ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾಯಿಸಿ: ಜೆಪಿ ನಡ್ಡಾಗೆ ಅರವಿಂದ ಲಿಂಬಾವಳಿ ಮನವಿ

ಕರ್ನಾಟಕ ಬಿಜೆಪಿಯಲ್ಲಿ ಆಂತರಿಕ ಕಲಹ ತೀವ್ರಗೊಂಡಿದ್ದು, ಅರವಿಂದ್ ಲಿಂಬಾವಳಿ ಅವರು ಬಿವೈ ವಿಜಯೇಂದ್ರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿಯಾಗಿದ್ದಾರೆ. ವಿಜಯೇಂದ್ರ ಅವರ ನಾಯಕತ್ವದಲ್ಲಿ ಪಕ್ಷದ ಸಂಘಟನೆ ದುರ್ಬಲವಾಗಿದೆ ಎಂದು ಲಿಂಬಾವಳಿ ಆರೋಪಿಸಿದ್ದು, ವಿಜಯೇಂದ್ರರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಾಗಿ ನಡ್ಡಾ ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾಯಿಸಿ: ಜೆಪಿ ನಡ್ಡಾಗೆ ಅರವಿಂದ ಲಿಂಬಾವಳಿ ಮನವಿ
ಜೆಪಿ‌ ನಡ್ಡಾ & ಅರವಿಂದ ಲಿಂಬಾವಳಿ
Follow us
ಹರೀಶ್ ಜಿ.ಆರ್​. ನವದೆಹಲಿ
| Updated By: Ganapathi Sharma

Updated on: Feb 02, 2025 | 5:50 PM

ನವದೆಹಲಿ, ಫೆಬ್ರವರಿ 2: ಕರ್ನಾಟಕ ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಕರ್ನಾಟಕ ಬಿಜೆಪಿಯಲ್ಲಿ ಸ್ಪಷ್ಟವಾಗಿ ಎರಡು ಬಣಗಳು ಸೃಷ್ಟಿಯಾಗಿವೆ. ಒಂದು ಬಣ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರೆ, ಮತ್ತೊಂದು ಬಣ ವಿಜಯೇಂದ್ರ ಪರವಾಗಿ ಗಟ್ಟಿಯಾಗಿ ನಿಂತಿದೆ. ವಿಜಯೇಂದ್ರ ವಿರುದ್ಧದ ಬಣದಲ್ಲಿ ಸಂಘಟನಾ ಚತುರ ಎಂದು ಕರೆಸಿಕೊಳ್ಳುವ ಅರವಿಂದ ಲಿಂಬಾವಳಿ ಗುರುತಿಸಿಕೊಂಡಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ‌ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ದೆಹಲಿಯಲ್ಲಿ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಸುದೀರ್ಘ ಕಾಲ ಚರ್ಚೆ ಮಾಡಿದ್ದಾರೆ. ಭೇಟಿ ವೇಳೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ ಅವರನ್ನು ಕೂಡಲೇ ಬದಲಾವಣೆ ಮಾಡಬೇಕು. ಇಲ್ಲದಿದ್ದರೆ, ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದು ಶತಃಸಿದ್ಧ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಸದ್ಯದಲ್ಲೇ ರಾಜ್ಯ ಬಿಜೆಪಿ ಘಟಕಕ್ಕೆ ಚುನಾವಣೆ ನಡೆಯಲಿದ್ದು ವಿಜಯೇಂದ್ರ ಮುಂದುವರೆಯಬಾರದು ಎಂಬ ಮನವಿ ಮಾಡಿದ್ದಾರೆ. ರಾಜ್ಯ ಬಿಜೆಪಿ ಘಟಕದಲ್ಲಿ ಉಂಟಾಗಿರುವ ಗೊಂದಲ, ಅದಕ್ಕೆ ಕಾರಣಗಳ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಿದ್ದಾರೆ. ವರಿಷ್ಠರು ಕೂಡಲೇ ಮಧ್ಯಪ್ರವೇಶ ಮಾಡದಿದ್ದರೆ ಭಿನ್ನಮತ ಇನ್ನಷ್ಟು ತೀವ್ರವಾಗಲಿದೆ ಎಂಬುದನ್ನು ನಡ್ಡಾ ಅವರ ಗಮನಕ್ಕೆ‌ ಲಿಂಬಾವಳಿ ತಂದಿದ್ದಾರೆ.

ವಿಜಯೇಂದ್ರ ವಿರುದ್ಧ ಲಿಂಬಾವಳಿ ದೂರುಗಳೇನು?

  • ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ.
  • ಶಾಸಕರ ಮಾತಿಗೂ ಬೆಲೆ ಇಲ್ಲ. ಯಾವುದೇ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಿಲ್ಲ.
  • ಕಾಂಗ್ರೆಸ್‌ ನಾಯಕರ ಜತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ.
  • ಪಕ್ಷ ಸಂಘಟನೆ ಆಗುತ್ತಿಲ್ಲ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ನೇಮಕದಲ್ಲೂ ಭಾರಿ ಲೋಪ ಆಗಿದೆ.
  • ಪಕ್ಷದ ನೇಮಕದ ಸಂದರ್ಭದಲ್ಲಿ ವಿಜಯೇಂದ್ರ ಆಪ್ತರಿಗೆ ಮಣೆ ಹಾಕಲಾಗಿದೆ.

ಹೀಗೆ ವಿಜಯೇಂದ್ರ ವಿರುದ್ಧ ಅರವಿಂದ್ ಲಿಂಬಾವಳಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಲಿಂಬಾವಳಿ ಹೇಳಿದ್ದನ್ನು ತಾಳ್ಮೆಯಿಂದ ಕೇಳಿಸಿಕೊಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ‌ ನಡ್ಡಾ ಎಲ್ಲವನ್ನು ಹೈಕಮಾಂಡ್ ನಾಯಕರು ಗಮಿಸುತ್ತಿದ್ದಾರೆ‌. ಎಲ್ಲಾ ಗೊಂದಲಗಳಿಗೂ ಫುಲ್ ಸ್ಟಾಪ್ ಹಾಕಲಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಯತ್ನಾಳ್ ಬಣ ಶಕ್ತಿ ಹೆಚ್ಚಿಸಿಕೊಳ್ಳೋ ಪ್ರಯತ್ನ ಯಶಸ್ವಿ: ರಾಜ್ಯಾಧ್ಯಕ್ಷ ಚುನಾವಣೆ ಲೆಕ್ಕಾಚಾರ

ಇನ್ನು ಅರವಿಂದ್‌ ಲಿಂಬಾವಳಿ ನಡ್ಡಾ ಭೇಟಿ ವೇಳೆ ಬೀದರ್‌ನಿಂದ ಬಳ್ಳಾರಿಯವರೆಗೆ ವಕ್ಫ್ ಹಠಾವೋ ದೇಶ ಬಚಾವೋ ಅಭಿಯಾನದ ಅಡಿಯಲ್ಲಿ ಪ್ರವಾಸ ನಡೆಸಿದ್ದೇವೆ. ಈ ವೇಳೆ ಅನೇಕ ಜನರು ವಕ್ಫ್ ಬೋರ್ಡ್‌ನಿಂದ ತೊಂದರೆ ಎದುರಿಸುತ್ತಿರುವುದು ಬೆಳಕಿಗೆ ಬಂದಿದೆ. ವಕ್ಫ್ ಕಾನೂನಿನಲ್ಲಿರುವ ಲೋಪದೋಷಗಳು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತಿವೆ ಎಂದು ನಡ್ಡಾ ಅವರಿಗೆ ಲಿಂಬಾವಳಿ ತಿಳಿಸಿದ್ದಾರೆ‌. ವಕ್ಪ್ ಹೋರಾಟದ ಬಗ್ಗೆ ನಡ್ಡಾ ಅವರಿಂದಲೂ ಯತ್ನಾಳ್ ಟೀಂಗೆ ಪ್ರಸಂಸೆ ವ್ಯಕ್ತವಾಗಿದೆ‌.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ