ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಗರಣ ಕೇಸ್ಗೆ ಟ್ವಿಸ್ಟ್: ಬ್ಯಾಂಕ್ ಅಧಿಕಾರಿಗಳೂ ಭಾಗಿ?
Koppal News: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ 8.43 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅಕ್ರಮ ಹಣ ವರ್ಗಾವಣೆ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಬಹುತೇಕ ಹಣ ರವೀಂದ್ರ ಕುಮಾರ್ ಅವರ ಸಂಭಂಧಿಕರು ಮತ್ತು ಪತ್ನಿಯ ಖಾತೆಗಳಿಗೆ ಹೋಗಿದೆ. ರವೀಂದ್ರ ಕುಮಾರ್ ಅವರೇ ಆಯುಕ್ತ ಎಂದು ಸಹಿ ಮಾಡಿದ್ದಾರೆ ಎಂದು ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.

ಮುಖ್ಯಾಂಶಗಳು
- ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 8.43 ಕೋಟಿ ಹಗರಣ
- ಸ್ಫೋಟಕ ವಿಚಾರ ಬಿಚ್ಚಿಟ್ಟ ಪ್ರಾಧಿಕಾರದ ಆಯುಕ್ತ ಶರಣಪ್ಪ
- ಹಗರಣದಲ್ಲಿ ಬ್ಯಾಂಕ್ ಅಧಿಕಾರಿಗಳು ಭಾಗಿಯಾಗಿರೋ ಶಂಕೆ
ಕೊಪ್ಪಳ, ಆಗಸ್ಟ್ 20: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 8.43 ಕೋಟಿ ರೂ. ಹಗರಣ ಸಂಬಂಧ ಪ್ರಾಧಿಕಾರದ ಆಯುಕ್ತ ಶರಣಪ್ಪ ಚವ್ಹೌಣ್ ಸ್ಫೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಹಗರಣದಲ್ಲಿ ಬ್ಯಾಂಕ್ ಅಧಿಕಾರಿಗಳು ಭಾಗಿಯಾಗಿರೋ ಶಂಕೆ ಇದ್ದು, ಆ ಕುರಿತೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಎಂದವರು ತಿಳಿಸಿದ್ದಾರೆ. ಪ್ರಾಧಿಕಾರದ ಹಣವೇ ಡ್ರಾ ಆಗಿದೆ ಎಂಬುದನ್ನು ಖಚಿತ ಪಡಿಸಿರುವ ಅವರು, ಫಲಾನುಭವಿಗಳಿಗೆ ಮೋಸ ಆಗಿಲ್ಲ ಎಂದೂ ತಿಳಿಸಿದ್ದಾರೆ.
ವಿಚಾರ ಬೆಳಕಿಗೆ ಬಂದಿದ್ದೇಗೆ?
ಲೇಔಟ್ಗಳ ಫೀ,ಸಿಎ ಸೈಟ್ ಹಣದಲ್ಲಿ ಮೋಸ ಆಗಿದೆ. ಪ್ರಾಧಿಕಾರಕ್ಕೆ ಬಂದ ಹಣವನ್ನೇ ಡ್ರಾ ಮಾಡಿದ್ದಾರೆ. ನಮ್ಮ ಅಕೌಂಟ್ನಿಂದ ಹೆಚ್ಡಿಎಫ್ಸಿ ಅಕೌಂಟ್ಗೆ ಹಣ ಹೋಗಿದೆ. ಆದ್ರೆ ಯಾವ ಉದ್ದೇಶಕ್ಕೆ ಹಣ ಡ್ರಾ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಿಲ್ಲ. ಅಕೌಂಟ್ಗಳು ಕ್ರಿಯೇಟ್ ಆಗಿದ್ದು 2023ರಲ್ಲಿ. ಇವುಗಳ ನಂಬರ್ ಆಡಿಟ್ ರಿಪೋರ್ಟ್ನಲ್ಲಿ ಕಂಡಿಲ್ಲ. ಬನಶಂಕರಿ ಎಂಬವರು ಈ ಬಗ್ಗೆ ದೂರು ಕೊಟ್ಟ ಮೇಲೆ ವಿಚಾರ ಬೆಳಕಿಗೆ ಬಂದಿದೆ. ನಮ್ಮ ಪ್ರಾಧಿಕಾರದ ಹಣವನ್ನು ಹೆಚ್ಡಿಎಫ್ಸಿ ಬ್ಯಾಂಕ್ನಲ್ಲಿ ಎಫ್ಡಿ ಮಾಡಿದ್ದಾರೆ. 2023ರಲ್ಲಿ ಆಡಳಿತ ಮಂಡಳಿ ಇರಲಿಲ್ಲ, ಹೀಗಾಗಿ ತನಿಖೆ ನಂತರ ಹಗರಣದಲ್ಲಿ ಯಾರ ಯಾರ ಪಾತ್ರ ಇದೆ ಅನ್ನೋದು ಗೊತ್ತಾಗಲಿದೆ ಎಂದು ಶರಣಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 8.43 ಕೋಟಿ ರೂ. ಹಗರಣ: ಆಡಿಟ್‌ನಲ್ಲಿ ಕೋಟಿ ಕೋಟಿ ಲೂಟಿ ಬಯಲು!
ದಾಖಲೆ ಇಲ್ಲದೆ ಅಂದಾಜಿನ ಮೇಲೆ ಏನೂ ಹೇಳಲು ಆಗಲ್ಲ. ಆದರೆ ಬಹುತೇಕ ಹಣ ರವೀಂದ್ರ ಕುಮಾರ್ ಅವರ ಸಂಭಂಧಿಕರು ಮತ್ತು ಪತ್ನಿಯ ಖಾತೆಗಳಿಗೆ ಹೋಗಿದೆ. ರವೀಂದ್ರ ಕುಮಾರ್ ಅವರೇ ಆಯುಕ್ತ ಎಂದು ಸಹಿ ಮಾಡಿದ್ದಾರೆ ಎಂದೂ ಶರಣಪ್ಪ ಚವ್ಹೌಣ್ ತಿಳಿಸಿದ್ದಾರೆ. ಪ್ರಾಧಿಕಾರದಲ್ಲಿ ಕಳೆದ 18 ವರ್ಷಗಳಿಂದ ದಿನಗೂಲಿ ಆಧಾರದ ಮೇಲೆ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ರವೀಂದ್ರ ಎಂಬಾತ ಈ ಹಗರಣದ ಮುಖ್ಯ ರೂವಾರಿ ಎಂಬ ಮಾತುಗಳು ಹಗರಣ ಸಂಬಂಧ ಆರಂಭದಿಂದಲೂ ಕೇಳಿಬಂದಿತ್ತು ಎಂಬುದಿಲ್ಲಿ ಗಮನಾರ್ಹ ವಿಷಯ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



