಜಿಸಿದರು. ಇಡ್ಲಿ ವಡೆ, ಕೇಸರಿ ಬಾತ್, ಉಪ್ಪಿಟ್ಟು ಸವಿದು ಒಟ್ಟಿಗೆ ಫೋಟೋಗೆ ಫೋಸ್ ಕೊಟ್ಟಿದ್ದರು. ತಿಂಡಿ ಬಳಿಕ ಸುಮಾರು 45 ನಿಮಿಷಗಳ ಕಾಲ ಚರ್ಚಿಸಿ ಹೊರಗೆ ಬಂದವರೇ, ನಮ್ಮಲ್ಲಿ ಗೊಂದಲ ಇಲ್ಲ ಎಂದು ಒಗ್ಗಟ್ಟು ಪ್ರದರ್ಶನ ಮಾಡಿದ್ದರು. ಇದೀಗ ಡಿಕೆ ಶಿವಕುಮಾರ್ ಹೇಳಿದಂತೆಯೇ, ಇಂದು ಅವರ ನಿವಾಸದಲ್ಲಿ ಸಿಎಂಗಾಗಿ ಬೆಳಗ್ಗೆ 9:30ಕ್ಕೆ ಬ್ರೇಕ್‌ಫಾಸ್ಟ್ ಆಯೋಜಿಸಿದ್ದಾರೆ. ಸಿದ್ದರಾಮಯ್ಯಗೆ ಇಷ್ಟವಾದ ನಾಟಿ ಕೋಳಿ ರೆಸಿಪಿಯನ್ನೇ ರೆಡಿ ಮಾಡಿಸಲಾಗುತ್ತಿದೆಯಂತೆ.
ಡಿಕೆ ಶಿವಕುಮಾರ್ ಹೇಳಿದ್ದೇನು?
ನಾನು ಮತ್ತು ಮುಖ್ಯಮಂತ್ರಿಗಳು ಒಟ್ಟಾಗಿ, ಒಂದು ತಂಡವಾಗಿ ಕೆಲಸ ಮಾಡುತ್ತೇವೆ. ಅದನ್ನು ಮುಂದುವರಿಸುತ್ತೇವೆ. ಕರ್ನಾಟಕಕ್ಕೆ ನಾವು ನೀಡಿದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ, ನಮ್ಮ ಸಾಮೂಹಿಕ ಪ್ರಯತ್ನಗಳ ಬಲ ಹೆಚ್ಚಿಸುವ ಕುರಿತು ಚರ್ಚಿಸಲು ಮಾನ್ಯ ಮುಖ್ಯಮಂತ್ರಿಗಳನ್ನು ಉಪಾಹಾರಕ್ಕೆ ಆಹ್ವಾನಿಸಿದ್ದೇನೆ ಎಂದು ಡಿಕೆ ಶಿವಕುಮಾರ್ ಸೋಮವಾರ ತಿಳಿಸಿದ್ದರು.
ಸಿಎಂ ಹಾಗೂ ಡಿಸಿಎಂ ನಡುವಣ ಈ ಸಭೆಗಳು ಗೊಂದಲ ಬಗೆಹರಿಯುತ್ತಿರುವುದರ ಮುನ್ಸೂಚನೆ ಎಂದು ಕಾಂಗ್ರೆಸ್ ಪಡೆ ನಂಬಿದೆ. ಹೀಗಾಗಿ ಮಾಜಿ ಸಂಸದ ಡಿಕೆ ಸುರೇಶ್, ಎಲ್ಲ ಸಸೂತ್ರವಾಗಿ ನಡೀತಿದೆ. ಬ್ರೇಕ್‌ಫಾಸ್ಟ್ ಆಗ್ತಿದೆ ಎಂದಿದ್ದಾರೆ. ಮತ್ತೊಂದೆಡೆ ಸಚಿವ ದಿನೇಶ್ ಗುಂಡೂರಾವ್, ಇದು ರಾಜಕೀಯಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದಿದ್ದಾರೆ.
ಪ್ರತಿಪಕ್ಷಗಳ ಟೀಕೆಗೆ ಅಸ್ತ್ರವಾದ ಬ್ರೇಕ್‌ಫಾಸ್ಟ್ ಮೀಟಿಂಗ್ಗಳು
ಕಾಂಗ್ರೆಸ್ ನಾಯಕರ ಈ ಬ್ರೇಕ್‌ಫಾಸ್ಟ್ ಮೀಟಿಂಗ್ ವಿಪಕ್ಷಗಳಿಗೆ ಅಸ್ತ್ರವಾಗಿ ಸಿಕ್ಕಿದೆ. ಮಾಜಿ ಸಚಿವ ಶ್ರೀರಾಮುಲು, ಕೈ ದಿಗ್ಗಜರ ನಡುವಿನ ಸಂಧಾನವನ್ನ ರಷ್ಯಾ-ಉಕ್ರೇನ್ ಕದನ ವಿರಾಮಕ್ಕೆ ಹೋಲಿಸಿದ್ದಾರೆ. ಯಾರು? ಯಾವಾಗ ಬಾಂಬ್ ಹಾಕ್ತಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:38 am, Tue, 2 December 25



