TV9 Kannada News Live: ವಿದ್ಯಾರ್ಥಿಗಳ ಮೇಲಿನ ಕೇಸ್ ಹಿಂಪಡೆಯದಿದ್ದಲ್ಲಿ ಮತ್ತೆ ಚಳವಳಿ: ಕೇಂದ್ರಕ್ಕೆ ಸಿಜೆಪಿ ಎಚ್ಚರಿಕೆ
Karnataka News Today Live Updates: ಸಾರ್ವಜನಿಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ 'ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ಮಸೂದೆ 2026' ಅನ್ನು ಲೋಕಸಭೆಯಲ್ಲಿ ಮಂಡಿಸುತ್ತಿದೆ. ಸಿಬ್ಬಂದಿ ಮತ್ತು ತರಬೇತಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮಂಡಿಸಲಿರುವ ಈ ಕಾನೂನು ಪರೀಕ್ಷೆಗಳಲ್ಲಿ ಪಾರದರ್ಶಕತೆ ಮತ್ತು ನಂಬಿಕೆಯನ್ನು ಮರುಸ್ಥಾಪಿಸುವ ಗುರಿ ಹೊಂದಿದೆ. ಇದರಿಂದ ದೇಶಾದ್ಯಂತ ಪರೀಕ್ಷೆಗಳ ವಿಶ್ವಾಸಾರ್ಹತೆ ಹೆಚ್ಚಲಿದೆ. ಇದರ ಜತೆಗೆ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಸಂಪುಟ ವಿಸ್ತರಣೆಯ ಕಾವು ಏರಿದೆ. ಈ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. 'ಕರಾವಳಿ' (Karavali) ಸಿನಿಮಾ ಪ್ರೇಕ್ಷಕರಿಂದ ಸಿಗುತ್ತಿರುವ ಧನಾತ್ಮಕ ವಿಮರ್ಶೆ. ಹೀಗೆ ಇಂದಿನ ಪ್ರಮುಖ ಸುದ್ದಿಗಳ ಮಾಹಿತಿ ಇಲ್ಲಿದೆ ನೋಡಿ

Breaking News Today Live Updates in Kannada: ದೇಶದಲ್ಲಿ ನಿರಂತರವಾಗಿ ವರದಿಯಾಗುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ (Question Paper Leak) ಹಾಗೂ ಪರೀಕ್ಷಾ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಅತ್ಯಂತ ಮಹತ್ವದ ಹೆಜ್ಜೆ ಇಟ್ಟಿದೆ. ಸಾರ್ವಜನಿಕ ಪರೀಕ್ಷೆಗಳಲ್ಲಿ ಪಾರದರ್ಶಕತೆ ಹಾಗೂ ನಂಬಿಕೆಯನ್ನು ಮರುಸ್ಥಾಪಿಸುವ ಉದ್ದೇಶದಿಂದ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ಮಸೂದೆ 2026’ ಅನ್ನು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಇಂದು (ಜುಲೈ 27, ಸೋಮವಾರ) ಲೋಕಸಭೆಯಲ್ಲಿ ಮಂಡಿಸುತ್ತಿದ್ದಾರೆ. ಈ ಕುರಿತು ಶೀಘ್ರವೇ ಕಾನೂನು ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ. ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಸಂಪುಟ ವಿಸ್ತರಣೆಯ ಕಾವು ಏರಿದೆ. ಈ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಮಹತ್ವದ ಸಭೆ ನಡೆಯಲಿದೆ. ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕರಾವಳಿ’ (Karavali) ಸಿನಿಮಾ ಪ್ರೇಕ್ಷಕರಿಂದ ಸಿಗುತ್ತಿರುವ ಧನಾತ್ಮಕ ವಿಮರ್ಶೆಗಳೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ಮುಂದುವರಿಸಿದ್ದಾರೆ.
LIVE NEWS & UPDATES
-
ಬಿಹಾರದಲ್ಲಿ ನೀಟ್ ಪ್ರತಿಭಟನಾಕಾರರ ವಿರುದ್ಧದ ಕೇಸ್ ವಾಪಸ್
ಬಿಹಾರದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ದವರ ಮೇಲಿನ ಕೇಸ್ ವಾಪಸ್ ಪಡೆಯಲಾಗಿದೆ.FIR ಹಿಂಪಡೆಯುವುದಾಗಿ ಬಿಹಾರ ಸರ್ಕಾರದ ಘೋಷಣೆ ಮಾಡಿದೆ. ಅಲ್ಲದೆ ಈ ಪ್ರತಿಭಟನೆಗಳಿಗೆ ಸಂಬಂಧಿಸಿದ ಎಲ್ಲಾ FIRಗಳು, ಕ್ರಿಮಿನಲ್ ದೂರುಗಳು, ನೋಟಿಸ್ ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿದೆ. ಹಾಗೇ ಬಂಧಿತ ಅಥವಾ ವಶಕ್ಕೆ ಪಡೆದ ಎಲ್ಲರನ್ನೂ ಬಿಡಲಾಗುತ್ತದೆ.
-
ಕರ್ನಾಟಕ ಭವನ ಸಿಬ್ಬಂದಿಯಿಂದ ಅಚಾತುರ್ಯ
ಸಂಸದರ ಸಭೆಯಲ್ಲಿ ಕಾತರಕಿಗೆ ಆಸನ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಮೋಹನ್ ಕಾತರಕಿ ಸಂಸದರ ಸಭೆಯಿಂದ ಎದ್ದು ಹೊರ ನಡೆದಿದ್ದಾರೆ. ಸುಪ್ರೀಂಕೋರ್ಟ್ ಹಿರಿಯ ವಕೀಲರಾಗಿರುವ ಮೋಹನ್ ಕಾತರಕಿ, ರಾಜ್ಯದ ನೀರಾವರಿ ಯೋಜನೆಗಳಲ್ಲಿ ವಾದ ಮಂಡಿಸುತ್ತಾರೆ.
-
-
10 ದಿನಗಳ ಕಾಲ ಬೆಂಗಳೂರಿನ ಪೀಣ್ಯ ಫ್ಲೈಓವರ್ ಬಂದ್
10 ದಿನಗಳ ಕಾಲ ಬೆಂಗಳೂರಿನ ಪೀಣ್ಯ ಫ್ಲೈಓವರ್ ಬಂದ್ ಆಗಲಿದೆ. ಡಾಂಬರೀಕರಣ ಹಿನ್ನೆಲೆಯಲ್ಲಿ ಇಂದಿನಿಂದ (ಜುಲೈ 27) ಆಗಸ್ಟ್ 5ರವರೆಗೆ ರಾತ್ರಿ 10ರಿಂದ ಮುಂಜಾನೆ 5ರವರೆಗೆ ಫ್ಲೈಓವರ್ ಬಂದ್ ಆಗಿರಲಿದೆ. ಶನಿವಾರ, ಭಾನುವಾರ ರಾತ್ರಿ 12ರಿಂದ ಮುಂಜಾನೆ 5ರವರೆಗೆ ಬಂದ್ ಆಗಿರುತ್ತದೆ. ಇನ್ನು ನೆಲಮಂಗಲದಿಂದ ಬೆಂಗಳೂರಿನ ಕಡೆಗೆ ರಸ್ತೆ ಬಂದ್ ಆಗಿದ್ದು, ಪರ್ಯಾಯ ಮಾರ್ಗ ಬಳಸುವಂತೆ ವಾಹನ ಸವಾರರಿಗೆ ಸಂಚಾರ ವಿಭಾಗದ ಪೊಲೀಸರ ಸೂಚಿಸಿದ್ದಾರೆ. ಮತ್ತಷ್ಟು ಓದಿ
-
ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಸಭೆ ಆರಂಭ
ಸಂಪುಟ ವಿಸ್ತರಣೆ ಸಂಬಂಧ ವೇಣುಗೋಪಾಲ್ ನಿವಾಸದಲ್ಲಿ ಮಹತ್ವದ ಸಭೆ ಆರಂಭವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ಗೆ ಬುಲಾವ್ ನೀಡಲಾಗಿದೆ. ಹೀಗಾಗಿ ಹರಿಪ್ರಸಾದ್ ಪಟ್ಟಿ ಸಮೇತ ಕರ್ನಾಟಕ ಭವನದಿಂದ ವೇಣುಗೋಪಾಲ್ ನಿವಾಸಕ್ಕೆ ತೆರಳಿದ್ದಾರೆ. ರಾಜ್ಯ ನಾಯಕರ ಜೊತೆ ಹೈಕಮಾಂಡ್ ಪ್ರತ್ಯೇಕ ಸಭೆ ನಡೆಸಲಿದ್ದು,ಹರಿಪ್ರಸಾದ್ ಜೊತೆಗಿನ ಸಭೆ ಬಳಿಕ ಸಿದ್ದರಾಮಯ್ಯ ಜೊತೆ ಚರ್ಚಿಸಲಿದೆ. ಕೊನೆಗೆ ಸಿಎಂ ಡಿಕೆ ಶಿವಕುಮಾರ್ ಜೊತೆ ಮಾತುಕತೆ ನಡೆಸಲಿದ್ದಾರೆ.
-
ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಮರಳು ಸಾಗಣೆಗೆ ಬ್ರೇಕ್
ಕರ್ನಾಟಕದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಮರಳು ಸಾಗಣೆಗೆ ಬ್ರೇಕ್ ಹಾಕಲು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ ನೀಡಿದ್ದಾರೆ. ಅಕ್ರಮ ಮರಳು ದಂಧೆ ಸಂಪೂರ್ಣ ನಿಯಂತ್ರಣಕ್ಕೆ ಡಿಜಿ & ಐಜಿಪಿ ಎಂ.ಎ.ಸಲೀಂಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದಾರೆ.ಅಕ್ರಮ ಮರಳು ಸಾಗಣೆ ತಡೆಯಲು ದಿಢೀರ್ ದಾಳಿ ನಡೆಸಬೇಕು. ಮರಳು ದಂಧೆಕೋರರ ವಿರುದ್ಧ ಗೂಂಡಾಕಾಯ್ದೆ ಬಳಕೆಗೆ ಸೂಚಿಸಿದ್ದು, ಮರಳು ದಂಧೆ ತಡೆಯಲು ವಿಫಲರಾದವರ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ ಕೊಟ್ಟಿದ್ದಾರೆ. ಮತ್ತಷ್ಟು ಓದಿ
-
-
ರೇಣುಕಾಸ್ವಾಮಿ ಕೊಲೆ ಕೇಸ್ನ ಸಾಕ್ಷಿಗಳಿಗೆ ಬೆದರಿಕೆ ಕೇಸ್, ಮೂವರಿಗೆ ಜಾಮೀನು
ರೇಣುಕಾಸ್ವಾಮಿ ಕೊಲೆ ಕೇಸ್ನ ಸಾಕ್ಷಿಗಳಿಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಸುಹಾಸ್, ವೈಭವ್, ಪುನೀತ್ಗೆ ಜಾಮೀನು ನೀಡಿ ಬೆಂಗಳೂರು 59ನೇ CCH ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಮೂವರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದರು.
-
ಕೇಂದ್ರ ಸರ್ಕಾರಕ್ಕೆ ಮತ್ತೆ ಚಳವಳಿಯ ಎಚ್ಚರಿಕೆ ನೀಡಿದ ಸಿಜೆಪಿ
ಭರವಸೆಯಂತೆ ನೀಟ್ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲಿನ ಪ್ರಕರಣ ಹಿಂಪಡೆಯದಿದ್ದಲ್ಲಿ ಮತ್ತೆ ಪ್ರತಿಭಟನೆಗೆ ಕರೆ ನೀಡಕಾಗುವುದು ಎಂದು ಕಾಕ್ರೋಚ್ ಜನತಾ ಪಕ್ಷ ಎಚ್ಚರಿಕೆ ನೀಡಿದೆ. ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮ ನಿಲ್ಲಿಸದಿದ್ದರೆ ಹಾಗೂ ವಿದ್ಯಾರ್ಥಿಗಳ ವಿರುದ್ಧದ FIR ಹಿಂಪಡೆಯದಿದ್ರೆ ಮತ್ತೆ ರಾಷ್ಟ್ರವ್ಯಾಪಿ ಮತ್ತೆ ಚಳವಳಿ ಆರಂಭಿಸಬೇಕಾಗುತ್ತದೆ ಎಂದು ಮತ್ತೆ ರಾಷ್ಟ್ರವ್ಯಾಪಿ ಚಳುವಳಿಯನ್ನ ಪ್ರಾರಂಭಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
-
ದೆಹಲಿಯಲ್ಲಿ ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಂಸದರ ಸಭೆ
ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕರ್ನಾಟಕದ ಎಲ್ಲಾ ಸಂಸದರ ಸಭೆ ಆರಂಭವಾಗಿದೆ. ಕರ್ನಾಟಕ ಭವನದಲ್ಲಿ ಸರ್ವಪಕ್ಷಗಳ ಸಂಸದರ ಜೊತೆ ಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿದ್ದು, ಸಭೆಯಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ಸಂಸದರ ಭಾಗಿಯಾಗಿದ್ದಾರೆ.ಸಂಸದರಾದ ಮನ್ಸೂರ್ ಅಲಿ ಖಾನ್, ಸಾಗರ್ ಖಂಡ್ರೆ, ರಾಧಾಕೃಷ್ಣ, ಕುಮಾರ್ ನಾಯ್ಕ್, ಶ್ರೇಯಸ್ಸ್ ಪಟೇಲ್, ರಾಜಶೇಖರ್ ಹಿಟ್ನಾಳ್,ಜಯರಾಂ ರಮೇಶ್, ಡಾ.ಮಂಜುನಾಥ್, ಗೋವಿಂದ್ ಕಾರಜೋಳ, ಬಿ.ವೈ ರಾಘವೇಂದ್ರ ಬ್ರಿಜೆಶ್ ಚೌಟ, ಯಧುವೀರ್, ವಿಶ್ವೇಶ್ವರ ಹೆಗೆಡೆ ಕಾಗೇರಿ, ನಾಸೀರ್ ಹುಸೇನ್, ಪ್ರಿಯಾಂಕ ಜಾರಕಿಹೋಳಿ,ಸಚಿವರಾದ ಕೆ.ಜೆ ಜಾರ್ಜ್, ಈಶ್ವರ್ ಖಂಡ್ರೆ, ಶರಣ ಪ್ರಕಾಶ, ಕೃಷ್ಣ ಬೈರೇಗೌಡ, ಸತೀಶ್ ಜಾರಕಿಹೋಳಿ, ರಾಮಲಿಂಗಾರೆಡ್ಡಿ ಭಾಗಿಯಾಗಿದ್ದಾರೆ.
-
ಮೆಟ್ರೋ ರೈಲು ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು
ಮೆಟ್ರೋ ರೈಲು ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ನಮ್ಮ ಮೆಟ್ರೋ ಹಳದಿ ಮಾರ್ಗದ ಹುಸ್ಕೂರು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಟಿವಿ9ಗೆ ಬಿಎಂಆರ್ಸಿಎಲ್ ಹಿರಿಯ ಅಧಿಕಾರಿಗಳಿಂದ ಮಾಹಿತಿ ನೀಡಿದ್ದು, ನಮ್ಮ ಮೆಟ್ರೋ ರೈಲಿನ ಕೆಳಗೆ ಸಿಲುಕಿರುವ ವ್ಯಕ್ತಿಯ ಮೃತದೇಹ ಹೊರತೆಗೆಯಲು ಹರಸಾಹಸಪಡುತ್ತಿದ್ದಾರೆ. ಇಂದು (ಜುಲೈ 27) ಸಂಜೆ 5.50ರ ಸುಮಾರಿಗೆ 35 ವರ್ಷದ ವ್ಯಕ್ತಿ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಸಿಬ್ಬಂದಿ ಪವರ್ ಆಫ್ ಮಾಡಿ ವ್ಯಕ್ತಿ ರಕ್ಷಣೆಗೆ ಮುಂದಾಗಿದ್ದರು. ಆದರೆ ಮೆಟ್ರೋ ರೈಲಿನ ಕೆಳಗೆ ಸಿಲುಕಿ ಮೃತಪಟ್ಟಿದ್ದಾನೆ.
-
ಎಂಎಲ್‌ಸಿ ಸಿಟಿ ರವಿಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್, ಬಂಧನದಿಂದ ಬಚಾವ್
ನೀಟ್ ಪರೀಕ್ಷೆ ಕುರಿತ ಪ್ರತಿಭಟನೆಗಳ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ವಿಧಾನ ಪರಿಷತ್ ಸದಸ್ಯ ಸಿಟಿ ರವಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಕರಣವು ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದೆ. ಇನ್ನೊಂದೆಡೆ ಕರ್ನಾಟಕ ಹೈಕೋರ್ಟ್, ಸಿಟಿ ರವಿಗೆ ತಾತ್ಕಾಲಿಕ ರಿಲೀಫ್ ನೀಡಿದೆ.
-
ಮಲೆ ಮಹದೇಶ್ವರ ಬೆಟ್ಟದಲ್ಲಿ ಶೂಟೌಟ್: ಕಾಡುಹಂದಿ ಬೇಟೆಗಾರನ ಕಾಲಿಗೆ ಗುಂಡಿಕ್ಕಿದ ಅರಣ್ಯ ಸಿಬ್ಬಂದಿ
ಮಲೆ ಮಹದೇಶ್ವರ ವನ್ಯಜೀವಿಧಾಮ ಅರಣ್ಯ ವ್ಯಾಪ್ತಿಯಲ್ಲಿ ಕಾಡುಹಂದಿ ಬೇಟೆಯಾಡಿ ಸಾಗಿಸುತ್ತಿದ್ದ ಬೇಟೆಗಾರರ ತಂಡ ಹಾಗೂ ಅರಣ್ಯ ಸಿಬ್ಬಂದಿ ನಡುವೆ ಭಾರಿ ಫೈರಿಂಗ್ (Shootout) ನಡೆದಿದೆ. ಬೀಟ್ ಫಾರೆಸ್ಟರ್ ಮೇಲೆ ದಾಳಿ ನಡೆಸಿದ ಬೇಟೆಗಾರನ ಕಾಲಿಗೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿ ಸೆರೆಹಿಡಿದಿದ್ದಾರೆ.
-
ಗುಜರಾತ್‌ನ ರಾಜಕೋಟ್‌ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ
ದುಬೈಯಿಂದ ಮುಂಬೈಗೆ ಆಗಮಿಸುತ್ತಿದ್ದ ಇಂಡಿಗೋ (IndiGo) ಸಂಸ್ಥೆಯ ಪ್ರಯಾಣಿಕರ ವಿಮಾನವೊಂದು ಗುಜರಾತ್‌ನ ರಾಜಕೋಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ (Emergency Landing) ಮಾಡಿದೆ.
-
ಗಣಿನಾಡು ಬಳ್ಳಾರಿಯಲ್ಲಿ ಮಳೆಗಾಗಿ ಮೊರೆ: ಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ ವರುಣಯಾಗ, ರುದ್ರಾಭಿಷೇಕ
ಗಣಿನಾಡು ಬಳ್ಳಾರಿ ಜಿಲ್ಲೆಯಾದ್ಯಂತ ಭೀಕರ ಅಭಾವ ಪರಿಸ್ಥಿತಿ ತಲೆದೋರಿದ್ದು, ವರುಣದೇವನ ಕೃಪೆಗಾಗಿ ಜನತೆ ದೇವಸ್ಥಾನಗಳ ಮೊರೆ ಹೋಗಿದ್ದಾರೆ. ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬಳ್ಳಾರಿ ನಗರದ ಪ್ರಸಿದ್ಧ ಸಣ್ಣ ದುರ್ಗಮ್ಮ (ಕನಕ ದುರ್ಗಮ್ಮ) ದೇವಸ್ಥಾನದಲ್ಲಿ ವರುಣಯಾಗ, ರುದ್ರಾಭಿಷೇಕ ಹಾಗೂ 24 ಗಂಟೆಗಳ ಅಖಂಡ ದೇವರ ಭಜನೆ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
-
ಸಿಎಂ ಡಿ.ಕೆ. ಶಿವಕುಮಾರ್‌ಗೆ ದೆಹಲಿಯಲ್ಲಿ ಹೈ-ಸೆಕ್ಯೂರಿಟಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭದ್ರತೆಯನ್ನು ರಾಜ್ಯ ಪೊಲೀಸ್ ಇಲಾಖೆಯು ಅಭೂತಪೂರ್ವವಾಗಿ ಹೆಚ್ಚಿಸಿದೆ. ದೆಹಲಿಯಲ್ಲಿ ಸಿಎಂ ಅವರ ಸುತ್ತಮುತ್ತ ನಾಯಕರ ಹಾಗೂ ಸಾರ್ವಜನಿಕರ ಚಲನವಲನಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ರಾಜಧಾನಿ ಬೆಂಗಳೂರಿನ ಭದ್ರತಾ ಮಾದರಿಯನ್ನೇ ದೆಹಲಿಯಲ್ಲೂ ಜಾರಿಗೆ ತರಲಾಗಿದೆ.
-
ಕರ್ನಾಟಕದ ಕೃಷ್ಣಾ ನೀರಿಗೆ ಮಹಾರಾಷ್ಟ್ರ ಕನ್ನ: ‘ರಾಧಾಕೃಷ್ಣ ಯೋಜನೆ’ ವಿರುದ್ಧ ಚಿಕ್ಕೋಡಿ ರೈತರ ಭಾರಿ ಆಕ್ರೋಶ
ಅಂತಾರಾಜ್ಯ ನದಿ ನೀರು ಹಂಚಿಕೆ ಕಾಯ್ದೆ ಹಾಗೂ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಕರ್ನಾಟಕದ ಪಾಲಿನ ಕೃಷ್ಣಾ ನದಿ ನೀರನ್ನು ಸದ್ದಿಲ್ಲದೆ ಕಬಳಿಸಲು ಮಹಾರಾಷ್ಟ್ರ ಸರ್ಕಾರ ಕುತಂತ್ರ ನಡೆಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಹೊಸ ನೀರಾವರಿ ಯೋಜನೆಯೊಂದನ್ನು ಘೋಷಿಸುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
-
“ಕೇಂದ್ರ ನಾಯಕರನ್ನು ಮೆಚ್ಚಿಸಲು ಸಿ.ಟಿ. ರವಿ ಹೀಗೆ ಮಾತಾಡ್ತಾರೆ”: ಶಾಸಕ ಹೆಚ್.ಸಿ. ಬಾಲಕೃಷ್ಣ
ಮುಲ್ಲಾಗಳ ಕುರಿತು ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು ಬೆಂಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಸಿ.ಟಿ. ರವಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿ.ಟಿ. ರವಿ ಅವರ ಹೇಳಿಕೆಯನ್ನು ಖಂಡಿಸಿದ ಬಾಲಕೃಷ್ಣ ಅವರು, ಈ ರೀತಿಯ ಮಾತುಗಳ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
-
ಕೆಪಿಎಸ್‌ಸಿ ಅಕ್ರಮ: ಸುಮಾ ಸಾಹುಕಾರ್‌ಗೆ ಹೈಕೋರ್ಟ್ ಭಾರಿ ತರಾಟೆ
ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿಯಲ್ಲಿ ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸಿದ ಆರೋಪ ಎದುರಿಸುತ್ತಿರುವ ಸುಮಾ ಎಸ್. ಸಾಹುಕಾರ್ ಅವರಿಗೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ. ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅರ್ಜಿ ಹಿಂಪಡೆಯಲಾಗಿದೆ.
-
ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ: ಎಬಿವಿಪಿ ಬೃಹತ್ ಪ್ರತಿಭಟನೆ
ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶು ವೈದ್ಯಾಧಿಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನೇತೃತ್ವದಲ್ಲಿ ವಿದ್ಯಾರ್ಥಿಗಳು ತುಮಕೂರಿನಲ್ಲಿ ಸೋಮವಾರ ಭಾರಿ ಪ್ರತಿಭಟನೆ ನಡೆಸಿದರು. ನಗರದ ಪ್ರಮುಖ ಟೌನ್ ಹಾಲ್ ವೃತ್ತದಲ್ಲಿ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
-
ಪ್ರತಿಭಟನಾನಿರತ ವಿದ್ಯಾರ್ಥಿಗಳ ಬಂಧನಕ್ಕೆ CJP ತೀವ್ರ ಆಕ್ರೋಶ
ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಹಾಗೂ ಬಂಧನವನ್ನು ಖಂಡಿಸಿ ಕಾಕರೂಚ್ ಜನತಾ ಪಾರ್ಟಿ (CJP) ತೀವ್ರ ಕಳವಳ ವ್ಯಕ್ತಪಡಿಸಿದೆ. ಯಾವುದೇ ರೀತಿಯ ಕಾನೂನು ಅಥವಾ ಶಿಸ್ತುಕ್ರಮ ಕೈಗೊಳ್ಳುವುದಿಲ್ಲ ಎಂಬ ಕೇಂದ್ರ ಸರ್ಕಾರದ ಭರವಸೆಗೆ ವಿರುದ್ಧವಾಗಿ ಪೊಲೀಸರು ನಡೆದುಕೊಳ್ಳುತ್ತಿದ್ದಾರೆ ಎಂದು ಸಿಜೆಪಿ ಆಕ್ರೋಶ ಹೊರಹಾಕಿದೆ.
-
ಕರ್ನಾಟಕ ಸಂಪುಟ ವಿಸ್ತರಣೆ: ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ ಸಿಎಂ ಡಿ.ಕೆ. ಶಿವಕುಮಾರ್
ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಸಂಪುಟ ವಿಸ್ತರಣೆಯ ಕಾವು ಏರಿದೆ. ಈ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಮಹತ್ವದ ಸಭೆ ನಡೆಯಲಿದೆ.
-
ಲೋಕಸಭೆಯಲ್ಲಿ ‘ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆ 2026’ ಮಂಡನೆ
ಸಾರ್ವಜನಿಕ ಪರೀಕ್ಷೆಗಳಲ್ಲಿ ಪಾರದರ್ಶಕತೆ ಹಾಗೂ ನಂಬಿಕೆಯನ್ನು ಮರುಸ್ಥಾಪಿಸುವ ಉದ್ದೇಶದಿಂದ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ಮಸೂದೆ 2026’ ಅನ್ನು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಇಂದು (ಜುಲೈ 27, ಸೋಮವಾರ) ಲೋಕಸಭೆಯಲ್ಲಿ ಮಂಡಿಸುತ್ತಿದ್ದಾರೆ. ಈ ಕುರಿತು ಶೀಘ್ರವೇ ಕಾನೂನು ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ.
Published On - Jul 27,2026 12:18 PM




