ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕಾಂಗ್ರೆಸ್ ಸರಣಿ ಸಭೆ: ಮುಖಂಡರಿಗೆ ಸಿಎಂ-ಡಿಸಿಎಂ ಹೇಳಿದ್ದೇನು? ಇಲ್ಲಿದೆ ಇನ್ಸೈಡ್ ಡಿಟೇಲ್ಸ್
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಕಾಂಗ್ರೆಸ್ ಈ ಬಾರಿ ರಾಜ್ಯದಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹೊಂದಿದ್ದು, ಇದಕ್ಕೆ ಬೇಕಾದ ಕಾರ್ಯತಂತ್ರಗಳನ್ನು ರೂಪಿಸಲು ಇಂದು (ಏಪ್ರಿಲ್ 05) ಸರಣಿ ಸಭೆಗಳನ್ನು ನಡೆಸಿದೆ. ಬಹಿರಂಗ ಸಭೆಗಳ ಜೊತೆಗೆ 14 ಕ್ಷೇತ್ರಗಳ ಮುಖಂಡರ ಜೊತಗೆ ಸಿಎಂ ಡಿಸಿಎಂ ಚರ್ಚಿಸಿದ್ರು. ಇನ್ನು ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಏಪ್ರಿ;ಲ್ 05): 20 ಸ್ಥಾನ ಗೆಲ್ಲೋಕೆ ಭಾರೀ ರಣತಂತ್ರಗಳನ್ನೇ ಹಣೆಯುತ್ತಿರುವ ಕಾಂಗ್ರೆಸ್, ಇಂದು (ಏಪ್ರಿಲ್ 05) ಇಡೀ ದಿನ ಮ್ಯಾರಥಾನ್ ಸಭೆ ನಡೆಸಿತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಸಭೆ ನಡೆಸಲಾಯ್ತು. ಎರಡನೇ ಹಂತದ ಚುನಾವಣೆ ನಡೆಯುವ 14 ಕ್ಷೇತ್ರಗಳ ಮುಖಂಡರು, ಅಭ್ಯರ್ಥಿಗಳು, ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷರು,, ಪ್ರಚಾರ ಸಮಿತಿ ಅಧ್ಯಕ್ಷರು, ಮಹಿಳಾ ಪದಾಧಿಕಾರಿಗಳು, ನೂತನ ಪದಾಧಿಕಾರಿಗಳು, ಹಾಸನ ಜಿಲ್ಲಾ ಮುಖಂಡರು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ನಾಯಕರ ಜೊತೆ ಸಮಾಲೋಚನೆ ನಡೆಸಿದರು. ಪಧಾದಿಕಾರಿಗಳ ಸಭೆಯಲ್ಲಿ ಖಡಕ್ ಆಗಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಚುನಾವಣೆಯಲ್ಲಿ ಕೆಲಸ ಮಾಡಬೇಕು. ಕೆಲಸ ಮಾಡದಿದ್ರೆ, ಚುನಾವಣೆ ಮುಗಿದ್ಮೇಲೆ ಮಾಜಿಗಳಾಗುತ್ತೀರಾ ಎಂದು ಎಚ್ಚರಿ ನೀಡಿದ್ದಾರೆ.
ಎರಡನೇ ಹಂತದ ಚುನಾವಣೆ ನಡೆಯೋ ಮುಖಂಡರ ಜತೆ ಸಭೆ ನಡೆಸಿದ ಸಿಎಂ ಡಿಸಿಎಂ, ಅಸಮಾಧಾನಿತರ ಮನವೊಲಿಸಿಕೊಳ್ಳಿ ಅಂತಾ ಸಚಿವರು, ಅಭ್ಯರ್ಥಿಗಳಿಗೆ ಕಿವಿಮಾತು ನೀಡಿದ್ರು. ಒಲ್ಲರನ್ನ ಒಟ್ಟಾಗಿ ಕರೆದುಕೊಂಡು ಹೋಗಿ, ವಿರೋಧ ಕಟ್ಟಿಕೊಳ್ಳಬೇಡಿ, ವೈಮನಸ್ಸು ಬಿಟ್ಟು ಸಮಾವೇಶ ಆಯೋಜಿಸಿ, ಪ್ರಚಾರ ಮಾಡಿ ಹೆಚ್ಚು ಜನರಿಗೆ ಗ್ಯಾರಂಟಿ ತಲುಪುವಂತೆ ನೋಡಿ ಕೊಳ್ಳಿ ಎಂದು ಸಲಹೆ ನೀಡಿದರು.
ಆಪರೇಷನ್ ಹಸ್ತಕ್ಕೆ ಕರೆ!
ಇಷ್ಟೇ ಅಲ್ಲ, ಆಪರೇಷನ್ ಹಸ್ತ ಚುರುಕುಗೊಳಿಸಿ ಅಂತಾ 2ನೇ ಹಂತದ 14 ಕ್ಷೇತ್ರಗಳ ಮುಖಂಡರಿಗೆ ಸಿಎಂ, ಡಿಸಿಎಂ ಸೂಚನೆ ಕೊಟ್ಟಿದ್ದಾರೆ. 20 ಸೀಟ್ ಗೆಲ್ಲಲು ಪ್ರತಿಯೊಂದು ಮತವೂ ಮುಖ್ಯವಾಗಿರುತ್ತೆ. ಹೀಗಾಗಿ ಸ್ಥಳೀಯ, ರಾಜ್ಯ ಮಟ್ಟದಲ್ಲಿ ಯಾರು ಯಾರು ಬರುತ್ತಾರೆ ಸೇರಿಸಿಕೊಳ್ಳಿ ಎಂದು ಕರೆ ಕೊಟ್ಟಿದ್ದಾರೆ. ಇನ್ನೂ ಇದೇ ಸಭೆಯಲ್ಲಿ ಲಂಬಾಣಿ ಸಮುದಾಯದ ನಾಯಕರು ನಮ್ಮ ಸಮುದಾಯವನ್ನ ಕಡೆಗಣಿಸಲಾಗ್ತಿದೆ ಎಂದು ಗರಂ ಆಗಿದ್ದಾರೆ. ಸಚಿವ ಸ್ಥಾನ, ಲೋಕಸಭೆ ಟಿಕೆಟ್, ನಿಗಮ ಮಂಡಳಿ ಸ್ಥಾನ ನೀಡಿಲ್ಲ. ಪ್ರಚಾರಕ್ಕೆ ಹೋದ್ರೆ ಜನ ಪ್ರಶ್ನೆ ಮಾಡುತ್ತಾರೆ ಎಂದು ಪಿ.ಟಿ ಪರಮೇಶ್ವರ್ ನಾಯಕ್, ಪ್ರಕಾಶ್ ರಾಥೋಡ್ ಪ್ರಶ್ನಿಸಿದ್ದಾರೆ.
ನಾಯಕರ ಈ ಪ್ರಶ್ನೆಗೆ ಸಿಎಂ, ಡಿಸಿಎಂ ಗರಂ ಆಗಿದ್ದಾರೆ. ರುದ್ರಪ್ಪ ಲಮಾಣಿಯವರನ್ನ ವಿಧಾನಸಭೆಯ ಉಪಸಭಾಧ್ಯಕ್ಷರನ್ನಾಗಿ ಮಾಡಿದ್ದೇವೆ. ಭೀಮಾನಾಯ್ಕ್‌ರನ್ನ ಕೆಎಂಎಫ್ ಅಧ್ಯಕ್ಷನ್ನಾಗಿ ಮಾಡಿದ್ದೇವೆ. ಈ ಸಭೆಯಲ್ಲಿ ಇದನ್ನೆಲ್ಲ ಮಾತನಾಡುವುದು ಸರಿಯಲ್ಲ. ಲೋಕಸಭೆ ಬಗ್ಗೆ ಮಾತನಾಡಿ ಎಂದು ಸಿಎಂ ಡಿಸಿಎಂ ಕ್ಲಾಸ್ ತೆಗೆದುಕೊಂಡಿದ್ದಾರೆ.
ಲೋಕಸಭೆ ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಆಪರೇಷನ್!
ಇನ್ನೂ ಲೋಕಸಭೆ ಚುನಾವಣೆ ಹೊತ್ತಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರಿಗೆ ಕಾಂಗ್ರೆಸ್ ಗಾಳ ಹಾಕಿದೆ. ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಮಾಜಿ ಶಾಸಕ ಆರ್.ಶಂಕರ್, ಸಿ.ಎಂ. ಇಬ್ರಾಹಿಂ ಪುತ್ರ ಸಿ.ಎಂ. ಫೈಝ್ ಕೂಡ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ಹೀಗೆ ಆಪರೇಷನ್ ಹಸ್ತ ಸೇರಿದಂತೆ ಏನೆಲ್ಲಾ ಸಾಧ್ಯವೋ ಅಷ್ಟು ತಂತ್ರಗಾರಿಕೆ ಮಾಡಿ ಅಖಾಡ ಗೆಲ್ಲುವುದಕ್ಕೆ ಸಜ್ಜಾಗುತ್ತಿದೆ. ಆದ್ರೆ, ಬಾಗಲಕೋಟೆಯಲ್ಲಿ ಮಾತ್ರ ವೀಣಾ ಕಾಶಪ್ಪನವರ್ ಅಸಮಾಧಾನ ಕಡಿಮೆಯಾಗಿಲ್ಲ. ‘ಇನ್ನೂ ಕೂಡ ನನ್ನ ಅಸಮಾಧಾನ ಹಾಗೆ ಇದೆ ಎಂದು ಬೆಂಬಲಿಗರಿಗೆ ಸಂದೇಶ ರವಾನಿಸಿದ್ದಾರೆ. ಹೀಗಾಗಿ ಸಿಎಂ, ಡಿಸಿಎಂ, ಬಾಗಲಕೋಟೆ ಅಸಮಾಧಾನಕ್ಕೆ ಹೇಗೆ ಬಗೆಹರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.