ಬಳ್ಳಾರಿ ಹೂವಿನ ಮಾರ್ಕೆಟ್‌ನಲ್ಲಿರುವ ಮನೆ ಸೀಲ್‌ಡೌನ್; ವಸತಿ ನಿವಾಸದ ಪಕ್ಕದ 5 ಅಂಗಡಿ ಬಂದ್
ಮೊದಲ ಹಂತದ ಸಂಪರ್ಕದಲ್ಲಿ ಇರುವವರಿಗೆ ಕೊವಿಡ್ ಟೆಸ್ಟ್ ಮಾಡಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಮನೆ ಸುತ್ತಮುತ್ತಲಿನ 4ರಿಂದ 5 ಅಂಗಡಿಗಳನ್ನು ಕೂಡ ಬಂದ್ ಮಾಡಲಾಗಿದೆ.
ಬಳ್ಳಾರಿ: ಒಂದೇ ಮನೆಯ ಐವರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬಳ್ಳಾರಿ ನಗರದ ಬೆಂಗಳೂರು ರಸ್ತೆಯ ಹೂವಿನ ಮಾರುಕಟ್ಟೆಯಲ್ಲಿರುವ ಸೋಂಕಿತರ ಮನೆಯನ್ನು ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ. ಫ್ರೈಮರಿ ಕಾಂಟ್ಯಾಕ್ಟ್ನಲ್ಲಿರುವವರಿಗೆ ಕೊವಿಡ್ ಟೆಸ್ಟ್ ಮಾಡಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಮನೆ ಸುತ್ತಮುತ್ತಲಿನ 4ರಿಂದ5 ಅಂಗಡಿಗಳನ್ನು ಕೂಡ ಬಂದ್ ಮಾಡಲಾಗಿದೆ.
ಕೊರೊನಾ ಎರಡನೇ ಅಲೆಗೆ ನಲುಗಿದ ಬೆಳಗಾವಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಶುರುವಾಗಿದ್ದು, ಗ್ರಾಮದ ಖಾಸಗಿ ಶಾಲೆಯ 10 ವಿದ್ಯಾರ್ಥಿಗಳು ಮತ್ತು ಖಾಸಗಿ ಬ್ಯಾಂಕ್‌ನ 6 ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ. ವಾರದ ಹಿಂದಷ್ಟೇ ಗ್ರಾಮದಲ್ಲಿ 24 ಜನರಿಗೆ ಕೊವಿಡ್ ದೃಢಪಟ್ಟಿತ್ತು. ಈಗ ಮತ್ತೆ 16 ಜನರಿಗೆ ಕೊರೊನಾ ಸೋಂಕು ಹರಡಿದೆ. ಇನ್ನು ಗ್ರಾಮದಲ್ಲಿ ಕೊರೊನಾ ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ ಜತೆ ತಹಶೀಲ್ದಾರ್ ಮತ್ತು ಅಧಿಕಾರಿಗಳು ಸಭೆ ನಡೆಸಿದ್ದು, ಕೊವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಬಿಬಿಎಂಪಿ ಪ್ರೌಢಶಾಲೆಯ 9 ವಿದ್ಯಾರ್ಥಿಗಳಿಗೆ ಕೊರೊನಾ: ಜೋಗುಪಾಳ್ಯ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜೋಗುಪಾಳ್ಯ ಪ್ರೌಢಶಾಲೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಟಿವಿ9ಗೆ ಬಿಬಿಎಂಪಿ ವಿಶೇಷ ಆಯುಕ್ತರಾದ ಶಂಕರ್ ರೆಡ್ಡಿ ಹೇಳಿಕೆ ನೀಡಿದ್ದಾರೆ. ಇನ್ನು ಬಿಬಿಎಂಪಿ ಶಾಲೆಗಳ 8ನೇ ತರಗತಿ ಹಾಗೂ 9ನೇ ತರಗತಿ ಮಕ್ಕಳಿಗೆ ತರಗತಿಗಳನ್ನು ಶಿಫ್ಟ್ ಲೆಕ್ಕದಲ್ಲಿ ನಡೆಸಲು ಅಥವಾ ತಾತ್ಕಾಲಿಕ ವಾಗಿ ಕ್ಲೋಸ್ ಮಾಡುವ ಬಗ್ಗೆ ಆಯುಕ್ತರಿಗೆ ಮನವಿ ಮಾಡುತ್ತೇವೆ ಎಂದು ಟಿವಿ9 ಗೆ ಅವರು ತಿಳಿಸಿದ್ದಾರೆ. ಸದ್ಯ ಬಿಬಿಎಂಪಿ ಅಧಿಕಾರಿಗಳು ಜೋಗುಪಾಳ್ಯ ಬಾಲಕರ ಹೈಸ್ಕೂಲ್ಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಜೋಗುಪಾಳ್ಯ ವಾರ್ಡ್‌ನಲ್ಲಿರುವ ಬಿಬಿಎಂಪಿ ಪ್ರೌಢಶಾಲೆಗಳಾದ ಆಸ್ಟಿನ್ ಟೌನ್ ಬಾಯ್ಸ್ ಸ್ಕೂಲ್‌ನ ಇಬ್ಬರು ವಿದ್ಯಾರ್ಥಿಗಳು, ಹೇರೋಹಳ್ಳಿ ಬಿಬಿಎಂಪಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು, ಕಾಟನ್‌ಪೇಟೆಯ ಬಿಬಿಎಂಪಿ ಶಾಲೆಯ ಒಬ್ಬ ವಿದ್ಯಾರ್ಥಿಗೆ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ನಿನ್ನೆ ಶಾಲಾ ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಿದಾಗ 9 ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ.
ಬೆಂಗಳೂರಿನ ಕೊವಿಡ್ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ: ಬೆಂಗಳೂರಿನಲ್ಲಿ ಕೊವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗಾಗಿ ಒಟ್ಟು 1,800 ಬೆಡ್ ವ್ಯವಸ್ಥೆ ಮಾಡಲಾಗಿದೆ. ವಿಕ್ಟೋರಿಯಾ 400, ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 400, ಚರಕ ಆಸ್ಪತ್ರೆ 400, 3 ಕೊವಿಡ್ ಸೆಂಟರ್‌ನಲ್ಲಿ 600 ಬೆಡ್ ಅನ್ನು ಸೋಂಕಿತರಿಗಾಗಿ ಮೀಸಲಿರಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಸೋಂಕಿತರ ಚಿಕಿತ್ಸೆಗಾಗಿ ಈ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಸಿಬ್ಬಂದಿ ನಿಯೋಜನೆಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ:
ಕೊರೊನಾ ಭೀತಿ ನಡುವೆಯೂ ಕೂಲಹಳ್ಳಿಯಲ್ಲಿ ಅದ್ದೂರಿ ಜಾತ್ರೆ: ರಥೋತ್ಸವದ ಸೊಬಗನ್ನು ಕಣ್ತುಂಬಿಕೊಂಡ ಭಕ್ತಸಾಗರ