ಸರ್ಕಾರಿ ಶಾಲೆಗಳಲ್ಲಿ ಶೂ, ಸಾಕ್ಸ್ ವಿತರಣೆ ಅಧ್ವಾನ: ಕಳಪೆ ಗುಣಮಟ್ಟದ ಪೂರೈಕೆ; ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಬಯಲು​​​​

ರಾಜ್ಯದಲ್ಲಿ ಶಾಲೆಗಳು ಪ್ರಾರಂಭವಾಗಿ 4 ತಿಂಗಳು ಕಳೆದು, ಇದೀಗ ದಸರಾ ರಜೆ ಕೂಡ ನೀಡಲಾಗಿದೆ. ಹೀಗಿರುವಾಗ ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಿಗೆ ಇನ್ನೂ ಶೂ ವಿತರಣೆ ಆಗಿಲ್ಲ. ಕೆಲವೆಡೆ ವಿತರಣೆ ಆಗಿರುವ ಶೂ, ಸಾಕ್ಸ್​​ಗಳೆಲ್ಲ ಕೆಟ್ಟ ಕಳಪೆಯದ್ದಾಗಿದೆ. ಜಿಲ್ಲೆಗಳಲ್ಲಿ ಟಿವಿ9 ಕನ್ನಡ ಸುದ್ದಿ ವಾಹಿನಿ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಶೂ ಭಾಗ್ಯ ಅಸಲಿಯತ್ತು ಅನಾವರಣವಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಸರ್ಕಾರಿ ಶಾಲೆಗಳಲ್ಲಿ ಶೂ, ಸಾಕ್ಸ್ ವಿತರಣೆ ಅಧ್ವಾನ: ಕಳಪೆ ಗುಣಮಟ್ಟದ ಪೂರೈಕೆ; ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಬಯಲು​​​​
ಶೂ, ಸಾಕ್ಸ್
Image Credit source: tv9 kannada
Edited By:

Updated on: Sep 25, 2026 | 8:55 PM

ಬೆಂಗಳೂರು, ಸೆಪ್ಟೆಂಬರ್​​ 25: ರಾಜ್ಯದ ಸರ್ಕಾರಿ ಶಾಲೆಗಳು ಆರಂಭವಾಗಿ ನಾಲ್ಕು ತಿಂಗಳು ಕಳೆದರೂ ಬಹುತೇಕ ಕಡೆ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆಯಾಗಿಲ್ಲ. ಇನ್ನು ಕೆಲವೆಡೆ ವಿತರಿಸಲಾಗಿರುವ ಶೂ ಮತ್ತು ಸಾಕ್ಸ್‌ಗಳು ತೀರಾ ಕಳಪೆ ಗುಣಮಟ್ಟದಿಂದ ಕೂಡಿದ್ದು, ಒಂದೇ ತಿಂಗಳಲ್ಲಿ ಕಿತ್ತು ಬರುತ್ತಿವೆ. ರಾಜ್ಯಾದ್ಯಂತ ಏಕರೂಪದ ಟೆಂಡರ್ ಮೂಲಕ ಪೂರೈಕೆಯಾಗುತ್ತಿರುವ ಈ ಸಾಮಗ್ರಿಗಳು ಯಾವುದೇ ಬ್ರ್ಯಾಂಡ್ ಹಾಗೂ ಲೇಬಲ್ ಹೊಂದಿರದೆ ಬಳಕೆಗೆ ಯೋಗ್ಯವಾಗಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿಬಂದಿದೆ.

ಕೊಪ್ಪಳ, ಕಲಬುರಗಿಯಲ್ಲಿ ಕಳಪೆ ಶೂ ವಿತರಣೆ: ವಾಪಸ್ ಕಳುಹಿಸುವುದಾಗಿ ಎಚ್ಚರಿಕೆ 

ಕೊಪ್ಪಳ ಜಿಲ್ಲೆಯಲ್ಲಿ ಶಾಲೆ ಆರಂಭವಾಗಿ 4 ತಿಂಗಳು ಕಳೆದರೂ ಸುಮಾರು 19 ಸಾವಿರ ಮಕ್ಕಳಿಗೆ ಇನ್ನೂ ಶೂ, ಸಾಕ್ಸ್ ತಲುಪಿಲ್ಲ. ಸದ್ಯ ವಿತರಣೆಯಾಗುತ್ತಿರುವ ಕೆಲ ಶಾಲೆಗಳಲ್ಲೂ ಹೊಸ ಶೂಗಳು ಕಿತ್ತು ಬರುತ್ತಿದ್ದು, ಇವುಗಳನ್ನು ಮಕ್ಕಳಿಗೆ ಹಂಚದೆ ಶಿಕ್ಷಣ ಇಲಾಖೆಯ ಕಚೇರಿಗೇ ವಾಪಸ್ ನೀಡುವುದಾಗಿ ಎಸ್‌ಡಿಎಂಸಿ ಸಮನ್ವಯ ವೇದಿಕೆ ಎಚ್ಚರಿಕೆ ನೀಡಿದೆ.

ರಾಜ್ಯ ಸರ್ಕಾರ ರಾಜ್ಯದಲ್ಲಿ ಒಂದೇ ಟೆಂಡರ್ ಕರೆದು, ಎಲ್ಲಾ ಸರ್ಕಾರಿ ಶಾಲೆಗಳಿಗೆ ಶೂ ಹಾಗೂ ಸಾಕ್ಸ್​ಗಳ ವಿತರಣೆ ಮಾಡುತ್ತಿದೆ. ಆದರೆ ಸದ್ಯ ವಿತರಣೆ ಆಗುತ್ತಿರುವ ಶ್ಯೂ ಹಾಗೂ ಸಾಕ್ಸ್​ಗಳ ಗುಣಮಟ್ಟ ಸರಿಯಾಗಿಲ್ಲ. ಯಾವುದೇ ಬ್ರ್ಯಾಂಡ್ ಹಾಗೂ ಯಾವುದೇ ಲೇಬಲ್ ಇಲ್ಲ. ಕಳಪೆ ಗುಣಮಟ್ಟದ ಶ್ಯೂಗಳನ್ನ ವಿತರಣೆ ಮಾಡಲಾಗುತ್ತಿದೆ ಎಂದು ಎಸ್‌ಡಿಎಂಸಿ ಸಮನ್ವಯ ವೇದಿಕೆ ಆರೋಪಿಸಿದೆ.

ಇದನ್ನೂ ಓದಿ: ಧೂಳು ತಿನ್ನುತ್ತಿದ್ದ ಶೂಗಳು ಕೊನೆಗೂ ಮಕ್ಕಳ ಕಾಲಿಗೆ: ಟಿವಿ9 ವರದಿಯ ಸಕಾರಾತ್ಮಕ ಪರಿಣಾಮಕ್ಕೆ ಗದಗ ಪೋಷಕರ ಧನ್ಯವಾದ

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಸಚಿವ ಶಿವರಾಜ್ ತಂಗಡಗಿ, ಗುಣಮಟ್ಟವನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಇತ್ತ ಕಲಬುರಗಿಯಲ್ಲೂ ನಾಲ್ಕು ತಿಂಗಳ ಬಳಿಕ ಯಾವುದೇ ಲೇಬಲ್ ಇಲ್ಲದ ಕಳಪೆ ಶೂಗಳನ್ನು ನೀಡಲಾಗಿದ್ದು, ಬೇಸತ್ತ ಮಕ್ಕಳು ಕಳೆದ ವರ್ಷದ ಹಳೆಯ ಶೂಗಳನ್ನೇ ಧರಿಸಿ ಶಾಲೆಗೆ ಬರುತ್ತಿದ್ದಾರೆ.

ಧಾರವಾಡ, ಬೆಡಸಗಾಂವದಲ್ಲಿ ಶಾಲೆ ಮುಂಭಾಗ ಶೂ ಎಸೆದು ಪ್ರತಿಭಟನೆ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬೆಡಸಗಾಂವ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳಪೆ ಶೂಗಳನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲೆ ಮುಂದೆಯೇ ಎಸೆದು ಆಕ್ರೋಶ ಹೊರಹಾಕಿದ್ದಾರೆ. ಶೂಗಳು ನಿಗದಿತ ಗುಣಮಟ್ಟದ ಮಾನದಂಡಕ್ಕೆ ಅನುಗುಣವಾಗಿಲ್ಲ ಎಂದು ಆರೋಪಿಸಿರುವ ಪೋಷಕರು ಮತ್ತು ಎಸ್‌ಡಿಎಂಸಿ ಸದಸ್ಯರು, ಅಧಿಕಾರಿಗಳು ತಕ್ಷಣ ಪರಿಶೀಲಿಸಬೇಕೆಂದು ಆಗ್ರಹಿಸಿದರು. ಇತ್ತ ಧಾರವಾಡದಲ್ಲಿ ಕಳೆದ ತಿಂಗಳಷ್ಟೇ ವಿತರಿಸಿದ್ದ ಶೂಗಳು ಒಂದೇ ತಿಂಗಳಿಗೆ ಹರಿದುಹೋಗಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

4 ತಿಂಗಳಾದರೂ ಬೆಂಗಳೂರಿನ ಮಕ್ಕಳಿಗೆ ಸಿಕ್ಕಿಲ್ಲ ಶೂ!

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 94 ನರ್ಸರಿ, 18 ಪ್ರಾಥಮಿಕ, 36 ಹೈಸ್ಕೂಲ್, 21 ಪಿಯು, 4 ಡಿಗ್ರಿ ಹಾಗೂ 2 ಪಿಜಿ ಕಾಲೇಜುಗಳು ಸೇರಿದಂತೆ ಒಟ್ಟು 175 ವಿದ್ಯಾಸಂಸ್ಥೆಗಳಿವೆ. ಇಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 21,506 (8,588 ಗಂಡು ಮತ್ತು 12,918 ಹೆಣ್ಣು) ಮಕ್ಕಳಲ್ಲಿ ಹೆಚ್ಚಿನವರಿಗೆ 4 ತಿಂಗಳಾದರೂ ಸ್ವೆಟರ್, ಬ್ಯಾಗ್, ಶೂ ಹಾಗೂ ಸಾಕ್ಸ್‌ಗಳು ಸಮರ್ಪಕವಾಗಿ ಸಿಕ್ಕಿಲ್ಲ.

ಇದನ್ನೂ ಓದಿ: ಕಳಪೆ ಶೂ ಆರೋಪಕ್ಕೆ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ: ಆ ಹಳೆಯ ಫೋಟೋಗಳೇ ಕಾರಣ

ಶಾಂತಿನಗರದ ಶಾಲೆಯೊಂದರಲ್ಲೇ 72 ವಿದ್ಯಾರ್ಥಿಗಳು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕೆಲವೆಡೆ ಶೂ ನೀಡಿದರೆ, ಸ್ವೆಟರ್ ಬಿಡಲಾಗುತ್ತಿದೆ. ಟೆಂಡರ್ ಕರೆದರೂ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ. ನಿಯಮ ಉಲ್ಲಂಘಿಸಿ ಕಳಪೆ ವಸ್ತು ಪೂರೈಸಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಕೂಗು ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:54 pm, Fri, 25 September 26

ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More
Loading...
Unable to load recommendations.
Follow Us