ಕಚೇರಿಯಲ್ಲಿ ಇನ್ನುಂದೆ ಕನ್ನಡದ ಕಂಪು: ಎಲ್ಲಾ ಇಲಾಖೆಗಳಲ್ಲೂ ಕನ್ನಡ ಬಳಸುವಂತೆ ಸುತ್ತೋಲೆ
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರಬೇಕು. ಸರ್ಕಾರಿ ಆಡಳಿತ ಕನ್ನಡದಲ್ಲೇ ನಡೆಯಬೇಕು ಎಂದು ಸಾಕಷ್ಟು ಸರ್ಕಾರಿ ಆದೇಶಗಳು ಹೊರಬಿದ್ದಿವೆ. ಆದರೆ ಪರಭಾಷೆ ವ್ಯಾಮೋಹದಿಂದ ಇಂದಿಗೂ ಕನ್ನಡವನ್ನು ನಿರ್ಲಕ್ಷಿಸಲಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಮತ್ತೊಂದು ಸುತ್ತೋಲೆ ಹೊರಡಿಸಿದ್ದು, ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಕನ್ನಡವನ್ನು ಪೂರ್ಣ ಪ್ರಮಾಣದಲ್ಲಿ ಬಳಸುವಂತೆ ಸೂಚಿಸಿದೆ. ಹಾಗಾದ್ರೆ, ಸುತ್ತೋಲೆಯಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಜೂನ್ 25): ಕರ್ನಾಟಕದಲ್ಲಿ (Karnataka) ಇಂದಿಗೂ ಕನ್ನಡ ಭಾಷೆ (kannada language) ಸಮಗ್ರ ಅಭಿವೃದ್ಧಿ ಕಾಯ್ದೆ ಸಮರ್ಪಕವಾಗಿ ಅನುಷ್ಠಾನವಾಗದ ಪರಿಣಾಮ ಕನ್ನಡ ಪರಿಸ್ಥಿತಿ ಡೋಲಾಯಾಮಾನವಾಗಿದೆ. ದಿನೇ ದಿನೇ ಕನ್ನಡಕ್ಕೆ ಕುತ್ತು ಎದುರಾಗುವ ಆತಂಕ ಸೃಷ್ಟಿಯಾಗುತ್ತಿದೆ. ಈಗಾಗಲೇ ಅಂಗಡಿ ಮುಂಗಟ್ಟುಗಳ ಬೋರ್ಡ್ ನಲ್ಲಿ ಶೇ 60ರಷ್ಟು ಕನ್ನಡ ಇರಬೇಕೆಂದು ರಾಜ್ಯ ಸರ್ಕಾರ ಆದೇಶಿಸಿದೆ. ಅದು ಸರಿಯಾಗಿ ಅನುಷ್ಠಾನವಾಗಿಲ್ಲ. ಇದರ ನಡುವೆ ಇದೀಗ ರಾಜ್ಯ ಸರ್ಕಾರ, ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಕನ್ನಡವನ್ನು (Kannada) ಪೂರ್ಣ ಪ್ರಮಾಣದಲ್ಲಿ ಬಳಸುವಂತೆ ಸುತ್ತೋಲೆ ಹೊರಡಿಸಿದೆ. ಹೌದು.. ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ (shalini rajneesh) ಅವರು ಇಂದು(ಜೂನ್ 25) ಈ ಮಹತ್ವದ ಸುತ್ತೋಲೆ ಹೊರಡಿಸಿದ್ದು ಆಡಳಿತದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಸೂಚಿಸಿದೆ. ಒಂದು ವೇಳೆ ಸೂಚನೆಗಳನ್ನ ಉಲ್ಲಂಘಿಸಿದರೆ ಅಂತವರ ವಿರುದ್ಧ ವೈಯಕ್ತಿಕವಾಗಿ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಕಾರ್ಯದರ್ಶಿ ಸುತ್ತೋಲೆಯಲ್ಲೇನಿದೆ?
ಕನ್ನಡದಲ್ಲಿ ಬರುವ ಎಲ್ಲಾ ಅರ್ಜಿ, ಪತ್ರಗಳಿಗೆ ಕಡ್ಡಾಯವಾಗಿ ಕನ್ನಡದಲ್ಲಿಯೇ ಉತ್ತರಿಸಬೇಕು. ಕಚೇರಿಯ ನಾಮಪಲಕಗಳನ್ನು ಕನ್ನಡದಲ್ಲಿಯೇ ಪ್ರದರ್ಶಿಸಬೇಕು. ವಿಧಾನಮಂಡಲದ ಕಾರ್ಯಕಲಾಪಗಳು, ಪತ್ರ ವ್ಯವಹಾರ, ಗಮನಸೆಳೆಯುವ ಸೂಚನೆಯನ್ನು ಕನ್ನಡದಲ್ಲಿಯೇ ಸಲ್ಲಿಸಬೇಕು. ನೇಮಕಾತಿ, ವರ್ಗಾವಣೆ ಮತ್ತು ರಜೆ ಮಂಜೂರಾತಿ ಇತರೆ ಎಲ್ಲಾ ಸರ್ಕಾರದ ಆದೇಶಗಳನ್ನು ಕನ್ನಡದಲ್ಲಿ ಹೊರಡಿಸಲು ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಸುತ್ತೋಲೆಯಲ್ಲಿ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ನಾಮಫಲಕಗಳಲ್ಲಿ ಶೇ 60% ಕನ್ನಡ ಕಡ್ಡಾಯಕ್ಕೆ ಸುಗ್ರಿವಾಜ್ಞೆ ಹೊರಡಿಸಿದ ರಾಜ್ಯ ಸರ್ಕಾರ
ಕಛೇರಿಗಳಿಗೆ ಒದಗಿಸಿರುವ ಆಂಗ್ಲ ಭಾಷಾ ನಮೂನೆ, ದಾಖಲೆ ಪುಸ್ತಕ ಮುಂತಾದವುಗಳನ್ನು ಕನ್ನಡದಲ್ಲಿ ಭರ್ತಿ ಮಾಡಬೇಕು. ಆಂತರಿಕ ಪತ್ರ ವ್ಯವಹಾರ, ಕಡತದ ಟಿಪ್ಪಣಿ ಕನ್ನಡದಲ್ಲಿಯೇ ಇರಬೇಕು. ಕೇಂದ್ರ ಸರ್ಕಾರ, ಹೊರ ರಾಜ್ಯಗಳು ಮತ್ತು ನ್ಯಾಯಾಲಯಗಳ ಪತ್ರ ವ್ಯವಹಾರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಪತ್ರ ವ್ಯವಹಾರಗಳು ಕನ್ನಡದಲ್ಲಿಯೇ ಇರಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಆಡಳಿತದಲ್ಲಿ ಭಾಷಾ ನೀತಿಯನ್ನು ಪೂರ್ಣ ಪ್ರಮಾಣದಲ್ಲಿ ಹಾಗೂ ಎಲ್ಲಾ ಹಂತಗಳಲ್ಲಿ ಜಾರಿಗೊಳಿಸುವುದು ಎಲ್ಲ ಅಧಿಕಾರಿಗಳ ನೌಕರರ ಕರ್ತವ್ಯವಾಗಿದೆ. ಆದುದರಿಂದ ಸರ್ಕಾರ/ನಿಗಮ/ಮಂಡಳಿ/ಸ್ಥಳೀಯ ಸಂಸ್ಥೆಗಳ/ ವಿಶ್ವವಿದ್ಯಾಲಯಗಳ/ ಅನುದಾನಿತ ಸಂಘ-ಸಂಸ್ಥೆಗಳ ಎಲ್ಲಾ ಅಧಿಕಾರಿ/ ನೌಕರರು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಒಂದು ವೇಲೆ ಸೂಚನೆಗಳನ್ನ ಉಲ್ಲಂಘಿಸಿದರೆ ಅವರ ವಿರುದ್ಧ ವೈಯಕ್ತಿಕವಾಗಿ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೊರಡಿಸಿರುವ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ನಾಮಫಲಕಗಳಲ್ಲಿ ಕನ್ನಡ ಮಾಯ
ಸರ್ಕಾರಿ ಮತ್ತು ಖಾಸಗಿ ಸಂಸ್ಥೆ, ಎಲ್ಲಾ ವಾಣಿಜ್ಯ ಮಳಿಗೆ, ಅಂಗಡಿ ಮುಂಗಟ್ಟುಗಳ ನಾಮಫಲಕಗಳನ್ನು ಕನ್ನಡಲ್ಲೇ ಹಾಕಬೇಕೆಂದು ಕನ್ನಡಪರ ಸಂಘಟನೆಗಳು ಹೋರಾಟ ಮಾಡಿದ್ದವು. ಇದಕ್ಕೆ ಮಣಿದ ಸರ್ಕಾರ, ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಧನ್ಯತೆ ನಿಡಬೇಕು. ಶೇ. 60ರಷ್ಟು ಕನ್ನಡ ಭಾಷೆ ಉಳಿದ 40 ಅನ್ಯಭಾಷೆ ಬಳಕೆ ಕಡ್ಡಾಯಗೊಳಿಸಿದ್ದರೂ ಇದು ಸಂಪೂರ್ಣವಾಗಿ ಅನುಷ್ಠಾನವಾಗಿಲ್ಲ. ಇದರ ನಡುವೆ ಇದೀಗ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಇಲಾಖೆಗಳಲ್ಲಿ ಕನ್ನಡ ಬಳಕೆ ಬಗ್ಗೆ ಮಹತ್ವದ ಸೂತ್ತೋಲೆ ಹೊರಡಿಸಿದ್ದು, ಇದು ಸಮರ್ಪಕವಾಗಿ ಕಾರ್ಯರೂಪಕ್ಕೆ ಬರುತ್ತೆ ಎಂದು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Wed, 25 June 25