
ಬೆಂಗಳೂರು, ಅಕ್ಟೋಬರ್ 06: ರಾಜ್ಯದಲ್ಲಿ ಮುಂಗಾರು ಕ್ಷೀಣಿಸುತ್ತಿದ್ದಂತೆ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಇಳಿಕೆ ಕಂಡುಬರುತ್ತಿದೆ. ಮೈಸೂರು, ಮಂಡ್ಯ ಹಾಗೂ ವಿಜಯಪುರ ಭಾಗದ ಜೀವನಾಡಿಗಳಾದ ಕೆಆರ್‌ಎಸ್, ಕಬಿನಿ ಮತ್ತು ಆಲಮಟ್ಟಿ ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಕಡಿಮೆಯಾಗಿದ್ದು, ಕುಡಿಯುವ ನೀರು ಹಾಗೂ ನೀರಾವರಿಗೆ ಹೊರಹರಿವು ಮುಂದುವರಿದಿದೆ. ಜಲಾಶಯಗಳಲ್ಲಿ ಸಂಗ್ರಹವಾಗಿರುವ ಪ್ರಸ್ತುತ ನೀರಿನ ಸಾಮರ್ಥ್ಯ, ಇಂದಿನ ಒಳಹರಿವು ಹಾಗೂ ಹೊರಹರಿವಿನ ಸಂಪೂರ್ಣ ವಿವರ ಇಲ್ಲಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಇಂದು ಬೆಳಿಗ್ಗೆ 8:00 ಗಂಟೆಯ ವೇಳೆಗೆ ನೀರಿನ ಮಟ್ಟ 102.78 ಅಡಿಗಳಿಗೆ ಕುಸಿದಿದೆ. 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಈ ಜಲಾಶಯದಲ್ಲಿ ಪ್ರಸ್ತುತ 25.068 ಟಿಎಂಸಿ ನೀರು ಸಂಗ್ರಹವಿದ್ದು, ಬಳಕೆಗೆ ಲಭ್ಯವಿರುವ ನೀರು (Live Capacity) 16.689 ಟಿಎಂಸಿ ಮಾತ್ರ. ಡ್ಯಾಂಗೆ ಪ್ರಸ್ತುತ 546 ಕ್ಯೂಸೆಕ್ ಒಳಹರಿವಿದ್ದು, ನಾಲೆಗಳು ಹಾಗೂ ಕುಡಿಯುವ ನೀರು ಸರಬರಾಜು ಸೇರಿ ಒಟ್ಟು 2,914 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯದ ನೀರಿನ ಮಟ್ಟದಲ್ಲಿ ಮತ್ತಷ್ಟು ಇಳಿಕೆಯಾಗಿದೆ. 84 ಅಡಿ ಗರಿಷ್ಠ ಮಟ್ಟದ ಈ ಜಲಾಶಯದಲ್ಲಿ ಇಂದು 68.21 ಅಡಿ ನೀರು ದಾಖಲಾಗಿದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 10.82 ಟಿಎಂಸಿ ಆಗಿದ್ದರೂ, ಪ್ರಸ್ತುತ ಬಳಕೆಗೆ ಲಭ್ಯವಿರುವ ನೀರು ಕೇವಲ 1.01 ಟಿಎಂಸಿ. ಕಳೆದ 24 ಗಂಟೆಗಳಲ್ಲಿ 15 ಮಿ.ಮೀ ಮಳೆಯಾಗಿದ್ದು, ಜಲಾಶಯಕ್ಕೆ 1,154 ಕ್ಯೂಸೆಕ್ ಒಳಹರಿವು ಇದೆ. ಕಬಿನಿ ನದಿಗೆ 500 ಕ್ಯೂಸೆಕ್ ಹಾಗೂ ಬಲದಂಡೆ ನಾಲೆಗೆ 800 ಕ್ಯೂಸೆಕ್ ಸೇರಿ ಒಟ್ಟು 1,300 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಎಡದಂಡೆ ನಾಲೆಗೆ ನೀರಿನ ಹರಿವನ್ನು ಸ್ಥಗಿತಗೊಳಿಸಲಾಗಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್. ಇಂದು ಜಲಾಶಯದ ನೀರಿನ ಮಟ್ಟ 518.32 ಮೀಟರ್‌ಗೆ ತಲುಪಿದೆ. ಇಂದಿನ ವರದಿಯಂತೆ ಜಲಾಶಯಕ್ಕೆ ಯಾವುದೇ ಒಳಹರಿವು (Inflow) ಇಲ್ಲದಿದ್ದರೂ, ವಿವಿಧ ಅಗತ್ಯಗಳಿಗಾಗಿ 10,452 ಕ್ಯೂಸೆಕ್ ಪ್ರಮಾಣದ ನೀರನ್ನು ಹೊರಗೆ ಹರಿಸಲಾಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓಲದು ಇಲ್ಲಿ ಕ್ಲಿಕ್ ಮಾಡಿ