
ಬೆಂಗಳೂರು, (ಅಕ್ಟೋಬರ್ 18): ನವೆಂಬರ್ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲೇಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ರಜೆ ನೆಪದಲ್ಲಿ ಆಚರಣೆ ತಪ್ಪಿಸುವಂತಿಲ್ಲ. ವಾರದ ರಜೆಯ ಕಾರಣಕ್ಕೆ ಆಚರಣೆಯಿಂದ ವಿನಾಯಿತಿ ಪಡೆಯಲು ಅವಕಾಶವಿಲ್ಲ ಎಂದು ಖಡಕ್ ಸೂಚನೆ ನೀಡಿದೆ. ಅಲ್ಲದೇ ಕನ್ನಡದ ಹಬ್ಬ ಆಚರಣೆಯಲ್ಲಿ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ನಾಡಹಬ್ಬವಾದ ಕನ್ನಡ ರಾಜ್ಯೋತ್ಸವವನ್ನು ಪ್ರತಿವರ್ಷ ನವೆಂಬರ್ 1ರಂದು ಆಚರಿಸಲಾಗುತ್ತದೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವ ಈ ದಿನವನ್ನು ಶಾಲೆಗಳಲ್ಲಿ ಅರ್ಥಪೂರ್ಣವಾಗಿ ಆಚರಿಸುವಂತೆ ಇಲಾಖೆ ಸೂಚಿಸಿದೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು ಮತ್ತು ಖಾಸಗಿ ಶಾಲೆಗಳು ಈ ಸೂಚನೆಯನ್ನು ಪಾಲಿಸಬೇಕು. ರಾಷ್ಟ್ರೀಯ ಹಬ್ಬಗಳು, ಕರ್ನಾಟಕ ರಾಜ್ಯೋತ್ಸವ ಹಾಗೂ ಪ್ರಮುಖ ಜಯಂತಿಗಳನ್ನು ನಿಗದಿತ ದಿನಗಳಂದೇ ನಿಯಮಾನುಸಾರ ಆಚರಿಸಬೇಕು ಎಂದು ಇಲಾಖೆ ತಿಳಿಸಿದೆ. ಈ ಬಾರಿ ರಾಜ್ಯೋತ್ಸವ ಭಾನುವಾರ ಬಂದಿರುವುದರಿಂದ ಶಾಲೆಗಳಿಗೆ ಪ್ರತ್ಯೇಕ ವಿನಾಯಿತಿ ನೀಡಲಾಗಿಲ್ಲ. ಹೀಗಾಗಿ ನವೆಂಬರ್ 1ರಂದೇ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗುತ್ತದೆ.
ಕನ್ನಡ ರಾಜ್ಯೋತ್ಸವವು ಕೇವಲ ಆಚರಣೆಯ ದಿನವಲ್ಲ, ಕನ್ನಡ ಭಾಷೆ, ನೆಲ ಮತ್ತು ಸಂಸ್ಕೃತಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಸಂದರ್ಭವೂ ಹೌದು. ಈ ಹಿನ್ನೆಲೆಯಲ್ಲಿ ರಜಾದಿನವಾಗಿದ್ದರೂ ರಾಜ್ಯೋತ್ಸವ ಆಚರಣೆಯನ್ನು ತಪ್ಪಿಸಬಾರದು ಎಂಬ ನಿಲುವನ್ನು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಈ ಆದೇಶ ಬೆನ್ನಲ್ಲೇ ಖಾಸಗಿ, ಅನುದಾನಿತ ಶಾಲೆಗಳು, ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ಮುಂದಾಗಿದ್ದು, ಕನ್ನಡ ರಾಜ್ಯೋತ್ಸವದ ವಿಶೇಷ ಉಡುಗೆ ಧರಿಸಲು ಮಕ್ಕಳಿಗೆ ಸೂಚನೆ ನೀಡಲಾಗಿದೆ. ಹೌದು..ನವೆಂಬರ್ 1ರಿಂದ ಒಂದು ವಾರ ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಉಡುಗೆ ತೊಡಲು ಸೂಚನೆ ನೀಡಲಾಗಿದೆ. ಕರ್ನಾಟಕದ ಸಿಹಿ ತಿಂಡಿ, ತಿನಿಸು ಹಂಚಿ ಒಂದು ವಾರಗಳ ಕಾಲ ರಾಜ್ಯೋತ್ಸವ ಆಚರಣೆಗೆ ಮುಂದಾಗಿದ್ದು, ಶಾಲೆಗಳ ಸೂಚನೆ ಪಾಲಿಸುವಂತೆ ಪೋಷಕರಿಗೂ ಮನವಿ ಮಾಡಿವೆ. ಈ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿ ಪರಿಚಯಿಸಲು ಖಾಸಗಿ ಶಾಲೆಗಳು ಮಹತ್ವದ ಹೆಜ್ಜೆ ಇಟ್ಟಿವೆ.