ಕೇಂದ್ರದ ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ತೀರ್ಮಾನ

ಕಸ್ತೂರಿ ರಂಗನ್ ವರದಿ. ಇದು ಕಳೆದ ಹಲವು ವರ್ಷಗಳಿಂದ ಬಹುಚರ್ಚಿತ ವಿಷಯವಾಗಿದೆ. ಪರ-ವಿರೋಧ ವಾಕ್ಸಮರ ಹಾಗೂ ಹೋರಾಟಗಳಿಗೆ ಕಾರಣವಾದ ಹೆಗ್ಗಳಿಕೆ ‘ಕಸ್ತೂರಿ ರಂಗನ್ ವರದಿಗೆ ಇದ್ದು, ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಹೌದು....ಕೇಂದ್ರ ಸರ್ಕಾರದ ಕಸ್ತೂರಿ ರಂಗನ್ ವರದಿ (Kasturirangan Report) ಕರಡು ಅಧಿಸೂಚನೆ ಸಂಬಂಧ ವಿಧಾನಸಭೆಯಲ್ಲಿಂದು ಪ್ರಸ್ತಾಪವಾಗಿದ್ದು, ಕರಡು ಅಧಿಸೂಚನೆ ವಿರುದ್ಧ ನಿರ್ಣಯ ಅಂಗೀಕಾರಕ್ಕೆ ಒತ್ತಾಯಿಸಲಾಗಿದೆ. ಬಳಿಕ ಇದಕ್ಕೆ ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸಿದೆ.

ಕೇಂದ್ರದ ಕಸ್ತೂರಿ ರಂಗನ್ ವರದಿಯ  ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ತೀರ್ಮಾನ
Kasturi Rangan Report
Edited By:

Updated on: Aug 20, 2026 | 5:29 PM

ಬೆಂಗಳೂರು, (ಆಗಸ್ಟ್ 20): ಕರ್ನಾಟಕದ (Karnataka) ಸಾವಿರಕ್ಕೂ ಹೆಚ್ಚು ಗ್ರಾಮಗಳನ್ನು ಒಳಗೊಳ್ಳುವ ಕೇಂದ್ರ ಸರ್ಕಾರದ ಕಸ್ತೂರಿ ರಂಗನ್ ವರದಿ (Kasturirangan Report) ಕರಡು ಅಧಿಸೂಚನೆ ವಿರುದ್ಧ ವಿಧಾನಸಭೆಯಲ್ಲಿಂದು ಮಹತ್ವದ ಚರ್ಚೆ ನಡೆಯಿತು. ಕೊಡಗು ಸೇರಿದಂತೆ ಪಶ್ಚಿಮಘಟ್ಟ ಪ್ರದೇಶದ ರೈತರು ಮತ್ತು ಸಾರ್ವಜನಿಕರ ಆತಂಕವನ್ನು ಸದನದ ಗಮನಕ್ಕೆ ತರುವ ನಿಟ್ಟಿನಲ್ಲಿ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ವಿಷಯ ಪ್ರಸ್ತಾಪಿಸಿದ್ದು, ಕೇಂದ್ರದ ಕರಡು ಅಧಿಸೂಚನೆ ವಿರುದ್ಧ ನಿರ್ಣಯ ಅಂಗೀಕಾರಕ್ಕೆ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ (ramalinga reddy). ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ರಾಜ್ಯ ಸರ್ಕಾರದಿಂದ ಶಿಫಾರಸು ಮಾಡುತ್ತೇವೆ ಎಂದು ಘೋಷಿಸಿದ್ದಾರೆ.

ನಿಲುವು ಸ್ಪಷ್ಟಪಡಿಸಿದ ರಾಜ್ಯ ಸರ್ಕಾರ

ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಅವರು ಇಂದು(ಆಗಸ್ಟ್ 20) ಸನದಲ್ಲಿ ವಿಷಯ ಪ್ರಸ್ತಾಪಿಸಿ, ಜನರ ಆತಂಕ ನಿವಾರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಪಶ್ಚಿಮಘಟ್ಟ ಭಾಗದ ಜನರ ಹಿತಾಸಕ್ತಿಯನ್ನು ಕಾಪಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, 10 ಜಿಲ್ಲೆಗಳ ವ್ಯಾಪ್ತಿಯಲ್ಲಿ 39 ತಾಲೂಕುಗಳಲ್ಲಿ ಕಸ್ತೂರಿ ರಂಗನ್ ವರದಿ ಪರಿಣಾಮ ಬೀರಲಿದೆ. ಈ ಹಿಂದೆಯೂ ರಾಜ್ಯ ಸರ್ಕಾರ ಇದಕ್ಕೆ ಆಕ್ಷೇಪಿಸಿತ್ತು. ರೈತರ ಬೇಡಿಕೆಗಳ ಕುರಿತು ಸರ್ಕಾರದ ಗಮನದಲ್ಲಿದೆ. ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ಇದೆ. ಹೀಗಾಗಿ ಕಸ್ತೂರಿ ರಂಗನ್ ವರದಿ ತಿರಸ್ಕಾರಕ್ಕೆ ರಾಜ್ಯ ಸರ್ಕಾರದಿಂದ ಶಿಫಾರಸು ಮಾಡುತ್ತೇವೆ ಎಂದು ನಿಲುವು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸಂಪುಟ ಸಭೆಯಲ್ಲಿ ನಿರ್ಣಯ

ಸರ್ಕಾರದ ತೀರ್ಮಾನದ ಬಗ್ಗೆ ಪೊನ್ನಣ್ಣ ಹೇಳಿದ್ದಿಷ್ಟು

ಸರ್ಕಾರದ ತೀರ್ಮಾನದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೊನ್ನಣ್ಣ, ಸದನದಲ್ಲಿ ಇವತ್ತು ನಿಯಮ 69ರ ಅಡಿ ಕಸ್ತೂರಿರಂಗನ್ ವರದಿ ಚರ್ಚೆ ಆಗಿದೆ. ಅದರ ಆಧಾರಿತವಾಗಿ 26 ಜುಲೈ 2026 ರಂದು ಕೇಂದ್ರ ಸರ್ಕಾರದ ಅರಣ್ಯ ಸಚಿವಾಲಯ ಹೊರಡಿಸಿರುವ ಅಧಿಸೂಚನೆ. ಇದರಿಂದ 1,150 ಮಲೆನಾಡಿನ ಭಾಗದ ಮನೆಗಳಲ್ಲಿ ಉಂಟಾಗಿರುವ ಭಯ. ಇದರ ಬಗ್ಗೆ ಚರ್ಚೆ ಆಗಿ ಸದನದಿಂದ ಕೇಂದ್ರ ಸರ್ಕಾರಕ್ಕೆ ಒಂದು ಸೂಚನೆ ಕೊಡಬೇಕು ಅಂತ ಇತ್ತು. ನಾನು, ಶಾಸಕ ತಮ್ಮಯ್ಯನವರು, ಶಿವಮೊಗ್ಗ ನಗರ ಶಾಸಕರು, ರಾಜೇಗೌಡ್ರು ಮತ್ತು ಸಿರ್ಸಿ ಶಾಸಕರು ನಾವೆಲ್ಲ ಸಹಿ ಮಾಡಿ ಕೊಟ್ಟ ಅರ್ಜಿಯನ್ನ ಇವತ್ತೂ ಸದನದಲ್ಲಿ ಚರ್ಚೆಗೆ ಅವಕಾಶ ಕೊಟ್ರು. ಇದು ಪಕ್ಷಾತೀತವಾದ ಹೋರಾಟ ಆಗಬೇಕಿತ್ತು .ರೈತರ ಬಗ್ಗೆ ಕಾಳಜಿ ಇರುವವರು ಚರ್ಚೆ ಮಾಡಿ ಸದನದಲ್ಲಿ ಸವಾರ್ನುಮತದಿಂದ ತೀರ್ಮಾನ ಮಾಡಬೇಕಿತ್ತು .ಇದಕ್ಕೂ ಕೂಡ ವಿರೋಧ ಪಕ್ಷದವರು ರಾಜಕೀಯ ಬಣ್ಣ ಬಳದಿದ್ದಾರೆ . ಇದರಲ್ಲೂ ಅವರ ಪ್ರತಿಭಟನೆ ಮುಂದುವರೆಸಿದ್ದಾರೆ. ಅಷ್ಟೆಲ್ಲ ಗದ್ದಲದ ಮಧ್ಯದಲ್ಲೂ ನಾನು ಮತ್ತು ನಮ್ಮ ಶಾಸಕರು ಚರ್ಚೆಯನ್ನು ಮಾಡಿದ್ದು, ಚರ್ಚೆಯಲ್ಲಿ ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಯಸಿದ್ದೇವೆ ಎಂದು ಹೇಳಿದರು.

ಈಶ್ವರ್ ಖಂಡ್ರೆ ಅವರು ಅರಣ್ಯ ಸಚಿವರಾಗಿದ್ದಾಗ ಈ ವರದಿಯನ್ನು ತಿರಸ್ಕಾರ ಮಾಡಿದ್ರು ಮತ್ತೆ ಕರಡು ಅಧಿಸೂಚನೆ ಹೊರಡಿಸಿದ್ದಾರೆ. ಇವತ್ತು ಅರಣ್ಯ ಸಚಿವರು ರಾಮಲಿಂಗಾರೆಡ್ಡಿ ಅವರು ಚರ್ಚೆಗೆ ಉತ್ತರವನ್ನು ಕೊಟ್ಟು ವರದಿಯನ್ನು ತಿರಸ್ಕಾರ ಮಾಡಿದ್ದೇವೆ. ಕರಡು ಅಧಿಸೂಚನೆಯನ್ನು ತಿರಸ್ಕರಿಸಿ ನಮ್ಮ ವರದಿಯನ್ನು ನಾವು ಸಲ್ಲಿಸುತ್ತೇವೆ. ಬಿಜೆಪಿ ಅವರಿಗೆ ಮನವಿ ಮಾಡುತ್ತಿದ್ದೇನೆ ದಯವಿಟ್ಟು ಈ ರಾಜಕಾರಣವನ್ನ ಕೈಬಿಟ್ಟು ನಮ್ಮ ಜೊತೆ ಕೈ ಜೋಡಿಸಿ. ಇದು ರೈತರ ಸಮಸ್ಯೆ ನಾವೆಲ್ಲರೂ ಒಂದಾಗಬೇಕು ಅಂತ ಮನವಿ ಮಾಡಿದ್ರು ಮತ್ತೆ ಅದೇ ಧೋರಣೆಯನ್ನು ಮುಂದುವರಿಸಿದ್ದಾರೆ. ನಮ್ಮ ಅರಣ್ಯ ಸಚಿವರ ಉತ್ತರ ನನಗೆ ಒಬ್ಬ ಶಾಸಕನಾಗಿ ಸಮಾಧಾನ ತಂದಿದೆ. ನಮ್ಮ ಸರ್ಕಾರ ಮತ್ತು ಅರಣ್ಯ ಸಚಿವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಏನಿದು ಕಸ್ತೂರಿ ರಂಗನ್ ವರದಿ?

ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಒಂದು ಸಮಿತಿ ರಚಿಸಿತ್ತು. ಈ ಸಮಿತಿಯು 2011 ಆಗಸ್ಟ್‌ 31ರಂದು ತನ್ನ ವರದಿ ನೀಡಿತು. ಈ ವರದಿಯು ಮಾದವ ಗಾಡ್ಗೀಳ್‌ ವರದಿ ಎಂದೇ ಜನಪ್ರಿಯವಾಗಿದೆ. ಏಕೆಂದರೆ, ಪರಿಸರ ತಜ್ಞ ಮಾದವ ಗಾಡ್ಗೀಳ್‌ ಅವರ ನೇತೃತ್ವದ ಸಮಿತಿ ನೀಡಿದ ವರದಿ ಇದಾಗಿತ್ತು. ಈ ವರದಿಯ ಪ್ರಕಾರ ಪಶ್ಚಿಮ ಘಟ್ಟದ ಶೇ. 94 ರಿಂದ 97ರಷ್ಟು ಭೂ ಭಾಗವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರ್ತಿಸಲಾಗಿತ್ತು. ಈ ಪ್ರದೇಶದಲ್ಲಿ ಜನವಸತಿಗೆ ನಿರ್ಬಂಧ ಹೇರಬೇಕೆಂದು ಶಿಫಾರಸ್ಸು ಮಾಡಲಾಗಿತ್ತು. ಈ ವರದಿ ಭಾರೀ ಆಕ್ರೋಶಕ್ಕೆ ಗುರಿಯಾಯ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಇಸ್ರೋ ಸಂಸ್ಥೆಯ ಮಾಜಿ ಮುಖ್ಯಸ್ಥ, ವಿಜ್ಞಾನಿ ಕಸ್ತೂರಿ ರಂಗನ್ ಅವರ ಸಾರಥ್ಯದಲ್ಲಿ ಮತ್ತೊಂದು ಸಮಿತಿ ರಚಿಸಿತು. ಈ ಸಮಿತಿಯು ಗಾಡ್ಗೀಳ್ ವರದಿಯಲ್ಲಿ ಇದ್ದಿರಬಹುದಾದ ಲೋಪ-ದೋಷಗಳನ್ನು, ಕುಂದುಕೊರತೆಗಳನ್ನು ನೀಗಿಸಿ ಒಂದು ವರದಿ ಸಿದ್ದಪಡಿಸಿತು. 2013 ಏಪ್ರಿಲ್ 15ರಂದು ಸಲ್ಲಿಕೆಯಾದ ಈ ವರದಿಯನ್ನು ಕೇಂದ್ರ ಸರ್ಕಾರ ಸ್ವೀಕರಿಸಿತು. ಆದ್ರೆ ಇದೀಗ ಈ ವರದಿಯೂ ವಿವಾದಾಸ್ಪದವಾಗಿದೆ.

ಕಸ್ತೂರಿ ರಂಗನ್ ವರದಿಯಲ್ಲೇನಿದೆ?

ಗುಜರಾತ್‌ನ ತಪತಿ ನದಿ ಮೂಲದಿಂದ ಹಿಡಿದು, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡಿನ ಕನ್ಯಾಕುಮಾರಿವರೆಗೂ 1,64,280 ಚದರ ಕಿಲೋ ಮೀಟರ್ ಪ್ರದೇಶವನ್ನು ಪಶ್ಚಿಮ ಘಟ್ಟ ಎಂದು ಗುರ್ತಿಸಲಾಗಿದೆ. ಈ ಪೈಕಿ ಕರ್ನಾಟಕದ ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ಹಲವು ಭೂಭಾಗ ಪಶ್ಚಿಮ ಘಟ್ಟದ ವ್ಯಾಪ್ತಿಗೆ ಬರುತ್ತವೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳು ಗಣಿಗಾರಿಕೆ, ಕೈಗಾರಿಕೆಗಳು, ಜಲ ವಿದ್ಯುತ್ ಯೋಜನೆ, ಪವನ ವಿದ್ಯುತ್ ಯೋಜನೆ ಸೇರಿದಂತೆ ಎಲ್ಲಾ ರೀತಿಯ ಕಾರ್ಯಗಳನ್ನು ಸ್ಥಗಿತಗೊಳಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ. 20 ಸಾವಿರ ಚದರ ಮೀಟರ್‌ಗಿಂತಲೂ ದೊಡ್ಡ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಶಿಫಾರಸ್ಸು ಮಾಡಲಾಗಿದೆ. ಈ ಪ್ರದೇಶದಲ್ಲಿ ಸಿಮೆಂಟ್, ಕಲ್ಲು, ರಾಸಾಯನಿಕ ಬಳಕೆ ಹಾಗೂ ಜನವಸತಿ ಪ್ರದೇಶ ನಿರ್ಮಾಣಕ್ಕೂ ನಿಷೇಧ ವಿಧಿಸಬೇಕೆಂದು ತಿಳಿಸಲಾಗಿದೆ.

ವಿರೋಧ ಏಕೆ?

ಕಸ್ತೂರಿ ರಂಗನ್ ಅವರ ವರದಿ ಅನುಷ್ಠಾನವಾದ್ರೆ ಪಶ್ಚಿಮ ಘಟ್ಟ ಹಾಗೂ ಮಲೆನಾಡು ಅತಿ ಸೂಕ್ಷ್ಮ ಪರಿಸರ ವಲಯವಾಗಿ ಪರಿವರ್ತನೆಯಾಗುತ್ತೆ. ಇಲ್ಲಿ ಮಾನವ ಹಸ್ತಕ್ಷೇಪವನ್ನು ಮಾಡುವಂತೆಯೇ ಇಲ್ಲ. ಇಡೀ ಭೂ ಭಾಗ ರಾಜ್ಯದ ನಿಯಂತ್ರಣ ಕಳೆದುಕೊಂಡು ಕೇಂದ್ರದ ಸುಪರ್ದಿಗೆ ಬರುತ್ತದೆ. ಇಲ್ಲಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸಬೇಕಾಗುತ್ತದೆ. ವಿದ್ಯುತ್, ನೀರಾವತಿ ಸೇರಿದಂತೆ ಯಾವುದೇ ಕೈಗಾರಿಕೆ ನಡೆಸಲು ಕಷ್ಟ ಸಾಧ್ಯವಾಗಲಿದೆ. ಸದ್ಯ ಇರುವ ಕೈಗಾರಿಕೆಗಳನ್ನು 5 ವರ್ಷದೊಳಗೆ ಮುಚ್ಚಬೇಕಾಗುತ್ತದೆ. ಹೀಗಾಗಿ ಹಲವು ಜಿಲ್ಲೆಯ ಜನರು ಈ ವರದಿಗೆ ವಿರೋಧಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:17 pm, Thu, 20 August 26

Loading...
Unable to load recommendations.
Follow Us