ರಾಜ್ಯದ ರೈತರಿಗೆ ಸಿಹಿಸುದ್ದಿ ನೀಡಿ ಮೋದಿ ಸರ್ಕಾರ: ಬೆಂಬಲ ಬೆಲೆ ಯೋಜನೆಯಡಿ ಭರ್ಜರಿ ಬೆಳೆ ಖರೀದಿ, ಜೋಶಿ ಧನ್ಯವಾದ
ಕೇಂದ್ರ ಸರ್ಕಾರವು ಕರ್ನಾಟಕದ ರೈತರಿಗೆ ಮಹತ್ವದ ಶುಭಸುದ್ದಿ ನೀಡಿದೆ. 2026-27ರ ಮುಂಗಾರು ಋತುವಿನಲ್ಲಿ ಹೆಸರುಕಾಳು, ಸೋಯಾಬೀನ್ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ನೇರವಾಗಿ ಖರೀದಿಸಲು ಅನುಮೋದನೆ ನೀಡಿದೆ. ಇದರಿಂದ ರೈತರಿಗೆ ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಿ ಸಿಗಲಿದ್ದು, ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಉಂಟಾಗಲಿದೆ. ನೇರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುವ ಮೂಲಕ ರೈತರಿಗೆ ಆರ್ಥಿಕ ಭದ್ರತೆ ಸಿಗಲಿದೆ.

ದೆಹಲಿ, ಸೆ. 29: ರಾಜ್ಯದಲ್ಲಿ ರೈತರ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿರುವ ಸಮಯದಲ್ಲೇ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಇದೀಗ ರಾಜ್ಯದ ಕೃಷಿಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಶುಭಸುದ್ದಿ ಸಿಕ್ಕಿದೆ. 2026-27ನೇ ಸಾಲಿನ ಮುಂಗಾರು (ಖರೀಫ್) ಋತುವಿನಲ್ಲಿ ಕರ್ನಾಟಕದ ಪ್ರಮುಖ ಬೆಳೆಗಳಾದ ಹೆಸರುಕಾಳು, ಸೋಯಾಬೀನ್ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ನೇರವಾಗಿ ರೈತರಿಂದ ಖರೀದಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಮಹತ್ವದ ಪ್ರಸ್ತಾವನೆಗೆ ತಕ್ಷಣವೇ ಒಪ್ಪಿಗೆ ಸೂಚಿಸಿದ್ದು, ರಾಜ್ಯದ ಲಕ್ಷಾಂತರ ರೈತರಿಗೆ ಇದರಿಂದ ಭಾರಿ ಅನುಕೂಲವಾಗಲಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಎಕ್ಸ್ ಖಾತೆ ಹಂಚಿಕೊಂಡಿದ್ದಾರೆ.
ಬೆಂಬಲ ಬೆಲೆಯಡಿ (PSS) ಖರೀದಿಯಾಗಲಿರುವ ಧಾನ್ಯಗಳ ವಿವರ:
ಬೆಲೆ ಬೆಂಬಲ ಯೋಜನೆ ಅಡಿಯಲ್ಲಿ ರಾಜ್ಯದಿಂದ ನಿಗದಿತ ಪ್ರಮಾಣದ ಧಾನ್ಯಗಳನ್ನು ಸರ್ಕಾರವೇ ನೇರವಾಗಿ ಖರೀದಿಸಲಿದೆ:
ಸೋಯಾಬೀನ್: 1,15,500 ಮೆಟ್ರಿಕ್ ಟನ್
ಹೆಸರುಕಾಳು (ಮೂಂಗ್): 38,250 ಮೆಟ್ರಿಕ್ ಟನ್
ಸೂರ್ಯಕಾಂತಿ: 13,413 ಮೆಟ್ರಿಕ್ ಟನ್
ರಾಜ್ಯದಲ್ಲಿ ಮುಂಗಾರು ಬೆಳೆಗಳು ಮಾರುಕಟ್ಟೆಗೆ ಬರುತ್ತಿದ್ದು, ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ಸರ್ಕಾರ ಕೇಂದ್ರ ಕೃಷಿ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದವು. ಈ ಮನವಿಗೆ ತಕ್ಷಣ ಸ್ಪಂದಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಚಿವ ಜೋಶಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
ಕರ್ನಾಟಕದ ರೈತ ಬಾಂಧವರ ಹಿತ ಕಾಯಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮತ್ತೊಂದು ಪ್ರಮುಖ ಹಾಗೂ ರೈತಪರ ನಿರ್ಧಾರವನ್ನು ಕೈಗೊಂಡಿದೆ.
2026-27ರ ಮುಂಗಾರು (ಖರೀಫ್) ಋತುವಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ (PSS) ರಾಜ್ಯದ ಪ್ರಮುಖ ಬೆಳೆಗಳನ್ನು ಖರೀದಿಸಲು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್… pic.twitter.com/lzaYPO0NQV
— Pralhad Joshi (@JoshiPralhad) September 29, 2026
“ರೈತರ ಶ್ರಮಕ್ಕೆ ತಕ್ಕ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ, ಕರ್ನಾಟಕದ ಕೃಷಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಮುಖ ಪ್ರಸ್ತಾವನೆಗೆ ತಕ್ಷಣವೇ ಸ್ಪಂದಿಸಿ ಅನುಮೋದನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ರಾಜ್ಯದ ಸಮಸ್ತ ರೈತರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.” ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಇದನ್ನೂ ಓದಿ; ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಯ್ದುಕೊಳ್ಳಲು ಮೋದಿ ಸರ್ಕಾರ ಬದ್ಧ ಎಂದ ಪ್ರಲ್ಹಾದ್ ಜೋಶಿ: ಸಮಸ್ಯೆಗಳ ಬಗ್ಗೆ ಚರ್ಚೆಗೆ ಆಹ್ವಾನ
ರೈತರಿಗೆ ಸಿಗುವ ಪ್ರಮುಖ ಪ್ರಯೋಜನಗಳು:
ಮಧ್ಯವರ್ತಿಗಳ ಹಾವಳಿಗೆ ಬ್ರೇಕ್: ಬೆಂಬಲ ಬೆಲೆ ಖರೀದಿ ಕೇಂದ್ರಗಳು ಶೀಘ್ರವೇ ಆರಂಭವಾಗಲಿದ್ದು, ರೈತರು ದಲ್ಲಾಳಿಗಳು ಹಾಗೂ ಮಧ್ಯವರ್ತಿಗಳಿಗೆ ಕಡಿಮೆ ದರದಲ್ಲಿ ಬೆಳೆ ಮಾರಾಟ ಮಾಡುವುದು ತಪ್ಪಲಿದೆ.
ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ: ಸರ್ಕಾರವೇ ಬೃಹತ್ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸುವುದರಿಂದ ಮುಕ್ತ ಮಾರುಕಟ್ಟೆಯಲ್ಲೂ ದರ ಕುಸಿಯದೆ ರೈತರಿಗೆ ಸೂಕ್ತ ಬೆಲೆ ಸಿಗಲಿದೆ.
ಸಮಯಕ್ಕೆ ಸರಿಯಾಗಿ ಹಣ ಪಾವತಿ: ರೈತರಿಂದ ಖರೀದಿಸಿದ ಧಾನ್ಯಗಳಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೇ (DBT) ಹಣ ಜಮಾ ಮಾಡುವ ವ್ಯವಸ್ಥೆ ಜಾರಿಯಲ್ಲಿರಲಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:37 pm, Tue, 29 September 26




