ಎಸ್ಸಿ ಒಳ ಮೀಸಲಾತಿ ಸಂಬಂಧ ಮಹತ್ವದ ನಿರ್ಧಾರ, ಇಲ್ಲಿವೆ ಸಭೆಯ ಮುಖ್ಯಾಂಶಗಳು
ರಾಜ್ಯ ಸರ್ಕಾರ ಒಳಮೀಸಲಾತಿ ಅನುಷ್ಠಾನಕ್ಕೆ ಸುಗ್ರೀವಾಜ್ಞೆ ಬದಲಿಗೆ ಬಿಲ್ ತರುವುದಕ್ಕೆ ಮುಂದಾಗಿದೆ. ಈ ಕುರಿತಾಗಿ ನಾಳೆಯ ಸಂಪುಟ ಸಭೆಯಲ್ಲಿ ವಿಧೇಯಕ ಮಂಡಿಸಲು ನಿರ್ಧರಿಸಲಾಗಿದೆ. ಆ ಮೂಲಕ ದಲಿತ ಸಮುದಾಯದ ಬಹುಕಾಲದ ಬೇಡಿಕೆ ಬಗೆರಿಯುತ್ತಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಸಭೆಯ ಮುಖ್ಯಾಂಶಗಳು ಹೀಗಿವೆ.

ಬೆಂಗಳೂರು, ಅಕ್ಟೋಬರ್ 29: ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯ (internal reservation) ಅನುಷ್ಠಾನದ ಕುರಿತಂತೆ ಇರುವ ಸಾಧಕ ಬಾಧಕ ಬಗ್ಗೆ ಚರ್ಚೆ ಮಾಡಲಾಗಿದೆ. ಒಳಮೀಸಲಾತಿ ಅನುಷ್ಠಾನಕ್ಕೆ ಬಿಲ್ ತರಲು ಸರ್ಕಾರ ನಿರ್ಧರಿಸಿದೆ. ಸುಗ್ರೀವಾಜ್ಞೆ ಬದಲಿಗೆ ಬಿಲ್ ತರುವುದಕ್ಕೆ ಸರ್ಕಾರ ಮುಂದಾಗಿದ್ದು, ನಾಳೆ ಸಂಪುಟ ಸಭೆಯಲ್ಲಿ ವಿಧೇಯಕ ಮಂಡಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಒಳ ಮೀಸಲಾತಿ ಸಭೆಯ ಮುಖ್ಯಾಂಶಗಳು ಹೀಗಿವೆ
- ಒಳ ಮೀಸಲಾತಿ ಕುರಿತಾಗಿ ಸಚಿವ ಸಂಪುಟ ಸಭೆಯ ತೀರ್ಮಾನಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ರೋಸ್ಟರ್ ಜಾರಿ ಕುರಿತಾಗಿ ಎಲ್ಲರ ಅಹವಾಲುಗಳನ್ನು ಆಲಿಸಿ, ಯಾವುದೇ ಜಾತಿಗೆ ರೋಸ್ಟರ್‌ನಲ್ಲಿ ಅನ್ಯಾಯವಾಗದಂತೆ ಖಾತ್ರಿಪಡಿಸಲಾಗುವುದು.
ಸಿಎಂ ಸಿದ್ದರಾಮಯ್ಯ ಟ್ವೀಟ್
ಇಂದು ನನ್ನ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯ ಅನುಷ್ಠಾನದ ಕುರಿತಂತೆ ಇರುವ ಸಮಸ್ಯೆಗಳ ಸಭೆ ನಡೆಸಿ, ಸುದೀರ್ಘವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ನನ್ನ ಮಾತುಗಳ ಸಾರಾಂಶ: • ಒಳ ಮೀಸಲಾತಿ ಕುರಿತಾಗಿ ಸಚಿವ ಸಂಪುಟ ಸಭೆಯ ತೀರ್ಮಾನಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ರೋಸ್ಟರ್… pic.twitter.com/jtGig45Jet
— Siddaramaiah (@siddaramaiah) October 29, 2025
- ಜಾತಿ ಪ್ರಮಾಣ ಪತ್ರ ಯಾವ ರೀತಿಯಲ್ಲಿ ನೀಡಬೇಕು ಎಂಬ ಕುರಿತು ವಿವರವಾದ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗಿದೆ. ನೇಮಕಾತಿಗೆ ಇದ್ದ ನಿರ್ಬಂಧವನ್ನು ತೆರವುಗೊಳಿಸಿದ ಬಳಿಕ ಅಭ್ಯರ್ಥಿಗಳ ವಯೋಮಿತಿಯನ್ನು ಒಂದು ಅವಧಿಗೆ ಹೆಚ್ಚಳ ಮಾಡಲಾಗಿದೆ. ಕೆಇಎಯಲ್ಲಿ ಈಗಾಗಲೇ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ.
- ಒಳ ಮೀಸಲಾತಿ ಜಾರಿ ಕುರಿತಾಗಿ ಸುಪ್ರೀಂಕೋರ್ಟ್ ನಿರ್ದೇಶನಗಳ ಪ್ರಕಾರ ಕಾಯ್ದೆ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಒಳಮೀಸಲಾತಿ ಅನುಷ್ಠಾನಕ್ಕೆ ಬಿಲ್ ತರಲು ಸರ್ಕಾರ ನಿರ್ಧಾರ ಎಂದ ಸಚಿವ ಡಾ.ಹೆಚ್.ಸಿ.ಮಹದೇವಪ್ಪ
ವಿಧಾನಸೌಧದಲ್ಲಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಪ್ರತಿಕ್ರಿಯಿಸಿದ್ದು, ಒಳ ಮೀಸಲಾತಿ ಅನುಷ್ಠಾನಕ್ಕೆ ಬಿಲ್ ತರಲು ಸರ್ಕಾರ ನಿರ್ಧರಿಸಿದೆ. ನಾಳೆಯ ಕ್ಯಾಬಿನೆಟ್ನಲ್ಲಿ ಕರಡು ಬಿಲ್ಗೆ ಮಂಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.
ಇದನ್ನೂ ಓದಿ: ದಲಿತ ಸಮುದಾಯಕ್ಕೆ ಗುಡ್ ನ್ಯೂಸ್: ಒಳ ಮೀಸಲಾತಿ ಫೈನಲ್, 3 ದಶಕಗಳ ಬೇಡಿಕೆ ಈಡೇರಿಕೆ
ಅಕ್ಟೋಬರ್ 31ಕ್ಕೆ ಅಲೆಮಾರಿ ಸಮುದಾಯಗಳ ಸಭೆ ಮಾಡುತ್ತೇವೆ. ಬಿಲ್ ಮಾಡುವುದರಿಂದ ಪರಿಣಾಮವಾಗಿರಲಿದೆ. ಸುಪ್ರೀಂಕೋರ್ಟ್ ಆದೇಶದಂತೆ ನಾವು ಒಳ ಮೀಸಲಾತಿ ಮಾಡಿದ್ದೇವೆ. ಇದರ ಅನುಷ್ಠಾನಕ್ಕೆ ಬಿಲ್ ಮಾಡಲು ನಿರ್ಧಾರ ಮಾಡಿದ್ದೇವೆ. ಈಗಾಗಲೇ ಸಂಬಂಧಿಸಿದ ಇಲಾಖೆಗಳ ಜೊತೆಗೆ ಚರ್ಚೆ ಆಗಿದೆ. ಒಳ ಮೀಸಲಾತಿ ಹೋರಾಟಗಾರ ಮೇಲಿನ ಕೇಸ್ ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದಾರೆ.
ನ್ಯಾಯಾಲಯದಲ್ಲಿ ನಮ್ಮ ಆದೇಶಕ್ಕೆ ತಡೆಯಾಜ್ಞೆ ಇಲ್ಲ: ಸಚಿವ ಹೆಚ್ಕೆ ಪಾಟೀಲ್
ಒಳ ಮೀಸಲಾತಿ ಸಭೆ ಬಳಿಕ ಕಾನೂನು ಸಚಿವ ಹೆಚ್ಕೆ ಪಾಟೀಲ್ ಮಾತನಾಡಿದ್ದು, ಒಳ ಮೀಸಲಾತಿಯನ್ನ ಸಮರ್ಪಕವಾಗಿ ಅನುಷ್ಠಾನ ಮಾಡಲು ಸೂಕ್ತ ಪ್ರಾತಿನಿಧ್ಯ ಒದಗಿಸಲು ಕಾನೂನು ಮಾಡುವ ಅಗತ್ಯವಿದೆ. ಕಾನೂನು ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆಯನ್ನ ನಡೆಸಿದ್ದೇವೆ. ನಾಳೆ ಸಂಪುಟ ಸಭೆಯಲ್ಲಿ ಕರಡು ಮಸೂದೆ ಮಂಡಿಸುತ್ತೇವೆ. ಎಲ್ಲರಿಗೂ ಅವಕಾಶ, ನ್ಯಾಯ ಕೊಡಲು ಕಾನೂನು ತರ್ತಿದ್ದೇವೆ. ನ್ಯಾಯಾಲಯದಲ್ಲಿ ನಮ್ಮ ಆದೇಶಕ್ಕೆ ತಡೆಯಾಜ್ಞೆ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: ಒಳಮೀಸಲಾತಿ ಬಗ್ಗೆ ಸದನದಲ್ಲಿ ಅಧಿಕೃತ ಘೋಷಣೆ: ಜತೆಗೆ ಬದಲಾವಣೆ ಸುಳಿವು ನೀಡಿದ ಸಿಎಂ
ಇನ್ನು ಸಭೆಯಲ್ಲಿ ಸಚಿವರಾದ ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ಶಿವರಾಜ ತಂಗಡಗಿ, ಎಚ್.ಕೆ.ಪಾಟೀಲ್, ಪ್ರಿಯಾಂಕ್ ಖರ್ಗೆ, ಬಿ.ಆರ್.ತಿಮ್ಮಾಪುರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯಕಾರ್ಯದರ್ಶಿ ಅಂಜುಂ ಪರ್ವೇಜ್ ಇನ್ನು ಮುಂತಾದವರು ಉಪಸ್ಥಿತರಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:54 pm, Wed, 29 October 25



