AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಲಿತ ಸಮುದಾಯಕ್ಕೆ ಗುಡ್​ ನ್ಯೂಸ್: ಒಳ‌ ಮೀಸಲಾತಿ ಫೈನಲ್​, 3 ದಶಕಗಳ ಬೇಡಿಕೆ ಈಡೇರಿಕೆ

ಕರ್ನಾಟಕದಲ್ಲಿ ಒಳ ಮೀಸಲಾತಿ ಕುರಿತು 3 ದಶಕಗಳ ನಿರಂತರ ಬೇಡಿಕೆ, ಒತ್ತಾಯಗಳ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟವು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಲು ಈಗಾಗಲೇ ತಾತ್ವಿಕವಾಗಿ ಒಪ್ಪಿಗೆ ನೀಡಲಾಗಿದ್ದು, ದಲಿತ ಸಮುದಾಯಕ್ಕೆ ಒಳ‌ ಮೀಸಲಾತಿ ಸಂಬಂಧ ಇಂದು ನಡೆದ ವಿಶೇಷ ಸಂಪುಟ ಸಭೆಯಲ್ಲಿ ದಲಿತ ಸಮುದಾಯಕ್ಕೆ ಒಳ‌ ಮೀಸಲಾತಿ ಬಹುತೇಕ ಫೈನಲ್ ಆಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಯಾರಿಗೂ ಅಸಮಾಧಾನವಾಗದಂತೆ ಎಲ್ಲರಿಗೂ ಖುಷಿಪಡಿಸುವ ತೀರ್ಮಾನ ಕೈಗೊಂಡಿದ್ದಾರೆ. ಹಾಗಾದ್ರೆ, ದಲಿತ ಎಡಗೈ ಹಾಗೂ ಬಲಗೈಗೆ ಎಷ್ಟು ಮೀಸಲಾತಿ ನೀಡಲಾಗುತ್ತೆ ಎನ್ನುವ ವಿವರ ಇಲ್ಲಿದೆ.

ದಲಿತ ಸಮುದಾಯಕ್ಕೆ ಗುಡ್​ ನ್ಯೂಸ್:  ಒಳ‌ ಮೀಸಲಾತಿ ಫೈನಲ್​, 3 ದಶಕಗಳ ಬೇಡಿಕೆ ಈಡೇರಿಕೆ
Siddaraaiah
ರಮೇಶ್ ಬಿ. ಜವಳಗೇರಾ
|

Updated on:Aug 19, 2025 | 11:06 PM

Share

ಬೆಂಗಳೂರು, (ಆಗಸ್ಟ್ 19): ಕರ್ನಾಟಕದಲ್ಲಿ ದಲಿತ ಸಮುದಾಯಕ್ಕೆ  (Scheduled Castes) ಒಳ‌ ಮೀಸಲಾತಿ (SC internal reservation) ಬಹುತೇಕ ಫೈನಲ್ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಪರಿಶಿಷ್ಟ ಜಾತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವೈಜ್ಞಾನಿಕವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸುವ ತೀರ್ಮಾನವಾಗಿದೆ. ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿ 5 ವಿಂಗಡಣೆ ಮಾಡಲಾಗಿತ್ತು. ಆದ್ರೆ, ಸರ್ಕಾರ, 3 ಗುಂಪುಗಳಾಗಿ ವರ್ಗೀಕರಣ ಮಾಡಿದೆ. 18 ಜಾತಿಗಳಿರುವ ಎಡಗೈ ಸಮುದಾಯಕ್ಕೆ (SC Left )6% ಮೀಸಲಾತಿ ಹಾಗೂ 20 ಜಾತಿಗಳಿರುವ ಬಲಗೈ ಸಮುದಾಯಕ್ಕೆ  (SC Right) 6% ಮೀಸಲಾತಿ. ಇನ್ನು 63 ಜಾತಿಗಳಿರುವ ಇತರ ಸಮುದಾಯಕ್ಕೆ 5% ಮೀಸಲಾತಿ ನೀಡುವ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಬಹುತೇಕ ಅಂತಿಮವಾಗಿದ್ದು, ಈ ಕುರಿತಂತೆ ನಾಳೆ(ಆಗಸ್ಟ್​ 20) ಸದನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಲಿದ್ದಾರೆ. ಇನ್ನು ಎರಡು ದಿನದಲ್ಲಿ ಒಳಮೀಸಲಾತಿ ಸಂಬಂಧ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಗಳಿವೆ. ಇದರೊಂದಿಗೆ ಒಳಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳು ಕಳೆದ ಮೂರು ದಶಕಗಳಿಂದ ಇಟ್ಟಿದ್ದ ಬೇಡಿಕೆ ಈಡೇರಿದಂತಾಗಿದೆ.

ದಲಿತ ಎಡಗೈ ಜಾತಿಗಳಿಗೆ 6ರಷ್ಟು ಮೀಸಲಾತಿ

ಭಾಂಬಿ, ಅಸದರು, ಅಸೋಡಿ, ಚಮಡಿಯಾ, ಚಮರ್, ಚಂಬರ, ಚಮಗಾರ, ಹರಳಯ್ಯ, ಹರಳಿ, ಖಾಲ್ಪ, ಮಚಿಗಾರ, ಮೋಚಿಗಾರ, ಮಾದರ, ಮಾದಿಗ, ಮೋಚಿ, ಮುಚ್ಚಿ, ತೆಲುಗು ಮೋಚಿ, ಕಾಮತಿ ಮೋಚಿ, ರಾಣಿಗಾರ್, ರೋಹಿದಾಸ್, ರೋಹಿತ್, ಸಮ್ಗರ್, ಹಕ್ಕಳಯ್ಯ, ಧೋರ್ಕ, ಹಕ್ಕಳಯ್ಯ, ಧೋರ್ಕಾ ಹಲಸ್ವರ, ಹಸ್ಲ, ಕಡಯ್ಯನ್, ಕೆಪ್ಮರಿಸ್, ಕೊಲುಪುಲ್ವಂಡಿಯು, ಕುಟುಂಬನ್, ಮಾದಿಗ, ಮಾವಿಲನ್, ಮೊಗೇರ್, ಪಂಚಮ, ಪನ್ನಿಯಾಂಡಿ, ಪರಯ್ಯನ್, ಪರಯ, ಸಮಗಾರ, ಸಾಂಬನ್

ದಲಿತ ಬಲಗೈ ಜಾತಿಗಳಿಗೆ 6% ಮೀಸಲಾತಿ

ಅಣಮುಕ್, ಅರೆ ಮಾಳ, ಅರವ ಮಾಳ, ಬಲಗೈ, ಛಲವಾದಿ, ಚಲವಾದಿ, ಚನ್ನಯ್ಯ, ಪಲ್ಲನ್, ಹೊಲಯ, ಹೊಲೆಯ, ಹೊಲೆಯ, ಮಹ್ಯವಂಶಿ, ಧೇಡ್, ವಂಕರ್, ಮಾರು ವಂಕರ್, ಮಾಳ, ಮಲ ಹಣ್ಣಾಯಿ, ಮಾಳ ಜಂಗಮ, ಮಾಳ ಮಾಸ್ತಿ, ಮಲ ಮಾರಾಟ, ನೆಟ್ಕಣಿ, ಮಹಾರ್, ತರಲ್, ಧೇಳು, ದೇಗುಲ ಮೇಗುಂದ,ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ.

ಇತರೆ 5% ಮೀಸಲಾತಿ ಒಳಪಡುವ ಜಾತಿಗಳು

ಬಕುಡ; ಬಂಜಾರ, ಲಂಬಾಣಿ, ಲಂಬಾಡ, ಲಂಬಾಡಿ, ಲಮಾಣಿ, ಸುಗಾಲಿ, ಸುಕಾಲಿ; ಭೋವಿ, ಓಡ್, ಒಡ್ಡೆ, ವಡ್ಡರ, ವಡ್ಡರ, ವಡ್ಡರ, ವಡ್ಡರ, ಕಲ್ಲುವಡ್ಡರ, ಬೋವಿ (ಬೆಸ್ತರಲ್ಲದ), ಮಣ್ಣುವಡ್ಡರ; ಎಲ್ಲಮಾಳ್ವಾರ್, ಯೆಲ್ಲಮ್ಮಲವಾಂಡ್ಲು; ಕೊರಚ, ಕೊರಚಾರ್; ಕೊರಮ, ಕೊರವ, ಕೊರವರ; ಲಿಂಗಾಡರ್; ಮುಕ್ರಿ; ಮುಂಡಾಲ; ಪಂಬದ; ಸಪಾರಿ; ತಿರ್ಗರ್, ತಿರ್ಬಂದ.

ದಲಿತ ನಾಯಕರಿಂದ ಸಂಭ್ರಮಾಚರಣೆ

ಇನ್ನು ಅಂತಿಮವಾಗಿ ದಲಿತ ಸಮುದಾಯದ ಒಳಮೀಸಲಾತಿ ಸಂಬಂಧ ಸಿದ್ದರಾಮಯ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿದ್ದಕ್ಕೆ ದಲಿತ ನಾಯಕರು ಸಂತಸಗೊಂಡಿದ್ದಾರೆ.  ಹೆಚ್​.ಆಂಜನೇಯ ಬೆಂಬಲಿಗರು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಪರ ಘೋಷಣೆ ಕೂಗಿ ಸಂಭ್ರಮಿಸಿದರು. ಅಲ್ಲದೇ ಮಹತ್ವದ ತೀರ್ಮಾನ ಕೈಗೊಂಡಿರುವ ಸಿದ್ದರಾಮಯ್ಯನವರಿಗೆ ಸನ್ಮಾನಿಸಿದರು. ಇನ್ನು ಫ್ರೀಡಂ ಪಾರ್ಕ್​​ ಬಳಿಯೂ ಸಹ ದಲಿತ ಸಮುದಾಯದವರು ಸಿಹಿ ಹಂಚಿ ಸಂಭ್ರಮಿಸಿದರು.

ಅಲೆಮಾರಿಗಳು ಅಸಮಾಧಾನ

ಒಳಮೀಸಲಾತಿ ಸಂಬಂಧ ಇಂದು ಸಚಿವ ಸಂಪುಟ ಕೈಗೊಂಡ ನಿರ್ಧಾರಕ್ಕೆ ದಲಿತ ಬಲಗೈ ಹಾಗೂ ದಲಿತ ಎಡಗೈ ನಾಯಕರು ಒಪ್ಪಿಕೊಂಡಿದ್ದು, ಸಿದ್ದರಾಮಯ್ಯನವರ ನಿರ್ಧಾರವನ್ನು ಸ್ವಾಗತ ಮಾಡಿದ್ದಾರೆ. ಆದ್ರೆ, ಇತರೆ ಸಮುದಾಯ ಜೊತೆ ಅಲೆಮಾರಿಗಳನ್ನ ಸೇರಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇತರೆ ಸಮುದಾಯ ಜೊತೆ ಸೇರಿಸಿ ನಮ್ಮನ್ನ ಬೀದಿಗೆ ತಂದಿದ್ದಾರೆ ಎಂದು ಅಲೆಮಾರಿ ಸಮುದಾಯ ಆಕ್ರೋಶಗೊಂಡಿದೆ.

ಎಲ್ಲರಿಗೂ ಸಮಾಧಾನ ಎಂದ ಹೆಚ್.ಕೆ.ಪಾಟೀಲ್‌

ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್‌, ದಲಿತ ಸಮುದಾಯಕ್ಕೆ ಒಳ‌ ಮೀಸಲಾತಿ ಸಂಬಂಧ ಕೈಗೊಂಡ ಇಂದಿನ ನಿರ್ಣಯವನ್ನ ಸಿಎಂ ಸಿದ್ದರಾಮಯ್ಯನವರು ನಾಳೆ ಸದನದಲ್ಲಿ ಹೇಳುತ್ತಾರೆ. ಎಲ್ಲರೂ ಸಂತೋಷ, ಸಮಾಧಾನದಿಂದ ಬಂದಿದ್ದೇವೆ. ಮುನಿಯಪ್ಪ, ಪರಮೇಶ್ವರ್, ತಂಗಡಗಿ ಸೇರಿದಂತೆ. ಸಂಪುಟ ಸಭೆಯಲ್ಲಿ ಎಲ್ಲರಿಗೂ ಸಮಾಧಾನವಾಗಿದೆ ಎಂದರು.

ಸಂಪುಟ ಸಭೆಯಲ್ಲಿ ಸಿಎಂ ಐತಿಹಾಸಿಕ ನಿರ್ಧಾರ

ಸಂಪುಟ ಸಭೆ ಬಳಿಕ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದು, ಸಂಪುಟ ಸಭೆಯಲ್ಲಿ ಎಲ್ಲರಿಗೂ ತೃಪ್ತಿಪಡುವ ನಿರ್ಧಾರ ಆಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬಹಳ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮೂರು ಒಪ್ಪಂದ ಮಾಡಿಕೊಳ್ಳಲಾಗಿದೆ. ಬೋವಿ , ಲಂಬಾಣಿ ಸೇರಿ ಎಲ್ಲಾ ಇತರೆ ಸೇರಿ 5,5 ಮತ್ತು 6 ಅಂತ ಒಪ್ಪಿಗೆ ನೀಡಲಾಗಿದೆ. ಎಲ್ಲರಿಗೂ ತೃಪ್ತಿ ನೀಡುವ ನಿರ್ಧಾರವಾಗಿದೆ ಎಂದು ಹೇಳಿದರು.

Published On - 10:53 pm, Tue, 19 August 25