ಮಧ್ಯವರ್ತಿಗಳಿಲ್ಲದೆ ಫಲಾನುಭವಿಗಳಿಗೆ ತಲುಪಿದ 5 ಗ್ಯಾರೆಂಟಿ: 1 ವರ್ಷದ ಸಾಧನೆ ಬಿಚ್ಚಿಟ್ಟ ಸಿದ್ದರಾಮಯ್ಯ

| Updated By: ವಿವೇಕ ಬಿರಾದಾರ

Updated on: May 20, 2024 | 1:08 PM

Karnataka Government 1 year: ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ (ಮೇ 20) ಒಂದು ವರ್ಷ ಪೂರ್ಣವಾಯಿತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಪ್ರೆಸ್​ಕ್ಲಬ್​​ನಲ್ಲಿ ಮಾಧ್ಯಮ ಸಂವಾದ ನಡೆಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಒಂದು ವರ್ಷದ ಸಾಧನೆ ತಿಳಿಸಿದರು.

ಮಧ್ಯವರ್ತಿಗಳಿಲ್ಲದೆ ಫಲಾನುಭವಿಗಳಿಗೆ ತಲುಪಿದ 5 ಗ್ಯಾರೆಂಟಿ: 1 ವರ್ಷದ ಸಾಧನೆ ಬಿಚ್ಚಿಟ್ಟ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, ಮೇ 20: ನಾವು ವಿಧಾನಸಭೆ ಚುನಾವಣೆ ಪೂರ್ವ ಐದು ಪ್ರಮುಖ ಗ್ಯಾರಂಟಿಗಳ (Guarantee) ಭರವಸೆಯನ್ನು ನೀಡಿದ್ವಿ. ರಾಜ್ಯದ ಜನತೆಗೆ ನಾವು ಕೊಟ್ಟಿದ್ದ ವಚನವನ್ನ ಈಡೇರಿಸಿದ್ದೇವೆ ಅಧಿಕಾರಕ್ಕೆ ಬಂದ ತಕ್ಷಣ ವಿಳಂಬ ಮಾಡದೇ ಜಾರಿ ಮಾಡಿದ್ದೇವೆ. ಯಾವುದೆ ಮಧ್ಯವರ್ತಿಗಳಿಲ್ಲದೆ ಫಲಾನುಭವಿಗಳಿಗೆ ಐದು ಗ್ಯಾರೆಂಟಿ ತಲುಪಿದೆ. ಐದು ಗ್ಯಾರಂಟಿಗಳಿಗೆ 36 ಸಾವಿರ ಕೋಟಿ ಖರ್ಚು ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ (ಮೇ 20) ಒಂದು ವರ್ಷ ಪೂರ್ಣವಾಯಿತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಪ್ರೆಸ್​ಕ್ಲಬ್​​ನಲ್ಲಿ ಮಾಧ್ಯಮ ಸಂವಾದ ನಡೆಸಿದರು.

ಅನ್ನಭಾಗ್ಯ ಯೋಜನೆ ಜಾರಿ ಮಾಡಲು ಕೇಂದ್ರ ಸಹಕರಿಸಲಿಲ್ಲ. ಭಾರತದ ಆಹಾರ ನಿಗಮ (FCI)ನಲ್ಲಿ ದಾಸ್ತಾನು ಇದ್ದರೂ ಅಕ್ಕಿ ಕೊಡಲು ನಿರಾಕರಿಸಿದರು. ಭಾರತದ ಆಹಾರ ನಿಗಮ ಡೆಪ್ಯುಟಿ ಮ್ಯಾನೇಜರ್​​ನ ಕರೆದು ಮಾತಾಡಿದೆ. ಒಂದು ಕೆಜಿ ‌ಅಕ್ಕಿಗೆ 34 ರೂ. ಕೊಡುತ್ತೇವೆ ಅಂತ ಬರವಣಿಗೆ ಮೂಲಕ ಕೊಟ್ಟೆವು. ಆದರೂ ಅಕ್ಕಿ ಕೊಡಲಿಲ್ಲ. ನಂತರ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳ ಬಳಿ ಅಕ್ಕಿ ನೀಡುವಂತೆ ಮನವಿ ಮಾಡಿದ್ವಿ. ಆದರೂ ಅಕ್ಕಿ ಸಿಗಲಿಲ್ಲ. ಸಂಪುಟದಲ್ಲಿ ಅಕ್ಕಿ ಬದಲಾಗಿ ಫಲಾನುಭವಿಗಳ ಖಾತೆಗೆ ಹಣ ಹಾಕುವುದು ಅಂತ ನಿರ್ಣಯ ಆಯ್ತು. ಬಳಿಕ ಕಳೆದ ವರ್ಷ ಜುಲೈನಿಂದ ಹಣ ಕೊಡಲು ಆರಂಭಿಸಿದ್ವಿ ಎಂದು ತಿಳಿಸಿದರು.

ಕಳೆದ ವರ್ಷ ಆಗಸ್ಟ್​​ನಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿಗೆ ಬಂತು. ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ಕೊಡುತ್ತಿದ್ದೇವೆ. ನಾವು ಅಧಿಕಾರಕ್ಕೆ ಬಂದ 9 ತಿಂಗಳೊಳಗೆ 5 ಗ್ಯಾರಂಟಿ ಜಾರಿಯಾಗಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ 1 ಕೋಟಿ 20 ಲಕ್ಷ ಮನೆ ಯಜಮಾನಿಯರಿಗೆ ನೇರವಾಗಿ ಖಾತೆಗಳಿಗೆ ಹಣ ಹಾಕಲಾಗುತ್ತಿದೆ ಎಂದರು.
ಗೃಹ ಜ್ಯೋತಿ ಅಡಿಯಲ್ಲಿ 1 ಕೋಟಿ 60 ಲಕ್ಷ ಜನರಿಗೆ ಫ್ರೀ ಕರೆಂಟ್​ ಕೊಡುತ್ತಿದ್ದೇವೆ. ಜೂ.11 ರಂದು‌‌ ಶಕ್ತಿ ಯೋಜನೆ ಜಾರಿ ಮಾಡಿದ್ವಿ. ಶಕ್ತಿ‌ ಯೋಜನೆ ಏಪ್ರಿಲ್ ಕೊನೆಯವರೆ 21 ಕೋಟಿ‌ 33 ಲಕ್ಷಕ್ಕೂ ಅಧಿಕ ಮಹಿಳೆಯರು ಪ್ರಯಾಣ ಮಾಡಿದ್ದಾರೆ. 4857 ಕೋಟಿ ಖರ್ಚು ಮಾಡಿದ್ದೇವೆ. ಅನ್ನಭಾಗ್ಯ ಯೋಜನೆ 4 ಕೋಟಿ 10 ಲಕ್ಷ ಫಲಾನುಭವಿಗಳಿಗೆ 5754.6 ಕೋಟಿ ಹಣ ವರ್ಗಾವಣೆ ಮಾಡಿದ್ದೇವೆ.

ಇದನ್ನೂ ಓದಿ: ನುಡಿದಂತೆ ನಡೆದು, ಸವಾಲುಗಳ ಮಧ್ಯೆಯೇ 1 ವರ್ಷ ಪೂರೈಸಿದ ಸಿದ್ದರಾಮಯ್ಯ ಸರ್ಕಾರ

1.60 ಕೋಟಿ ಜನರಿಗೆ ಗೃಹಜ್ಯೋತಿ ಯೋಜನೆಯಡಿ ಫ್ರೀ ಕರೆಂಟ್ ನೀಡಿದ್ದೇವೆ. ಇದಕ್ಕೆ 3436 ಕೋಟಿ ರೂ. ಖರ್ಚು ಆಗಿದೆ. ಗೃಹಲಕ್ಷ್ಮಿ 1 ಕೋಟಿ 20 ಲಕ್ಷ ಯಜಮಾನಿಯರಿಗೆ 20 ಸಾವಿರ 293 ಕೋಟಿ 49 ಲಕ್ಷ ಖರ್ಚು ಮಾಡಿದ್ದೇವೆ. ಯುವನಿಧಿ ಯೋಜನೆಯಡಿ 1 ಲಕ್ಷದ 53 ಸಾವಿರ ಫಲಾನುಭವಿಗಳಿಗೆ DBT ಮೂಲಕ ಹಣ ವರ್ಗಾವಣೆ ಮಾಡಿದ್ದೇವೆ. ಯುವಕರಿಗೆ ಕೌಶಲ್ಯಭೀವೃದ್ಧಿ ಇಲಾಖೆಯಿಂದ ಉದ್ಯೋಗ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಗ್ಯಾರೆಂಟಿಗಳನ್ನು ಜಾರಿಗೆ ತರಲು ಆಗೊಲ್ಲ ಅಂತ ವಿಪಕ್ಷಗಳು ಟೀಕೆ ಮಾಡಿದವು. ಲೋಕಸಭೆ ಚುನಾವಣೆ ಬಳಿಕ ಗ್ಯಾರೆಂಟಿ ನಿಲ್ಲಿಸುತ್ತಾರೆ ಅಂತ ಅಪಪ್ರಚಾರ ಮಾಡಿದರು. ಐದೂ ವರ್ಷವೂ ನಮ್ಮ ಐದು ಯೋಜನೆಗಳು ಮುಂದುವರೆಯುತ್ತೆ. ಯಾವುದೇ ಯೋಜನೆಗಳು ನಿಲ್ಲಿಸುವುದಿಲ್ಲ. ತಲಾ ಆದಾಯದಲ್ಲಿ ಅಭಿವೃದ್ಧಿ ಮಾತ್ರವಲ್ಲ, 2023 ಬಜೆಟ್​ನಲ್ಲಿ 54 ಸಾವಿರದ 374 ಕೋಟಿ ಖರ್ಚು ಮಾಡುತ್ತೇವೆ ಅಂತ ಹೇಳಿದ್ವಿ. ಆದರೆ ನಾವು ಖರ್ಚು ಮಾಡಿದ್ದು 56 ಸಾವಿರ ಕೋಟಿ ಖರ್ಚು ಮಾಡಿದ್ದೇವೆ ಎಂದರು.

ನೀರಾವರಿಗೆ ಬಜೆಟ್​ನಲ್ಲಿ 16369 ಕೋಟಿ‌‌ ಹೇಳಿದ್ದೀವೆ. 18,198 ಕೋಟಿ‌ 34 ಲಕ್ಷ ನೀರಾವರಿಗೆ ಖರ್ಚು ಮಾಡಿದ್ದೇವೆ. ಲೋಕೋಪಯೋಗಿ ಇಲಾಖೆಗೆ 9727 ಕೋಟಿ‌ ರೂ. ಅನುದಾನ ಬಜೆಟ್​ನಲ್ಲಿ ಘೋಷಣೆ ಮಾಡಿದ್ದೇವೆ. 9601 ಕೋಟಿ ಖರ್ಚು ಮಾಡಿದ್ದೇವೆ. ಇದೆಲ್ಲ ಅಭಿವೃದ್ಧಿ ಅಲ್ವಾ? ಎಂದು ಪ್ರಶ್ನಿಸಿದರು.

ಖಜಾನೆ ಖಾಲಿ ಆಗಿ ಬಿಟ್ಟಿದೆ, ಪಾಪರ್ ಸರ್ಕಾರ ಎಂದು ಬಿಎಸ್​ ಯಡಿಯೂರಪ್ಪ ಹೇಳುತ್ತಾರೆ. ಪಾಪರ್ ಆಗಿದಿದ್ದರೆ ಇಷ್ಟು ಹಣ ಖರ್ಚು ಮಾಡಲು ಆಗ್ತಾ ಇರುತ್ತಿತ್ತಾ? ಅವರ ಸುಳ್ಳು ಸತ್ಯಕ್ಕೆ ಹತ್ತಿರವಾಗಿರಬೇಕು ಅಲ್ವಾ? ಇದು ಸುಳ್ಳಿನ ಪರಮಾವಧಿ ಎಂದು ವಾಗ್ದಾಳಿ ಮಾಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ 50 ಲಕ್ಷದಿಂದ 1 ಕೋಟಿಯವರಿಗೆ ಕಾಂಟ್ರ್ಯಾಕ್ಟ್​ನಲ್ಲಿ‌ ಮೀಸಲಾತಿ ಮಾಡಿದ್ದು ಯಾರು? ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗದವರ ಆ್ಯಕ್ಟ್ ಮೋದಿ‌ ಮಾಡಿದ್ದಾರಾ?ನಾವೆಲ್ಲಿ ಅನ್ಯಾಯ ಮಾಡಿದ್ದೀವಿ? ಅಲ್ಪಸಂಖ್ಯಾತರಿಗೆ ಇದ್ದ ಮೀಸಲಾತಿ ಕಿತ್ತು ಮುಸಲ್ಮಾನರಿಗೆ ಕೊಡುತ್ತಾರೆ ಅಂತ ಮೋದಿ ಹೇಳುತ್ತಾರೆ. 1994ರಲ್ಲಿ ಶೇ 4 ರಷ್ಟು ಮೀಸಲಾತಿಯನ್ನ ಮುಸಲ್ಮಾನರಿಗೆ ಕೊಡಲಾಗಿದೆ. ಪ್ರವರ್ಗ 1 ಕ್ಕೆ ಶೇ 5 ರಷ್ಟು, ಮೀಸಲಾತಿ, ಪ್ರವರ್ಗ 2ಕ್ಕೆ ಶೇ15 ರಷ್ಟು, 2 (ಬಿ) ಗೆ ಶೇ 4 ರಷ್ಟು, 3 (ಬಿ)ಗೆ ಶೇ 4 ರಷ್ಟು, 3 (ಎ) ಮತ್ತು (ಬಿ) ಗೆ ಶೇ 4 ರಷ್ಟು ಮೀಸಲಾತಿ ಇದೆ. ಅದಕ್ಕಾಗಿಯೇ 2 ಬಿ ಮೀಸಲಾತಿ‌ ಮುಸಲ್ಮಾನರಿಗೆ ಕೊಡಲಾಗಿದೆ. ಇದು 30 ವರ್ಷಗಳಿಂದಲೂ ಜಾರಿ ಇದೆ ಎಂದರು.

ಹುಬ್ಬಳ್ಳಿಯಲ್ಲಿ‌ ಎರಡು ಕೊಲೆ‌ ಆಗಿದವು. ನಾನು ಗಮನಿಸಿದ್ದೇನೆ. ನೇಹಾ ಹಿರೇಮಠ ಕೇಸ್​ನಲ್ಲಿ‌ ಅಪರಾಧಿಯನ್ನು ಹಿಡಿದಿದ್ದೇವೆ. ಪ್ರಕರಣ ವಿಶೇಷ ನ್ಯಾಯಾಲಯದಲ್ಲಿದೆ.  ಇನ್ನೊಂದು ಬೆಳಗಿನಜಾವವೇ ಆಗಿದೆ. ಇದಕ್ಕೆ ಕಾನೂನು‌ ಸುವ್ಯವಸ್ಥಿತ ಹಾಳಾಗಿದೆ ಅನ್ನೋದು‌ ತಪ್ಪು. 2023 ರಲ್ಲಿ 431 ಕೊಲೆ ಆಗಿದ್ದವು. 2023ರಲ್ಲಿ 446 ಕೊಲೆ, 2024ರಲ್ಲಿ 430 ಕೊಲೆಗಳಾಗಿವೆ. ಅಂಕಿ ಅಂಶ ನೋಡಿದಾಗ ಹಿಂದನ ವರ್ಷಗಳಿಗಿಂತ ಕಡಿಮೆ ಆಗಿದೆ. ಅಗತ್ಯ ಕ್ರಮ ತೆಗೆದುಕೊಳ್ಳಲು‌ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಸರ್ಕಾರದಿಂದ ತೆಗೆದುಕೊಳ್ಳಬೇಕಾದ ಎಲ್ಲ ಕ್ರಮಗಳನ್ನ‌ ತೆಗೆದುಕೊಂಡಿದ್ದೇವೆ. ಎಲ್ಲವನ್ನೂ ಪೊಲೀಸರು ತಡೆಯಲು ಆಗಲ್ಲ. ಕರ್ತವ್ಯ ಲೋಪ ಆಗಿದೆ ಅಂತ ಕೆಲವು ಪೊಲೀಸರನ್ನು ಅಮಾನತು ಮಾಡಲಾಗಿದೆ. ಕೊಲೆಯನ್ನ ನಾನು‌ ಖಂಡಿಸುತ್ತೇನೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

Published On - 1:04 pm, Mon, 20 May 24