ಉಚಿತ ಆಹಾರ ನೀಡಿಲ್ಲವೆಂದು ಸ್ವಿಗ್ಗಿ ಡೆಲಿವರಿ ಬಾಯ್ ಮೇಲೆ ಹಲ್ಲೆ; ನಾಲ್ವರು ಯುವಕರಿಂದ ದುಷ್ಕೃತ್ಯ

ಉಚಿತ ಆಹಾರ ನೀಡಿಲ್ಲವೆಂದು ಸ್ವಿಗ್ಗಿ ಡೆಲಿವರಿ ಬಾಯ್ ಮೇಲೆ ಹಲ್ಲೆ; ನಾಲ್ವರು ಯುವಕರಿಂದ ದುಷ್ಕೃತ್ಯ
ಸ್ವಿಗ್ಗಿ (ಸಾಂದರ್ಭಿಕ ಚಿತ್ರ)

ಬಾಯಿಮಾತಿನಲ್ಲಿ ಕೆಟ್ಟದಾಗಿ ನಿಂದಿಸಿದ್ದು ಮಾತ್ರವಲ್ಲ, ದೈಹಿಕ ಹಲ್ಲೆ ನಡೆಸಿದ್ದಾರೆ. ಡೆಲಿವರಿ ಬಾಯ್ ಫೋನ್ ಹಾಗೂ ಹೆಲ್ಮೆಟ್, ಹಣ ಕಸಿಯಲು ಮುಂದಾಗಿದ್ದಾರೆ. ತಲೆಗೆ ಕಲ್ಲು ಎಸೆಯಲು ಕೂಡ ಮುಂದಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

TV9kannada Web Team

| Edited By: ganapathi bhat

Jun 07, 2021 | 6:51 PM

ಬೆಂಗಳೂರು; ಉಚಿತ ಆಹಾರ ನೀಡದ ಕಾರಣ ಸ್ವಿಗ್ಗಿ ಡೆಲಿವರಿ ಬಾಯ್ ಮೇಲೆ 4 ಯುವಕರ ತಂಡವೊಂದು ಹಲ್ಲೆ ನಡೆಸಿದೆ ಎಂದು ಆರೋಪ ಕೇಳಿಬಂದಿದೆ. ಕೆಲ ತಿಂಗಳ ಹಿಂದಷ್ಟೇ ಜೊಮ್ಯಾಟೋ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆದ ಪ್ರಕರಣ ನಗರದಲ್ಲಿ ಸುದ್ದಿಯಾಗಿತ್ತು. ಇದೀಗ ಅಂತಹ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಸ್ವಿಗ್ಗಿ ಡೆಲಿವರಿ ಯುವಕನ ಮೇಲೆ ಹಲ್ಲೆ ನಡೆಸಿರುವ ವಿಚಾರ ಇನ್​ಸ್ಟಾಗ್ರಾಂನಲ್ಲಿ ಹರಿದಾಡಿದೆ. ಮೇ 28ರಂದು 25 ವರ್ಷ ವಯಸ್ಸಿನ ಕಾರ್ತಿಕ ಹರಿಪ್ರಸಾದ್ ಎಂಬ ಸ್ವಿಗ್ಗಿ ಡೆಲಿವರಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ 4 ಯುವಕರು ಹಲ್ಲೆ ಮಾಡಿದ್ದಾರೆ. ಸಂಜೆಯ ವೇಳೆ ಈ ಘಟನೆ ನಡೆದಿದೆ. ತರಿಸಿಕೊಂಡ ಆಹಾರ ಕ್ಯಾನ್ಸಲ್ ಮಾಡಿಕೊಳ್ಳಲು ಆಗಿಲ್ಲ. ಹಾಗಾಗಿ, ಉಚಿತವಾಗಿ ಆಹಾರ ನೀಡುವಂತೆ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಬಗ್ಗೆ ಲಭ್ಯವಿರುವ ಮಾಹಿತಿಯಂತೆ, ನಾಲ್ವರು ತರಿಸಿಕೊಂಡ ಆಹಾರಕ್ಕೆ ಹಣ ಪಾವತಿಸಲು ಒಪ್ಪಲಿಲ್ಲ. ಹಾಗಾಗಿ, ಡೆಲಿವರಿ ಬಾಯ್ ಅದನ್ನು ಅಗತ್ಯವಿರುವವರಿಗೆ ನೀಡಲು ಯೋಚಿಸಿದ್ದಾನೆ. ಆಗ ನಾಲ್ವರು ಯುವಕರು ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿದ್ದಾರೆ. ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

ಬಾಯಿಮಾತಿನಲ್ಲಿ ಕೆಟ್ಟದಾಗಿ ನಿಂದಿಸಿದ್ದು ಮಾತ್ರವಲ್ಲ, ದೈಹಿಕ ಹಲ್ಲೆ ನಡೆಸಿದ್ದಾರೆ. ಡೆಲಿವರಿ ಬಾಯ್ ಫೋನ್ ಹಾಗೂ ಹೆಲ್ಮೆಟ್, ಹಣ ಕಸಿಯಲು ಮುಂದಾಗಿದ್ದಾರೆ. ತಲೆಗೆ ಕಲ್ಲು ಎಸೆಯಲು ಕೂಡ ಮುಂದಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಈ ವೇಳೆ, ಇತರ ಸಹೋದ್ಯೋಗಿಗಳು ಘಟನೆಯನ್ನು ಗಮನಿಸಿದ್ದಾರೆ. ಬಳಿಕ, ಪೊಲೀಸರನ್ನು ಸಂಪರ್ಕಿಸಿದ್ದಾರೆ. ಡೆಲಿವರಿ ಬಾಯ್ ಹರಿಪ್ರಸಾದ್​ನನ್ನು ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ನಂತರ ಆಸ್ಪತ್ರೆಗೆ ಕರೆದೊಯ್ದು ಗಾಯಕ್ಕೆ ಚಿಕಿತ್ಸೆ ಕೊಡಿಸಲಾಗಿದೆ. ಆದರೆ, ಹಲ್ಲೆ ನಡೆಸಿದವರು ಸ್ಥಳದಿಂದ ಪರಾರಿಯಾಗಿದ್ದಾರೆ.

ಮಾಗಡಿ ರೋಡ್​ನ ಪೊಲೀಸರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ನಾನು ಅಧಿಕೃತವಾಗಿ ದೂರು ದಾಖಲಿಸಲಿದ್ದೇನೆ. ಸ್ವಿಗ್ಗಿ ಪೊಲೀಸರೊಂದಿಗೆ ಕೂಡ ಕಸ್ಟಮರ್ ವಿವರಗಳನ್ನು ಹಂಚಿಕೊಳ್ಳಲಿದೆ ಎಂದು ಹೇಳಿರುವ ಬಗ್ಗೆ ಡೆಲಿವರಿ ಬಾಯ್ ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ. ಸ್ವಿಗ್ಗಿ ಸಂಸ್ಥೆಯು ಆರೋಗ್ಯ ವಿಮೆ ಸೌಲಭ್ಯ ಬಳಸಿಕೊಳ್ಳುವಂತೆ ತಿಳಿಸಿದು, ಜೊತೆಗೆ ಕಾನೂನಾತ್ಮಕ ಸಹಾಯವನ್ನೂ ಮಾಡುವುದಾಗಿ ತಿಳಿಸಿದೆ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಡೆಲಿವರಿ ಬಾಯ್ ಕಷ್ಟ.!

ಪಿಜ್ಜಾ ಹೋಮ್ ಡೆಲಿವರಿ ಮಾಡುವುದಾದರೆ ರೇಷನ್ ಯಾಕೆ ಆಗಲ್ಲ?: ಅರವಿಂದ್ ಕೇಜ್ರಿವಾಲ್

Follow us on

Related Stories

Most Read Stories

Click on your DTH Provider to Add TV9 Kannada