ಸಿದ್ದರಾಮಯ್ಯ ಹೆಲಿಕಾಪ್ಟರ್​ ಹಾರಾಟ ಬಲು ದುಬಾರಿ: ಕೋಟ್ಯಂತರ ರೂ.ವೆಚ್ಚ, ಎಷ್ಟು ಗೊತ್ತಾ?

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಈವರೆಗೆ ಅಂದರೆ ಎರಡೂವರೆ ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಮಾನ ಹಾಗೂ ಹೆಲಿಕಾಪ್ಟರ್​​ ಪ್ರಯಾಣ ವೆಚ್ಚದ ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಪ್ರವಾಸಕ್ಕೆ ಹೆಚ್ಚಾಗಿ ವಿಮಾನ ಮತ್ತು ಹೆಲಿಕಾಪ್ಟರ್​​ನಲ್ಲೇ ಹೋಗುತ್ತಾರೆ. ಹೀಗಾಗಿ 2023ರಿಂದ 2025ರ ನವೆಂಬರ್ ವರೆಗೂ ಸಿಎಂ ಸಿದ್ದರಾಮಯ್ಯನವರ ವಿಮಾನ ಹಾಗೂ ಹೆಲಿಕಾಪ್ಟರ್ ಪ್ರಯಾಣದ​​ ವೆಚ್ಚ ಹುಬ್ಬೇರುವಂತೆ ಮಾಡಿದೆ. ಹಾಗಾದ್ರೆ, ಸಿಎಂ ಆಗಸದಲ್ಲಿ ಪ್ರಯಾಣಕ್ಕೆ ಇಲ್ಲಿಯವರೆಗೂ ಎಷ್ಟು ಸರ್ಕಾರ ಬೊಕ್ಕಸದಿಂದ ಖರ್ಚಾಗಿದೆ ಎನ್ನುವ ವಿವರ ಈ ಕೆಳಗಿನಂತಿದೆ

ಸಿದ್ದರಾಮಯ್ಯ ಹೆಲಿಕಾಪ್ಟರ್​ ಹಾರಾಟ ಬಲು ದುಬಾರಿ: ಕೋಟ್ಯಂತರ ರೂ.ವೆಚ್ಚ, ಎಷ್ಟು ಗೊತ್ತಾ?
Siddaramaiah
Updated By: ರಮೇಶ್ ಬಿ. ಜವಳಗೇರಾ

Updated on: Dec 11, 2025 | 3:11 PM

ಬೆಳಗಾವಿ, (ಡಿಸೆಂಬರ್ 11):  ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ವಿಮಾನ ಹಾಗೂ ಹೆಲಿಕಾಪ್ಟರ್​​ (helicopter And flight) ಪ್ರವಾಸದ ವೆಚ್ಚ ಅಚ್ಚರಿ ಮೂಡಿಸಿದೆ. ಹೌದು…2023ರಿಂದ 2025ರ ನವೆಂಬರ್ ವರೆಗೆ ಸಿಎಂ ಸಿದ್ದರಾಮಯ್ಯ ವಿಮಾನ ಮತ್ತು ಹೆಲಿಕಾಪ್ಟರ್​ ಪ್ರಯಾಣಕ್ಕೆ ಸರ್ಕಾರಿ ಬೊಕ್ಕಸದಿಂದ 47 ಕೋಟಿ ರೂಪಾಯಿ (47,38,24,347) ವೆಚ್ಚವಾಗಿದೆ. ಈ ಹಿಂದೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಕಾವೇರಿ ನಿವಾಸ ನವೀಕರಣದಿಂದ ಸುದ್ದಿಯಾಗಿದ್ದ ಸಿಎಂ, ಇದೀಗ ಆಗಸದಲ್ಲಿ ಓಡಾಟಕ್ಕೆ ಕೋಟ್ಯಾಂತರ ರೂ. ಸರ್ಕಾರದ ಹಣ ಖರ್ಚಾಗಿದೆ.

ಇಂದು (ಡಿಸೆಂಬರ್ 11) ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ವಿಧಾನಪರಿಷತ್ ಸದಸ್ಯ ರವಿಕುಮಾರ್ ಚುಕ್ಕೆ ರಹಿತ ಪ್ರಶ್ನೆಗೆ ಸರ್ಕಾರದಿಂದ ಉತ್ತರ ಬಂದಿದ್ದು, ಸಿದ್ದರಾಮಯ್ಯ ವಿಮಾನಯಾನಕ್ಕೆ 47 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಪರಿಷತ್​​ ಸದನದಲ್ಲಿ ಮಾಹಿತಿ ನೀಡಿದೆ. ಸಿದ್ದರಾಮಯ್ಯನವರು ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಹೋಗಲು ಹೆಲಿಕಾಪ್ಟರ್, ವಿಮಾನ ಬಳಕೆ ಮಾಡುತ್ತಾರೆ. ಹಾಗೇ‌ ದೆಹಲಿ, ಹೈದರಾಬಾದ್, ಚೆನ್ನೈ ಸೇರಿದಂತೆ ವಿವಿದೆಡೆ ಓಡಾಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ಬೊಕ್ಕಸದಿಂದ 47 ಕೋಟಿ ರೂಪಾಯಿ ಖರ್ಚಾಗಿದೆ.

ಇದನ್ನೂ ನೋಡಿ: ಬೆಂಗಳೂರು ಬಿಟ್ಟು ಮೈಸೂರಿನಲ್ಲೇ ಸಿದ್ದರಾಮಯ್ಯ ಮನೆ ಕಟ್ಟಿದ್ಯಾಕೆ? ಅಶೋಕ್ ಕೊಟ್ರು ಹೀಗೊಂದು ಕಾರಣ

ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಪ್ರಯಾಣಕ್ಕೆ 2023-24ರಲ್ಲಿ 12.65 ಕೋಟಿ ರೂ. ಮತ್ತು 2024-25ರ ಜನವರಿ 15 ರವರೆಗೆ 19.35 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಇನ್ನೂ ಅಚ್ಚರಿ ಅಂದರೆ ಬೆಂಗಳೂರಿನಿಂದ ಕೇವಲ 1.5 ಗಂಟೆ ಪ್ರಯಾಣದಂತಹ ಮೈಸೂರಿನ ಹತ್ತಿರದ ಸ್ಥಳಗಳಿಗೂ ಸಿಎಂ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಿದ್ದಾರೆ.

ವಿಮಾನ ನಿಲ್ದಾಣಗಳಿರುವ ಹುಬ್ಬಳ್ಳಿ, ಕಲಬುರಗಿ, ಮೈಸೂರು, ಬೆಳಗಾವಿಯಂತಹ ಜಿಲ್ಲಾ ಪ್ರವಾಸದ ವೇಲೆ ಹೆಚ್ಚಾಗಿ ವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ. ಇನ್ನು ಇತರೆ ವಿಮಾನ ನಿಲ್ದಾಣಗಳು ಇಲ್ಲದ ಜಿಲ್ಲೆಗಳಿಗೆ ತೆರಳಬೇಕಿದ್ದರೆ ವಿಶೇಷ ಹೆಲಿಕಾಪ್ಟರ್​​ ಮೂಲಕ ಹೋಗುತ್ತಾರೆ.

ವಿಶೇಷ ವಿಮಾನ, ಹೆಲಿಕಾಪ್ಟರ್‌ ಗುತ್ತಿಗೆ ಪಡೆಯಲು ಪ್ಲ್ಯಾನ್

ಸಿಎಂ, ಡಿಸಿಎಂ ಜತೆಗೆ ಹಿರಿಯ ಸಚಿವರು ಹಾಗೂ ಅಧಿಕಾರಿಗಳು ಸರ್ಕಾರದ ಅಧಿಕೃತ ಕೆಲಸಗಳಿಗೆ ಬಳಸುವ ಹೆಲಿಕಾಪ್ಟರ್‌ ಹಾಗೂ ವಿಮಾನ ಸೇವೆಯು ದಿನದ ಬಾಡಿಗೆ ಲೆಕ್ಕದಲ್ಲಿ ದುಬಾರಿ ಎಂಬ ಕಾರಣಕ್ಕೆ ವಾರ್ಷಿಕ ಗುತ್ತಿಗೆ ಪಡೆಯಲು ನಿರ್ಧರಿಸಲಾಗಿದ್ದು, ಟೆಂಡರ್‌ ಪ್ರಕ್ರಿಯೆ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ. ದಿನದ ಬಾಡಿಗೆ ದುಬಾರಿ ಮತ್ತು ತುರ್ತು ಸಂದರ್ಭದಲ್ಲಿ ಲಭ್ಯವಾಗದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ