ಸಿಎಂ ಕಚೇರಿ ಎಡವಟ್ಟು, ಪಂಪನ ಬನವಾಸಿ ಯಾವ ಜಿಲ್ಲೆಯಲ್ಲಿದೆ ಎನ್ನುವುದೇ ಗೊತ್ತಿಲ್ಲ!
ಬನವಾಸಿಯಲ್ಲಿ ನಡೆಯುವ ಕದಂಬೋತ್ಸವವು ಇಂದಿನಿಂದ ಆರಂಭಗೊಂಡಿದ್ದು, ನಾಳೆ ಕೊನೆಗೊಳ್ಳಲಿದೆ. ಕದಂಬೋತ್ಸವಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಇದಕ್ಕೂ ಮುನ್ನ ಸಿಎಂ ಕಚೇರಿ, ಬನವಾಸಿಯು ಉತ್ತರ ಕನ್ನಡ ಜಿಲ್ಲೆಯ ಎಂದು ಹೇಳುವ ಬದಲು ಶಿವಮೊಗ್ಗ ಜಿಲ್ಲೆಯಲ್ಲಿದೆ ಎಂದು ಎಕ್ಸ್ ಖಾತೆಯಲ್ಲಿ ತಪ್ಪಾಗಿ ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡಿದೆ.
ಕಾರವಾರ, ಮಾ.5: ಬನವಾಸಿಯಲ್ಲಿ (Banavasi) ನಡೆಯುವ ಕದಂಬೋತ್ಸವವು (Kadambotsava) ಇಂದಿನಿಂದ ಆರಂಭಗೊಂಡಿದ್ದು, ನಾಳೆ ಕೊನೆಗೊಳ್ಳಲಿದೆ. ಕದಂಬೋತ್ಸವಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಚಾಲನೆ ನೀಡಿದ್ದಾರೆ. ಕನ್ನಡದ ಆದಿ ಕವಿ ವರ್ಣಿಸಿದ್ದ ಬನವಾಸಿಯು ಯಾವ ಜಿಲ್ಲೆಯ ಯಾವ ತಾಲೂಕಿನಲ್ಲಿದೆ ಎಂದು ಸಿಎಂ ಕಚೇರಿ ಸಿಬ್ಬಂದಿಗೇ ತಿಳಿದಿಲ್ಲ ಎನ್ನುವುದು ವಿಷಾದನೀಯ ಸಂಗತಿ.
ಮುಖ್ಯಮಂತ್ರಿ ಕಾರ್ಯಕ್ರಮಗಳ ವಿವರಗಳು ಮತ್ತು ಮುಖ್ಯಮಂತ್ರಿಗಳ ಹೇಳಿಕೆ, ಆದೇಶಗಳನ್ನು ತಿಳಿಸಲು ಬಳಸುವ ಅಧಿಕೃತ ಎಕ್ಸ್ ಖಾತೆಯಲ್ಲಿ (ಟ್ವಿಟರ್), ಬನವಾಸಿ ಕದಂಬೋತ್ಸವದ ನೇರಪ್ರಸಾರದ ಬಗ್ಗೆ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ಮಾಡುವಾಗ ಸಿಬ್ಬಂದಿ ಮಾಡಿದ ಎಡವಟ್ಟೇನೆಂದರೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಎಂದು ಹೇಳುವ ಬದಲು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬನವಾಸಿ ಎಂದು ತಪ್ಪಾಗಿ ಬರೆದುಕೊಳ್ಳಲಾಗಿದೆ.
ಇದನ್ನೂ ಓದಿ: ಲೋಕಸಭೆಗೆ ಸ್ಪರ್ಧಿಸಲು ಧಮ್ ಇದ್ದರೆ ಮುಂದೆ ಬನ್ನಿ: ಸವಾಲು ಹಾಕಿದ ಅನಂತ್ ಕುಮಾರ್ ಹೆಗಡೆ
“ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬನವಾಸಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಕದಂಬೋತ್ಸವದ ನೇರಪ್ರಸಾರ ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಿ” ಎಂದು ಸಿಎಂ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಇದಾದ ಕೆಲ ಹೊತ್ತಿನ ಬಳಿಕ ಪ್ರಮಾದದಿಂದ ಎಚ್ಚೆತ್ತ ಸಿಬ್ಬಂದಿ, ತಪ್ಪನ್ನು ಸರಿಪಡಿಸಿದ್ದಾರೆ. “ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಕದಂಬೋತ್ಸವದ ನೇರಪ್ರಸಾರ ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಿ” ಎಂದು ತಿಳಿಸಿದ್ದಾರೆ.
ಸಿಎಂ ಕಚೇರಿ ಟ್ವೀಟ್
ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಕದಂಬೋತ್ಸವದ ನೇರಪ್ರಸಾರ ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಿ.https://t.co/DPMaumwsje
— CM of Karnataka (@CMofKarnataka) March 5, 2024
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:52 pm, Tue, 5 March 24