Covid Curfew: ಕರ್ನಾಟಕ ಕೊವಿಡ್ ಕರ್ಫ್ಯೂನಲ್ಲಿ ಮದ್ಯಪ್ರಿಯರಿಗೆ ಸಿಹಿಸುದ್ದಿ; ಬಾರ್ಗಳಲ್ಲಿ ಪಾರ್ಸೆಲ್ಗೆ ಅವಕಾಶ
ಮದ್ಯಪ್ರಿಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಬಾರ್ನಲ್ಲಿ ಮದ್ಯ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ಇದೆ.
ಕೊರೊನಾ ಮೊದಲನೆ ಅಲೆ ಕಾಣಿಸಿಕೊಂಡಾಗ ಏಕಾಏಕಿ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಇದರಿಂದ ಜನಸಾಮಾನ್ಯರು ಕಂಗಾಲಾಗಿದ್ದರು. ಅಲ್ಲದೆ, ಮದ್ಯಪ್ರಿಯರು ಆಲ್ಕೋಹಾಲ್ಗಾಗಿ ತುಂಬಾನೇ ತೊಂದರೆ ಅನುಭವಿಸಿದ್ದರು. ಸ್ಯಾನಿಟೈಸರ್ನಲ್ಲಿ ಆಲ್ಕೋಹಾಲ್ ಅಂಶ ಇರುತ್ತದೆ ಎಂದು ಅನೇಕರು ಅದನ್ನೇ ಕುಡಿಯೋಕೆ ಹೋಗಿದ್ದರು. ಆದರೆ, ಈ ಬಾರಿ ಹೀಗೆ ಆಗದಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದೆ. ಹೀಗಾಗಿ 15 ದಿನಗಳ ಕೊವಿಡ್ ಕರ್ಫ್ಯೂನಲ್ಲಿ ಬಾರ್ನಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಿದೆ.
ಕರ್ನಾಟಕದಲ್ಲಿ ಕೊರೊನಾ ಸೊಂಕಿನ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಹೀಗಾಗಿ 14 ದಿನಗಳ ಕಾಲ ಕರ್ನಾಟಕವನ್ನು ಲಾಕ್ಡೌನ್ ಮಾಡಲು ನಿರ್ಧರಿಸಿದ್ದು, ನಾಳೆ ಸಂಜೆಯಿಂದ ಕೊರೊನಾ ಕರ್ಫ್ಯೂ ಜಾರಿಯಾಗಲಿದೆ. 15 ದಿನಗಳ ಕಾಲ ಈ ಕಠಿಣ ನಿಯಮ ಮುಂದುವರೆಯಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಬೆಳಗ್ಗೆ 6-10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಉತ್ಪಾದನಾ ವಲಯ ಎಂದಿನಂತೆ ಮುಂದುವರಿಯುತ್ತದೆ. ಕೃಷಿ ಚಟುವಟಿಕೆಗಳಿಗೂ ಯಾವುದೇ ತೊಂದರೆ ಇಲ್ಲ. ಇದರ ಜತೆಗೆ ಮದ್ಯಪ್ರಿಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಬಾರ್ನಲ್ಲಿ ಮದ್ಯ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ಇದೆ. ಎಷ್ಟು ಗಂಟೆಯಿಂದ ಎಷ್ಟು ಗಂಟೆವರೆಗೆ ಬಾರ್ ಓಪನ್ ಇರುತ್ತದೆ ಎಂಬುದನ್ನು ಸರ್ಕಾರ ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ.
ಇನ್ನು, ಸರ್ಕಾರದ ಬೊಕ್ಕಸ ತುಂಬಲು ಆಲ್ಕೋಹಾಲ್ ಪಾತ್ರ ತುಂಬಾ ದೊಡ್ಡದಿದೆ. ಒಂದೊಮ್ಮೆ ಮದ್ಯ ಮಾರಾಟ ನಿಲ್ಲಿಸಿ ಬಿಟ್ಟರೆ ಸರ್ಕಾರಕ್ಕೆ ನಷ್ಟ ಉಂಟಾಗಲಿದೆ. ಕಳೆದ ಬಾರಿ ಹೀಗೆಯೇ ಮಾಡಿದ್ದರಿಂದ ದೊಡ್ಡ ನಷ್ಟ ಅನುಭವಿಸಿತ್ತು. ಈಗ ಹೀಗಾಗದಂತೆ ನೋಡಿಕೊಳ್ಳಲು ಸರ್ಕಾರದ ಈ ಕ್ರಮ ಬಹಳ ಮಹತ್ವ ಪಡೆದುಕೊಂಡಿದೆ.
ಬೆಂಗಳೂರಿನಲ್ಲಿ ಮದ್ಯದ ಅಂಗಡಿ ರಶ್ ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಮದ್ಯದ ಅಂಗಡಿಗಳ ಎದುರು ಜನಸಂದಣಿ ನೆರೆದಿದೆ. ಯುವಕ, ಯುವತಿಯರು ಮುಗಿಬಿದ್ದು ಮದ್ಯ ಖರೀದಿಸಿ ಚೀಲಗಳಲ್ಲಿ ಬಾಟಲಿಗಳನ್ನು ಕೊಂಡೊಯ್ಯುವುದು ಸಾಮಾನ್ಯ ದೃಶ್ಯವೆನಿಸಿದೆ. ಬೆಳಗಾವಿ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಎಂಎಸ್ಐಎಲ್ ಮಳಿಗೆಗಳ ಎದುರು ಜನರು ಕ್ಯೂ ನಿಂತಿದ್ದಾರೆ.
ಇದನ್ನೂ ಓದಿ: 18ರಿಂದ 45 ವರ್ಷದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಉಚಿತ; ಸಿಎಂ ಯಡಿಯೂರಪ್ಪ ಘೋಷಣೆ