5 ಗ್ಯಾರಂಟಿ ಜಾರಿಯಾಗುವ ಟೈಂ ಬಂದೇ ಬಿಡ್ತು, ಶುಭ ಶುಕ್ರವಾರದಂದೇ ಜನರಿಗೆ ಫ್ರೀ ಗಿಫ್ಟ್ ಕೊಡಲು ತೀರ್ಮಾನ
ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿ ಜಾರಿಗೆಗೆ ನಿನ್ನೆಯೇ(ಜೂನ್ 01) ಅಂತಿಮ ಕಸರತ್ತುಗಳು ನಡೆದಿದ್ದು. ಘೋಷಣೆಗೆ ಕ್ಷಣಗಣನೇ ಶುರುವಾಗಿದೆ. ಇಂದು (ಜೂನ್ 02) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಲಿದ್ದು, ಸಂಪುಟ ಸಭೆಯ ಬಳಿಕ ಖುದ್ದು ಸಿದ್ದರಾಮಯ್ಯ ಅವರೇ ಗ್ಯಾರಂಟಿ ಘೋಷಣೆ ಮಾಡಲಿದ್ದಾರೆ.
ಬೆಂಗಳೂರು: ಒಂದಲ್ಲ ಎರಡಲ್ಲ ಐದು ಗ್ಯಾರಂಟಿ(Five guarantees ). ವಿಧಾನಸಭೆ ಚುನಾವಣೆಯಲ್ಲಿ(Karnataka Assembly Elections 2023) ಕಾಂಗ್ರೆಸ್ಗೆ ಪ್ರಚಂಡ ಗೆಲುವು ನೀಡಿದ ಗ್ಯಾರಂಟಿ.. ಇಡೀ ರಾಜ್ಯಕ್ಕೆ ರಾಜ್ಯವೇ ಎದುರು ನೋಡುತ್ತಿರುವ ಗ್ಯಾರಂಟಿ. ಹಾದಿ ಬೀದಿಯಲ್ಲಿ ಚರ್ಚೆ ಆಗುತ್ತಿರುವ ಗ್ಯಾರಂಟಿ. ಇದೀಗ ಇದೇ ಗ್ಯಾರಂಟಿ ಘೋಷಣೆಗೆ ಕ್ಷಣಗಣನೇ ಶುರುವಾಗಿದೆ. ಕಾಂಗ್ರೆಸ್(Congress) ಸರ್ಕಾರ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಸಿಎಂ ಆಗಿ, ಡಿಕೆ ಶಿವಕುಮಾರ್ ಡಿಸಿಎಂ ಆಗಿ 13ನೇ ದಿನದ ಬಳಿಕ ಅಂದ್ರೆ ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿ ಜಾರಿ ಆಗುವ ಟೈಂ ಬಂದೇ ಬಿಟ್ಟಿದೆ. ಇಂದು ಶುಭ ಶುಕ್ರವಾರದ ದಿನ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಇವತ್ತಿನ ಸಭೆಯಲ್ಲೇ ಐದು ಗ್ಯಾರಂಟಿಗಳಿಗೆ ಅಂತಿಮ ಮುದ್ರೆ ಬೀಳಲಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಬಳಿಕ ಗ್ಯಾರಂಟಿ ಘೋಷಣೆಗೆ ಸಜ್ಜಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಎಲ್ಲಾ ಇಲಾಖೆ ಜತೆ ಸಭೆ ನಡೆಸಿದ್ದು, ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ. ರಾಜ್ಯದ ಜನರಿಗೆ ಫ್ರೀ ಗಿಫ್ಟ್ ಕೊಡಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಮಹಿಳೆಯರ ಫ್ರೀ ಬಸ್‌ಪಾಸ್, ಮನೆ ಒಡತಿಯರ ಅಕೌಂಟ್‌ಗೆ 2 ಸಾವಿರ ಹಣ, 200 ಯೂನಿಟ್ ಉಚಿತ ವಿದ್ಯುತ್, ನಿರುದ್ಯೋಗ ಭತ್ಯೆ ಹಾಗೂ ಫ್ರೀ 10 ಕೆಜಿ ಅಕ್ಕಿ ವಿತರಣೆ ಬಗ್ಗೆ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಲಿದೆ.
ಸಂಪುಟ ಸಭೆಗೂ ಮುನ್ನ ಅಧಿಕಾರಿಗಳ ಜೊತೆ ಸಭೆ
ಇನ್ನೂ ಇಂದು ಬೆಳಗ್ಗೆ 11 ಕ್ಯಾಬಿನೆಟ್ ಸಭೆ ನಿಗಧಿಯಾಗಿದ್ದು, ಈ ಸಭೆಗೂ ಮುನ್ನ ಸಿಎಂ ಸಿದ್ದರಾಮಯ್ಯ ಹಿರಿಯ ಅಧಿಕಾರಿಗಳ ಜತೆ ಫೈನಲ್ ಮೀಟಿಂಗ್ ಮಾಡಲಿದ್ದಾರೆ.. ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ, ವಿಶೇಷ ಅಧಿಕಾರಿಗಳ ಜತೆ ಚರ್ಚಿಸಲಿದ್ದಾರೆ. ಗ್ಯಾರಂಟಿ ಯೋಜನೆಗಳ ಆರ್ಥಿಕ ನೀಲಿನಕ್ಷೆ, ಅನುಷ್ಠಾನದ ನೀಲಿನಕ್ಷೆ ಬಗ್ಗೆ ಚರ್ಚಿಸಲಿದ್ದಾರೆ.
ಸಿಎಂ ಈಗಾಗಲೇ ಇಲಾಖಾವಾರು ಸಂಪೂರ್ಣ ಮಾಹಿತಿ ಪಡೆದಿದ್ದು, ಕ್ಯಾಬಿನೆಟ್ ಸಭೆಯಲ್ಲಿ ವ್ಯಕ್ತವಾಗುವ ಉತ್ತಮ ಅನುಷ್ಠಾನದ ಐಡಿಯಾವನ್ನ ಜಾರಿ ಮಾಡುವ ಸಾಧ್ಯತೆಯಿದೆ. ಸಭೆಯಲ್ಲಿ ಐದೂ ಗ್ಯಾರಂಟಿ ಯೋಜನೆ ಸ್ಪಷ್ಟತೆ ಸಿಕ್ಕರೆ ಎಲ್ಲ ಯೋಜನೆ ಘೋಷಣೆ ಸಾಧ್ಯತೆ ಇದೆ. ಇಲ್ಲವಾದಲ್ಲಿ ಅನ್ನಭಾಗ್ಯ, ಗೃಹ ಜ್ಯೋತಿ ಮತ್ತು ಯುವನಿಧಿ ಯೋಜನೆಗಳನ್ನ ಘೋಷಣೆ ಸಾಧ್ಯತೆಯಿದೆ ಎನ್ನಲಾಗಿದೆ. ಉಳಿದ ಗೃಹ ಲಕ್ಷ್ಮೀ, ಮಹಿಳೆಯರ ಫ್ರೀ ಬಸ್‌ಪಾಸ್ ಗ್ಯಾರಂಟಿಗಳನ್ನ ಎರಡನೇ ಹಂತದಲ್ಲಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನೂ ಐದು ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಇಲಾಖೆ ಅಧಿಕಾರಿಗಳು ಇವತ್ತು ಸರ್ಕಾರಕ್ಕೆ ವರದಿ ನೀಡಲಿದ್ದಾರೆ. ಒಟ್ಟಿನಲ್ಲಿ ಇಂದಿನ ಸಚಿವ ಸಂಪುಟ ಸಭೆ ತೀವ್ರ ಕುತಹಲ ಮೂಡಿಸಿದ್ದು, ಏನೆಲ್ಲಾ ಉಚಿತವಾಗಿ ಸಿಗಲಿದೆ ಎನ್ನುವುದನ್ನ ತಿಳಿದುಕೊಳ್ಳಲು ರಾಜ್ಯದ ಜನತೆ ಕಾತರರಾಗಿದ್ದಾರೆ.
Published On - 7:07 am, Fri, 2 June 23