ಪ್ರಧಾನಿ ನರೇಂದ್ರ ಮೋದಿ ಘೋಷಣೆಯನ್ನು ಸ್ವಾಗತಿಸಿದ ಸಿಎಂ ಯಡಿಯೂರಪ್ಪ

| Updated By: guruganesh bhat

Updated on: Jun 07, 2021 | 7:33 PM

PM Narendra Modi: ಪ್ರಧಾನಿ ಗರೀಬ್ ಕಲ್ಯಾಣ ಯೋಜನೆಯಡಿ ಪಡಿತರ ವಿತರಣೆಯನ್ನು ದೀಪಾವಳಿ ಹಬ್ಬದವರೆಗೂ ವಿಸ್ತರಿಸಿರುವುದು ಶ್ಲಾಘನೀಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಘೋಷಣೆಯನ್ನು ಸ್ವಾಗತಿಸಿದ  ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ ಮತ್ತು ಪ್ರಧಾನಿ ನರೇಂದ್ರ ಮೋದಿ
Follow us on

ಬೆಂಗಳೂರು: ಎಲ್ಲಾ ರಾಜ್ಯಗಳಿಗೆ ಕೇಂದ್ರವೇ ಲಸಿಕೆ ಪೂರೈಸುವುದಾಗಿ ಕೊವಿಡ್ ಲಸಿಕೆ ವಿತರಣೆಗೆ ಕೇಂದ್ರೀಕೃತ ವ್ಯವಸ್ಥೆ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ಮುಖ್ಯಮಂತ್ರಿ ಬಿ..ಎಸ್.ಯಡಿಯೂರಪ್ಪ ಸ್ವಾಗತಿಸಿದ್ದಾರೆ. ಕೇಂದ್ರ ಸರ್ಕಾರವು ದೇಶದಲ್ಲಿ ಉತ್ಪಾದನೆಯಾಗುವ ಶೇ. 75ರಷ್ಟು ಲಸಿಕೆಯನ್ನು ವಿತರಿಸುವುದರಿಂದ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲು ಸೇವಾ ಶುಲ್ಕ 150 ರೂ. ನಿಗದಿಪಡಿಸಿರುವುದರಿಂದ ಲಸಿಕೆ ಅಭಿಯಾನ ಇನ್ನಷ್ಟು ಸುಗಮವಾಗಿ ಮುಂದುವರಿಯಲಿದೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿಯವರ ಇಂದಿನ ಘೋಷಣೆಯಿಂದ ಲಸಿಕೆ ಅಭಿಯಾನ ಇನ್ನಷ್ಟು ಸುಗಮವಾಗಿ ಮುಂದುವರಿಯಲಿದೆ. ಕೊವಿಡ್​ ವಿರುದ್ಧ ಹೋರಾಟದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದ್ದು, ಪ್ರಧಾನಿ ಗರೀಬ್ ಕಲ್ಯಾಣ ಯೋಜನೆಯಡಿ ಪಡಿತರ ವಿತರಣೆಯನ್ನು ದೀಪಾವಳಿ ಹಬ್ಬದವರೆಗೂ ವಿಸ್ತರಿಸಿರುವುದು ಶ್ಲಾಘನೀಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ದೇಶದ 80 ಕೋಟಿ ಜನರಿಗೆ ದೀಪಾವಳಿಯವರೆಗೂ ಉಚಿತ ಆಹಾರ ಧಾನ್ಯ: ಪ್ರಧಾನಿ ಮೋದಿ ಘೋಷಣೆ
ಮಹಾಪಿಡುಗಿನ ಈ ಸಮಯದಲ್ಲಿ ಬಡವರ ಎಲ್ಲ ಅಗತ್ಯಗಳನ್ನು ಗಮನಿಸಿ, ನಾವು ಅವರ ಜೊತೆಗೆ ಇರುತ್ತೇವೆ. ದೇಶದ 80 ಕೋಟಿ ಜನರಿಗೆ ದೀಪಾವಳಿಯವರೆಗೂ ಉಚಿತ ಧಾನ್ಯ ವಿತರಣೆ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೊಷಿಸಿದರು. ಈ ವರ್ಷ ಮೇ, ಜೂನ್‌ ತಿಂಗಳುಗಳಲ್ಲಿ ಉಚಿತ ಆಹಾರ ಧಾನ್ಯ ವಿತರಣೆ ಮಾಡಲು ಸೂಚಿಸಲಾಗಿತ್ತು. ಬಡವರು ಯಾರೂ ಹಸಿವಿನಿಂದ ಮಲಗಬಾರದು ಎಂದು ಇದನ್ನು ವಿಸ್ತರಿಸಿ ದೀಪಾವಳಿವರೆಗೂ ಉಚಿತವಾಗಿ ಆಹಾರ ಧಾನ್ಯ ನೀಡುತ್ತೇವೆ. ನವೆಂಬರ್​ ತಿಂಗಳವರೆಗೂ ಆಹಾರ ಧಾನ್ಯ ವಿತರಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

ಜೂನ್ 21ರ ಯೋಗ ದಿನದ ನಂತರ ದೇಶದಲ್ಲಿ ಲಸಿಕೆ ವಿತರಣಾ ಅಭಿಯಾನ ಹೊಸ ವೇಗ ಪಡೆಯಲಿದೆ. ಭಾರತ ಸರ್ಕಾರವೇ ಎಲ್ಲ ರಾಜ್ಯಗಳಿಗೂ ಉಚಿತವಾಗಿ ಕೊಡಲಿದೆ. ಭಾರತದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ ಕೊಡಲಾಗುವುದು. ಲಸಿಕೆ ವಿತರಣೆಯಲ್ಲಿ ಬಡವರು, ಮಧ್ಯಮ ವರ್ಗದವರು ಎಂಬ ಭೇದ ಇರುವುದಿಲ್ಲ. ಯಾರಿಗಾದರೂ ಉಚಿತ ಲಸಿಕೆಯ ಬದಲು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುತ್ತೇವೆ ಎಂದಾದರೆ ಅದಕ್ಕೂ ಅವಕಾಶವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಆತ್ಮನಿರ್ಭರ್​ ಪ್ಯಾಕೇಜ್​ನಡಿ ಕೊವಿಡ್​ ಪ್ಯಾಕೇಜ್​ ಮೂಲಕ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಲಸಿಕೆಗಳ ಲಭ್ಯತೆ ಇನ್ನೂ ಹೆಚ್ಚಲಿದೆ. ದೇಶದ 7 ಕಂಪನಿಗಳು ಲಸಿಕೆ ತಯಾರಿಸುತ್ತಿವೆ. 3 ಟ್ರಯಲ್​ಗಳು ನಡೆಯುತ್ತಿವೆ. ಇತರ ದೇಶಗಳ ಕಂಪನಿಗಳಿಂದಲೂ ಲಸಿಕೆ ಖರೀದಿ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಕೆಲ ತಜ್ಞರ ಮೂಲಕ ಮಕ್ಕಳ ಸುರಕ್ಷೆ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಮಕ್ಕಳಿಗೆ ಲಸಿಕೆ ನೀಡುವ ಟ್ರಯಲ್ ನಡೆಯುತ್ತಿದೆ. ಮೂಗಿನ ಮೂಲಕ ಕೊಡುವ (ನೇಸಲ್) ಲಸಿಕೆಯ ಟ್ರಯಲ್ ಸಹ ನಡೆಯುತ್ತಿದೆ. ಈ ಲಸಿಕೆಯಲ್ಲಿ ಸಫಲತೆ ಸಿಕ್ಕರೆ ಭಾರತದಲ್ಲಿ ಲಸಿಕೆ ಅಭಿಯಾನ ಇನ್ನಷ್ಟು ವೇಗ ಪಡೆಯುತ್ತದೆ. ಇಷ್ಟು ಕಡಿಮೆ ಸಮಯದಲ್ಲಿ ಲಸಿಕೆ ಮಾಡುವುದರಿಂದ ವಿಶ್ವದ ಜನಸಮುದಾಯಕ್ಕೆ ಅನುಕೂಲವಾಗಿದೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ: 3ನೇ ಅಲೆಗೆ ವೇಗದ ಸಿದ್ಧತೆ: ಕೊವಿಡ್ ಕಾರ್ಯಪಡೆ ಸಭೆಯಲ್ಲಿ ಮಹತ್ವದ ಚರ್ಚೆ

45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂತ್ ಮಟ್ಟದಲ್ಲಿ ಕೊವಿಡ್ ಲಸಿಕೆ ನೀಡಲು ಮನೆ-ಮನೆ ಸಮೀಕ್ಷೆ: ಅರವಿಂದ್ ಕೇಜ್ರಿವಾಲ್ ಘೋಷಣೆ

(Karnataka CM Yediyurappa welcomes PM Narendra Modis announcement on Covid Vaccine and free ration kit till November)