ಬಿಯರ್ ಪ್ರಿಯರಿಗೆ ದರ ಏರಿಕೆ ಶಾಕ್ ನೀಡಲು ಮುಂದಾದ ಸರ್ಕಾರ: ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಳಕ್ಕೆ ಪ್ರಸ್ತಾಪ

ಬಡವರ ನೆಚ್ಚಿನ ಮದ್ಯದ ಬ್ರ್ಯಾಂಡ್​ಗಳ ದರ ಹೆಚ್ಚಳ ಮಾಡಿರುವುದಾಗಿ ಇತ್ತೀಚೆಗೆ ವರದಿಯಾಗಿತ್ತು. ನಂತರ ಸುಂಕ ಹೆಚ್ಚಳ ಮಾಡಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿತ್ತು. ಆದರೆ, ಇದೀಗ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಏರಿಕೆ ಮಾಡಲು ನಿಯಮಗಳಿಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ ಎಂಬ ಬಗ್ಗೆ ವರದಿಯಾಗಿದೆ.

ಬಿಯರ್ ಪ್ರಿಯರಿಗೆ ದರ ಏರಿಕೆ ಶಾಕ್ ನೀಡಲು ಮುಂದಾದ ಸರ್ಕಾರ: ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಳಕ್ಕೆ ಪ್ರಸ್ತಾಪ
ಮದ್ಯಪಾನ ಆರೋಗ್ಯಕ್ಕೆ ಹಾನಿಕರ

Updated on: Jan 23, 2024 | 7:31 AM

ಬೆಂಗಳೂರು, ಜನವರಿ 23: ಕರ್ನಾಟಕ ಸರ್ಕಾರವು ಬಿಯರ್ (Beer) ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (AED) ಮತ್ತೊಮ್ಮೆ ಹೆಚ್ಚಿಸಲು ಪ್ರಸ್ತಾಪಿಸಿರುವುದಾಗಿ ವರದಿಯಾಗಿದೆ. ಒಂದು ವೇಳೆ ಇದು ನಿಜವಾದಲ್ಲಿ ಪ್ರತಿ 650 ಮಿಲಿ ಬಿಯರ್ ಬಾಟಲಿಗೆ 8-10 ರೂ. ವರೆಗೆ ದರ ಹೆಚ್ಚಾಗಲಿದೆ. ‘ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕಗಳು) ನಿಯಮಗಳು, 1968’ಕ್ಕೆ ತಿದ್ದುಪಡಿ ಮಾಡಲು ಕರಡು ಅಧಿಸೂಚನೆ ರೂಪಿಸಲಾಗಿದ್ದು, ಇದರಲ್ಲಿ ದರ ಹೆಚ್ಚಳವನ್ನು ಪ್ರಸ್ತಾಪಿಸಲಾಗಿದೆ. ದರ ಹೆಚ್ಚಳಕ್ಕೆ ಅವಕಾಶ ನೀಡುವ ಹೊಸ ನಿಯಮಗಳು ಈ ತಿಂಗಳ ಕೊನೆಯಲ್ಲಿ ಅಥವಾ ಫೆಬ್ರವರಿ ಆರಂಭದಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಬಿಯರ್ ಮಾರಾಟದಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ಕಂಡುಬಂದಿರುವುದರಿಂದ ಆ ಮೂಲದಿಂದ ಹೆಚ್ಚು ಆದಾಯ ಸಂಗ್ರಹಿಸುವ ನಿಟ್ಟಿನಲ್ಲಿ ಸರ್ಕಾರವು ಸುಂಕವನ್ನು ಹೆಚ್ಚಿಸುವತ್ತ ಮನ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಕಾಂಗ್ರೆಸ್ ಸರ್ಕಾರದ ಐದು ಉಚಿತ ಗ್ಯಾರಂಟಿಗಳಿಗೆ ಹಣ ಹೊಂದಿಸುವುದಕ್ಕಾಗಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಕರಡು ಅಧಿಸೂಚನೆಯ ಪ್ರಕಾರ, ಕರ್ನಾಟಕದಲ್ಲಿ ತಯಾರಿಸಲಾದ ಅಥವಾ ರಾಜ್ಯಕ್ಕೆ ಆಮದು ಮಾಡಿಕೊಳ್ಳುವ ಬಿಯರ್‌ ಬಾಟಲಿಯ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇಕಡಾ 185 ರಿಂದ ಶೇಕಡಾ 195 ಕ್ಕೆ ಶೇಕಡಾ 10 ರಷ್ಟು ಹೆಚ್ಚಿಸಲಾಗುತ್ತದೆ.

ಒಂದು ವೇಳೆ ದರ ಹೆಚ್ಚಳ ಜಾರಿಗೆ ಬಂದಿದ್ದೇ ಆದಲ್ಲ, ಆರು ತಿಂಗಳ ಅವಧಿಯಲ್ಲಿ ಇದು ಎರಡನೇ ಬಾರಿ ಮದ್ಯದ ಬೆಲೆಯಲ್ಲಿ ಮಾಡಿದ ಏರಿಕೆಯಾಗಲಿದೆ. ಕಳೆದ ವರ್ಷ ಜುಲೈನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತೀಯ ನಿರ್ಮಿತ ಮದ್ಯದ ಮೇಲೆ ಶೇ 20ರಷ್ಟು ಮತ್ತು ಬಿಯರ್ ಮೇಲೆ ಶೇ 175ರಿಂದ ಶೇ 185ಕ್ಕೆ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದರು.

ರಾಜ್ಯ ಸರಕಾರಕ್ಕೆ ಅಬಕಾರಿ ಆದಾಯವೇ ನಿರ್ಣಾಯಕ. 2023-24ನೇ ಹಣಕಾಸು ವರ್ಷದಲ್ಲಿ ಕರ್ನಾಟಕವು ಅಬಕಾರಿಯಿಂದ 36,000 ಕೋಟಿ ರೂಪಾಯಿ ಆದಾಯ ಗಳಿಸುವ ಗುರಿಯನ್ನು ಹೊಂದಿದೆ ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಯಾವುದೇ ಮದ್ಯದ ದರ ಏರಿಕೆ ಮಾಡಿಲ್ಲ-ಸಚಿವ ಆರ್​​.ಬಿ.ತಿಮ್ಮಾಪುರ

ಬಡವರ ನೆಚ್ಚಿನ‌ ಕೆಲ ಮದ್ಯದ ಬ್ರ್ಯಾಂಡ್​ಗಳ ದರವನ್ನು ಕರ್ನಾಟಕ ಸರ್ಕಾರ ಹೆಚ್ಚಿಸಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಮದ್ಯ ಉತ್ಪಾದಕ ಕಂಪನಿಗಳು ಕ್ವಾಟರ್​ಗೆ 20 ರಿಂದ 30 ರೂಪಾಯಿ ಏರಿಕೆ ಮಾಡಿವೆ ಎಂದು ವರದಿಯಾಗಿತ್ತು. ಆದರೆ, ನಂತರ ಸ್ಪಷ್ಟನೆ ನೀಡಿದ್ದ ಅಬಕಾರಿ ಇಲಾಖೆ, ದರ ಹೆಚ್ಚಳ ಮಾಡಿಲ್ಲ ಎಂದು ಹೇಳಿತ್ತು.

‘ಮದ್ಯ ಉತ್ಪಾದಕರು ದರ ಹೆಚ್ಚಳ ಮಾಡಿದ್ದರೂ ಇರಬಹುದು. ಆದರೆ, ನಾವಂತೂ ಹೆಚ್ಚಿಸಿಲ್ಲ. ಅಬಕಾರಿ ಶುಲ್ಕ ಹೆಚ್ಚಳ ಮಾಡುವುದಾದರೆ ಮೊದಲೇ ಹೇಳುತ್ತೇವೆ. ಬಜೆಟ್​​ನಲ್ಲೂ ಸದ್ಯ ತೆರಿಗೆ ಹೆಚ್ಚಳದ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಯಾವುದೇ ಟಾರ್ಗೆಟ್ ಕೂಡ ನೀಡಿಲ್ಲ’ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಸ್ಪಷ್ಟನೆ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us