ಕರ್ನಾಟಕದಲ್ಲಿ ಜೂನ್​ನಲ್ಲೇ ಶೇ 41 ರಷ್ಟು ಮಳೆ ಕೊರತೆ: ಸೂಪರ್ ಎಲ್ ನಿನೋ ಭೀತಿ

Monsoon Rain Deficit: ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಆರಂಭದಲ್ಲೇ ತೀವ್ರ ಹಿನ್ನಡೆ ಅನುಭವಿಸಿದ್ದು, ಜೂನ್ ತಿಂಗಳಿನಲ್ಲಿ ಬರೋಬ್ಬರಿ ಶೇ 41 ರಷ್ಟು ಮಳೆ ಕೊರತೆ ದಾಖಲಾಗಿದೆ. ಎಲ್ ನಿನೋ ಪ್ರಭಾವ ಹಾಗೂ ಜಾಗತಿಕ ತಾಪಮಾನದ ಹಿನ್ನೆಲೆಯಲ್ಲಿ ಮಳೆ ಕೈಕೊಟ್ಟಿದ್ದು, ಕರಾವಳಿಯಲ್ಲಿ ಶೇ 50 ರಷ್ಟು ಮತ್ತು ಬೆಂಗಳೂರಿನಲ್ಲಿ ಶೇ 25 ರಷ್ಟು ಕೊರತೆಯಾಗಿದೆ.

ಕರ್ನಾಟಕದಲ್ಲಿ ಜೂನ್​ನಲ್ಲೇ ಶೇ 41 ರಷ್ಟು ಮಳೆ ಕೊರತೆ: ಸೂಪರ್ ಎಲ್ ನಿನೋ ಭೀತಿ
ಸಾಂದರ್ಭಿಕ ಚಿತ್ರ
Image Credit source: tv9

Updated on: Jun 26, 2026 | 8:11 AM

ಮುಖ್ಯಾಂಶಗಳು

  • ರಾಜ್ಯದಲ್ಲಿ ಶೇ 41 ಮಳೆ ಕೊರತೆ
  • ಕರಾವಳಿಯಲ್ಲಿ ಶೇ 50 ರಷ್ಟು ಮಳೆ ಕೊರತೆ
  • 122 ತಾಲೂಕುಗಳಲ್ಲಿ ನೀರಿನ ಸಮಸ್ಯೆ ತೀವ್ರ

ಬೆಂಗಳೂರು, ಜೂನ್ 26: ಕರ್ನಾಟಕದಲ್ಲಿ ಈ ವರ್ಷದ ನೈಋತ್ಯ ಮುಂಗಾರು (Monsoon) ಆರಂಭದ ಮೊದಲ ತಿಂಗಳಿನಲ್ಲೇ ತೀವ್ರ ಆಘಾತ ನೀಡಿದೆ. ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಹವಾಮಾನ ತಜ್ಞರು ಇದನ್ನು ‘ವಿಫಲ ಮುಂಗಾರು’ ಎಂದು ಘೋಷಿಸಿದ್ದಾರೆ. ಜೂನ್ ತಿಂಗಳಿನಲ್ಲಿ ಇಡೀ ಕರ್ನಾಟಕದಲ್ಲಿ ಸರಾಸರಿ ಶೇ 41 ರಷ್ಟು ಮಳೆ ಕೊರತೆ ಕಂಡುಬಂದಿದೆ. ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ನಿರೀಕ್ಷಿತ ಪ್ರಮಾಣದ ಪೂರಕ ವಾತಾವರಣ (Weather Systems) ರೂಪುಗೊಳ್ಳದ ಕಾರಣ ಮುಂಗಾರು ಮಾರುತಗಳು ತೀರಾ ದುರ್ಬಲಗೊಂಡಿದ್ದು, ಇದು ದೇಶ ಹಾಗೂ ರಾಜ್ಯದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುವ ಮುನ್ಸೂಚನೆ ನೀಡಿದೆ.

ವಾಡಿಕೆಗಿಂತ ಭಾರಿ ಕುಸಿತ ಕಂಡ ಮುಂಗಾರು ಮಳೆ ಪ್ರಮಾಣ

ಹವಾಮಾನ ಇಲಾಖೆಯ ಅಧಿಕೃತ ದತ್ತಾಂಶಗಳ ಪ್ರಕಾರ, ಜೂನ್ 25 ರ ಅವಧಿಗೆ ರಾಜ್ಯದಲ್ಲಿ ವಾಡಿಕೆಯಾಗಿ 162.5 ಮಿಮೀ ಮಳೆಯಾಗಬೇಕಿತ್ತು. ಆದರೆ ಕೇವಲ 95.2 ಮಿಮೀ ಮಳೆ ದಾಖಲಾಗಿದೆ. ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 89 ಮಿಮೀ ವಾಡಿಕೆ ಮಳೆಗೆ ಬದಲಾಗಿ ಕೇವಲ 66 ಮಿಮೀ ಮಳೆಯಾಗಿದೆ.

ಎಲ್ ನಿನೋ ಪ್ರಭಾವವೇ ಕಾರಣ

ಈ ಬಾರಿ ಮುಂಗಾರು ವೈಫಲ್ಯಕ್ಕೆ ಎಲ್ ನಿನೋ (El Nino) ಪ್ರಭಾವ ಪ್ರಮುಖವಾಗಿದೆ ಎಂದು ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಸಿಎಸ್ ಪಾಟೀಲ್ ತಿಳಿಸಿದ್ದಾರೆ. ಮುಂಗಾರು ಅವಧಿಯಲ್ಲೂ ಮಳೆ ಮಾರುತಗಳು ದುರ್ಬಲವಾಗಿರುವುದರಿಂದ ರಾಜ್ಯದ ಹಲವೆಡೆ ತಾಪಮಾನ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಇತ್ತೀಚೆಗೆ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕರಾವಳಿ ಕರ್ನಾಟಕದಲ್ಲಿ ಶೇ 50 ರಷ್ಟು ಮತ್ತು ಬೆಂಗಳೂರಿನಲ್ಲಿ ಶೇ 25 ರಷ್ಟು ಮಳೆ ಕೊರತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಸೂಪರ್ ಎಲ್ ನಿನೋ ಎದುರಿಸಲು ಸಜ್ಜಾಗಿ: ಸಚಿವ ಪರಮೇಶ್ವರ್ ಸೂಚನೆ

ಮಳೆಯ ತೀವ್ರ ಕೊರತೆ ಮತ್ತು ನೀರಿನ ಬಿಕ್ಕಟ್ಟಿನ ಆತಂಕದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ‘ಸೂಪರ್ ಎಲ್ ನಿನೋ’ ಪ್ರಭಾವದಿಂದಾಗಿ ಮುಂಬರುವ ತಿಂಗಳುಗಳಲ್ಲಿ ರಾಜ್ಯದಲ್ಲಿ ಎದುರಾಗಬಹುದಾದ ಭೀಕರ ಬರಗಾಲದಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: ಎಲ್ ನಿನೋ ಆತಂಕ: ಮುಂಗಾರು ಮಳೆಗೆ ಕಂಟಕ, ದೇಶಾದ್ಯಂತ ಬರಗಾಲದ ಭೀತಿ!

ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಸದ್ಯ ರಾಜ್ಯದ 122 ತಾಲೂಕುಗಳು ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿವೆ. ಈ ಪೈಕಿ 139 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, 669 ಹಳ್ಳಿಗಳ ದಾಹ ನೀಗಿಸಲು 789 ಖಾಸಗಿ ಬೋರ್‌ವೆಲ್‌ಗಳನ್ನು ಸರ್ಕಾರ ವಶಕ್ಕೆ ಪಡೆದುಕೊಂಡಿದೆ. ತಜ್ಞರು ಕ್ಲೌಡ್ ಸೀಡಿಂಗ್ (ಮೋಡ ಬಿತ್ತನೆ) ಸದ್ಯಕ್ಕೆ ಅಸಾಧ್ಯ ಎಂದಿದ್ದು, ಸರ್ಕಾರಗಳು ದೀರ್ಘಾವಧಿಯ ಬರ ನಿರ್ವಹಣಾ ಯೋಜನೆಗಳನ್ನು ರೂಪಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us