ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಮೇಲೆ ಪರಿಶೀಲನೆಯ ತೂಗುಗತ್ತಿ: 6 ತಿಂಗಳ ಡೆಡ್‌ಲೈನ್‌, ಕೆಲಸ ಮಾಡದವರಿಗೆ ಗೇಟ್‌ಪಾಸ್ ಎಚ್ಚರಿಕೆ

ಕರ್ನಾಟಕ ಕಾಂಗ್ರೆಸ್‌ನ ನೂತನ ಜಿಲ್ಲಾಧ್ಯಕ್ಷರಿಗೆ ಹೈಕಮಾಂಡ್ ಆರು ತಿಂಗಳ ಡೆಡ್‌ಲೈನ್ ನೀಡಿದೆ. ಈ ಅವಧಿಯಲ್ಲಿ ಪಕ್ಷ ಸಂಘಟನೆ ಬಲಪಡಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕು. ಆರು ತಿಂಗಳ ಬಳಿಕ ಎಐಸಿಸಿ ನಾಯಕರ ಸಮಿತಿ ಕಾರ್ಯವೈಖರಿ ಪರಿಶೀಲಿಸಲಿದ್ದು, ಕೆಲಸ ತೃಪ್ತಿದಾಯಕವಾಗಿಲ್ಲದಿದ್ದರೆ ಜಿಲ್ಲಾಧ್ಯಕ್ಷರನ್ನು ಬದಲಾಯಿಸುವ ಎಚ್ಚರಿಕೆ ನೀಡಲಾಗಿದೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಮೇಲೆ ಪರಿಶೀಲನೆಯ ತೂಗುಗತ್ತಿ: 6 ತಿಂಗಳ ಡೆಡ್‌ಲೈನ್‌, ಕೆಲಸ ಮಾಡದವರಿಗೆ ಗೇಟ್‌ಪಾಸ್ ಎಚ್ಚರಿಕೆ
ಕೆಪಿಸಿ ಕಚೇರಿಯಲ್ಲಿ ನಡೆದ ಸಭೆ
Image Credit source: tv9
Edited By:

Updated on: Sep 17, 2026 | 9:30 AM

ಮುಖ್ಯಾಂಶಗಳು

  • ಜಿಲ್ಲಾಧ್ಯಕ್ಷರಿಗೆ ಆರು ತಿಂಗಳ ಡೆಡ್‌ಲೈನ್
  • ಕೆಲಸ ಮಾಡದವರಿಗೆ ಗೇಟ್‌ಪಾಸ್ ಎಚ್ಚರಿಕೆ
  • 2028, 2029 ಚುನಾವಣೆ ಸಿದ್ಧತೆಗೆ ಸೂಚನೆ

ಬೆಂಗಳೂರು, ಸೆಪ್ಟೆಂಬರ್ 17: ಕರ್ನಾಟಕ ಕಾಂಗ್ರೆಸ್‌ನ ನೂತನ ಜಿಲ್ಲಾಧ್ಯಕ್ಷರಿಗೆ ಹೈಕಮಾಂಡ್‌ ಆರು ತಿಂಗಳ ಡೆಡ್‌ಲೈನ್ ನೀಡಿದೆ. ಈ ಅವಧಿಯಲ್ಲಿ ಪಕ್ಷ ಸಂಘಟನೆ ಬಲಪಡಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕು. ಆರು ತಿಂಗಳ ಬಳಿಕ ಎಐಸಿಸಿ ನಾಯಕರ ಸಮಿತಿ ಜಿಲ್ಲಾಧ್ಯಕ್ಷರ ಕಾರ್ಯವೈಖರಿಯನ್ನು ಪರಿಶೀಲಿಸಲಿದೆ. ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದ ಜಿಲ್ಲಾಧ್ಯಕ್ಷರನ್ನು ಯಾವುದೇ ಮುಲಾಜಿಲ್ಲದೆ ಬದಲಾಯಿಸುವ ಎಚ್ಚರಿಕೆಯನ್ನು ನೀಡಲಾಗಿದೆ. ಸೆಪ್ಟೆಂಬರ್ 16ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನೂತನ ಜಿಲ್ಲಾಧ್ಯಕ್ಷರ ಜೊತೆ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಯಕರು ಸಭೆ ನಡೆಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ 6 ತಿಂಗಳು ಗೋಲ್ಡನ್ ಟೈಮ್

ನೂತನ ಜಿಲ್ಲಾಧ್ಯಕ್ಷರಿಗೆ ಮುಂದಿನ ಆರು ತಿಂಗಳು ಅತ್ಯಂತ ಮಹತ್ವದ ಅವಧಿ ಎಂದು ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ. ಕೇವಲ ಹುದ್ದೆ ಅಲಂಕರಿಸುವುದಕ್ಕಿಂತ ಪಕ್ಷಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡುವವರ ಅಗತ್ಯವಿದೆ ಎಂದು ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ. ಯಾರು ಕೆಲಸ ಮಾಡುತ್ತಿದ್ದಾರೆ, ಯಾರು ಕೆಲಸ ಮಾಡುತ್ತಿಲ್ಲ ಎಂಬುದರ ಮೇಲೆ ನಿಗಾ ಇಡಲಾಗುತ್ತದೆ. ಆರು ತಿಂಗಳ ಬಳಿಕ ಕಾರ್ಯವೈಖರಿ ಪರಿಶೀಲನೆ ನಡೆಸಿ, ತೃಪ್ತಿದಾಯಕ ಕೆಲಸ ಕಂಡುಬರದಿದ್ದರೆ ಜಿಲ್ಲಾಧ್ಯಕ್ಷರನ್ನು ಬದಲಾಯಿಸುವ ಎಚ್ಚರಿಕೆ ನೀಡಲಾಗಿದೆ.

ಅಧ್ಯಕ್ಷರ ಸೂಚನೆಯಂತೆ ಸಂಘಟನೆ ಬಲಪಡಿಸಲು ಸೂಚನೆ

ಕೆಪಿಸಿಸಿ ಅಧ್ಯಕ್ಷರ ಸೂಚನೆ, ಆಣತಿ ಹಾಗೂ ಪಕ್ಷದ ತಂತ್ರಗಾರಿಕೆಗೆ ಅನುಗುಣವಾಗಿ ಆಯಾ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸುವಂತೆ ಜಿಲ್ಲಾಧ್ಯಕ್ಷರಿಗೆ ಸೂಚಿಸಲಾಗಿದೆ. ಯಾವುದೇ ಗುಂಪಿನೊಂದಿಗೆ ಗುರುತಿಸಿಕೊಳ್ಳದೆ ಪಕ್ಷದ ಸಂಘಟನೆಗಾಗಿ ಕೆಲಸ ಮಾಡುವಂತೆ ತಿಳಿಸಲಾಗಿದೆ. 2028ರ ವಿಧಾನಸಭೆ ಚುನಾವಣೆ ಹಾಗೂ 2029ರ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಮುಂದಿನ ಎಲ್ಲ ಚುನಾವಣೆಗಳಿಗೆ ಸಜ್ಜಾಗುವಂತೆ ಹೈಕಮಾಂಡ್ ಸೂಚಿಸಿದೆ.

60 ದಿನದಲ್ಲಿ ಜಿಲ್ಲಾ ಕಮಿಟಿ ಭರ್ತಿ

ಜಿಲ್ಲಾ ಕಾಂಗ್ರೆಸ್ ಸಮಿತಿಗಳಲ್ಲಿರುವ ಖಾಲಿ ಸ್ಥಾನಗಳನ್ನು 60 ದಿನಗಳಲ್ಲಿ ಭರ್ತಿ ಮಾಡುವ ಗುರಿ ನೀಡಲಾಗಿದೆ. ಬ್ಲಾಕ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೂ ಕೆಪಿಸಿಸಿ ವೀಕ್ಷಕರನ್ನು ಕಳುಹಿಸುವ ಕುರಿತು ಸೂಚನೆ ನೀಡಲಾಗಿದೆ. ಸಂಘಟನೆಯ ಕೆಳಹಂತದಿಂದಲೇ ಪಕ್ಷವನ್ನು ಬಲಪಡಿಸುವತ್ತ ಗಮನಹರಿಸುವಂತೆ ಜಿಲ್ಲಾಧ್ಯಕ್ಷರಿಗೆ ಸೂಚಿಸಲಾಗಿದೆ.

ಎಸ್​ಐಆರ್ ಕುರಿತೂ ಎಚ್ಚರಿಕೆ

ಸಭೆಯಲ್ಲಿ ಎಸ್‌ಐಆರ್‌ ವಿಚಾರದ ಬಗ್ಗೆಯೂ ಚರ್ಚೆ ನಡೆದಿದೆ. ಎಸ್‌ಐಆರ್‌ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತದಾರರಿಗೆ ತೊಂದರೆಯಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧ್ಯಕ್ಷರಿಗೆ ಸೂಚಿಸಲಾಗಿದೆ. ಈ ಸಂಬಂಧ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ಹೈಕಮಾಂಡ್ ನಾಯಕರು ನೀಡಿದ್ದಾರೆ.

ವಾರ್ರೂಮ್, ಕಂಟ್ರೋಲ್ ರೂಮ್ ಸಭೆ

ನೂತನ ಜಿಲ್ಲಾಧ್ಯಕ್ಷರ ಸಭೆಯ ಜೊತೆಗೆ ಕಾಂಗ್ರೆಸ್ ವಾರ್ ರೂಮ್ ಹಾಗೂ ಕಂಟ್ರೋಲ್ ರೂಮ್ ಸಿಬ್ಬಂದಿಯೊಂದಿಗೂ ಸಭೆ ನಡೆಸಲಾಗಿದೆ. ಕಾಂಗ್ರೆಸ್ ಕನೆಕ್ಟ್ ಸೆಂಟರ್‌ನ್ನು ಉದ್ಘಾಟಿಸಲಾಗಿದೆ. ಇದರ ಬೆನ್ನಲ್ಲೇ ಖಾಸಗಿ ಹೋಟೆಲ್‌ನಲ್ಲಿ ಹಿರಿಯ ನಾಯಕರೊಂದಿಗೆ ಮತ್ತೊಂದು ಮಹತ್ವದ ಸಭೆ ನಡೆದಿದೆ. ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್, ಬಿ.ಕೆ. ಹರಿಪ್ರಸಾದ್, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸಭೆಯಲ್ಲಿ ಭಾಗಿಯಾಗಿದ್ದರು. ನಿಗಮ-ಮಂಡಳಿ ಅಧ್ಯಕ್ಷರ ನೇಮಕ ಹಾಗೂ ಖಾಲಿ ಸಚಿವ ಸ್ಥಾನ ಭರ್ತಿ ಸೇರಿದಂತೆ ಹಲವು ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ನೂತನ ಜಿಲ್ಲಾಧ್ಯಕ್ಷರಿಗೆ ಹೈಕಮಾಂಡ್ ಮಹತ್ವದ ಫರ್ಮಾನು: ಹರಿಪ್ರಸಾದ್ ಕೈಗೆ ಬಲ ತುಂಬಿದ ಸುರ್ಜೆವಾಲಾ, ವೇಣುಗೋಪಾಲ್

ಒಟ್ಟಿನಲ್ಲಿ, ನೂತನ ಜಿಲ್ಲಾಧ್ಯಕ್ಷರಿಗೆ ಜವಾಬ್ದಾರಿಯ ಜೊತೆಗೆ ಆರು ತಿಂಗಳ ಡೆಡ್‌ಲೈನ್ ನೀಡಿರುವುದು ಸಭೆಯ ಪ್ರಮುಖ ಸಂದೇಶವಾಗಿದೆ. ಈ ಆರು ತಿಂಗಳ ಅವಧಿಯಲ್ಲಿ ಪಕ್ಷ ಸಂಘಟನೆಗೆ ನೀಡುವ ಕೊಡುಗೆ ಮುಂದಿನ ದಿನಗಳಲ್ಲಿ ಅವರ ಸ್ಥಾನ ಮುಂದುವರಿಯುವ ವಿಚಾರದಲ್ಲಿ ಪ್ರಮುಖವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us