AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಂದೇ ಮಾತರಂ, ಭಾರತ್ ಮಾತಾಕಿ ಜೈ’ ಎಂದಿದ್ದಕ್ಕೆ ವಿದ್ಯಾರ್ಥಿಗೆ ಬೆದರಿಕೆ ಆರೋಪ: ಪ್ರಾಂಶುಪಾಲರ ವಿರುದ್ಧ ಎಫ್‌ಐಆರ್!

Bidar News: ಸ್ವಾತಂತ್ರ್ಯ ದಿನಾಚರಣೆ ದಿನದಂದು ಕಾಲೇಜು ಆವರಣದಲ್ಲಿ ದೇಶಭಕ್ತಿ ಘೋಷಣೆ ಕೂಗಿವುದೇ ತಪ್ಪಾ ಎಂಬ ಪ್ರಶ್ನೆ ಮೂಡುವಂತಹ ಆಘಾತಕಾರಿ ಘಟನೆಯೊಂದು ಬೀದರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. 'ವಂದೇ ಮಾತರಂ' ಮತ್ತು 'ಭಾರತ್ ಮಾತಾಕಿ ಜೈ' ಎಂದ ವಿದ್ಯಾರ್ಥಿಗೆ ಪ್ರಾಂಶುಪಾಲರು ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದ್ದು, ಎಫ್‌ಐಆರ್ ದಾಖಲಾಗಿದೆ.

‘ವಂದೇ ಮಾತರಂ, ಭಾರತ್ ಮಾತಾಕಿ ಜೈ’ ಎಂದಿದ್ದಕ್ಕೆ ವಿದ್ಯಾರ್ಥಿಗೆ ಬೆದರಿಕೆ ಆರೋಪ: ಪ್ರಾಂಶುಪಾಲರ ವಿರುದ್ಧ ಎಫ್‌ಐಆರ್!
ವಿದ್ಯಾರ್ಥಿಗೆ ಬೆದರಿಕೆImage Credit source: tv9 kannada
ಸುರೇಶ್ ನಾಯಕ್
| Edited By: |

Updated on: Aug 20, 2026 | 4:14 PM

Share

ಮುಖ್ಯಾಂಶಗಳು

  • ವಂದೇ ಮಾತರಂ ಭಾರತ್ ಮಾತಾಕಿ ಜೈ ಎಂದ ವಿದ್ಯಾರ್ಥಿಗೆ ಬೆದರಿಕೆ
  • ಬೀದರ್‌ ಜಿಲ್ಲೆಯ ಚಿಟಗುಪ್ಪಾದಲ್ಲಿರುವ ಶಾಹೀನ್ ಕಾಲೇಜಿನಲ್ಲಿ ಘಟನೆ
  • ಶಾಹೀನ್ ಕಾಲೇಜು ಪ್ರಾಂಶುಪಾಲ ಅಬ್ದುಲ್ ವಿರುದ್ಧ FIR

ಬೀದರ್​​, ಆಗಸ್ಟ್​ 20: ಸದ್ಯ ರಾಜ್ಯದಲ್ಲಿ ವಂದೇ ಮಾತರಂ (Vande Mataram) ಸುತ್ತ ಚರ್ಚೆಗಳು ಜೋರಾಗಿವೆ. ಬಿಜೆಪಿ ಇದನ್ನೇ ದಾಳವಾಗಿ ಬಳಸಿಕೊಂಡು ಕಿಡಿಕಾರುತ್ತಿದೆ. ಇನ್ನೊಂದೆಡೆ ನಮ್ಮನ್ನು ಗಲ್ಲಿಗಾದರೂ ಹಾಕಲಿ, ಜೈಲಿಗಾದರೂ ಹಾಕಲಿ. ನಾವು ವಂದೇ ಮಾತರಂ ಗೀತೆಯ ಎರಡು ಚರಣ ಮಾತ್ರ ಹಾಡುವುದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದರು. ಇದೆಲ್ಲದರ ಮಧ್ಯೆ ‘ವಂದೇ ಮಾತರಂ ಭಾರತ್ ಮಾತಾಕಿ ಜೈ’ ಎಂದ ವಿದ್ಯಾರ್ಥಿಗೆ ಬೆದರಿಕೆ ಹಿನ್ನೆಲೆ ಪ್ರಾಂಶುಪಾಲ ವಿರುದ್ಧ ಎಫ್​ಐಆರ್​ ದಾಖಲಾಗಿರುವ ಘಟನೆ ಬೀದರ್​ನಲ್ಲಿ (bidar) ನಡೆದಿದೆ.

ನಡೆದಿದ್ದೇನು?

ಬೀದರ್ ಜಿಲ್ಲೆಯ ಚಿಟಗುಪ್ಪಾ ಪಟ್ಟಣದಲ್ಲಿರುವ ಪ್ರತಿಷ್ಠಿತ ಶಾಹೀನ್ ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಗಿತ್ತು. ಧ್ವಜಾರೋಹಣ ಮುಗಿದ ಬೆನ್ನಲ್ಲೇ ದೇಶಭಕ್ತಿಯ ಉಮೇದಿನಲ್ಲಿದ್ದ ಪಿಯುಸಿ ವಿದ್ಯಾರ್ಥಿ ಸಾಗರ್ ಗೌಳಿ ಎಂಬಾತ ‘ವಂದೇ ಮಾತರಂ’, ‘ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗಿದ್ದಾನೆ. ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಹಕೀಮ್, ‘ಇದು ಒಂದು ನಿರ್ದಿಷ್ಟ ಧಾರ್ಮಿಕ ಸಮುದಾಯಕ್ಕೆ ಸೇರಿದ ಘೋಷಣೆ. ಇನ್ನೊಮ್ಮೆ ಕಾಲೇಜಿನಲ್ಲಿ ಇಂತಹ ಘೋಷಣೆಗಳನ್ನು ಕೂಗಬಾರದು, ನಮ್ಮ ಕಾಲೇಜಿನಲ್ಲಿ ಇವೆಲ್ಲ ನಡೆಯುವುದಿಲ್ಲ’ ಎಂದು ವಿದ್ಯಾರ್ಥಿಗೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.

ಪ್ರಾಂಶುಪಾಲ ವಿರುದ್ಧ ಎಫ್‌ಐಆರ್ ದಾಖಲು 

ಕಾಲೇಜಿನಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಯಾವುದೇ ಭೇದಭಾವವಿಲ್ಲದೆ ಒಟ್ಟಾಗಿ ಕಲಿಯುತ್ತಿದ್ದಾರೆ. ಆದರೆ ಪ್ರಾಂಶುಪಾಲರೇ ಹಿಂದೂ, ಮುಸ್ಲಿಂ ಎಂಬ ತಾರತಮ್ಯ ಮಾಡುತ್ತಿದ್ದಾರೆ. ಈ ಮೂಲಕ ವಿವಿಧ ಸಮುದಾಯಗಳ ವಿದ್ಯಾರ್ಥಿಗಳಲ್ಲಿ ವೈಮನಸ್ಸು ಮೂಡಿಸುತ್ತಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ಹಿರೋಬಾ ಗೌಳಿ ಆರೋಪಿಸಿದ್ದಾರೆ. ಘಟನೆ ಸಂಬಂಧ ಹಿರೋಬಾ ಚಿಟಗುಪ್ಪಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಾಂಶುಪಾಲ ಅಬ್ದುಲ್ ಹಕೀಮ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ‘ವಂದೇ ಮಾತರಂ’ ನಿಯಮಾವಳಿಗೆ ಕಾಂಗ್ರೆಸ್ ಅಪಸ್ವರ; 2 ಚರಣ ಮಾತ್ರ ಹಾಡಲು ನಿರ್ಧಾರ

ಇನ್ನು ಘಟನೆಯನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಕಾಲೇಜಿನ ಮುಂದೆ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ದಿನದಂದೇ ದೇಶಭಕ್ತಿಯ ಘೋಷಣೆ ಕೂಗಲು ನಿರ್ಬಂಧ ಹೇರಿದ ಪ್ರಾಂಶುಪಾಲರ ಕ್ರಮವನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ನನ್ನ ಬಳಿ ದಾಖಲೆಗಳಿವೆ ಎಂದ ಪ್ರಾಂಶುಪಾಲ

ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಶಾಹೀನ್ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಹಕೀಮ್, ‘ನಾನು ವಂದೇ ಮಾತರಂ ಅಥವಾ ಭಾರತ್ ಮಾತಾಕಿ ಜೈ ಘೋಷಣೆ ಕೂಗುವುದನ್ನು ವಿರೋಧಿಸಿಲ್ಲ. ಈ ಬಗ್ಗೆ ನಮ್ಮ ಬಳಿ ಸ್ಪಷ್ಟ ದಾಖಲೆಗಳಿವೆ. ಸದ್ಯಕ್ಕೆ ಈ ವಿಚಾರದ ಕುರಿತು ನಾನು ಹೆಚ್ಚೇನೂ ಮಾತನಾಡುವುದಿಲ್ಲ’ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us