
ಬೆಂಗಳೂರು, ಮಾರ್ಚ್ 01: ಇರಾನ್, ಇಸ್ರೇಲ್ ಯುದ್ಧದಿಂದ (Israel–Iran War) ಅರಬ್ ರಾಷ್ಟ್ರಗಳಲ್ಲಿ ಕನ್ನಡಿಗರು ಪರದಾಡುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಕನ್ನಡಿಗರ ನೆರವಿಗೆ ಮುಂದಾಗಿದೆ. ಕನ್ನಡಿಗರ ಜೊತೆ ಫೋನ್ ಮೂಲಕ ಮಾತುಕತೆ ನಡೆಸಿ ಧೈರ್ಯ ಹೇಳುತ್ತಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ವಿಚಾರವಾಗಿ ರಾಜ್ಯ ಸರ್ಕಾರ ವಿದೇಶಾಂಗ ಸಚಿವಾಲಯದ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಇಲ್ಲಿಯವರೆಗೆ ಸುಮಾರು 200 ಜನರನ್ನು ಸಂಪರ್ಕಿಸಿರುವುದಾಗಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ, ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ (Munish Moudgil) ತಿಳಿಸಿದ್ದಾರೆ.
ಈ ಬಗ್ಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ, ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಇರಾನ್, ಇಸ್ರೇಲ್ ಯುದ್ಧ ಹಿನ್ನೆಲೆ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿಕೊಂಡಿರುವ ರಾಜ್ಯದ ಜನರನ್ನು ಕರೆತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.
ಸದ್ಯ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ವಿವರಗಳನ್ನು ಸಂಗ್ರಹಿಸಿ, ಅವರ ಸ್ಥಿತಿಗತಿ ಕುರಿತು ಸಚಿವಾಲಯದಿಂದ ಮಾಹಿತಿ ಪಡೆಯಲು ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಇಲ್ಲಿಯವರೆಗೆ ಸುಮಾರು 200 ಜನರು ಸಂಪರ್ಕಿಸಿರುವುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಯುದ್ಧ: ಹೊರದೇಶಗಳಲ್ಲಿ ಸಿಲುಕಿರುವ ರಕ್ಷಣೆಗೆ ಕೋಲಾರ ಜಿಲ್ಲಾಡಳಿತದಿಂದ ಸಹಾಯವಾಣಿ
ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಾವು ಸಂಪರ್ಕದಲ್ಲಿದ್ದು, ಸದ್ಯ ಲಭ್ಯವಾದ ಮಾಹಿತಿ ಪ್ರಕಾರ ಎಲ್ಲರೂ ಸುರಕ್ಷಿತರಾಗಿದ್ದಾರೆ. ವಿಮಾನ ಹಾರಾಟ ವ್ಯವಸ್ಥೆ ಆರಂಭಗೊಳ್ಳುತ್ತಿದ್ದಂತೆ ಅವರನ್ನು ಸ್ಥಳಾಂತರಿಸಲು ತಕ್ಷಣ ಕ್ರಮಕೈಗೊಳ್ಳಲಾಗುವುದು. ಮುಂದಿನ ಎಲ್ಲಾ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಮುನೀಶ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ.
ಇನ್ನು ಕನ್ನಡಿಗರನ್ನು ಕರೆತರುವ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ತೊಂದರೆ ಆಗದಂತೆ ಎಲ್ಲಾ ಕನ್ನಡಿಗರನ್ನು ಕರೆತರುತ್ತೇವೆ. ಈಗಾಗಲೇ ಮುಖ್ಯ ಕಾರ್ಯದರ್ಶಿ ಜೊತೆಗೆ ಮಾತನಾಡಿದ್ದೇನೆ. ಏರ್ಪೋರ್ಟ್ ನಿರ್ಬಂಧ ತೆರವು ಮಾಡಿದ ತಕ್ಷಣ ಕರೆತರುತ್ತೇವೆ ಎಂದು ಹೇಳಿದ್ದಾರೆ.
ಭೋಜೇಗೌಡ ಅಲ್ಲೇ ಸಿಲುಕಿದ್ದಾರೆ, ಅವರ ಜೊತೆ ಮಾತಾಡಿದ್ದೇನೆ. ಅರಾಮಾಗಿ ಹೋಟೆಲ್ನಲ್ಲಿ ಇದ್ದೇನೆಂದು ಭೋಜೇಗೌಡ ಹೇಳಿದ್ದಾರೆ. ವಿದೇಶಾಂಗ ಸಚಿವಾಲಯದ ಜೊತೆಗೆ ಸಂಪರ್ಕದಲ್ಲಿದ್ದೇವೆ. ಕನ್ನಡಿಗರನ್ನು ವಾಪಸ್ ಕರೆದುಕೊಂಡು ಬರಲು ವ್ಯವಸ್ಥೆ ಮಾಡುತ್ತೇವೆ. ದುಬೈನಲ್ಲಿ ಎಲ್ಲಾ ಭಾರತೀಯರು ಸುರಕ್ಷಿತರಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕೂಡ ಸಿಲುಕಿದ ಕನ್ನಡಿಗರ ರಕ್ಷಣೆಗಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಅನಿಶ್ಚಿತತೆಯಿಂದಾಗಿ ವಿಮಾನಗಳ ಸಂಚಾರದಲ್ಲಿ ಅಡಚಣೆಯಾಗಿದೆ. ಅನೇಕ ಪ್ರವಾಸಿಗರು ಪ್ರಯಾಣಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಹೀಗಾಗಿ ಸಂಕಷ್ಟದಲ್ಲಿರುವ ಕನ್ನಡಿಗರ ಪರವಾಗಿ ಕರ್ನಾಟಕ ಸರ್ಕಾರದ ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದು, ಏರ್‌ಲೈನ್ಸ್‌ಗಳೊಂದಿಗೆ ಸಮನ್ವಯ ಸಾಧಿಸಿ ಪ್ರವಾಸಿಗರಿಗೆ ನೆರವಾಗುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ: ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗೆ ನಿಂತ ಒಕ್ಕಲಿಗರ ಸಂಘ
ಪ್ರವಾಸಿಗರಿಗೆ ಏರ್‌ಲೈನ್ಸ್‌ಗಳ ಮೂಲಕ ಪೂರಕ ವಸತಿ, ಊಟದ ವ್ಯವಸ್ಥೆ ಕಲ್ಪಿಸುವುದು. ವಿಮಾನದ ಟಿಕೆಟ್ ಮರುಹೊಂದಾಣಿಕೆಗೆ ಅವಕಾಶ ನೀಡಬೇಕು. ಹೆಚ್ಚುವರಿ ಶುಲ್ಕವನ್ನು ಮನ್ನಾ ಮಾಡಬೇಕು. ಪರಿಸ್ಥಿತಿ ತಿಳಿಯಾದ ತಕ್ಷಣ ಪೀಡಿತ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆಸಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ತಾಯ್ನಾಡಿಗೆ ಕರೆತರಲು ಅಗತ್ಯ ವಿಮಾನಗಳ ವ್ಯವಸ್ಥೆ ಕಲ್ಪಿಸುವುದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:33 pm, Sun, 1 March 26