ನೌಕರರ ವೇತನ ಶೇ.17ರಷ್ಟು ಹೆಚ್ಚಿಸಿ ಅಧಿಕೃತ ಆದೇಶ ಹೊರಡಿಸಿದ ಸರ್ಕಾರ: ಯಾವಾಗಿನಿಂದ ಜಾರಿಗೆ?
Karnataka Government Employees Strike ರಾಜ್ಯ ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಚಳ ಮಾಡಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಬೆಂಗಳೂರು: 7ನೇ ವೇತನ (7th pay commission) ಆಯೋಗ ವರದಿ ಜಾರಿಗೆ ಮಾಡುವಂತೆ ಪಟ್ಟು ಹಿಡಿದು ಮುಷ್ಕರ ನಡೆಸುತ್ತಿರುವ ರಾಜ್ಯ ನೌಕರರ (Karnataka Government Employees Strike) ಶೇ.17ರಷ್ಟು ವೇತನ ಹೆಚ್ಚಳ ಮಾಡಿದ್ದು, 2023ರ ಏಪ್ರಿಲ್ 1ರಿಂದ ಅನ್ವಯ ಆಗುವಂತೆ ಅಧಿಕೃತ ಆದೇಶ ಹೊರಡಿಸಿದೆ. ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದ ಬೆನ್ನಲ್ಲೇ ಇತ್ತ ಮುಷ್ಕರ ಕೈಬಿಟ್ಟಿದ್ದಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ಘೋಷಿಸಿದೆ. ಇದರೊಂದಿಗೆ ಸರ್ಕಾರ ಹಾಗೂ ನೌಕರರ ನಡುವಿನ ಹಗ್ಗಜಗ್ಗಾಟ ಸದ್ಯಕ್ಕೆ ಅಂತ್ಯವಾದಂತಾಗಿದೆ.
ಅಧಿಕೃತ ಆದೇಶದಲ್ಲೇನಿದೆ?
ರಾಜ್ಯ ನೌಕರರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಪರಿಶೀಲಿಸಲು 7ನೇ ವೇತನ ಆಯೋಗವನ್ನು ರಚಿಸಿ ಆದೇಶ ಹೊರಡಿಸಲಾಗಿರುತ್ತದೆ. ಪ್ರಸ್ತುತ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳ ಹಿನ್ನೆಲೆಯಲ್ಲಿ ಸರ್ಕಾರದ ನೀತಿ ನಿರ್ಣಯದಂತೆ 7ನೇ ವೇತನ ಆಯೋಗದ ಅಂತಿಮ ವರದಿಯನ್ನು ಕಾಯ್ದಿರಿಸಿ, ರಾಜ್ಯ ಸರ್ಕಾರಿ ನೌಕರರಿಗೆ, ಸ್ಥಳೀಯ ಸಂಸ್ಥೆಗಳ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಸರ್ಕಾರವು ನಿರ್ಧರಿಸುತ್ತದೆ. ಅದರಂತೆ ಈ ಕೆಳಕಂಡ ಆದೇಶವನ್ನು ಹೊರಡಿಸಿದೆ.
2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ 2023ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಮೂಲ ವೇತನ ಶೇಕಡ 17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರ ಮಾಡಲು ಸರ್ಕಾರ ಹರ್ಷಿಸುತ್ತದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ಹಣಕಾಸು ಇಲಾಖೆ ಅಧಿಕಾರಿಳ ಜೊತೆಗಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ಎಸಿಎಸ್ ಐಎಸ್ಎನ್ ಪ್ರಸಾದ್ ಜತೆ ಧನಾತ್ಮಕವಾಗಿ ಚರ್ಚೆಯಾಗಿದೆ. ಫಿಟ್ಮೆಂಟ್ ಆದೇಶ, ಎನ್ಪಿಎಸ್ ರದ್ದು ಸಂಬಂಧ ಆದೇಶಿಸಿದ್ದಾರೆ. ಎನ್ಪಿಎಸ್ ಸಂಬಂಧ ಸರ್ಕಾರ ಸಮಿತಿ ರಚಿಸಿದೆ. ಸುಮಾರು 2 ತಿಂಗಳು ಕಾಲಾವಕಾಶ ನೀಡಿ ಸರ್ಕಾರ ಆದೇಶ ಮಾಡಿದೆ. ಆದೇಶ ಸಂಪೂರ್ಣ ತೃಪ್ತಿ ತಂದಿಲ್ಲ, ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.
Published On - 12:13 pm, Wed, 1 March 23
