ಮೊಟ್ಟೆ ಸೇವಿಸದ ಮಕ್ಕಳಿಗೆ ಬಿಸಿಯೂಟದಲ್ಲಿ ಬಾಳೆಹಣ್ಣಿನ ಬದಲು ಶೇಂಗಾ ಚಿಕ್ಕಿ ನೀಡಲು ಸರ್ಕಾರ ನಿರ್ಧಾರ
ಸದ್ಯಕ್ಕೆ ಮೊಟ್ಟೆ ತಿನ್ನದ ಶಾಲಾ ಮಕ್ಕಳಿಗೆ ಚಿಕ್ಕಿ ಮತ್ತು ಬಾಳೆಹಣ್ಣು ನೀಡಲಾಗುವುದು. ಅವೆರಡರಲ್ಲಿ ತಮಗೆ ಯಾವುದು ಬೇಕೆಂದು ಮಕ್ಕಳೇ ಆಯ್ಕೆ ಮಾಡಿಕೊಳ್ಳಬಹುದು. ಮಕ್ಕಳಿಗೆ ನೀಡಲಾಗುವ ಶೇಂಗಾ ಚಿಕ್ಕಿಯನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗುವುದು.
ಬೆಂಗಳೂರು: ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆಗಳನ್ನು ನೀಡುವ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಮಕ್ಕಳಿಗೆ ಶಾಲೆಯಲ್ಲಿ ಮೊಟ್ಟೆಗಳನ್ನು ಕೊಡಬೇಕೇ? ಬೇಡವೇ? ಎಂಬ ಬಗ್ಗೆ ಜನರಲ್ಲಿ ತೀವ್ರ ಚರ್ಚೆಗಳು ನಡೆದಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ನೀಡುವ ತೀರ್ಮಾನಕ್ಕೆ ಬಂದಿತ್ತು. ಆದರೆ, ಬಾಳೆಹಣ್ಣಿನಲ್ಲಿ ಮೊಟ್ಟೆಯಷ್ಟು ಪೌಷ್ಠಿಕಾಂಶ ಇಲ್ಲದ ಕಾರಣದಿಂದ ಬಾಳೆಹಣ್ಣಿನ ಬದಲಾಗಿ ಶೇಂಗಾ ಚಿಕ್ಕಿ (ಶೇಂಗಾ ಮಿಠಾಯಿ) ನೀಡಲು ಸರ್ಕಾರ ನಿರ್ಧರಿಸಿದೆ.
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ 1ರಿಂದ 8ನೇ ತರಗತಿವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆ ಹಣ್ಣಿನ ಬದಲು ಶೇಂಗಾ ಮತ್ತು ಬೆಲ್ಲದಿಂದ ತಯಾರಿಸಿದ ಚಿಕ್ಕಿ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಹಾಗೂ ಶೇಂಗಾ ಮಿಠಾಯಿ ಎರಡೂ ನೀಡಲು ಸಹ ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಬಹುಪೌಷ್ಠಿಕಾಂಶ ಕೊರತೆ ಹಾಗೂ ರಕ್ತಹೀನತೆಯಿಂದ ಬಳಲುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಸರಕಾರಿ ಹಾಗೂ ಅನುದಾನಿತ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಸರಕಾರ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್- ಮಧ್ಯಾಹ್ನದ ಉಪಾಹಾರ ಯೋಜನೆಯಲ್ಲಿ ಈಗಾಗಲೇ ಕೋಳಿ ಮೊಟ್ಟೆ ನೀಡಲಾಗುತ್ತಿತ್ತು. ಕೋಳಿ ಮೊಟ್ಟೆ ಇಷ್ಟಪಡದವರಿಗೆ ಬಾಳೆ ಹಣ್ಣು ನೀಡಲಾಗುತ್ತಿತ್ತು.
ಮಧ್ಯಾಹ್ನದ ಊಟದ ಮೆನುವಿನಿಂದ ಮೊಟ್ಟೆಯನ್ನು ಕೈ ಬಿಡಬೇಕು ಎಂಬ ಬೇಡಿಕೆ ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಇನ್ನೂ ತನ್ನ ಖಚಿತ ಅಭಿಪ್ರಾಯವನ್ನು ಹೇಳಿಲ್ಲ. ಆದರೆ, ಮೊಟ್ಟೆ ತಿನ್ನದವರಿಗೆ ಮೊಟ್ಟೆಯಲ್ಲಿನ ಪೌಷ್ಟಿಕಾಂಶಗಳಿಗೆ ಸಮಾನವಾದ ಚಿಕ್ಕಿಯನ್ನು ಬಾಳೆಹಣ್ಣಿನ ಬದಲು ವಿತರಿಸಲು ನಿರ್ಧರಿಸಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಸದ್ಯಕ್ಕೆ ಮೊಟ್ಟೆ ತಿನ್ನದ ಶಾಲಾ ಮಕ್ಕಳಿಗೆ ಚಿಕ್ಕಿ ಮತ್ತು ಬಾಳೆಹಣ್ಣು ನೀಡಲಾಗುವುದು. ಅವೆರಡರಲ್ಲಿ ತಮಗೆ ಯಾವುದು ಬೇಕೆಂದು ಮಕ್ಕಳೇ ಆಯ್ಕೆ ಮಾಡಿಕೊಳ್ಳಬಹುದು. ಮಕ್ಕಳಿಗೆ ನೀಡಲಾಗುವ ಶೇಂಗಾ ಚಿಕ್ಕಿಯನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗುವುದು. ಬೆಲ್ಲ, ನೆಲಗಡಲೆಯಲ್ಲಿ ಹೇರಳವಾದ ಪ್ರೋಟೀನ್ ಮತ್ತು ಕಬ್ಬಿಣದ ಅಂಶ ಇರುವುದರಿಂದ ಬಾಳೆಹಣ್ಣಿನ ಬದಲಾಗಿ ಶೇಂಗಾ ಚಿಕ್ಕಿ ನೀಡಬಹುದು ಎಂದು ಪೌಷ್ಠಿಕಾಂಶ ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಕ್ಕಳಿಗೆ ಮೊಟ್ಟೆ ತಿನ್ನಲು ಒತ್ತಡ ಹೇರಿಲ್ಲ; ಯಾವುದೇ ಕಾರಣಕ್ಕೂ ಶಾಲೆಗಳನ್ನು ಮುಚ್ಚಲ್ಲ: ಬಿ.ಸಿ ನಾಗೇಶ್ ಸ್ಪಷ್ಟನೆ
Health Tips: ಮೊಟ್ಟೆಗಿಂತಲೂ ಹೆಚ್ಚು ಪ್ರೋಟೀನ್ ಇರುವ 5 ಸಸ್ಯಾಹಾರಿ ಆಹಾರಗಳಿವು