‘ಕೈ’ಯಲ್ಲಿ ಕಂಪನ ಎಬ್ಬಿಸಿದ ಅಶೋಕ್ ಭವಿಷ್ಯ: ಕಾಂಗ್ರೆಸ್ ನಾಯಕರಿಂದ ವಾಗ್ದಾಳಿ
ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ತೀವ್ರಗೊಂಡಿವೆ. ಬಿಜೆಪಿ ನಾಯಕರ ಭವಿಷ್ಯವಾಣಿ ಮತ್ತು ಹಲವು ಸಚಿವರ ದೆಹಲಿ ಪ್ರವಾಸಗಳು ಈ ಚರ್ಚೆಗಳನ್ನು ಇನ್ನಷ್ಟು ಬಲಪಡಿಸಿವೆ. ಏತನ್ಮಧ್ಯೆ, ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂಬರ್ಥದಲ್ಲಿ ಮಾಗಡಿ ಶಾಸಕ ಬಾಲಕೃಷ್ಣ ಹೇಳಿದ್ದು ಕೂಡ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿನ ಬೆಳವಣಿಗೆಗಳ ವಿವರ ಇಲ್ಲಿದೆ.

ಬೆಂಗಳೂರು, ಫೆಬ್ರವರಿ 2: ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ದಿನಕ್ಕೊಂದು ಬೆಳವಣಿಗೆಗಳು ದೊಡ್ಡ ಬದಲಾವಣೆಯ ಮುನ್ಸೂಚನೆ ನೀಡುತ್ತಿವೆ. ‘ಕೈ’ ನಾಯಕರು ಏನೂ ಇಲ್ಲ ಎನ್ನುತ್ತಿದ್ದರೂ ಹೈಕಮಾಂಡ್ ಎಚ್ಚರಿಕೆ ಬಳಿಕವೂ ಕೈ ನಾಯಕರ ನಡೆ ಕುತೂಹಲ ಮೂಡಿಸಿದೆ. ಹೀಗಾಗಿಯೇ ಶನಿವಾರ ಭವಿಷ್ಯ ನುಡಿದಿದ್ದ ಪ್ರತಿಪಕ್ಷ ನಾಯಕ ಆರ್. ಅಶೋಕ್, ನವೆಂಬರ್ 15ಕ್ಕೆ ಮ್ಯೂಸಿಕಲ್ ಚೇರ್ ಇದೆ. ಸಿಎಂ ಬದಲಾಗುತ್ತಾರೆ ಎಂದಿದ್ದರು. ಇದು ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ.
ಅಶೋಕ್ ಭವಿಷ್ಯಕ್ಕೆ ತಿರುಗೇಟು ಕೊಟ್ಟಿರುವ ಸಚಿವ ಪ್ರಿಯಾಂಕ್ ಖರ್ಗೆ, ಮೊದಲು ನಿಮ್ಮ ಪಕ್ಷದ ಭವಿಷ್ಯ ನೋಡಿಕೊಳ್ಳಿ ಎಂದಿದ್ದಾರೆ. ಹೀಗೆ ಅಶೋಕ್ ಮಾತಿಗೆ ಸಚಿವರು ತಿರುಗೇಟು ಕೊಡುತ್ತಿದ್ದಾರೆ. ಆದರೆ, ಇದೇ ಹೊತ್ತಲ್ಲಿ ಸಚಿವರ ದೆಹಲಿ ಪ್ರವಾಸವೂ ಕುತೂಹಲ ಮೂಡಿಸಿದೆ.
ರಾಜಣ್ಣ, ಸತೀಶ್ ಬೆನ್ನಲ್ಲೇ ಪರಮೇಶ್ವರ್ ಕೂಡಾ ದೆಹಲಿಗೆ
ಇದೇ ವಾರ ಎಸ್ಸಿ ಎಸ್ಟಿ ಸಚಿವರು ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ. ಹೈಕಮಾಂಡ್ ನಾಯಕರನ್ನು ಭೇಟಿಯಾಗುವುದಾಗಿ ಸಚಿವ ರಾಜಣ್ಣ ಖಚಿತಪಡಿಸಿದ್ದಾರೆ. ಸತೀಶ್ ಜಾರಕಿಹೊಳಿ ಕೂಡಾ ಕರ್ನಾಟಕ ಭವನ ಉದ್ಘಾಟನೆ ನೆಪದಲ್ಲಿ ದೆಹಲಿ ಫ್ಲೈಟ್ ಹತ್ತಲಿದ್ದಾರೆ. ಈ ವೇಳೆ ಹೈಕಮಾಂಡ್ ನಾಯಕರನ್ನ ಭೇಟಿಯಾಗಲಿರುವ ರಾಜಣ್ಣ, ರಾಜಕೀಯ ಸ್ಥಿತಿಗತಿ, ಪವರ್ ಶೇರಿಂಗ್ ಕುರಿತಂತೆಯೂ ಚರ್ಚಿಸುವ ಸಾಧ್ಯತೆ ಇದೆ. ಯಾವ್ಯಾವ ವಿಷಯ ಚರ್ಚಿಸಬೇಕು ಅಂತಾ ಈಗಾಗಲೇ ನಾಯಕರು ಚರ್ಚೆ ನಡೆಸಿದ್ದಾರೆ. ಮುಂದೆ ನಾಯಕತ್ವ ಬದಲಾವಣೆ ವಿಚಾರ ಬಂದರೆ ಏನೆಲ್ಲಾ ಡ್ಯಾಮೇಜ್ ಆಗುತ್ತದೆ, ಬದಲಾವಣೆ ಬಗ್ಗೆ ಶಾಸಕರಲ್ಲಿರುವ ಅಸಮಾಧಾನ ಎಂಥದ್ದು ಎಂಬುದನ್ನು ಹೈಕಮಾಂಡ್ ಗಮನಕ್ಕೆ ತರಲು ಮುಂದಾಗಿದ್ದಾರೆ. ಇದೇ ಹೊತ್ತಲ್ಲಿ ಪರಮೇಶ್ವರ್ ಕೂಡಾ ದೆಹಲಿಯತ್ತ ಮುಖ ಮಾಡಿದ್ದಾರೆ. ಆದರೆ, ಯಾವುದೇ ಗುಟ್ಟು ಬಿಟ್ಟುಕೊಡದ ಪರಮೇಶ್ವರ್, ಇಲಾಖೆ ಕೆಲಸ ಇರುವುದರಿಂದ ದೆಹಲಿಗೆ ಹೋಗುತ್ತಿದ್ದೇನೆ. ಆದರೆ, ಯಾವಾಗ ಅಂತಾ ಗೊತ್ತಿಲ್ಲ ಎಂದಿದ್ದಾರೆ.
ಹೈಕಮಾಂಡ್ ವಾರ್ನಿಂಗ್ ಬಳಿಕವೂ ನಿಲ್ಲದ ಕುರ್ಚಿ ಚರ್ಚೆ
ಈ ಎಲ್ಲ ಬೆಳವಣಿಗೆ ನಡುವೆ ರಾಮನಗರದ ಚನ್ನಪಟ್ಟಣದಲ್ಲಿ ನಡೆದ ಸಮಾವೇಶದಲ್ಲಿ ಮಾಗಡಿ ಶಾಸಕ ಬಾಲಕೃಷ್ಣ ಅಚ್ಚರಿಯ ಮಾತನ್ನಾಡಿದ್ದಾರೆ. ಈ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲು ಸಿದ್ಧರಾಗಿರುವಂತಹ ಎಂದು ಸ್ವಾಗತ ಭಾಷಣ ಮಾಡಿದ ಬಾಲಕೃಷ್ಣ, ಪರೋಕ್ಷವಾಗಿ ‘ಡಿಕೆ ಮುಂದಿನ ಸಿಎಂ’ ಎಂದಿದ್ದಾರೆ.
ಯಾವ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯಲ್ಲ: ಬಿಆರ್ ಪಾಟೀಲ್
ಪಟ್ಟದ ಆಟ ನಡೆಯುತ್ತಿರುವ ಹೊತ್ತಲ್ಲೇ ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ಬಿಆರ್ ಪಾಟೀಲ್ ರಾಜೀನಾಮೆ ನೀಡಿರುವುದು ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಳಂದ ಶಾಸಕ ಬಿ.ಆರ್ ಪಾಟೀಲ್, ನಾನೇನು ಹುಚ್ಚನಂತೆ ರಾಜೀನಾಮೆ ಕೊಟ್ಟಿಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯಲ್ಲ ಎಂದಿದ್ದಾರೆ. ಗ್ಯಾರಂಟಿಯಿಂದ ಶಾಸಕರಿಗೆ ಅನುದಾನ ಸಿಗುತ್ತಿಲ್ಲ ಅಂತಾ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧರಾಗಿರುವ ಡಿಕೆ ಶಿವಕುಮಾರ್: ಪರೋಕ್ಷವಾಗಿ ಮುಂದಿನ ಸಿಎಂ ಎಂದ ಬಾಲಕೃಷ್ಣ
ಬಿಆರ್ ಪಾಟೀಲ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್, ರಾಜೀನಾಮೆ ಯಾಕೆ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ. ಏನೋ ಹೆಚ್ಚು ಕಡಿಮೆಯಾಗಿದೆ ಅಂತಾ ಬೋಸರಾಜು ಹೇಳಿದ್ದಾರೆ. ಬೇರೆ ಬೇರೆ ರೂಪದಲ್ಲಿ ಅನುದಾನ ಕೊಡಲಾಗಿದೆ ಅಂತಾ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರಂತೂ ನಮ್ಮಲ್ಲಿ ಏನೂ ಸಮಸ್ಯೆ ಇಲ್ಲ. ಬದಲಾವಣೆಯೂ ಇಲ್ಲ ಅಂತಿದ್ದಾರೆ. ಆದರೆ, ಬಿಜೆಪಿ ನಾಯಕರು ಬದಲಾವಣೆಯ ಭವಿಷ್ಯ ಬರೆದು ಕಾದು ಕುಳಿತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ